ಆರೋಗ್ಯ

ಒಂಟಿತನ(ಏಕಾಂಗಿ) ಏಕೆ ಆರೋಗ್ಯಕ್ಕೆ ಕೆಟ್ಟದ್ದು, ಗೋತ್ತೆ?

Pinterest LinkedIn Tumblr

ಮನೆಯಲ್ಲಿ ಒಂಟಿಯಾಗಿರುವುದರಿಂದ ನಿಮ್ಮ ಬದುಕನ್ನು ನಿಮಗಿಷ್ಟ ಬಂದಂತೆ ಬದುಕಬಹುದು ಎಂದು ನೀವು ಪುಳಕಗೊಳ್ಳಬಹುದು,ಆದರೆ ದೀರ್ಘಕಾಲದ ಏಕಾಂಗಿ ಬದುಕು ಹಲವಾರು ವಿಧಗಳಲ್ಲಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವುದೂ ನಿಮಗೆ ತಿಳಿದಿರಲಿ.

ಖಿನ್ನತೆಯಿಂದ ಹಿಡಿದು ನಿದ್ರೆಯಿಲ್ಲದ ರಾತ್ರಿಗಳವರೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಏಕಾಂಗಿ ಬದುಕು ಸೃಷ್ಟಿಸುತ್ತದೆ. ಕುಟುಂಬ ಸದಸ್ಯರಾಗಿರಲಿ,ಸ್ನೇಹಿತರಾಗಿರಲಿ ಅಥವಾ ಇತರ ಯಾರೇ ಆಗಿರಲಿ,ಜನಸಂಪರ್ಕ ಬಹಳ ಮುಖ್ಯವಾಗಿದೆ. ಎಲ್ಲರಿಂದ ಪ್ರತ್ಯೇಕವಾಗಿರುವುದು ಅಂತ್ಯದ ಹೆಬ್ಬಾಗಿಲು ತೆರೆದಂತೆ. ಹೆಚ್ಚಿನ ಖಿನ್ನತೆ ರೋಗಿಗಳು ಇತರರಿಂದ ಸಂಪರ್ಕವನ್ನು ಕಡಿದುಕೊಂಡವರೇ ಆಗಿರುತ್ತಾರೆ ಎನ್ನುವುದು ಕಟುವಾಸ್ತವವಾಗಿದೆ. ಸ್ವಾತಂತ್ರ ಮತ್ತು ಏಕಾಂಗಿತನದ ನಡುವೆ ಭಾರೀ ವ್ಯತ್ಯಾಸವಿದೆ.
ಏಕಾಂಗಿತನ ಏಕೆ ಆರೋಗ್ಯಕ್ಕೆ ಕೆಟ್ಟದ್ದು ಎನ್ನುವುದರ ಕುರಿತು ಮಾಹಿತಿಗಳಿಲ್ಲಿವೆ….

ಕ್ರಿಯಾಶೀಲತೆಯನ್ನು ಕುಗ್ಗಿಸುತ್ತದೆ
ಏಕಾಂಗಿಯಾಗಿರುವುದು ಸೋಮಾರಿತನಕ್ಕೆ ಇನ್ನೊಂದು ಹೆಸರಾಗಿದೆ. ನೀವು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಬೆಳಿಗ್ಗೆ ತಡವಾಗಿ ಏಳುತ್ತೀರಿ,ವ್ಯಾಯಾಮವನ್ನು ಮಾಡುವುದಿಲ್ಲ. ಸುಮ್ಮನೆ ಕುಳಿತೋ ಮಲಗಿಯೇ ಕಾಲ ಕಳೆಯುತ್ತೀರಿ. ಇದು ನಿಮ್ಮನ್ನು ನಿಷ್ಕ್ರಿಯರನ್ನಾಗಿಸುತ್ತದೆ ,ಇದರ ಪರಿಣಾಮ ನಿಮ ದೈಹಿಕ ಆರೋಗ್ಯದ ಮೇಲೆ ಉಂಟಾಗುತ್ತದೆ. ದೈಹಿಕ ಶ್ರಮವನ್ನು ಬೇಡುವ ಕೆಲಸಗಳನ್ನು ಮಾಡುವುದರಿಂದ ತಪ್ಪಿಸಿಕೊಳ್ಳಲು ಕಾರಣಗಳನ್ನು ಹುಡುಕತೊಡಗುತ್ತೀರಿ.

ತೂಕವನ್ನು ಹೆಚ್ಚಿಸುತ್ತದೆ
ನೀವು ದೈಹಿಕವಾಗಿ ನಿಷ್ಕ್ರಿಯರಾದಾಗ ಶರೀರದಲ್ಲಿ ಚಯಾಪಚಯ ಪ್ರಕ್ರಿಯೆಯೂ ದುರ್ಬಲಗೊಳ್ಳುತ್ತದೆ ಮತ್ತು ಇದು ಅಂತಿಮವಾಗಿ ಶರೀರದ ತೂಕವನ್ನು ಹೆಚ್ಚಿಸುತ್ತದೆ. ಅಲ್ಲದೆ ನೀವು ಹೊರಗೂ ಹೆಚ್ಚಾಗಿ ಹೋಗುವುದಿಲ್ಲವಾದ್ದರಿಂದ ಮನೆಗೇ ಊಟವನ್ನು ತರಿಸಿಕೊಳ್ಳುತ್ತೀರಿ. ಒಂಟಿತನವು ನೀವು ಹೆಚ್ಚು ಆಹಾರವನ್ನು ತಿನ್ನುವಂತೆ ಮಾಡುತ್ತದೆ,ಆದರೆ ಸೋಮಾರಿತನದಿಂದಾಗಿ ಅದನ್ನು ಕರಗಿಸಲು ನೀವು ಶರೀರವನ್ನು ಸಾಕಷ್ಟು ದುಡಿಸುವುದಿಲ್ಲ. ನಿಧಾನ ಚಯಾಪಚಯ ದರ,ನಿಷ್ಕ್ರಿಯತೆ ಮತ್ತು ಆಹಾರದ ಹಪಾಹಪಿತನ ಇವೆಲ್ಲ ಸೇರಿಕೊಂಡು ಶರೀರದ ತೂಕವನ್ನು ಹೆಚ್ಚಿಸುತ್ತವೆ.

ನಿದ್ರಾಹೀನತೆ
ಮನುಷ್ಯ ಸ್ವಭಾವತ ಸಂಘಜೀವಿ. ನಮ್ಮ ಮಾತುಗಳನ್ನು ಆಲಿಸಲು ಯಾರಾದರೂ ಅಗತ್ಯವಾಗುತ್ತಾರೆ. ಕೆಲವೊಮ್ಮೆ ಮಾತನಾಡಲು ಮ್ಮ ಸುತ್ತಮುತ್ತ ಯಾರೂ ಇಲ್ಲದಿದ್ದಾಗ ನಾವು ಒಂದು ರೀತಿಯ ಚಡಪಡಿಕೆಯನ್ನು ಅನುಭವಿಸುತ್ತಿರು ತ್ತೇವೆ. ಇದು ನಾವು ಸುಖನಿದ್ರೆ ಮಾಡುವುದನ್ನು ಕಷ್ಟವಾಗಿಸುತ್ತದೆ. ಒಂಟಿಯಾಗಿರುವ ಹೆಚ್ಚಿನ ಜನರಿಗೆ ವಿಶಾಲ ಜಾಗದಲ್ಲಿ ಒಬ್ಬರೇ ಇರುವ ಭೀತಿಯಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ಖಿನ್ನತೆಗೆ ಗುರಿಯಾಗಿಸುತ್ತದೆ
ಖಿನ್ನತೆ ಒಂಟಿತನದ ನಂತರ ಬರುವ ಅತ್ಯಂತ ಕೆಟ್ಟ ಸ್ಥಿತಿಗಳಲ್ಲೊಂದಾಗಿದೆ. ನೀವು ನಿರುತ್ಸಾಹಿಗಳಾಗಬಹುದು,ಒತ್ತಡಕ್ಕೆ ಸಿಲುಕಬಹುದು ಮತ್ತು ನಿಮ್ಮೆಂದಿಗೆ ಯಾರೂ ಇಲ್ಲದಿರುವುದರಿಂದ ಇಂತಹ ಸ್ಥಿತಿಯನ್ನು ಎದುರಿಸುವುದು ಕಷ್ಟವಾಗುತ್ತದೆ. ಕ್ರಮೇಣ ಖಿನ್ನತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಒಂಟಿ ಬದುಕು ನಿಮ್ಮ ಶರೀರ ಮಾತ್ರವಲ್ಲ,ಮನಸ್ಸಿನ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ.

ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ
ಏಕಾಂಗಿಯಾಗಿರುವುದು ಶರೀರದಲ್ಲಿ ಹಾರ್ಮೋನ್ ಉತ್ಪಾದನೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ವೈರಸ್‌ಗಳು ಹಾಗೂ ಫ್ಲು ವಿರುದ್ಧ ಹೋರಾಡುವ ಶರೀರದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದರಿಂದಾಗಿ ಆಗಾಗ್ಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು ನಿಮ್ಮ ಊಟದ ಬಟ್ಟಲಲ್ಲಿರುವುದು ತುಂಬ ಮುಖ್ಯವಾಗಿದೆ.

ಧೂಮ್ರಪಾನ, ಮದ್ಯ ಮತ್ತು ಮಾದಕ ದ್ರವ್ಯ
ಏಕಾಂಗಿತನವು ಕಾಡತೊಡಗಿದಾಗ ಜನರು ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಇದು ಅವರಿಗೆ ಕ್ಷಣಿಕ ನೆಮ್ಮದಿಯನ್ನು ನೀಡಬಹುದು,ಆದರೆ ದೀರ್ಘಾವಧಿಯಲ್ಲಿ ವಿನಾಶದತ್ತ ಕೊಂಡೊಯ್ಯುತ್ತದೆ. ಯಾವುದೇ ವಸ್ತುವಿನ ಅತಿಯಾದ ಬಳಕೆ,ವಿಶೇಷವಾಗಿ ಅದು ತಂಬಾಕು,ನಿಕೋಟಿನ್ ಇತ್ಯಾದಿಗಳಾಗಿದ್ದಾಗ ಅತ್ಯಂತ ಹಾನಿಕಾರಕವಾಗಿರುತ್ತದೆ. ವ್ಯಕ್ತಿಯು ಇವುಗಳ ಚಟವನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಇದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.

ಹೃದಯ ಸಮಸ್ಯೆಗಳನ್ನು ಆಹ್ವಾನಿಸುತ್ತದೆ
ಒಂಟಿ ಬದುಕಿನ ಇವೆಲ್ಲ ದುಷ್ಪರಿಣಾಮಗಳು ಹೃದಯಕ್ಕೆ ದುಬಾರಿಯಾಗುತ್ತವೆ . ಇವು ಹೃದಯದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಅಧಿಕ ರಕ್ತದೊತ್ತಡ,ಕೊಲೆಸ್ಟ್ರಾಲ್ ಹೆಚ್ಚಳ,ಪಾರ್ಶ್ವವಾಯುವಿನಂತಹ ಅಪಾಯಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

Comments are closed.