ಆರೋಗ್ಯ

ತುರಿಕೆಯ ಹಿಂದಿನ ವೈಜ್ಞಾನಿಕತೆ ಮತ್ತು ‘ತುರಿಕೆ-ಕೆರೆತ-ತುರಿಕೆ’ ಚಕ್ರದ ಕುರಿತು ಮಾಹಿತಿ

Pinterest LinkedIn Tumblr

ತುರಿಕೆ ಅನುಭವಿಸದ ವ್ಯಕ್ತಿಯಲ್ಲ ಎಂದು ಖಂಡಿತವಾಗಿ ಹೇಳಬಹುದು. ತುರಿಕೆಗೆ ಇಂತಹುದೇ ಜಾಗ ಎಂದಿಲ್ಲ, ಅದು ಶರೀರದ ಯಾವುದೇ ಭಾಗದಲ್ಲಿ ಉಂಟಾಗಬಹುದು. ತುರಿಕೆ ಸಾಮಾನ್ಯ ವಿಷಯವೆಂದು ನಾವು ಭಾವಿಸಿದ್ದೇವೆ, ಆದರೆ ತುರಿಕೆಗೆ ಕಾರಣವೇನು ಎಂಬ ಬಗ್ಗೆ ನೀವೆಂದಾದರೂ ತಲೆ ಕೆಡಿಸಿಕೊಂಡಿದ್ದೀರಾ? ಕೆಲವೊಮ್ಮೆ ತುರಿಕೆ ನಿರಂತರವಾಗಿ ಕಾಡುತ್ತಲೇ ಇರುತ್ತದೆ. ತುರಿಕೆಯುಂಟಾದಾಗ ಕೆರೆದುಕೊಳ್ಳುವುದು ಒಂದು ರೀತಿಯಲ್ಲಿ ನೆಮ್ಮದಿ ನೀಡುತ್ತದೆ ನಿಜ, ಆದರೆ ಅದರ ಬೆನ್ನಲ್ಲೇ ತುರಿಕೆ ಮತ್ತೆ ಮತ್ತೆ ಉಂಟಾಗುತ್ತಲೇ ಇರುತ್ತದೆ ಮತ್ತು ಕೆರೆದೂ ಕೆರೆದೂ ಚರ್ಮದಲ್ಲಿ ಗಾಯಗಳೂ ಆಗಿರುತ್ತವೆ.

ಸೊಳ್ಳೆ ಕಡಿತವಿರಲಿ, ಒಣಚರ್ಮವಿರಲಿ ಅಥವಾ ಇತರ ಯಾವುದೇ ಚರ್ಮ ಸಮಸ್ಯೆಯಿರಲಿ…ಕೆಲವೊಮ್ಮೆ ತುರಿಕೆ ನಿಯಂತ್ರಣಕ್ಕೆ ಮೀರಬಹುದು. ಹಾಗೆಂದು ಪದೇ ಪದೇ ಕೆರೆದುಕೊಳ್ಳುತ್ತಿದ್ದರೆ ಅದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ತುರಿಕೆಯ ಹಿಂದಿನ ವೈಜ್ಞಾನಿಕತೆ ಮತ್ತು ‘ತುರಿಕೆ-ಕೆರೆತ-ತುರಿಕೆ’ ಚಕ್ರದ ಕುರಿತು ಮಾಹಿತಿಯಿಲ್ಲಿದೆ.

ತುರಿಕೆ ಏಕೆ ಉಂಟಾಗುತ್ತದೆ?
ತುರಿಕೆಯುಂಟಾದಾಗ ಆ ಜಾಗದಲ್ಲಿ ಕೆರೆದುಕೊಳ್ಳಬೇಕೆಂಬ ನಿರಂತರ ತುಡಿತವನ್ನು ತಡೆಯಬೇಕಿದ್ದರೆ ತುರಿಕೆಗೆ ಕಾರಣವನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಒಣ ತ್ವಚೆ ಮತ್ತು ನಮ್ಮ ನರಮಂಡಳದ ಕೋಶಗಳ ನಡುವಿನ ಸಂಕೀರ್ಣ ಅಂತರ್‌ಕ್ರಿಯೆಯು ತುರಿಕೆ ಮತ್ತು ಉರಿಯೂತವನ್ನುಂಟು ಮಾಡುತ್ತದೆ.

ಚರ್ಮ ಶುಷ್ಕವಾಗಿರುವುದು ತುರಿಕೆಯನ್ನುಂಟು ಮಾಡುವ ಪ್ರಮುಖ ಕಾರಣಗಳಲ್ಲೊಂದಾಗಿದೆ ಮತ್ತು ಇದು ಚರ್ಮದಲ್ಲಿ ಬಿರುಕುಗಳು ಉಂಟಾಗುವಂತೆ ಮಾಡುತ್ತದೆ. ಕೆಲವೊಂದು ಅಲರ್ಜಿಕಾರಕಗಳು, ಕೀಟಗಳ ಕಡಿತ, ಕೆಲವೊಂದು ಔಷಧಿಗಳ ಅಡ್ಡಪರಿಣಾಮ, ಕೆಲವು ಸೋಪ್ ಮತ್ತು ಡಿಟರ್ಜಂಟ್‌ಗಳು, ಕೆಲವೊಮ್ಮೆ ಸೋರಿಯಾಸಿಸ್‌ನಂತಹ ಚರ್ಮರೋಗ ತುರಿಕೆಗೆ ಕಾರಣವಾಗುತ್ತವೆ. ಒಣ ತ್ವಚೆ ಯೊಂದಿಗೆ ನರಮಂಡಲ ಕೋಶಗಳ ಪ್ರತಿವರ್ತನೆಯು ನಿರ್ದಿಷ್ಟ ಜಾಗದಲ್ಲಿ ಉರಿಯೂತವನ್ನುಂಟು ಮಾಡುತ್ತದೆ ಮತ್ತು ಇದರಿಂದ ಚರ್ಮದಲ್ಲಿ ಕೆಲವು ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ. ಇದು ತುರಿಕೆ ಮತ್ತು ಚರ್ಮ ಕೆಂಪಗಾಗುವುದಕ್ಕೆ ಕಾರಣವಾಗುತ್ತದೆ.

‘ತುರಿಕೆ-ಕೆರೆತ-ತುರಿಕೆ’ ಚಕ್ರ
ನಿಮ್ಮ ಸ್ನಾಯುಗಳು, ಸಂದುಗಳು ಮತ್ತು ಅಂಗಗಳು ಹಾನಿಗೀಡಾಗಬಹುದು ಮತ್ತು ನೋವನ್ನು ಅನುಭವಿಸಬಹುದು. ಆದರೆ ಚರ್ಮವು ನೋವು ಮತ್ತು ತುರಿಕೆಯನ್ನು ಅನುಭವಿಸಬಲ್ಲ ನಮ್ಮ ಶರೀರದ ಏಕೈಕ ಅಂಗವಾಗಿದೆ. ತುರಿಕೆಯುಂಟಾದಾಗ ಆ ಜಾಗದಲ್ಲಿ ಕೆರೆದುಕೊಳ್ಳಲು ನೀವು ಬಯಸಬಹುದು, ಆದರೆ ಇಂತಹ ಕೆರೆತವು ಚರ್ಮದಲ್ಲಿ ಸೌಮ್ಯ ನೋವನ್ನುಂಟು ಮಾಡುತ್ತದೆ. ನರಕೋಶಗಳು ನಿಮ್ಮ ಮೆದುಳಿಗೆ ಕೊಂಚ ನೋವಿನ ಸಂಕೇತಗಳನ್ನು ರವಾನಿಸುತ್ತವೆ ಮತ್ತು ಇದು ಮೆದುಳಿನ ಗಮನ ತುರಿಕೆಯಿಂದ ಬೇರೆಡೆಗೆ ತಿರುಗುವಂತೆ ಮಾಡುತ್ತದೆ. ಆ ಕ್ಷಣದಲ್ಲಿ ನೋವು ನಿಮಗೆ ಹಿತವನ್ನುಂಟು ಮಾಡುತ್ತದೆ. ಆದರೆ ಒಂದು ಕಡೆ ಕೆರೆದುಕೊಂಡರೆ ಶರೀರದ ಇತರ ಭಾಗದಲ್ಲಿ ಹೊಸದಾಗಿ ತುರಿಕೆ ಉಂಟಾಗುತ್ತದೆ ಮತ್ತು ಇದು ಪ್ರತಿ ಐವರಲ್ಲಿ ಸರಾಸರಿ ಓರ್ವ ವ್ಯಕ್ತಿಗೆ ಅನುಭವವಾಗುತ್ತದೆ ಎನ್ನುತ್ತಾರೆ ತಜ್ಞರು. ಹೀಗೆ ತುರಿಕೆ, ಅದನ್ನು ಶಮನಿಸಲು ಕೆರೆತ, ಮತ್ತೆ ತುರಿಕೆ ಹೀಗೆ ಈ ಚಕ್ರ ತಿರುಗುತ್ತಲೇ ಇರುತ್ತದೆ.

ತುರಿಕೆಯಲ್ಲೂ ವಿಧಗಳಿವೆ
ಎಲ್ಲ ತುರಿಕೆಗಳೂ ಒಂದೇ ರೀತಿಯದ್ದಾಗಿರುವುದಿಲ್ಲ. ನಮ್ಮ ಶರೀರವು ಪರಾಗ, ನೆಲಗಡಲೆಯಂತಹ ಬೀಜಗಳು ಮತ್ತು ಇತರ ಅಲರ್ಜಿಕಾರಕಗಳಿಗೆ ಪ್ರತಿವರ್ತಿಸಿದಾಗ ಹೆಚ್ಚಿನ ತುರಿಕೆಗಳು ಉಂಟಾಗುತ್ತವೆ. ನಮ್ಮ ರೋಗನಿರೋಧಕ ವ್ಯವಸ್ಥೆಯು ಹಿಸ್ಟಾಮೈನ್‌ನ್ನು ಉತ್ಪಾದಿಸುತ್ತದೆ ಮತ್ತು ಇದು ತುರಿಕೆಯನ್ನುಂಟು ಮಾಡುವಲ್ಲಿ ಮಧ್ಯವರ್ತಿಯಾಗಿ ಕೆಲಸವನ್ನು ಮಾಡುತ್ತದೆ. ಇತರ ವಿಧದ ತುರಿಕೆಗಳು ಸರ್ಪಸುತ್ತು ಅಥವಾ ಪಾರ್ಶ್ವವಾಯುವಿನಂತಹ ನರಮಂಡಲದ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿವೆ. ಇಂತಹ ಸ್ಥಿತಿಯಲ್ಲಿ ತುರಿಕೆಯೊಂದಿಗೆ ಮರಗಟ್ಟುವಿಕೆ ಮತ್ತು ಜುಮುಗುಡುವಿಕೆ ಕೂಡ ಅನುಭವವಾಗಬಹುದು. ಸೋರಿಯಾಸಿಸ್ ತುರಿಕೆಯು ಚರ್ಮವು ಉರಿಯುತ್ತಿರುವ ಅನುಭವವನ್ನು ನೀಡಬಹುದು.

ತುರಿಕೆಯು ಸೋಂಕನ್ನು ಹೆಚ್ಚಿಸಬಲ್ಲದು,ಅದು ಚರ್ಮದ ಮೇಲೆ ಕಲೆಗಳನ್ನು ಉಳಿಸಬಹುದು,ಒತ್ತಡ ಮತ್ತು ಹತಾಶೆಯನ್ನುಂಟು ಮಾಡಬಹುದು.

ಕೆರೆದುಕೊಂಡಾಗ ಉಂಟಾಗುವ ನೋವು ಕೆಲವೊಮ್ಮೆ ಶರೀರವು ಸಿರೊಟೋನಿನ್ ರಾಸಾಯನಿಕವನ್ನು ಬಿಡುಗಡೆಗೊಳಿಸುವಂತೆ ಮಾಡುತ್ತದೆ. ಈ ರಾಸಾಯನಿಕವು ನೋವಿನ ವಿರುದ್ಧ ಹೋರಾಡುತ್ತದೆ. ಅದು ತುರಿಕೆಯ ಅನುಭವವನ್ನೂ ನೀಡಬಲ್ಲದು. ಇದೇ ಕಾರಣದಿಂದ ನಾವು ಹೆಚ್ಚೆಚ್ಚು ಕೆರೆದುಕೊಂಡಷ್ಟೂ ತುರಿಕೆಯು ಹೆಚ್ಚುತ್ತಲೇ ಇರುತ್ತದೆ. ನಾವು ತೀವ್ರ ತುರಿಕೆಗೆ ಗುರಿಯಾದಾಗ ಕೆಲವೊಮ್ಮೆ ಈ ಚಕ್ರವನ್ನು ನಿಲ್ಲಿಸಲಾಗುವುದಿಲ್ಲ.

Comments are closed.