ಅಂತರಾಷ್ಟ್ರೀಯ

ಅಮೆರಿಕದಲ್ಲೂ ಚೀನಾ ಮೂಲದ ಆ್ಯಪ್ ಗಳ ಮೇಲೆ ನಿಷೇಧ ಹೇರುವ ಕುರಿತು ಗಂಭೀರ ಚಿಂತನೆ !

Pinterest LinkedIn Tumblr

ನವದೆಹಲಿ: ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಚೀನಾ ಮೂಲದ ಆ್ಯಪ್ ಗಳ ಮೇಲೆ ನಿಷೇಧ ಹೇರಿ ದಿಟ್ಟತನ ಪ್ರದರ್ಶಿಸಿದ್ದ ಭಾರತದ ಹಾದಿಯಲ್ಲೇ ಅಮೆರಿಕ ಸಾಗಲು ನಿರ್ಧರಿಸಿದ್ದು, ಅಮೆರಿಕದಲ್ಲೂ ಚೀನಾ ಮೂಲದ ಆ್ಯಪ್ ಗಳ ಮೇಲೆ ನಿಷೇಧ ಹೇರುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಈ ಬಗ್ಗೆ ಸ್ವತಃ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ಅವರು ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಟಿಕ್​ಟಾಕ್​ ಸೇರಿ ಚೀನಾದ ಎಲ್ಲ ಆ್ಯಪ್ ​ಗಳನ್ನು ನಿಷೇಧಿಸಲು ಅಮೆರಿಕ ಕೂಡ ಚಿಂತನೆ ಆರಂಭಿಸಿದೆ. ನಾನು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗಿಂತ ದೊಡ್ಡವನಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಿಕ್​ಟಾಕ್​ ಸೇರಿ ಚೀನಾದ ಎಲ್ಲ ಆ್ಯಪ್​ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವ ವಿಷಯವನ್ನು ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಮೈಕ್​ ಪಾಂಪಿಯೋ ಹೇಳಿದ್ದಾರೆ.

ಈ ಹಿಂದೆ ಇದೇ ಅಮೆರಿಕ ಕೊರೋನಾ ವೈರಸ್ ವಿಚಾರವಾಗಿ ಚೀನಾ ಸರ್ಕಾರ ಜಗತ್ತಿಗೆ ಪಾರದರ್ಶಕವಾಗಿರಲಿಲ್ಲ. ಸೂಕ್ತ ಸಂದರ್ಭದಲ್ಲಿ ವೈರಸ್ ಕುರಿತು ಮಾಹಿತಿ ನೀಡಿದ್ದರೆ ವೈರಸ್ ಇಷ್ಟು ಪ್ರಮಾಣದಲ್ಲಿ ಹರಡದಂತೆ ಎಚ್ಚರಿಕೆ ವಹಿಸಬಹುದಿತ್ತು ಎಂದು ಕಿಡಿಕಾರಿತ್ತು. ಅಲ್ಲದೆ ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆದಿದ್ದ ಅಮೆರಿಕ, ಕೊರೋನಾ ಚೀನಾದಿಂದ ಸೃಷ್ಟಿಯಾದ ಜೈವಿಕ ಅಸ್ತ್ರ ಎಂದೂ ಗಂಭೀರ ಆರೋಪ ಮಾಡಿತ್ತು. ಅಲ್ಲದೆ ಚೀನಾ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದ ಅಮೆರಿಕ, ಇದೇ ಕೊರೋನಾ ವಿಚಾರವಾಗಿ ವಿಶ್ವಸಂಸ್ಥೆಯ ವಿರುದ್ಧವೂ ಕಿಡಿಕಾರಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ವಕ್ತಾರನಂತೆ ಮಾತನಾಡುತ್ತಿದೆ. ಹೀಗಾಗಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿರುವ ನಿಧಿಯನ್ನು ಮುಂದಿನ ದಿನಗಳಲ್ಲಿ ರದ್ದು ಮಾಡುವುದಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಇದರ ಬೆನ್ನಲ್ಲೇ ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ದಟ್ಟವಾಗಿದೆ. ಚೀನಾದ ಎಲ್ಲ ಸರಕುಗಳನ್ನು ತಿರಸ್ಕರಿಸಲು ಇಡೀ ಭಾರತ ಅಲಿಖಿತವಾಗಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಟಿಕ್​ಟಾಕ್​ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಕೂಡ ಇದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದಂತಿದೆ.

Comments are closed.