ಆರೋಗ್ಯ

ಶರೀರದ ಅಗತ್ಯಕ್ಕನುಗುಣವಾದ ಕಾಡ್‌ಲಿವರ್ ಆಯ್ಕೆ.ಮಾಡಿ ಆರೋಗ್ಯವಾಗಿರಿ.

Pinterest LinkedIn Tumblr

ಒಂದು ಜಾತಿಯ ಮೀನಿನ ಯಕೃತ್ತಿನಿಂದ ತಯಾರಿಸಲಾಗುವ ಕಾಡ್‌ಲಿವರ್ ಎಣ್ಣೆಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ, ಆದರೆ ಅದನ್ನು ಸೇವಿಸುವುದರ ಆರೋಗ್ಯ ಲಾಭಗಳು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಅದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಉಪಯೋಗಿಯಾಗಿದೆ. ಈಎಣ್ಣೆಯು ಒಮೆಗಾ ಫ್ಯಾಟಿ ಆಯಸಿಡ್‌ಗಳು,ವಿಟಾಮಿನ್ ಡಿ ಮತ್ತು ವಿಟಾಮಿನ್ ಇತ್ಯಾದಿಗಳಂತಹ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ.

ಕೆಲವೊಮ್ಮೆ ಆಹಾರದ ಮೂಲಕ ವಿಟಾಮಿನ್ ಎ ಮತ್ತು ಡಿ ಹಾಗೂ ಒಮೆಗಾ-3 ಫ್ಯಾಟಿ ಆಯಸಿಡ್‌ಗಳ ಮಕ್ಕಳ ದೈನಂದಿನ ಅಗತ್ಯವನ್ನು ಪೂರೈಸಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಅಗತ್ಯ ಪೋಷಕಾಂಶಗಳನ್ನು ಪಡೆಯಲು ಕಾಡ್‌ಲಿವರ್ ಎಣ್ಣೆಯು ನೆರವಾಗುತ್ತದೆ.

ಮಕ್ಕಳಲ್ಲಿ ಬೆಳವಣಿಗೆಯ ಹಂತದಲ್ಲಿ ಬಹು ಮುಖ್ಯವಾಗಿರುವ ರೋಗ ನಿರೋಧಕ ವ್ಯವಸ್ಥೆಯು ಸೂಕ್ತವಾಗಿ ಕೆಲಸ ಮಾಡಲು ವಿಟಾಮಿನ್ ಎ ಅಗತ್ಯವಾಗಿದೆ. ಅದು ಮೂಳೆಗಳ ಬೆಳವಣಿಗೆ,ಉತ್ತಮ ದೃಷ್ಟಿ ಮತ್ತು ಜೀವಕೋಶಗಳ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಟಾಮಿನ್ ಡಿ ಬೆಳೆಯುತ್ತಿರುವ ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ರಿಕೆಟ್ಸ್ ರೋಗವನ್ನು ತಡೆಯುವುದು ಮಾತ್ರವಲ್ಲ,ಸ್ನಾಯುಗಳು ಮತ್ತು ಮೂಳೆಗಳ ಕಾರ್ಯನಿರ್ವಹಣೆಗೂ ಮಹತ್ವದ್ದಾಗಿದೆ. ಅದು ಟೈಪ್ 1 ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ಹಲವು ಸಾಮಾನ್ಯ ಕ್ಯಾನ್ಸರ್‌ಗಳನ್ನೂ ತಡೆಯುತ್ತದೆ. ಒಮೆಗಾ-3 ಫ್ಯಾಟಿ ಆಯಸಿಡ್‌ಗಳು ಅನ್‌ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನು ಒಳಗೊಂಡಿರುವುದರಿಂದ ಮಿದುಳು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕಾಡ್‌ಲಿವರ್ ಎಣ್ಣೆಯು ವಿಟಾಮಿನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳ ಆಗರವಾಗಿರುವುದರಿಂದ ಅದು ಮಕ್ಕಳಿಗೆ,ವಿಶೇಷವಾಗಿ ಅವರ ಬೆಳವಣಿಗೆಯ ವರ್ಷಗಳಲ್ಲಿ ಅತ್ತುತ್ತಮ ಆರೋಗ್ಯ ಪೂರಕವಾಗಿದೆ.

ಕಾಡ್‌ಲಿವರ್ ಎಣ್ಣೆ ಮಕ್ಕಳಿಗೆ ಮಾತ್ರವಲ್ಲ,ವಯಸ್ಕರಿಗೂ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇಲ್ಲಿವೆ ಅದರ ಕೆಲವು ಆರೋಗ್ಯಲಾಭಗಳು…..

ಮೂಳೆಗಳು ಮತ್ತು ಕೀಲುಗಳನ್ನು ಸದೃಢಗೊಳಿಸುತ್ತದೆ
ಕಾಡ್‌ಲಿವರ್ ಎಣ್ಣೆಯಲ್ಲಿರುವ ವಿಟಾಮಿನ್ ಡಿ3 ಶರೀರವು ಆಹಾರದಲ್ಲಿಯ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಗೊಳಿಸಲು ನೆರವಾಗುತ್ತದೆ. ಅದು ಮಕ್ಕಳಲ್ಲಿ ರಿಕೆಟ್ಸ್ ಹಾಗೂ ಮೂಳೆಗಳು ಮೃದುಗೊಳ್ಳುವ ಅಪಾಯವನ್ನು ತಗ್ಗಿಸುತ್ತದೆ. ಅದೇ ರೀತಿ ವಯಸ್ಕರಲ್ಲಿ ಅಸ್ಥಿರಂಧ್ರತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ
ಕಾಡ್‌ಲಿವರ್ ಎಣ್ಣೆಯು ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್)ನ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್)ನ್ನು ಹೆಚ್ಚಿಸುತ್ತದೆ.

ಮಧುಮೇಹವನ್ನು ತಡೆಯುತ್ತದೆ
ಕಾಡ್‌ಲಿವರ್ ಎಣ್ಣೆಯು ಮಕ್ಕಳಲ್ಲಿ ಬೆಳವಣಿಗೆಯ ನಂತರದ ಹಂತಗಳಲ್ಲಿ ಟೈಪ್ 1 ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

ಖಿನ್ನತೆಯನ್ನು ನಿವಾರಿಸುತ್ತದೆ
ತನ್ನಲ್ಲಿರುವ ಒಮೆಗಾ-3 ಫ್ಯಾಟಿ ಆಯಸಿಡ್‌ಗಳಿಂದಾಗಿ ಕಾಡ್‌ಲಿವರ್ ಎಣ್ಣೆಯು ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ಅರಿವು ಶಕ್ತಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮನೋವಿಕಾರ,ಅಲ್ಝೀಮರ್ಸ್ ಕಾಯಿಲೆ,ಅಟೆನ್ಶನ್ ಡೆಫಿಸಿಟ್ ಹೈಪೆರ್‌ಆಯಕ್ಟಿವ್ ಡಿಸಾರ್ಡರ್ (ಎಡಿಎಚ್‌ಡಿ) ಅಥವಾ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವವರಿಗೆ ಕಾಡ್‌ಲಿವರ್ ಎಣ್ಣೆಯ ಸೇವನೆಯು ಲಾಭದಾಯಕವಾಗಿದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಈ ಎಣ್ಣೆಯಲ್ಲಿರುವ ಒಮೆಗಾ-3 ಫ್ಯಾಟಿ ಆಯಸಿಡ್‌ಗಳು ರಕ್ತದೊತ್ತಡ,ರಕ್ತದ ಜಿಗುಟುತನ ಮತ್ತು ಕಡಿಮೆ ರಕ್ತಪೂರೈಕೆಯಿಂದಾಗಿ ಅಸಹಜ ಹೃದಯ ಬಡಿತಗಳನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ.

ಕಣ್ಣುಗಳನ್ನು ರಕ್ಷಿಸುತ್ತದೆ
ಕಾಡ್‌ಲಿವರ್ ಎಣ್ಣೆಯ ನಿಯಮಿತ ಸೇವನೆಯು ಕಣ್ಣುಗಳು ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಒಳ್ಳೆಯದು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅದು ವಯೋಸಂಬಂಧಿತ ಅಕ್ಷಿಪಟಲ ಅವನತಿಯಿಂದ ರಕ್ಷಣೆಯನ್ನೂ ನೀಡುತ್ತದೆ.

ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ
ಶರೀರದಲ್ಲಿ ಜೀವಕೋಶಗಳು ಆರೋಗ್ಯಕರವಾಗಿರಲು ಕೊಬ್ಬು ಅತ್ಯಗತ್ಯವಾಗಿದೆ. ಕಾಡ್‌ಲಿವರ್ ಎಣ್ಣೆಯಲ್ಲಿರುವ ಒಮೆಗಾ-3 ಫ್ಯಾಟಿ ಆಯಸಿಡ್‌ನಂತಹ ಸೂಕ್ತ ಕೊಬ್ಬುಗಳು ಶರೀರವು ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತವೆ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತವೆ.

ಗಾಯಗಳು ಗುಣವಾಗಲು ನೆರವಾಗುತ್ತದೆ
ಫ್ಯಾಟಿ ಆಯಸಿಡ್‌ಗಳು ತಮ್ಮ ಉರಿಯೂತ ನಿರೋಧಕ ಗುಣಗಳಿಗೆ ಹೆಸರಾಗಿವೆ. ಹೀಗಾಗಿ ಕಾಡಲಿವರ್ ಎಣ್ಣೆಯ ಸೇವನೆಯು ಉರಿಯೂತವನ್ನು ಶಮನಗೊಳಿಸಿ ಗಾಯಗಳು ಬೇಗನೆ ಗುಣವಾಗಲು ನೆರವಾಗುತ್ತದೆ.

ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ
ಟೈಪ್ 2 ಮಧುಮೇಹವನ್ನು ಹೊಂದಿರುವ ರೋಗಿಗಳಲ್ಲಿ ಮೂತ್ರಪಿಂಡಗಳಲ್ಲಿಯ ಹೆಚ್ಚುವರಿ ಪ್ರೋಟಿನ್‌ನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡಗಳಲ್ಲಿ ಹೆಚ್ಚುವರಿ ಪ್ರೊಟೀನ್ ಇದ್ದರೆ ಅದು ಮೂತ್ರಪಿಂಡ ರೋಗದ ತೀವ್ರತೆಯನ್ನು ಸೂಚಿಸುತ್ತದೆ.

ಗಮನದಲ್ಲಿರಲಿ: ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಎಲ್ಲ ಪೂರಕಗಳೂ ಸಮಾನ ಗುಣಮಟ್ಟವನ್ನು ಹೊಂದಿರುವುದಿಲ್ಲ. ಹೀಗಾಗಿ ನಿಮ್ಮ ಶರೀರದ ಅಗತ್ಯಕ್ಕನುಗುಣವಾದ ಸೂಕ್ತ ವಿಧದ ಕಾಡ್‌ಲಿವರ್ ಪೂರಕವನ್ನು ಆಯ್ಕೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ವಯಸ್ಕರಲ್ಲಿ ವಿಟಾಮಿನ್ ಎ ಮತ್ತು ವಿಟಾಮಿನ್ ಡಿ ದೈನಂದಿನ ಸೇವನೆಯು ಕ್ರಮವಾಗಿ 10000 ಐಯು ಮತ್ತು 5000 ಐಯುಗಳನ್ನು ಮೀರಕೂಡದು.

ಕಾಡ್‌ಲಿವರ್ ಎಣ್ಣೆಯನ್ನು ದ್ರವ ಅಥವಾ ಕ್ಯಾಪ್ಸೂಲ್ ರೂಪದಲ್ಲಿ ಸೇವಿಸಬಹುದು. ದ್ರವವು ಮೀನಿನ ರುಚಿಯನ್ನು ಹೊಂದಿರುತ್ತದೆ. ಕ್ಯಾಪ್ಸೂಲ್‌ಗಳು ಘಾಟು ವಾಸನೆಯನ್ನು ಹೊಂದಿರುತ್ತವೆಯಾದರೂ ಅದನ್ನು ನಿವಾರಿಸಲು ಸೇವಿಸುವ ಮುನ್ನ ಶೀತಲೀಕರಿಸಬಹುದು.

ಮೊದಲ ಬಾರಿಗೆ ಕಾಡ್‌ಲಿವರ್ ಎಣ್ಣೆಯನ್ನು ಸೇವಿಸುತ್ತಿದ್ದರೆ ಸರಿಯಾದ ಡೋಸೇಜ್‌ನ್ನು ತಿಳಿದುಕೊಳ್ಳಲು ವೈದ್ಯರೊಂದಿಗೆ ಸಮಾಲೋಚನೆ ಅಗತ್ಯವಾಗುತ್ತದೆ. ದೈನಂದಿನ ಸೇವನೆಯ ಪ್ರಮಾಣವನ್ನು ನಿರ್ಧರಿಸುವ ಮುನ್ನ ಅದರ ಅಗತ್ಯವನ್ನು ಗುರುತಿಸುವುದು ಮುಖ್ಯವಾಗಿದೆ.

ಮೀನಿಗೆ ಅಲರ್ಜಿಯುಳ್ಳವರು ಕಾಡ್‌ಲಿವರ್ ಎಣ್ಣೆಯನ್ನು ಸೇವಿಸದಿದ್ದರೇ ಒಳ್ಳೆಯದು. ಅಂತಹವರು ತಮ್ಮ ಅಗತ್ಯಗಳಿಗಾಗಿ ಇತರ ಪೂರಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Comments are closed.