ವ್ಯಾಯಾಮ ಮತ್ತು ಆಹಾರ ಎನ್ನುವುದು ನಮ್ಮ ಆರೋಗ್ಯವನ್ನು ಸದೃಢ ಮಾಡುವುದರ ಜೊತೆಗೆ ದೀರ್ಘಾಯುಷ್ಯವನ್ನು ಸೃಷ್ಟಿ ಮಾಡುವುದು. ನಿತ್ಯವೂ ನಮ್ಮ ದೇಹಕ್ಕೆ ಒಂದಿಷ್ಟು ವ್ಯಾಯಾಮ ಹಾಗೂ ಸಮೃದ್ಧವಾದ ಆಹಾರ ಬೇಕಾಗಿರುತ್ತದೆ. ಅಗತ್ಯವಿರುವ ಪೋಷಕಾಂಶಗಳು ಹಾಗೂ ವ್ಯಾಯಾಮವು ದೊರೆತರೆ ವ್ಯಕ್ತಿ ತನ್ನ ವಯಸ್ಸಿನ ಮಿತಿಗಿಂತ ಹೆಚ್ಚು ಆಕರ್ಷಕವಾದ ದೇಹ ಹಾಗೂ ಆರೋಗ್ಯವನ್ನು ಹೊಂದಿರುತ್ತಾನೆ. ಹಾಗಾಗಿಯೇ ವೈದ್ಯರು ಸಾಮಾನ್ಯವಾಗಿ ಒಂದಿಷ್ಟು ದೈಹಿಕ ಶ್ರಮ ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.
ನಿತ್ಯವೂ ನಿಯಮಿತವಾಗಿ ಮಾಡುವ ವ್ಯಾಯಾಮ, ಕ್ರೀಡೆ ಅಥವಾ ದೇಹ ದಂಡನೆಯಿಂದ ಸ್ನಾಯುಗಳು ಹಾಗೂ ಹೃದಯನಾಳ ವ್ಯವಸ್ಥೆಯನ್ನು ಬಲಪಡಿಸಬಹುದು. ಕ್ರೀಡಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು, ತೂಕ ಇಳಿಸುವಿಕೆ ಅಥವಾ ನಿರ್ವಹಣೆ ಮತ್ತು ಸಂತೋಷಕ್ಕೆ ಒಳಗೊಂಡಂತೆ ಅದನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ನಿಯಮಿತ ವ್ಯಾಯಾಮವು ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ ಮತ್ತು ಹೃದಯ ರೋಗ, ಹೃದಯನಾಳದ ರೋಗ, ಮಧುಮೇಹ, ಮತ್ತು ಸ್ಥೂಲಕಾಯತೆಯಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಇಂದಿನ ಕಲುಷಿತ ಹಾಗೂ ಕಲಬೆರಕೆಯ ಆಹಾರ ಉತ್ಪನ್ನಗಳು ನಮ್ಮ ದೇಹದ ಆರೋಗ್ಯವನ್ನು ಕಡಿಮೆ ಮಾಡುತ್ತಿವೆ. ಅಲ್ಲದೆ ಕೆಲಸದ ಒತ್ತಡ ಹಾಗೂ ಸೋಮಾರಿತನದಿಂದ ದೇಹವು ಬಹುಬೇಗ ಅನಾರೋಗ್ಯ ಸ್ಥಿತಿಗೆ ತುತ್ತಾಗುತ್ತಿದೆ. ಅಲ್ಲದೆ ಇಂದಿನ ದಿನದಲ್ಲಿ ಜನರಿಗೆ ಒಳ್ಳೆಯ ಹಾಗೂ ನಿಜ ಸಂಗತಿಗಿಂತ ಹೆಚ್ಚು ಸುಳ್ಳು ಹಾಗೂ ಸತ್ಯಕ್ಕೆ ದೂರ ಇರುವ ಸಂಗತಿಗಳೇ ವೇಗವಾಗಿ ತಲುಪುತ್ತವೆ. ಅಲ್ಲದೆ ಎಲ್ಲೆಡೆ ಬಹುಬೇಗ ಹರಡುತ್ತದೆ ಸಹ. ಈ ಬೆಳವಣಿಗೆಯು ಕೇವಲ ಯಾವುದೋ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಅದು ಆರೋಗ್ಯ ಹಾಗೂ ವ್ಯಾಯಾಮದ ಕುರಿತಾಗಿಯೂ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿಯೇ ಹರಡಿಕೊಂಡ ವಿಷಯಗಳು ಇಂದು ಎಷ್ಟರ ಮಟ್ಟಿಗೆ ವೃದ್ಧಿಯಾಗಿದೆ ಎಂದರೆ ಜನರು ಅಂದುಕೊಂಡ ಹಾಗೂ ತಿಳಿದ ಸಂಗತಿಯ ಬಗ್ಗೆ ಗಾಢ ನಂಬಿಕೆಯನ್ನು ಹೊಂದಿದ್ದಾರೆ. ನಿಜ, ಆಹಾರ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದಂತೆ ಅನೇಕ ಜನರು ವಿವಿಧ ಬಗೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಜೊತೆಗೆ ಒಂದಷ್ಟು ವಿಷಯಗಳನ್ನು ನಿಜವೆಂದು ತಿಳಿದಿದ್ದಾರೆ. ಕೆಲವು ವಿಷಯಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನೂ ಸಹ ಹೊಂದಿಲ್ಲ ಎನ್ನಬಹುದು. ಈ ರೀತಿಯಲ್ಲಿ ನಮಗೆ ತಿಳಿಯದೆ ಇರುವ ಕೆಲವು ಆಹಾರ ಪದಾರ್ಥಗಳು ಹಾಗೂ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಇವುಗಳ ಸಹಾಯದಿಂದ ನಮ್ಮ ದೇಹದ ಆರೋಗ್ಯ ಹಾಗೂ ಫಿಟ್ನೆಸ್ ಅನ್ನು ಹೇಗೆ ಸುಧಾರಿಸಿಕೊಳ್ಳುವುದು? ಎನ್ನುವುದನ್ನು ತಿಳಿಯೋಣ…
ಕಾರ್ಬೋಹೈಡ್ರೇಟ್ ಹೆಚ್ಚು ಕೊಬ್ಬನ್ನು ನೀಡುವುದು
ಬಹುತೇಕ ಜನರು ಕಾರ್ಬೋಹೈಡ್ರೇಟ್ಸ್ ಇರುವ ಆಹಾರವನ್ನು ಸೇವಿಸುವುದರಿಂದ ದೇಹವು ಹೆಚ್ಚು ದಪ್ಪವಾಗುವುದು. ಅದನ್ನು ಸೇವಿಸದೆ ಇದ್ದಾಗ ಮಾತ್ರ ತೆಳ್ಳನೆಯ ದೇಹವನ್ನು ಪಡೆಯಬಹುದು ಎಂದು ತಿಳಿದಿದ್ದಾರೆ. ಆದರೆ ಇದು ಒಂದು ತಪ್ಪಾದ ಮಾಹಿತಿ. ಕಾರ್ಬೋಹೈಡ್ರೇಟ್ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಅತ್ಯುತ್ತಮವಾದ ಸಂಗತಿ. ಇದು ದೇಹದಲ್ಲಿ ಸಂಗ್ರಹವಾಗಿರುವ ಗ್ಲೈಕೋಜೆನ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವುದು. ನೀವು ಸೇವಿಸುವ ಆಹಾರದಲ್ಲಿ ಕಾರ್ಬೋ ಹೈಡ್ರೇಟ್ಅನ್ನು ತೆಗೆದು ಹಾಕಿದರೆ ಮನಃ ಸ್ಥಿತಿ ಹಾಳಾಗುವುದು, ಹಸಿವಿನ ತೊಂದರೆ, ಅನುಚಿತ ರೀತಿಯಲ್ಲಿ ಕರುಳಿನ ಚಲನೆ, ಶಕ್ತಿಯ ಕೊರತೆ ಉಂಟಾಗುವುದು. ತೂಕ ಇಳಿಸಲು ಅಥವಾ ದೇಹದ ಅನಗತ್ಯವಾದ ಕೊಬ್ಬನ್ನು ಕರಗಿಸಲು ಕಾರ್ಬ್ಅನ್ನು ಸಂಪೂರ್ಣವಾಗಿ ಬಿಡುವುದು ಮಾರ್ಗವಲ್ಲ. ಬದಲಿಗೆ ಪ್ರಮಾಣವನ್ನು ಕಡಿಮೆ ಮಾಡಿ. ಅದರೊಟ್ಟಿಗೆ ಮೊಳಕೆ ಬರಿಸಿದ ಕಾಳು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಆಗ ಉತ್ತಮ ಆರೋಗ್ಯದ ಜೊತೆಗೆ ದೇಹವು ಉತ್ತಮ ಆಕರ್ಷಣೆಯಿಂದ ಕೂಡಿರುತ್ತದೆ.
ಮುಂಜಾನೆಯ ಉಪಹಾರ
ಮುಂಜಾನೆಯ ಉಪಹಾರವು 9 ರಿಂದ 10 ಗಂಟೆಯ ಒಳಗೆ ಇರಬೇಕು. ಈ ಪದ್ಧತಿಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ರೀತಿ. ಈ ರೀತಿಯ ಕ್ರ ಅನುಸರಿಸುವುದರಿಂದ ತೂಕವನ್ನು ಸಹ ಇಳಿಸಬಹುದು. ನಿಮ್ಮ ಭೋಜನ ಹಾಗೂ ಉಪಹಾರದ ನಡುವೆ ಕನಿಷ್ಠ 12 ತಾಸುಗಳ/ಗಂಟೆಗಳ ಅಂತರ ಇರಬೇಕು. ರಾತ್ರಿ 8 ಗಂಟೆಯ ಒಳಗೆ ಊಟ ಮುಗಿಸಿದರೆ ಮುಂಜಾನೆ ಬೇಗ ತಿಂಡಿಯನ್ನು ತಿನ್ನಬಹುದು. ರಾತ್ರಿ ತಡವಾಗಿ ಊಟ ಮಾಡಿದಷ್ಟು ಮುಂಜಾನೆಯ ತಿಂಡಿ ತಡವಾಗಿ ಆಗುವುದು. ಉಪಹಾರ ಹಾಗೂ ಊಟದ ನಡುವೆ ಸೂಕ್ತ ಸಮಯದ ಅಂತರ ಇದ್ದಾಗ ಮಾತ್ರ ಹಾನಿಗೊಳಗಾದ ವಂಶಾವಳಿಗಳು ಮತ್ತು ಕೋಶಗಳು ಸರಿಪಡಿಸುವ ಕಾರ್ಯ ನೆರವೇರುತ್ತವೆ. ಈ ರೀತಿಯ ಕೆಲಸಕ್ಕೆ ದೀರ್ಘ ವಿರಾಮದ ಅಗತ್ಯವಿರುತ್ತದೆ. ಇದು ಕ್ಯಾನ್ಸರ್, ಬುದ್ಧಿಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡುವುದು.
ಕೊಬ್ಬು ಭರಿತ ಆಹಾರ
ಕೊಬ್ಬಿನ ಆಹಾರ ಪದಾರ್ಥಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಜೊತೆಗೆ ಅವು ಅಧಿಕ ಸಮಯಗಳ ಕಾಲ ನಮ್ಮ ದೇಹದಲ್ಲಿ ತುಂಬಿಕೊಂಡಿರುತ್ತವೆ. ಈ ಆಹಾರ ಪದಾರ್ಥಗಳ ಸೇವನೆಯಿಂದ ಆಹಾರವನ್ನು ಸೇವಿಸುವ ಬಯಕೆಯನ್ನು ಕಡಿಮೆ ಮಾಡುವುದು. ಅಲ್ಲದೆ ಅಧಿಕ ಶಕ್ತಿಯನ್ನು ನೀಡುತ್ತವೆ. ಅದರಲ್ಲೂ ಆವಕಾಡೊ, ಸಾಲ್ಮನ್, ಮೊಟ್ಟೆಯ ಹಳದಿ ಲೋಳೆ ಮುಂತಾದ ಆರೋಗ್ಯಕರ ಕೊಬ್ಬು ಉತ್ತಮ ಮನಸ್ಥಿತಿ ಮತ್ತು ಚಯಾಪಚಯ ಕ್ರಿಯೆಯನ್ನು ಬೆಂಬಲಿಸುವ ತೃಪ್ತಿಯನ್ನು ಹೆಚ್ಚಿಸಲು ಅವಶ್ಯಕ. ಪ್ರೋಟೀನ್ ಮತ್ತು ಖನಿಜದೊಂದಿಗೆ ಕೊಬ್ಬನ್ನು ಸಮತೋಲನಗೊಳಿಸುವುದು ಮುಖ್ಯವಾದರೂ ಕೊಬ್ಬು ನಮ್ಮ ದೇಹಕ್ಕೆ ಒಂದು ಪ್ರಮುಖ ಪೋಷಕಾಂಶವಾಗಿದೆ.
ಹೆಚ್ಚಿನ ವ್ಯಾಯಾಮ ಉತ್ತಮ ನಿಲುವನ್ನು ನೀಡುವುದು
ದೇಹವನ್ನು ಹೆಚ್ಚು ದಂಡಿಸಿದಷ್ಟು ಶಕ್ತಿ ಹಾಗೂ ಸದೃಢವಾಗಿ ಇರುತ್ತದೆ. ಜಿಮ್, ವ್ಯಾಯಾಮ, ಯೋಗ, ಕ್ರೀಡೆ ಸೇರಿದಂತೆ ಇನ್ನಿತರ ಕೆಲಸಕಾರ್ಯಗಳು ಸಹ ದೇಹಕ್ಕೆ ಅತ್ಯುತ್ತಮ ಪೋಷಣೆಯನ್ನು ನೀಡುವುದು. ಹೀಗೆ ಮಾಡುವುದರಿಂದ ದೇಹದ ಆಕಾರ ಮತ್ತು ಸಾಮಥ್ರ್ಯವು ಹೆಚ್ಚುವುದು. ಹಾಗಾಗಿ ಅತ್ಯುತ್ತಮ ವ್ಯಾಯಾಮ, ಕೆಲಸ-ಕಾರ್ಯಗಳು ಹಾಗೂ ಆರೋಗ್ಯ ಪೂರ್ಣ ಆಹಾರವನ್ನು ಸೇವಿಸುವುದರ ಮೂಲಕ ಸುಂದರ ದೇಹ ಹಾಗೂ ಆರೋಗ್ಯವನ್ನು ಪಡೆದುಕೊಳ್ಳಬಹುದು.
ಕುರುಕಲು ತಿಂಡಿ
ಕೆಲವರು ಸದಾ ಕಾಲ ಕುರುಕಲು ತಿಂಡಿಯನ್ನು ಸವಿಯಲು ಬಯಸುತ್ತಾರೆ. ಇನ್ನೂ ಕೆಲವರು ತಾವು ಸೇವಿಸುವ ಊಟ-ತಿಂಡಿಯ ಜೊತೆಗೆ ಕುರುಕಲು ತಿಂಡಿ ಇರಬೇಕು ಎಂದು ಬಯಸುತ್ತಾರೆ. ಆದರೆ ಈ ಹವ್ಯಾಸ ಆರೋಗ್ಯಕ್ಕೆ ಉತ್ತಮವಾದುದ್ದಲ್ಲ. ನಮ್ಮ ದೇಹಕ್ಕೆ ಎರಡು ಹೊತ್ತಿನ ಊಟ ಹಾಗೂ ಒಂದು ಹೊತ್ತು ತಿಂಡಿಯು ಸಾಕಾಗುತ್ತದೆ. ಅವುಗಳ ನಡುವೆ ಹಸಿವಾದರೆ ಹಣ್ಣು ಹಾಗೂ ಹಾಲನ್ನು ಸೇವಿಸಬಹುದು. ಅವುಗಳನ್ನು ಬಿಟ್ಟು ಕುರುಕಲು ತಿಂಡಿಯನ್ನು ತಿನ್ನುವುದು ಉಚಿತವಲ್ಲ. ಕುರುಕಲು ತಿಂಡಿ ಸೇವಿಸುವುದರಿಂದ ನಮ್ಮ ಹಸಿವಿನ ಮಟ್ಟ ಹತಿಯಾಗಿ ಹೆಚ್ಚುವುದು. ಅಲ್ಲದೆ ಕುರುಕಲು ತಿಂಡಿ ಸೇವಿಸುವುದರಿಂದ ಪದೇ ಪದೇ ತಿನ್ನಬೇಕು ಎನ್ನುವ ಬಯಕೆ ಉಂಟಾಗುತ್ತಲೇ ಇರುತ್ತದೆ. ಹಾಗಾಗಿ ಆರೋಗ್ಯ ದೃಷ್ಟಿಯಿಂದ ಕುರುಕಲು ತಿಂಡಿ ಉತ್ತಮವಾದುದ್ದಲ್ಲ.
ಪ್ರತಿಜೀವಕಗಳು
ನಮ್ಮ ದೇಹದಲ್ಲಿ ಇರುವ ಪ್ರತಿಜೀವಕಗಳು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ವೈರಸ್ಸಿನಿಂದ ಬರುವ ಜ್ವರಗಳು ನಮ್ಮ ದೇಹದ ಮೇಲೆ ಹಾನಿಯುಂಟುಮಾಡುತ್ತವೆ. ಜ್ವರ ಹಾಗೂ ಇನ್ನಿತರ ರೋಗಗಳಿಂದ ಗುಣಮುಕರಾಗಲು ಪ್ರತಿರೋಧಕಗಳು ಅತ್ಯಗತ್ಯ. ಹಾಗಾಗಿ ಸಾಕಷ್ಟು ನಿದ್ರೆಯನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಉತ್ತಮ. ಚಳಿಗಾಲದಲ್ಲಿ ಐಸ್ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಸೇವಿಸಬಾರದು. ಅವು ಜ್ವರ ಹಾಗೂ ವೈರಸ್ನಂತಹ ರೋಗಗಳ ಆಹ್ವಾನಕ್ಕೆ ಕಾರಣವಾಗುತ್ತವೆ. ಆರೋಗ್ಯ ಸಮಸ್ಯೆ ಎದುರಾದಾಗ ಆರೋಗ್ಯಕರವಾದ ಮನೆ ಮದ್ದನ್ನು ಮೊದಲು ಪ್ರಯತ್ನಿಸಿ.
ಸಿಕ್ಸ್ ಪ್ಯಾಕ್ ದೇಹ
ಸಿಕ್ಸ್ ಪ್ಯಾಕ್ ಹೊಂದಿರುವ ದೇಹವು ಹೆಚ್ಚು ಆಕರ್ಷಕ ಹಾಗೂ ಆರೋಗ್ಯಕಾರಕ ಶರೀರ ಎಂದು ನಂಬುತ್ತೇವೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವ್ಯಾಯಾಮ ಹಾಗೂ ಜಿಮ್ಗಳಂತಹ ರೂಢಿಯನ್ನು ಹೊಂದುವುದನ್ನು ನೋಡುತ್ತೇವೆ. ಆದರೆ ಸಿಕ್ಸ್ ಪ್ಯಾಕ್ ಎಲ್ಲಾ ವ್ಯಕ್ತಿಗಳಿಗೂ ಸರಿಹೊಂದುವುದಿಲ್ಲ. ಸಿಕ್ಸ್ಪ್ಯಾಕ್ನ ಕೆಲವು ತಾಲೀಮುಗಳು, ದೇಹದಂಡನೆ ಮತ್ತು ವ್ಯಾಯಾಮವು ಕಲವರಿಗೆ ವಿಷಕಾರಿಯಾಗಿ ಪರಿಣಮಿಸ ಬಹುದು. ಹಾಗಾಗಿ ನಿಮ್ಮ ಆರೋಗ್ಯದ ತಪಾಸಣೆಯ ನಂತರ ವ್ಯಾಯಾಮ ಹಾಗೂ ಜಿಮ್ಗಳ ಆಯ್ಕೆಯನ್ನು ಮಾಡಿ. ಜೊತೆಗೆ ದೇಹಕ್ಕೆ ಹೊಂದುವ ಆರೋಗ್ಯಕರ ವ್ಯಾಯಾಮ ಹಾಗೂ ಆಹಾರವನ್ನು ಸ್ವೀಕರಿಸುವುದರ ಮೂಲಕ ಉತ್ತಮ ಆರೋಗ್ಯ ಹಾಗೂ ದೇಹವನ್ನು ಪಡೆದುಕೊಳ್ಳಿ
Comments are closed.