ಆರೋಗ್ಯ

ನಾಳೆ ಆಟಿ ಅಮವಾಸ್ಯೆ; ಕರಾವಳಿಯಲ್ಲಿ ಹಾಲೆ ಮರದ ತೊಗಟೆ ಕಷಾಯ ಸೇವನೆಯೊಂದು ಸಂಪ್ರದಾಯ!

Pinterest LinkedIn Tumblr

ವಿಶೇಷ ವರದಿ:

ಕರಾವಳಿಯಲ್ಲಿ ಒಂದು ವಿಶೇಷ ಸಂಪ್ರದಾಯವಿದು. ಸೂರ್ಯೋದಯಕ್ಕೆ ಮೊದಲೇ ಪಾಲೆ (ಹಾಲೆ) ಮರದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು ಎನ್ನಲಾಗುತ್ತದೆ. ಅಂದು ಮನೆ ಮಂದಿಯೆಲ್ಲರೂ ಆರೋಗ್ಯ ವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ಅದರ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೆಣಚು ಕಲ್ಲನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಯಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ಮೆತ್ತೆಗಂಜಿ ಸೇವಿಸುತ್ತಾರೆ.

(ಸಾಂದರ್ಭಿಕ ಚಿತ್ರ)

ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ.  ಅನ್ಯ ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ. ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರಿತು ಎಂಬ ಬಲವಾದ ನಂಬಿಕೆ ಇದೆ.

ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಸಿ ಅಗ್ನಿ ಕುಂಠಿತವಾಗುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ

ತೊಗಟೆ ಸಂಗ್ರಹದ ವೇಳೆ ಎಚ್ಚರ ಅಗತ್ಯ:

ಹಾಲೆ ಮರ ಅಥವಾ ಸಪ್ತಪರ್ಣ ಮರದ ತೊಗಟೆಯ ಕಷಾಯ ತಯಾರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿ ತುಳುನಾಡಿನಾದ್ಯಂತ ಈ ದಿನದಂದು ಸೂರ್ಯೋದಯಕ್ಕಿಂತ ಮೊದಲೇ ಮರದ ತೊಗಟೆಯನ್ನು ಸಂಗ್ರಹಿಸಲು ತೆರಳುವುದು ಸರ್ವೇ ಸಾಮಾನ್ಯ. ಆದರೆ ಈ ಸಂದರ್ಭ ಹಲವು ಎಚ್ಚರಿಕೆಯನ್ನು ವಹಿಸಬೇಕಾದುದು ಕೂಡ ಮುಖ್ಯವಾಗಿದೆ. ಏಕೆಂದರೇ  ಹಾಲೆ ಮರವೆಂದು ತಿಳಿದು ಬೇರೆ ಮರದ ತೊಗಟೆ ಮನೆಗೊಯ್ದರೇ ತುಂಬಾ ಡೆಂಜರು. ಕೆಲವು ವಿಷಯುಕ್ತ ಮರದ ತೊಗಟೆ ಒಯ್ದು ಕಷಾಯ ಮಾಡಿದ್ರೇ ಜೀವಕ್ಕೆ ಅಪಾಯ. ವರ್ಷಂಪ್ರತಿ ಇದೇ ಸಮಸ್ಯೆಗಳು ಹಲವೆಡೆಗಳಲ್ಲಿ ನಡೆದದ್ದೂ ಇದೆ.

Comments are closed.