ಆರೋಗ್ಯ

ಆರೋಗ್ಯದ ಬಗ್ಗೆ ತಿಳಿಯಬೇಕೆ ಹಾಗಾದರೆ ಮೊದಲು ನಿಮ್ಮ ಬೆವರಿನ ಬಗ್ಗೆ ತಿಳಿಯಲೇಬೇಕಾದ ವಿಷಯಗಳು ?

Pinterest LinkedIn Tumblr

ಆರೋಗ್ಯದ ಮೇಲೆ ನಿಗಾಯಿರಿಸಲು ಹೆಚ್ಚಿನವರು ಆಗಾಗ್ಗೆ ರಕ್ತಪರೀಕ್ಷೆ ಮತ್ತು ಇತರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಕೇವಲ ಬೆವರಿನಿಂದ ನಿಮ್ಮ ಆರೋಗ್ಯವನ್ನು ವಿಶ್ಲೇಷಿಸುವ ಸ್ಕಿನ್ ಸೆನ್ಸರ್ ಅಥವಾ ಚರ್ಮ ಸಂವೇದಕವನ್ನು ಸಂಶೋಧಕರು ಸೃಷ್ಟಿಸಿದ್ದಾರೆ. ಇದನ್ನು ಯಾವುದೇ ಕಿರಿಕಿರಿಯಿಲ್ಲದೆ ಧರಿಸಿಕೊಳ್ಳಬಹುದು. ಅದು ನಿಮ್ಮ ಶರೀರದಲ್ಲಿ ನೀರಿನ ಕೊರತೆ ಮತ್ತು ಬಳಲಿಕೆಯ ಮಟ್ಟದ ಮಾಹಿತಿಯನ್ನೂ ನಿಮಗೆ ನೀಡುತ್ತದೆ.

ಕ್ಯಾಲಿಫೋರ್ನಿಯಾ ವಿವಿಯ ಪ್ರೊ.ಅಲಿ ಜೇವ್ ನೇತೃತ್ವದ ಸಂಶೋಧಕರ ತಂಡವು ಈ ಸೆನ್ಸರ್ ಅನ್ನು ಸೃಷ್ಟಿಸಿದೆ. ಕೇವಲ ಸೆನ್ಸರ್ ಸೃಷ್ಟಿ ತಂಡದ ಉದ್ದೇಶವಾಗಿರಲಿಲ್ಲ,ಶರೀರದಲ್ಲಿ ಬೆವರಿನ ಮಹತ್ವವನ್ನು ತಿಳಿದುಕೊಳ್ಳಲು ಅದು ಬಯಸಿತ್ತು. ಇದಕ್ಕಾಗಿ ಶರೀರದ ವಿವಿಧ ಭಾಗಗಳಿಗಾಗಿ ಮತ್ತು ಪದೇ ಪದೇ ಬಳಸಬಹುದಾದ ವಿಶ್ವಾಸಾರ್ಹ ಸೆನ್ಸರ್ ಅವರಿಗೆ ಅಗತ್ಯವಾಗಿತ್ತು. ಅಧ್ಯಯನಕ್ಕಾಗಿ ತಂಡವು ಸಂಶೋಧನೆಯಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರ ಶರೀರಗಳ ಮೇಲೆ ವಿವಿಧ ಸೆನ್ಸರ್‌ಗಳನ್ನು ಅಳವಡಿಸಿದ್ದರು ಮತ್ತು ಬೆವರು ಉಂಟಾಗುವ ದರ,ಶರೀರದಲ್ಲಿಯ ಸೋಡಿಯಂ ಮತ್ತು ಪೊಟ್ಯಾಷಿಯಂ ಪ್ರಮಾಣಗಳನ್ನು ಪರಿಶೀಲಿಸಲು ಅವರಿಗೆ ವ್ಯಾಯಾಮ ಮಾಡುವಂತೆ ಸೂಚಿಸಲಾಗಿತ್ತು. ವ್ಯಾಯಾಮ ಮಾಡುತ್ತಿರುವಾಗ ಶರೀರದಲ್ಲಿಯ ನೀರಿನ ಮಟ್ಟ ತ್ವರಿತವಾಗಿ ಕಡಿಮೆಯಾಗುತ್ತಿರುವುದು ಇದರಿಂದ ಕಂಡುಬಂದಿತ್ತು. ನೀವು ಬೆವರುತ್ತಿರುವ ರೀತಿಯು ವ್ಯಾಯಾಮದ ವೇಳೆ ಅಗತ್ಯ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವಲ್ಲಿ ನೆರವಾಗಬಲ್ಲದು ಎನ್ನುತ್ತಾರೆ ಸಂಶೋಧಕರು.

ಸೆನ್ಸರ್ ಮೈಕ್ರೋಸ್ಕೋಪಿಕ್ ಟ್ಯೂಬ್‌ಗಳು ಮತ್ತು ಮೈಕ್ರೋಫ್ಲುಯಿಡ್‌ಗಳನ್ನು ಒಳಗೊಂಡಿದ್ದು,ಇವು ಶರೀರದಿಂದ ಬೆವರಿನ ಸ್ಯಾಂಪಲ್‌ನ್ನು ಪರೀಕ್ಷಿಸುತ್ತವೆ. ಅದು ಶರೀರದಿಂದ ಎಷ್ಟು ವೇಗವಾಗಿ ಬೆವರು ಸೃಷ್ಟಿಯಾಗುತ್ತದೆ ಎನ್ನುವುದರ ಮೇಲೆ ನಿಗಾಯಿರಿಸುತ್ತದೆ. ಈ ವಿಧದಲ್ಲಿ ಸೆನ್ಸರ್‌ಎಷ್ಟು ಬೆವರು ಹರಿದಿದೆ ಮತ್ತು ಯಾವ ದರದಲ್ಲಿ ಉಂಟಾಗಿದೆ ಎನ್ನುವುದರ ಮಾಹಿತಿಯನ್ನು ಬಳಕೆದಾರನಿಗೆ ತಿಳಿಸುತ್ತದೆ. ಈ ಮಾಹಿತಿಗಳು ಆರೋಗ್ಯ ಸ್ಥಿತಿಯ ವಿಶ್ಲೇಷಣೆಯಲ್ಲಿ ನೆರವಾಗುತ್ತವೆ.

ಬೆವರನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?

ಬೆವರನ್ನು ಎಲ್ಲರೂ ದ್ವೇಷಿಸುತ್ತಾರೆ. ಸಾಮಾನ್ಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಬೆವರುವಿಕೆಯನ್ನು ನಿಯಂತ್ರಿಸಲು ಕೆಲವು ಟಿಪ್ಸ್ ಇಲ್ಲಿವೆ.

ಮಸಾಲೆ ಹೆಚ್ಚಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಿ
ಮಸಾಲೆ ಹೆಚ್ಚಿರುವ ಮತ್ತು ಪ್ಯಾಕೇಜ್ಡ್ ಆಹಾರ ಸೇವನೆಯು ಕಟು ವಾಸನೆಯಿಂದ ಕೂಡಿದ ಬೆವರನ್ನುಂಟು ಮಾಡುತ್ತದೆ. ಜೊತೆಗೆ ಈರುಳ್ಳಿ,ಬೆಳ್ಳುಳ್ಳಿ,ಶುಂಠಿ,ಬ್ರಾಕೊಲಿ,ಕಾಲಿಫ್ಲವರ್‌ಗಳ ಸೇವನೆಯು ಬೆವರನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮಸಾಲೆ ಹೆಚ್ಚಿರುವ ಮತ್ತು ಪ್ಯಾಕೇಜ್ಡ್ ಆಹಾರಗಳ ಬದಲು ಸಮೃದ್ಧ ನಾರು ಹೊಂದಿರುವ ಬಸಳೆ,ಗಜ್ಜರಿ,ಕಾಳು ಮೆಣಸು,ಸೌತೆ ಇತ್ಯಾದಿಗಳು ನಿಮ್ಮ ಆಹಾರದಲ್ಲಿರಲಿ.

ಬಟ್ಟೆಗಳನ್ನು ವಿನೆಗರ್‌ನಲ್ಲಿ ನೆನೆಸಿ
ಬಟ್ಟೆಗಳನ್ನು ಒಗೆಯುವ ಮುನ್ನ ಅವುಗಳನ್ನು ಬೇಕಿಂಗ್ ಸೋಡಾ ಮತ್ತು ವಿನೆಗರ್‌ನ ಮಿಶ್ರಣದಲ್ಲಿ ಕೆಲ ನಿಮಿಷಗಳ ಕಾಲ ನೆನೆಸಿಡಿ. ಬಟ್ಟೆ ಒಣಗಿದ ಮೇಲೆ ಹೊರಸೂಸುವ ವಿನೆಗರ್ ವಾಸನೆಯನ್ನು ನೀವು ಇಷ್ಟ ಪಡುವುದಿಲ್ಲವಾದರೆ ಅದರ ವಾಸನೆಯನ್ನು ನಿವಾರಿಸಲು ಬಟ್ಟೆ ಒಗೆದ ತಕ್ಷಣ ಫ್ಯಾಬ್ರಿಕ್ ಫ್ರೆಷ್ನರ್‌ನ್ನು ಸೇರಿಸಿ.

ಕಂಕುಳಗಳು ಸ್ವಚ್ಛವಾಗಿರಲಿ
ಹವಾಮಾನ ಬದಲಾದಾಗ ಹೆಚ್ಚಿನವರಲ್ಲಿ ಬೆವರುವಿಕೆಯೂ ಹೆಚ್ಚುತ್ತದೆ. ಕಂಕುಳಲ್ಲಿಯ ರೋಮಗಳು ಬೆವರನ್ನು ಹೀರಿಕೊಂಡು ಅಸಹನೀಯ ವಾಸನೆಗೆ ಕಾರಣವಾಗುತ್ತವೆ. ಹೀಗಾಗಿ ಕಂಕುಳುಗಳಲ್ಲಿಯ ರೋಮಗಳನ್ನು ನಿವಾರಿಸಿ ಸ್ವಚ್ಛವಾಗಿರಿಸುವುದು ಅಗತ್ಯ.

ಟೀ ಟ್ರೀ ತೈಲವನ್ನು ಬಳಸಿ
ನಮ್ಮ ಪಾದಗಳು,ಕಂಕುಳುಗಳು,ಹಣೆ ಮತ್ತು ಕೈಗಳು ಅತಿಯಾಗಿ ಬೆವರುತ್ತವೆ. ಇವುಗಳಿಗೆ ಟೀ ಟ್ರೀ ತೈಲವನ್ನು ಲೇಪಿಸಿಕೊಂಡು ಬದಲಾವಣೆಯನ್ನು ನೋಡಿ. ಟೀ ಟ್ರೀ ತೈಲವು ಬ್ಯಾಕ್ಟೀರಿಯಾ ನಿರೋಧಕವಾಗಿದೆ ಮತ್ತು ನೈಸರ್ಗಿಕ ನಂಜು ಪ್ರತಿರೋಧಕವಾಗಿದೆ. ಈ ತೈಲವು ಬೆವರನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ.

ಸಡಿಲ ಬಟ್ಟೆಗಳನ್ನು ಧರಿಸಿ
ನೀವು ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ ಹೆಚ್ಚು ಬೆವರುತ್ತೀರಿ. ಹತ್ತಿ ಅಥವಾ ರೇಷ್ಮೆಯಂತಹ ನೈಸರ್ಗಿಕ ನಾರುಗಳಿರುವ ಬಟ್ಟೆಗಳನ್ನು ಧರಿಸುವ ಮೂಲಕ ಬೆವರನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಗ್ಗಿಸಬಹುದು.

Comments are closed.