ಆರೋಗ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತೆ; ಈ ವರ್ಷದಲ್ಲಿ ಸಿಲಬಸ್ ಕಡಿಮೆ ಮಾಡಲು ಚಿಂತನೆ-ಸಚಿವ ಸುರೇಶ್ ಕುಮಾರ್

Pinterest LinkedIn Tumblr

ಉಡುಪಿ: ಕೋವಿಡ್-19 ಕಾರಣದಿಂದ ಈ ವರ್ಷದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವುದು ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಸಕ್ತ ವರ್ಷದ ಶಾಲಾ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸಭೆಯಲ್ಲಿ , ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕರಾದ ರಘುಪತಿಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ,ಉಡುಪಿ ಜಿಲ್ಲಾ ಪಂಚಾಯತ್ ಸಿ‌ಇ‌ಓ ಪ್ರೀತಿ ಗೆಹಲೋತ್, ದ.ಕನ್ನಡ ಜಿಲ್ಲಾ ಪಂಚಾಯತ್ ಸಿ‌ಇ‌ಓ ಸೆಲ್ವಮಣಿ, ಉ.ಕನ್ನಡ ಜಿಲ್ಲಾ ಪಂಚಾಯತ್ ಸಿ‌ಇ‌ಓ ರೋಶನ್ , ಉಡುಪಿ ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಅವರು ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಉಡುಪಿ, ಉತ್ತರ ಕನ್ನಡ ಮತ್ತು ದ.ಕನ್ನಡ ಜಿಲ್ಲೆಗಳ , ಜಿಲ್ಲಾ ಪಂಚಾಯತ್ ಸಿ‌ಇ‌ಓ ಗಳು, ಡಿಡಿಪಿ‌ಐ ಗಳು ಮತ್ತು ಬಿ‌ಇ‌ಓ ಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ಸಿದ್ದತೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯದ ಕೊರತೆಯಾಗದಂತೆ , ಸೀಮಿತ ಅವಧಿಯೊಳಗೆ ಅತ್ಯಗತ್ಯ ಇರುವ ಪಠ್ಯ ಮಾತ್ರ ಒಳಗೊಳ್ಳುವಂತೆ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.ಕೋವಿಡ್-19 ಅವಧಿಯಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪರೀಕ್ಷೆಗಾಗಿ ಪಠ್ಯದ ಪುರ್ನ ಮನನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪತ್ಯೇಕ ಟಿವಿ ಚಾನೆಲ್ ಆರಂಭಿಸುವ ಚಿಂತನೆ ಇದ್ದು, ಈ ಕುರಿತಂತೆ ಕೇಂದ್ರ ಸಚಿವ ಅಜಿತ್ ಜಾವೆಡ್‌ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.ಕೋವಿಡ್ ಅವಧಿಯಲ್ಲಿ ರಾಜ್ಯದ ಶಿಕ್ಷಕರು ಕಾನನ ಶಾಲೆ, ವಠಾರ ಶಾಲೆ, ಓಣಿ ಶಾಲೆ, ಓದಿನ ಮನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಇದು ಶಿಕ್ಷಕರಲ್ಲಿನ ಸೃಜನ ಶೀಲತೆ, ಕತೃತ್ವ ಶಕ್ತಿ ಗುಣಗಳನ್ನು ತೋರಿಸುತ್ತದೆ ಈ ಕುರಿತಂತೆ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸುವುದಾಗಿ ಸಚಿವರು ಹೇಳಿದರು.

ರಾಜ್ಯದಲ್ಲಿ ಎಸ್.ಎ‌ಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಂಬಂದಿಸಿದಂತೆ , ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಂತೆ, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷಾ ವಿಧಾನಗಳಿಗೆ ಯಾವುದೇ ಕುಂದು ಬಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ, ಪರೀಕ್ಷೆ ಕುರಿತಂತೆ ಮಕ್ಕಳಿಗೆ ಹಿತಕರ ವಾತಾವರಣ ನಿರ್ಮಿಸಿ, ಯಾವುದೇ ಆತಂಕಕ್ಕೆ ಒಳಗಾಗದಂತೆ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೋತ್ಸಾಹ ತುಂಬುವಂತೆ ಸಚಿವ ಸುರೇಶ್ ಕುಮಾರ್ ಹೇಳಿದರು.

ರಾಜ್ಯದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗುವುದು, ಪ್ರಸಕ್ತ ವರ್ಷದಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿನ ಹೆಚ್ವುವರಿ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಖಾಸಗಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು, ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ, ಜಿಲ್ಲೆಯಲ್ಲಿ ಉಳಿಯಲು ಹಾಸ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Comments are closed.