ಆರೋಗ್ಯ

ಈ ಹುಡಿಯನ್ನು ಸಕ್ಕರೆಯೊಂದಿಗೆ ಸಂಸ್ಕರಿಸಲ್ಪಡದೆ ಕಚ್ಚಾರೂಪದಲ್ಲಿ ಸೇವಿಸಿದರೆ ಆರೋಗ್ಯಕರ

Pinterest LinkedIn Tumblr

ಬಾಯಲ್ಲಿ ನೀರೂರಿಸುವ ಕೋಕೊ ಅನಾರೋಗ್ಯಕರ ಎಂಬ ತಪ್ಪುಗ್ರಹಿಕೆಯಿದೆ. ಬಿಸಿ ಬಿಸಿಯಾದ ಚಾಕಲೇಟ್ ಡ್ರಿಂಕ್‌ನ್ನು ನಾವೆಲ್ಲರೂ ಖುಷಿಯಿಂದ ಸೇವಿಸುತ್ತೇವೆ. ಆದರೆ ಬಿಸಿಯಾದ ಕೋಕೊ ಅಧಿಕ ಕ್ಯಾಲರಿಗಳನ್ನು ಒಳಗೊಂಡಿರುವುದರಿಂದ ಅನಾರೋಗ್ಯ ಕರವಾಗಿರಬಹುದು, ಆದರೆ ಕೋಕೊ ಹುಡಿ, ಸಕ್ಕರೆಯೊಂದಿಗೆ ಸಂಸ್ಕರಿಸಲ್ಪಡದೆ ಅದರ ಕಚ್ಚಾರೂಪದಲ್ಲಿ ಆರೋಗ್ಯಕರವಾಗಿದೆ. ರುಚಿಯಾದ ಚಾಕಲೇಟ್‌ಗಳ ತಯಾರಿಕೆಯಲ್ಲಿಯೂ ಕೋಕೊ ಹುಡಿಯನ್ನು ಬಳಸಲಾಗುತ್ತದೆ,ಆದರೆ ಸಂಸ್ಕರಣೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನೂ ಬಳಸಲಾಗುತ್ತದೆ ಮತ್ತು ಇದು ಚಾಕಲೇಟ್‌ಗಳನ್ನು ಅನಾರೋಗ್ಯಕಾರಿಯನ್ನಾಗಿ ಮಾಡುತ್ತದೆ. ನೀವು ನಿಮ್ಮ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಬಗ್ಗೆ ಕಾಳಜಿ ಹೊಂದಿದ್ದರೆ ಬಿಸಿಯಾದ ಚಾಕಲೇಟ್ ಡ್ರಿಂಕ್ ಅಥವಾ ಚಾಕಲೇಟ್‌ನ ಗೋಜಿಗೆ ಹೋಗಬಾರದು. ನಿಮಗೆ ಚಾಕಲೇಟ್ ಸೇವಿಸಬೇಕೆಂಬ ತುಡಿತವಿದ್ದರೆ ನೀವು ಕೋಕೊ ಹುಡಿಯನ್ನು ಸೇವಿಸಬಹುದು ಮತ್ತು ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಕೋಕೊ ಹುಡಿ ಆರೋಗ್ಯಕರ ಎನ್ನಲು ಐದು ಕಾರಣಗಳಿಲ್ಲಿವೆ….

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪೋಷಕಾಂಶ
ಸರಾಸರಿ ಒಂದು ಚಮಚ ಕೋಕೊ ಹುಡಿಯಲ್ಲಿ ಕೇವಲ 10 ಕ್ಯಾಲರಿಗಳಿರುತ್ತವೆ. ಕೊಬ್ಬು ಒಂದು ಗ್ರಾಂ,ಕಾರ್ಬೊಹೈಡ್ರೇಟ್ ಮೂರು ಗ್ರಾಂ,ಪ್ರೋಟಿನ್ ಒಂದು ಗ್ರಾಂ ಮತ್ತು ನಾರು ಎರಡು ಗ್ರಾಂ ಇರುತ್ತವೆ. ನಾರು ಅಧಿಕ ಪ್ರಮಾಣದಲ್ಲಿ ಮತ್ತು ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿದ್ದಾಗ ಆ ಆಹಾರವನ್ನು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ ಮತ್ತು ಕೋಕೊ ಹುಡಿ ಹೀಗೆ ಹೇಳಿಸಿಕೊಳ್ಳಲು ಅತ್ಯಂತ ಅರ್ಹವಾಗಿದೆ. ನಿಮ್ಮ ಶರೀರಕ್ಕೆ ಕ್ಯಾಲರಿಗಳನ್ನು ಹೆಚ್ಚಿಸದೆ ನಾರು ಅಗತ್ಯವಾಗಿದ್ದರೆ ಕೋಕೊ ಹುಡಿಯು ಉತ್ತಮ ಆಯ್ಕೆಯಾಗಿದೆ.

ಫ್ಲಾವನಾಯ್ಡ್ಗಳು
ಕೋಕೊ ಹುಡಿಯು ಕೆಟೆಚಿನ್ ಮತ್ತು ಎಪಿಕೆಟೆಚಿನ್ ರೂಪಗಳಲ್ಲಿ ಫ್ಲಾವನಾಯ್ಡ್ ಗಳನ್ನು ಒಳಗೊಂಡಿರುತ್ತದೆ. ಇವು ಸಸ್ಯಜನ್ಯ ಸಂಯುಕ್ತಗಳಾಗಿದ್ದು, ಆರೋಗ್ಯಕ್ಕೆ ಪೂರಕವಾಗಿವೆ. ಅತ್ಯುತ್ತಮ ಉತ್ಕರ್ಷಣ ನಿರೋಧಕಗಳಾಗಿರುವ ಇವು ಉರಿಯೂತದ ವಿರುದ್ಧ ಹೋರಾಡಲು,ರಕ್ತಸಂಚಾರವನ್ನು ಹೆಚ್ಚಿಸಲು,ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತವೆ.

ಖನಿಜಗಳು
ಕೋಕೊ ಬೀನ್‌ಗಳು ಮ್ಯಾಗ್ನೀಷಿಯಂ,ಮ್ಯಾಂಗನೀಸ್,ಕಬ್ಬಿಣ ಮತ್ತು ಸತುವಿನಂತಹ ಖನಿಜಗಳ ಆಗರಗಳಾಗಿವೆ. ಇವೆಲ್ಲವೂ ಮಾನವ ಶರೀರದ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ಚಮಚ ಕೋಕಾ ಹುಡಿಯು ನಮ್ಮ ಶರೀರಕ್ಕೆ ಖನಿಜಗಳ ದೈನಂದಿನ ಅಗತ್ಯದ ಶೇ.3ರಿಂದ ಶೇ.9ರಷ್ಟನ್ನು ಒದಗಿಸುತ್ತದೆ. ಮ್ಯಾಗ್ನೀಷಿಯಂ ಹೃದಯದ ಕಾರ್ಯವನ್ನು ಕ್ರಮಬದ್ಧಗೊಳಿಸುತ್ತದೆ. ಮ್ಯಾಂಗನೀಸ್ ಶರೀರದಲ್ಲಿ ಪೋಷಕಾಂಶಗಳ ಚಯಾಪಚಯಕ್ಕೆ ಕಿಣ್ವಗಳಿಗೆ ನೆರವಾಗುತ್ತದೆ,ಮೂಳೆ ಮತ್ತು ಮೃದ್ವಸ್ಥಿಗಳನ್ನು ಸದೃಢಗೊಳಿಸುತ್ತದೆ ಹಾಗೂ ಶರೀರದಲ್ಲಿಯ ವಿಷವಸ್ತುಗಳನ್ನು ನಿವಾರಿಸುತ್ತದೆ. ಕಬ್ಬಿಣವು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಂಪು ರಕ್ತಕಣಗಳ ಉತ್ಪತ್ತಿಗಾಗಿ ಶರೀರದಲ್ಲಿ ಏಕರೂಪದ ಆಮ್ಲಜನಕ ಪೂರೈಕೆಗೆ ನೆರವಾಗುತ್ತದೆ. ಸತುವು ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹೊಸ ರಕ್ತ ಕೋಶಗಳ ಉತ್ಪಾದನೆಗೆ ನೆರವಾಗುತ್ತದೆ.

ಖಿನ್ನತೆ ನಿರೋಧಕವಾಗಿ ಕೆಲಸ ಮಾಡುತ್ತದೆ
ಹೆಚ್ಚಿನವರು ಖಿನ್ನಗೊಂಡಾಗ ಚಾಕಲೇಟ್ ತಿನ್ನಬೇಕೆಂಬ ತುಡಿತವುಂಟಾಗುತ್ತದೆ. ಇದನ್ನು ನಮ್ಮ ಮೂಡ್‌ನ್ನು ಹೆಚ್ಚಿಸಲು ಚಾಕಲೇಟ್ ತಿನ್ನಲು ನಾವು ಹಾತೊರೆಯುತ್ತೇವೆ ಎಂದೂ ಹೇಳಬಹುದು. ಚಾಕಲೇಟ್ ತಯಾರಿಕೆಯಲ್ಲಿ ಬಳಸಲಾಗುವ ಕೋಕೊ ಹುಡಿಯಲ್ಲಿ ಖಿನ್ನತೆ ನಿರೋಧಕ ಗುಣಗಳಿರುವುದು ಇಂತಹ ತುಡಿಕೆಗೆ ಕಾರಣವಾಗಿದೆ. ಕೋಕಾ ಹುಡಿಯಲ್ಲಿರುವ ‘ಫಿನಥೈಲಮೈನ್’ ಎಂಬ ನ್ಯುರೊ ಟ್ರಾನ್ಸ್‌ಮಿಟರ್ ಅಥವಾ ನರಪ್ರೇಕ್ಷಕವು ಆನಂದ ಮತ್ತು ಸಂತೋಷದೊಂದಿಗೆ ಗುರುತಿಸಿಕೊಂಡಿದೆ. ಕೋಕೊ ಹುಡಿಯು ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಇವು ಖಿನ್ನತೆ ಮತ್ತು ದುಃಖವನ್ನು ತಗ್ಗಿಸುವ ಸಂತೋಷದ ಹಾರ್ಮೋನ್‌ಗಳಾಗಿವೆ. ಇದೇ ಕಾರಣದಿಂದ ನಾವು ಚಾಕಲೇಟ್ ತಿಂದಾಗ ನಮ್ಮ ಮೂಡ್ ಹೆಚ್ಚುತ್ತದೆ.

ಕೆಫೀನ್
ಕೋಕೊ ಹುಡಿಯು ಕೆಫೀನ್ ಅನ್ನು ಒಳಗೊಂಡಿರುತ್ತದೆ. ಒಂದು ಚಮಚ ಕೋಕೊ ಹುಡಿಯಲ್ಲಿ 12 ಮಿಲಿಗ್ರಾಮ್‌ನಷ್ಟು ಕೆಫೀನ್ ಇರುತ್ತದೆ. ಕಾಫಿಗೆ ಹೋಲಿಸಿದರೆ ಇದು ದೊಡ್ಡ ಪ್ರಮಾಣವಲ್ಲ,ಆದರೆ ಆರೋಗ್ಯಕರ ಪ್ರಮಾಣವಾಗಿದೆ.

Comments are closed.