ಕುಂದಾಪುರ: ಕೊರೋನಾ ಲಕ್ಷಣಗಳಿಲ್ಲದೆ ಪಾಸಿಟಿವ್ ವರದಿ ಬಂದ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಸಲುವಾಗಿ ಸರಕಾರ ಹೋಂ ಐಸೋಲೇಶನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಕೆಲವು ಕಡೆಗಳಲ್ಲಿ ಹೋಂ ಐಸೋಲೇಶನ್ ಪರಿಕಲ್ಪನೆಗೆ ಸೂಕ್ತ ವ್ಯವಸ್ಥೆಯಿಲ್ಲದಿರುವಂತವರಿಗೆ ಅನುಕೂಲವಾಗುವಂತೆ ಉಡುಪಿ ಜಿಲ್ಲೆಯಲ್ಲೇ ನೂತನ ಪ್ರಯೋಗವೊಂದಕ್ಕೆ ಕುಂದಾಪುರ ಸಾಕ್ಷಿಯಾಗಿದೆ. ಅದುವೇ ಕೋವಿಡ್-19 ಹೋಂ ಕೇರ್ ಸೆಂಟರ್.
ಡಿಸಿ ಮಾರ್ಗದರ್ಶನದಲ್ಲಿ ಟಿ.ಎಚ್.ಒ ಉಡುಪರ ಇಚ್ಚಾಶಕ್ತಿಯ ಕಾರ್ಯ…
ಕೊರೋನಾ ಆರಂಭದಿಂದಲೂ ಉಡುಪಿ ಜಿಲ್ಲಾಡಳಿತ ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿಯೇ ಮುಂಚೂಣಿ ಪಾತ್ರ ವಹಿಸಿತ್ತು. ಡಿಸಿ ಜಿ. ಜಗದೀಶ್ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಕೊರೋನಾ ವಾರಿಯರ್ಸ್ ರಾತ್ರಿ ಹಗಲೆನ್ನದೆ ಸೇವೆ ನೀಡುತ್ತಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಮಟ್ಟಿಗೂ ಕೂಡ ಯಾವುದೇ ಒಬ್ಬ ಸೋಂಕಿತರು ಠೀಕೆ ಮಾಡದಂತೆ ಇಲ್ಲಿನ ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಿದೆ. ಕುಂದಾಪುರ ನಗರದಲ್ಲಿರುವ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಅನ್ನು ಕೋವಿಡ್ ಹೋಂ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಉಡುಪಿ ಡಿಸಿ ಜಿ. ಜಗದೀಶ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಡಾ. ಪ್ರೇಮಾನಂದ್ ಮೊದಲಾದವರ ಸಹಕಾರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರ ಪರಿಕಲ್ಪನೆಯಲ್ಲಿ 75 ಉತ್ತಮ ಗುಣಮಟ್ಟದ ಹಾಸಿಗೆಯುಳ್ಳ ಕೇಂದ್ರ ನಿರ್ಮಾಣಗೊಂಡಿದೆ. ಹಾಸಿಗೆಗಳನ್ನು ಕುಂದಾಪುರ ಹಾಗೂ ಬೈಂದೂರಿನ ರೋಟರಿ ಕ್ಲಬ್ ಗಳು ಕೊಡುಗೆಯಾಗಿ ನೀಡಿದೆ. ಇನ್ನು ಈ ಕೇಂದ್ರದಲ್ಲಿ ದಾಖಲಾಗುವ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸುವ ಚಿಂತನೆಯೂ ಉಡುಪರಿಗಿದೆ.
(ಜಿ. ಜಗದೀಶ್, ಉಡುಪಿ ಡಿಸಿ)
(ಡಾ.ನಾಗಭೂಷಣ್ ಉಡುಪ-ಕುಂದಾಪುರ ತಾಲೂಕು ವೈದ್ಯಾಧಿಕಾರಿ)
ಏನಿದು ಕೋವಿಡ್-19 ಹೋಂ ಕೇರ್ ಸೆಂಟರ್..?
ಈ ಕೇಂದ್ರದಲ್ಲಿ ‘ಎ’ ಲಕ್ಷಣಗಳಿರುವ ಹಾಗೂ ಹೋಂ ಐಸೋಲೇಶನ್ ವ್ಯವಸ್ಥೆಯಲ್ಲಿ ಇರಲಾಗದೇ ಕಷ್ಟಪಡುವ ಸೋಂಕಿತರನ್ನು ದಾಖಲಿಸಿಕೊಳ್ಳಲಾಗುತ್ತದೆ. ಸೋಂಕಿತರನ್ನು ದಾಖಲಿಸಿಕೊಳ್ಳಲು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅಧಿಕಾರಿ, ಸಿಬ್ಬಂದಿಗಳು ಕೇಂದ್ರದಲ್ಲಿರಲಿದ್ದಾರೆ. ಮೂವರು ವೈದ್ಯರು ಹಾಗೂ ಮೂವರು ಸಿಬ್ಬಂದಿಗಳ ತಂಡವು ಹೋಂ ಕೇರ್ ಸೆಂಟರ್ ಅನ್ನು ಸಂಪೂರ್ಣ ನಿಗಾದಲ್ಲಿ ನೋಡಿಕೊಳ್ಳಲಿದ್ದಾರೆ. ಊಟೋಪಚಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಕಾರ ಭರಿಸಲಿದೆ. ದಾಖಲಾಗುವ ಸೋಂಕಿತರ ದೈನಂದಿನ ಆರೋಗ್ಯ ತಪಾಸಣೆ ನಿಟ್ಟಿನಲ್ಲಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ನೀಡಲಾಗುತ್ತಿದ್ದು ಪರಸ್ಪರ ತಪಾಸಣೆ ನಡೆಸಿಕೊಂಡು ಅದರ ವರದಿಯನ್ನು ವೈದ್ಯರಿಗೆ ನೀಡುವಂತೆ ಸೂಚಿಸಲಾಗಿದೆ.
ಎಲ್ಲವೂ ಸುಸೂತ್ರ ಮತ್ತು ಸುಸಜ್ಜಿತ…
ರೆಡ್ ಝೋನ್ ಮತ್ತು ಗ್ರೀನ್ ಝೋನ್ ಎಂಬ ಎರಡು ವಿಭಾಗ ಮಾಡಿದ್ದು ನೆಲಕ್ಕೆ ಅದೇ ಬಣ್ಣದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಗ್ರೀನ್ ಝೋನ್ ನಲ್ಲಿ ಅಧಿಕಾರಿ ಸಿಬ್ಬಂದಿಗಳು ಮಾತ್ರವೇ ಓಡಾಡಬಹುದು. ರೆಡ್ ಝೋನ್ ಭಾಗದಲ್ಲಿ ಸೋಂಕಿತರು ಓಡಾಡಬೇಕು. ಈ ಕೇಂದ್ರದಲ್ಲಿ ಐಸೋಲೇಶನ್ ಆಗುವ ಸೋಂಕಿತರಿಗೆ ಸೋಲಾರ್ ಮೂಲಕವಾಗಿ ಸ್ನಾನಕ್ಕೆ ಬಿಸಿ ನೀರು ಪೂರೈಸಲಾಗುತ್ತಿದೆ. ಕುಡಿಯಲು ಶುದ್ದ ಬಿಸಿ ನೀರಿನ ಘಟಕವನ್ನು ಇಡಲಾಗಿದೆ.
ನಿಮ್ಮ ಮನೆಯಂತೆ ನೋಡಿಕೊಳ್ಳಿ- ಇದು ಮನವಿ!
ಇತ್ತೀಚೆಗೆ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಕೆಲ ಮಂದಿ ಅಲ್ಲಿನ ಶೌಚಾಲಯ, ಮೂತ್ರಾಲಯ ಸೇರಿದಂತೆ ಕೆಲ ವಿಚಾರದ ಬಗ್ಗೆ ವಿಡಿಯೋ ಮಾಡಿ ಜನರಲ್ಲಿ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಆದರೆ ಈ ಹೋಂ ಕೇರ್ ಸೆಂಟರ್ ಅನ್ನು ಮನೆಯಲ್ಲಿರಲಾಗದೇ ಆಸ್ಪತ್ರೆಗೂ ತೆರಳಲಾಗದವರ ಅನುಕೂಲಕ್ಕೆ ಮಾಡಿದ್ದು ಈ ಕೇಂದ್ರವನ್ನು ತಮ್ಮ ಮನೆಯೆನ್ನುವ ರೀತಿಯಲ್ಲಿ ನೋಡಿಕೊಂಡು ವೈಯಕ್ತಿಕ ಸ್ವಚ್ಚತೆ ಜೊತೆ ಕೇಂದ್ರದ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕೆಂದು ಅಧಿಕಾರಿಗಳು ವಿನಂತಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.