ಆರೋಗ್ಯ

ಮುಖದಲ್ಲಿ ದಿಢೀರಾಗಿ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕೆ ಕಾರಣವೇನು ಗೋತ್ತೆ?

Pinterest LinkedIn Tumblr

ಮೊಡವೆಯು ಎಲ್ಲ ವಯೋಮಾನವರಲ್ಲಿ ಸಾಮಾನ್ಯವಾಗಿರುವ ಕಂಡು ಬರುವ ಚರ್ಮದ ಸಮಸ್ಯೆಗಳಲ್ಲಿ ಒಂದಾಗಿದೆ. ಮೊಡವೆಗೆ ಕಾಡಲು ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲ. ಶರೀರದಲ್ಲಿ ಹಾರ್ಮೋನ್ ಬದಲಾವಣೆಗಳು, ಪ್ರೌಢಾವಸ್ಥೆಯಿಂದ ಹಿಡಿದು ಕೊಬ್ಬು ಹೆಚ್ಚಿರುವ ಆಹಾರಗಳ ಅತಿಯಾದ ಸೇವನೆಯವರೆಗೆ ವಿವಿಧ ಅಂಶಗಳು ಮೊಡವೆಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಮೊಡವೆಗಳು ಹದಿಹರೆಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಯೆಂದೇ ಹಿಂದೆ ಭಾವಿಸಲಾಗಿತ್ತು,ಆದರೆ ವಾಸ್ತವದಲ್ಲಿ ವಯಸ್ಕರಲ್ಲಿ ಮತ್ತು ಹಿರಿಯ ಪ್ರಾಯದವರಲ್ಲಿಯೂ ಮೊಡವೆಗಳು ಕಂಡು ಬರುತ್ತವೆ. ಪ್ರತಿಯೊಬ್ಬರೂ ಮುಖದಲ್ಲಿ ಮೊಡವೆಗಳ ಕಾಟವನ್ನು ಅನುಭವಿಸಿರುತ್ತಾರೆ, ಆದಾಗ್ಯೂ ಮೊಡವೆಗಳು ನಮ್ಮ ದೇಹಾರೋಗ್ಯದ ಬಗ್ಗೆ ಸುಳಿವು ನೀಡುತ್ತವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಮೊಡವೆ, ನಮ್ಮ ಆರೋಗ್ಯದಲ್ಲಿ ಅದರ ಪಾತ್ರ ಮತ್ತು ಅದಕ್ಕೇನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಗಳಿಲ್ಲಿವೆ.

ಮೊಡವೆಗೆ ಕಾರಣವೇನು?
ನಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಂಡಾಗ ಅದಕ್ಕೇನು ಕಾರಣ ಎನ್ನುವುದು ಹೆಚ್ಚುಕಡಿಮೆ ಪ್ರತಿಯೊಬ್ಬರಲ್ಲೂ ಉದ್ಭವವಾಗುವ ಸಾಮಾನ್ಯ ಪ್ರಶ್ನೆಯಾಗಿದೆ. ನಾವು ಕಡೆಗಣಿಸುವ ಪ್ರಮುಖ ಕಾರಣಗಳಲ್ಲಿ ಪರಿಸರ ಮಾಲಿನ್ಯವು ಒಂದಾಗಿದೆ. ವಾಯುವಿನಲ್ಲಿಯ ಕೊಳೆ ಮತ್ತು ಮಾಲಿನ್ಯಕಾರಕಗಳು ನಮ್ಮ ಚರ್ಮದ ಮೇಲೆ ಸಂಗ್ರಹಗೊಳ್ಳುವುದು ಮಾತ್ರವಲ್ಲ,ಚರ್ಮದ ರಂಧ್ರಗಳನ್ನು ಮುಚ್ಚುತ್ತವೆ ಮತ್ತು ಮೊಡವೆಗಳಿಗೆ ಕಾರಣವಾಗುತ್ತವೆ. ಈಗಾಗಲೇ ಮೊಡವೆಗಳ ಸಮಸ್ಯೆಯಿದ್ದರೆ ಅದು ಇನ್ನಷ್ಟು ತೀವ್ರಗೊಳ್ಳುತ್ತದೆ. ಅಲ್ಲದೆ ಅದು ವಿವಿಧ ಚರ್ಮ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸುತ್ತದೆ.

ನಿಮ್ಮ ಮುಖದಲ್ಲಿ ದಿಢೀರಾಗಿ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕೆ ಕಾರಣವೇನು ಎಂಬ ಅಚ್ಚರಿ ನಿಮಗುಂಟಾಗಬಹುದು. ಈ ಅಪಾಯವನ್ನುಂಟು ಮಾಡುವ ಮೂರು ವಿಭಿನ್ನ ಅಂಶಗಳಿಲ್ಲಿವೆ.

ಒತ್ತಡ: ಒತ್ತಡವು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿದೆ. ನೀವು ಹೊರಗಡೆ ಆಹಾರ ಸೇವಿಸುತ್ತಿದ್ದರೆ ಅಥವಾ ರಾತ್ರಿ ತಡವಾಗಿ ಮಲಗುತ್ತಿದ್ದರೆ ಅದು ನಿಮ್ಮ ದೈನಂದಿನ ಬದುಕಿನಲ್ಲಿ ವ್ಯತ್ಯಯಗಳನ್ನುಂಟು ಮಾಡುತ್ತದೆ ಮತ್ತು ಇದು ನಿಮ್ಮ ಹಾರ್ಮೋನ್‌ಗಳು ಮತ್ತು ಚರ್ಮದ ಮೇಲೆ ಪರಿಣಾಮವನ್ನು ಬೀರಿ ಮೊಡವೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ನಿದ್ರೆಯ ಕೊರತೆ ಮತ್ತು ಅನಾರೋಗ್ಯಕರ ಆಹಾರ ಇವು ಮೇಳೈಸಿದರೆ ಹೆಚ್ಚಿನ ಜನರಲ್ಲಿ,ವಿಶೇಷವಾಗಿ ಹದಿಹರೆಯದವರು ಮತ್ತು ವಯಸ್ಕರಲ್ಲಿ ದಿಢೀರನೆ ಮೊಡವೆಗಳು ಏಳಲು ಮುಖ್ಯ ಕಾರಣಗಳಲ್ಲೊಂದಾಗಿದೆ.

ಹೀಗಾಗಿ ಆರಾಮವನ್ನು ನೀಡುವ ಮತ್ತು ಒತ್ತಡ ಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ.

ಹಾರ್ಮೋನ್ ಬದಲಾವಣೆಗಳು: ಪ್ರೌಢಾವಸ್ಥೆಯನ್ನು ತಲುಪಿದಾಗ ಶರೀರದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುವುದು ಹದಿಹರೆಯದವರು ಮೊಡವೆಯುಂಟಾಗುವ ಹೆಚ್ಚಿನ ಅಪಾಯಕ್ಕೆ ಗುರಿಯಾಗಲು ಕಾರಣವಾಗಿದೆ. ಮೊಡವೆಗಳುಂಟಾಗುವಲ್ಲಿ ಹಾರ್ಮೋನ್ ಬದಲಾವಣೆಗಳು ಪಾತ್ರವನ್ನು ಹೊಂದಿವೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಮಗುವೊಂದು ಬೆಳೆದು ಹದಿಹರೆಯಕ್ಕೆ ಕಾಲಿರಿಸಿದಾಗ ಹಾರ್ಮೋನ್‌ಗಳಿಂದಾಗಿ ಶರೀರದಲ್ಲಿ ಹಲವಾರು ಸಂತಾನೋತ್ಪತ್ತಿ ಬದಲಾವಣೆಗಳು ಉಂಟಾಗುತ್ತವೆ ಮತ್ತು ಇವು ಮೊಡವೆಗಳಿಗೆ ಕಾರಣವಾಗಬಹುದು. ಹಾರ್ಮೋನ್ ಮಟ್ಟದಲ್ಲಿ ದಿಢೀರ್ ಬದಲಾವಣೆಗಳಿಂದಾಗಿ ಹೆಚ್ಚಿನ ಹೆಣ್ಣುಮಕ್ಕಳು ಮುಟ್ಟಾಗುವ ಸಮಯ ಸಮೀಪಿಸುತ್ತಿದ್ದಂತೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಪ್ರಕರಣಗಳಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ನಂತಹ ಹಾರ್ಮೋನ್ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿಯೂ ಮೊಡವೆಗಳು ಉಂಟಾಗುತ್ತವೆ.

ಇಂತಹ ಪ್ರಕರಣದಲ್ಲಿ ಮೊಡವೆಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಚರ್ಮರೋಗ ತಜ್ಞರನ್ನು ಭೇಟಿಯಾಗುವುದು ಮುಖ್ಯವಾಗುತ್ತದೆ. ಏಕೆಂದರೆ ಅದನ್ನು ಕಡೆಗಣಿಸುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಹಾರ: ನಿಮ್ಮ ಚರ್ಮವನ್ನು ಆರೋಗ್ಯಯುತವಾಗಿರಿಸುವಲ್ಲಿ ಮತ್ತು ಅದಕ್ಕೆ ಹೊಳಪು ನೀಡುವಲ್ಲಿ ಆಹಾರದ ಪಾತ್ರವನ್ನು ಕಡೆಗಣಿಸುವಂತಿಲ್ಲ. ಆಹಾರವೂ ಮೊಡವೆಗೆ ಕಾರಣಗಳ ಲ್ಲೊಂದಾಗಿದೆ. ಅನಿಯಮಿತ ಆಹಾರ ಸೇವನೆ,ಅನಾರೋಗ್ಯಕಾರಿ ಆಹಾರ ಅಥವಾ ಜಂಕ್ ಫುಡ್ ಅಥವಾ ಸಂಸ್ಕರಿತ ಆಹಾರಗಳ ಸೇವನೆಯೂ ಮೊಡವೆಗೆ ಕಾರಣವಾಗುತ್ತದೆ. ಅಲ್ಲದೆ ಹೆಚ್ಚು ಕೊಬ್ಬಿರುವ ಆಹಾರ ಮತ್ತು ಎಣ್ಣೆಯಂಶ ಹೆಚ್ಚಾಗಿರುವ ಅಥವಾ ಕರಿದ ಆಹಾರಗಳೂ ಮೊಡವೆಗಳ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತವೆ.

ಇದೇ ಕಾರಣದಿಂದ ನಾವೇನು ತಿನ್ನುತ್ತೇವೆ ಎನ್ನುವುದರ ಮೇಲೆ ನಿಕಟ ನಿಗಾಯಿರಿಸುವುದು ಮತ್ತು ನಮ್ಮ ಚರ್ಮದ ಆರೋಗ್ಯಕ್ಕಾಗಿ ಕಟ್ಟುನಿಟ್ಟಿನ ಆಹಾರಕ್ರಮ ಮುಖ್ಯವಾಗಿದೆ. ಸಾಕಷ್ಟು ನೀರು,ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮೊಡವೆಗಳುಂಟಾ ಗುವುದನ್ನು ತಡೆಯಲು ಅತ್ಯುತ್ತಮ ಮಾರ್ಗವಾಗಿದೆ.

ಕೊಳಕಾದ ಫೋನ್‌ಗಳು, ತಲೆದಿಂಬುಗಳ ಹೊದಿಕೆಗಳು ಅಥವಾ ಮೇಕಪ್ ಕೂಡ ಮೊಡವೆಗಳುಂಟಾಗಲು ಕಾರಣವಾಗುತ್ತವೆ.ಇಂತಹ ಮೊಡವೆಗಳು ಮುಖದ ಒಂದು ಪಾರ್ಶ್ವದಲ್ಲಿ, ಹೆಚ್ಚಾಗಿ ಕೆನ್ನೆಗಳು ಮತ್ತು ದವಡೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಗಲ್ಲ ಮತ್ತು ದವಡೆಯ ಭಾಗದಲ್ಲಿ ಉಂಟಾಗುವ ಮೊಡವೆಗಳಿಗೆ ಎಂಡೋಕ್ರೈನ್ ಸಿಸ್ಟಮ್‌ನಲ್ಲಿಯ ಬದಲಾವಣೆಗಳೂ ಕಾರಣವಾಗುತ್ತವೆ.

ಎಂಡೊಕ್ರೈನ್ ಸಿಸ್ಟಮ್‌ನಲ್ಲಿ ಬದಲಾವಣೆಗಳಿಗೆ ಜನನ ನಿಯಂತ್ರಣ ಮಾತ್ರೆಗಳಂತಹ ಔಷಧಿಗಳ ಸೇವನೆಯೂ ಕಾರಣವಾಗುತ್ತದೆ. ಹೆಚ್ಚು ಕಾರ್ಬೊಹೈಡ್ರೇಟ್ ಇರುವ ಆಹಾರ ಮತ್ತು ಡೈರಿ ಉತ್ಪನ್ನಗಳ ಸೇವನೆ ಕರುಳಿನ ಆರೋಗ್ಯ ಮತ್ತು ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರಬಲ್ಲವು ಮತ್ತು ಇದು ಮೊಡವೆಗೆ ಕಾರಣವಾಗುತ್ತದೆ. ಹೀಗಾಗಿ ಮೊಡವೆಯನ್ನು ತಡೆಯಲು ಮತ್ತು ಅದರ ವಿರುದ್ಧ ಹೋರಾಡಲು ಸಕ್ಕರೆ,ಡೈರಿ ಉತ್ಪನ್ನ ಇತ್ಯಾದಿಗಳನ್ನು ಮಿತವಾದ ಪ್ರಮಾಣದಲ್ಲಿ ಸೇವಿಸಬೇಕು.

Comments are closed.