ಆರೋಗ್ಯ

ದಿನದ 24 ಗಂಟೆಯೂ ಸಣ್ಣ ಮಗುವಿಗೆ ಡಯಾಪರ್ ತೊಡಿಸುವುದು ಆರೋಗ್ಯಕರವೇ?

Pinterest LinkedIn Tumblr

ಹೆತ್ತವರಿಗೆ ತಮ್ಮ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮಕ್ಕಿಂತ ಹೆಚ್ಚಿನ ಕಾಳಜಿಯ ವಿಷಯ ಬೇರೆ ಯಾವುದೂ ಇರುವುದಿಲ್ಲ. ತಮ್ಮ ಮಗುವಿಗೆ ಹಾನಿಕಾರಕವಾಗಬಹುದಾದ ಯಾವುದೇ ತಪ್ಪನ್ನು ಅವರು ಮಾಡಲು ಬಯಸುವುದಿಲ್ಲ. ಪುಟ್ಟ ಮಗುವಿಗೆ ದಿನವಿಡೀ ಡಯಾಪರ್ ತೊಡಿಸುವುದು ಇಂತಹ ತಪ್ಪುಗಳಲ್ಲೊಂದಾಗಿದೆ. ಪುಟ್ಟ ಮಗು ದಿನವಿಡೀ ಮೂತ್ರವನ್ನು ವಿಸರ್ಜಿಸುತ್ತಿರುತ್ತದೆ ಮತ್ತು ಪ್ರತಿ ಬಾರಿಯೂ ಸ್ವಚ್ಛಗೊಳಿಸುವುದು ಕಷ್ಟ,ಹೀಗಾಗಿ ಡಯಾಪರ್ ಅನುಕೂಲಕರ ನಿಜ. ಆದರೆ ಈ ಕಷ್ಟದಿಂದ ಪಾರಾಗಲು ಮಗುವಿಗೆ ದಿನವಿಡೀ ಡಯಾಪರ್ ತೊಡಿಸುವುದು ಅದಕ್ಕೆ ಅಪಾಯಕಾರಿಯಾಗುತ್ತದೆ. ಇದು ಮಗುವನ್ನು ವಿವಿಧ ಚರ್ಮ ಸೋಂಕುಗಳು ಮತ್ತು ಅಲರ್ಜಿಗಳ ಅಪಾಯಕ್ಕೆ ತಳ್ಳಬಹುದು. ಈ ಬಗ್ಗೆ ಮಕ್ಕಳ ತಜ್ಞರು ಏನು ಹೇಳುತ್ತಾರೆ ನೋಡಿ….

ದಿನದ 24 ಗಂಟೆಯೂ ಮಗುವಿಗೆ ಡಯಾಪರ್ ತೊಡಿಸಬಹುದೇ?
-ಹೀಗೆ ಮಾಡುವುದು ಸುರಕ್ಷಿತವಲ್ಲ. ಪ್ರತಿ ದಿನ ಕನಿಷ್ಠ 6ರಿಂದ 8 ಗಂಟೆಗಳ ಕಾಲ ಗಾಳಿಯಾಡಲು ಮುಕ್ತವಾಗಿ ಬಿಡಬೇಕು. ಡಯಾಪರ್‌ಗಳನ್ನು ಬದಲಿಸುವಾಗ ಚರ್ಮವು ಗಾಳಿಗೆ ತನ್ನಿಂತಾನೆ ಒಣಗಲು ಕನಿಷ್ಠ 15-20 ನಿಮಿಷಗಳ ಕಾಲಾವಕಾಶವಿರಲಿ.

ಮಗುವು ಡಯಾಪರ್ ತೊಟ್ಟಿರುವಾಗ ಅದರ ಚರ್ಮದ ಮೇಲೆ ತೇವಾಂಶ ಉಂಟಾಗುತ್ತದೆ. ಇದು ಮಗುವಿನ ಮೃದುವಾದ ಚರ್ಮದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಬೆಳೆಯಲು ಕಾರಣವಾಗುತ್ತದೆ. ಯಾವುದೇ ರೀತಿಯ ಚರ್ಮ ಸೋಂಕು ಅಥವಾ ಅಲರ್ಜಿಯನ್ನು ತಡೆಯಲು ಮಗುವಿಗೆ ದಿನಕ್ಕೆ ಹಲವಾರು ಬಾರಿ ಡಯಾಪರ್ ಹಾಕದೆ ಮುಕ್ತವಾಗಿ ಬಿಡಬೇಕು.

ರಾತ್ರಿ ಡಯಾಪರ್ ತೊಡಿಸುವುದರಿಂದ ಅಪಾಯವಿದೆಯೇ?
-ನಿಜಕ್ಕೂ ಡಯಾಪರ್ ಇರುವುದೇ ಮಗುವಿಗೆ ರಾತ್ರಿ ವೇಳೆಯಲ್ಲಿ ತೊಡಿಸುವುದಕ್ಕೆ. ಆದರೆ ಪದೇ ಪದೇ ಬಟ್ಟೆಗಳನ್ನು ಬದಲಿಸುವ ರಗಳೆಯಿಂದ ಪಾರಾಗಲು ನಾವು ಮಕ್ಕಳಿಗೆ ಹಗಲಿನಲ್ಲಿಯೂ ಡಯಾಪರ್ ತೊಡಿಸುವುದನ್ನು ರೂಢಿಸಿಕೊಂಡಿದ್ದೇವೆ. ರಾತ್ರಿ ಡಯಾಪರ್ ಬಳಕೆಯು ಮಗುವಿನ ಮೂತ್ರ ವಿಸರ್ಜನೆಯನ್ನು ಅವಲಂಬಿಸಿರುತ್ತದೆ. ಡಯಾಪರ್ ಮೂತ್ರದಿಂದ ತುಂಬಿ ಹೊರಗೆ ತುಳುಕುತ್ತಿದ್ದರೆ ಅದು ಇನ್ನಷ್ಟು ಮೂತ್ರವನ್ನು ಹೀರಿಕೊಳ್ಳುವುದಿಲ್ಲ ಎಂದು ಅರ್ಥ. ಇದು ಮಗುವಿನ ಚರ್ಮದ ಮೇಲೆ ದದ್ದುಗಳನ್ನುಂಟು ಮಾಡಬಹುದು. ರಾತ್ರಿ ಹೆತ್ತವರು ಪ್ರತಿ ಎರಡು ಗಂಟೆಗಳಿಗೊಮ್ಮೆ ಡಯಾಪರ್ ಒದ್ದೆಯಾಗಿದೆಯೇ ಎಂದು ನೋಡಬೇಕು ಮತ್ತು ಒದ್ದೆಯಾಗಿದ್ದರೆ ಅದನ್ನು ಬದಲಿಸಬೇಕು. ಡಯಾಪರ್ ಒದ್ದೆಯಾದ ಒಂದು ಗಂಟೆಯೊಳಗೆ ಅದನ್ನು ಬದಲಿಸಬೇಕು.

ಡಯಾಪರ್ ಡರ್ಮಟೈಟಿಸ್ ಎಂದರೇನು?
-ಮಗುವು ಮೂತ್ರ ಮಾಡುವ ಜಾಗದ ಸುತ್ತಲೂ ಬ್ಯಾಕ್ಟೀರಿಯಾ ತುಂಬಿಕೊಂಡಿರುತ್ತವೆ. ತೇವಾಂಶವು ಸ್ಕಿನ್ ಡರ್ಮಟೈಟಿಸ್‌ನ್ನುಂಟು ಮಾಡುತ್ತದೆ,ಇದನ್ನು ಸಾಮಾನ್ಯವಾಗಿ ಡಯಾಪರ್ ದದ್ದು ಎಂದು ಕರೆಯಲಾಗುತ್ತದೆ. ಡಯಾಪರ್ ದದ್ದು ಚರ್ಮದ ಸೋಂಕು ಮತ್ತು ಗಾಯಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಸ್ಥಿತಿಯನ್ನು ತಡೆಯಲು ಅಗತ್ಯ ಮುಂಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಡಯಾಪರ್ ಡರ್ಮಟೈಟಿಸ್‌ನ್ನು ನಿವಾರಿಸಲು ಹೀಗೆ ಮಾಡಿ…..

ದಿನಕ್ಕೆ ಕನಿಷ್ಠ 6ರಿಂದ 8 ಗಂಟೆಗಳ ಕಾಲ ಡಯಾಪರ್‌ನಿಂದ ಮಗುವಿಗೆ ಮುಕ್ತಿ ನೀಡಿ. ಮಗುವಿನ ಚರ್ಮವನ್ನು ಸ್ವಚ್ಛಗೊಳಿಸಲು ಬೇಬಿ ವೈಪ್‌ಗಳನ್ನು ಬಳಸುವುದು ಒಳ್ಳೆಯದಲ್ಲ,ಅದರ ಬದಲು ಸಾಧ್ಯವಿದ್ದಷ್ಟು ಸ್ವಚ್ಛತೆಗೆ ನೀರನ್ನೇ ಬಳಸಬೇಕು. ಪ್ರಯಾಣದಲ್ಲಿದ್ದಾಗ ಅಥವಾ ನೀರು ಅಲಭ್ಯವಾಗಿದ್ದರೆ ಮಾತ್ರ ಬೇಬಿ ವೈಪ್‌ಗಳನ್ನು ಬಳಸಬಹುದು. ಚಳಿಗಾಲದಲ್ಲಿ ಚರ್ಮವನ್ನು ಸ್ವಚ್ಛಗೊಳಿಸಲು ಹತ್ತಿ ಮತ್ತು ನೀರನ್ನು ಬಳಸಬೇಕು. ವಿಶೇಷವಾಗಿ ಒಣ ಋತುಗಳಲ್ಲಿ ಮಗುವಿನ ಚರ್ಮಕ್ಕೆ ತೇವಾಂಶ ನೀಡಲು ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಲೇಪಿಸಿ. ಇದು ಚರ್ಮದ ಸುತ್ತ ಪದರವೊಂದನ್ನು ನಿರ್ಮಿಸುತ್ತದೆ ಮತ್ತು ಡಯಾಪರ್ ದದ್ದುಗಳುಂಟಾಗುವುದನ್ನು ತಡೆಯುತ್ತದೆ.

ಬೇಬಿ ಪೌಡರ್‌ನ್ನು ಹಚ್ಚಬೇಡಿ,ಅದು ಚರ್ಮವನ್ನು ಒಣಗಿಸುತ್ತದೆ ಮತ್ತು ಮಗುವಿಗೆ ದದ್ದುಗಳುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.

Comments are closed.