ಆರೋಗ್ಯ

ಜನರ ಪ್ರಾಣರಕ್ಷಣೆ ನಮ್ಮ ಹೊಣೆ: ಕುಂದಾಪುರದಲ್ಲಿ 120 ಬೆಡ್‌ಗಳ ಕೋವಿಡ್ ಆಸ್ಪತ್ರೆ ಸಿದ್ಧ: ಉಡುಪಿ ಡಿಸಿ (Video)

Pinterest LinkedIn Tumblr

ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಯ ಜೀವದ ರಕ್ಷಣೆ ಉಡುಪಿ ಜಿಲ್ಲಾಡಳಿತದ ಹೊಣೆಯಾಗಿದೆ. ಕೋವಿಡ್ ಬರುವುದು ತಡೆಯುವುದು ಸಾಧ್ಯವಲ್ಲ. ಬದಲಾಗಿ ಜೀವ ರಕ್ಷಣೆ ನಮ್ಮ ಉದ್ದೇಶವಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಣಿಯಾಗಿದ್ದೇವೆ. ಪ್ರತಿಯೊಂದು ಕೊರೋನಾ ಪಾಸಿಟಿವ್ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ವ್ಯಕ್ತಿಗಳ ಜೀವ ಉಳಿಸುವ ಕಾರ್ಯಕ್ಕೆ ಸನ್ನದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ನುರಿತ ವೈದ್ಯರ ತಂಡ ಸಿದ್ಧಪಡಿಸಿದ್ದು ಕೆಲವು ಪ್ರಕರಣಗಳಲ್ಲಿ ಅವರೆಲ್ಲಾ ಒಂದು ತಂಡವಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅವರಿಂದ ಕೊಡುಗೆಯಾಗಿ ಕೊಡಲ್ಪಟ್ಟ ಶ್ರೀಮತಿ ಲಕ್ಷ್ಮೀ ಸೋಮಬಂಗೇರ ಸ್ಮಾರಕ ಹೆರಿಗೆ ಆಸ್ಪತ್ರೆಯನ್ನು ಸದ್ಯ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದು ಅಲ್ಲಿಗೆ ಡಿಸಿ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಕುಂದಾಪುರದಲ್ಲಿ 120 ಬೆಡ್ ಗಳ ಕೋವಿಡ್ ಆಸ್ಪತ್ರೆ: ಡಿಸಿ
ವಿದೇಶ ಮತ್ತು ಬೇರೆಬೇರೆ ರಾಜ್ಯಗಳಿಂದ ನಮ್ಮ ಜಿಲ್ಲೆಗೆ ಜನರು ಬರುತ್ತಿದ್ದು ಸದ್ಯ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಅವರಲ್ಲಿ ಬಹುತೇಕ ರೋಗ ಲಕ್ಷಣಗಳಿಲ್ಲದೇ ಇದ್ದವರಿಗೆ ಪಾಸಿಟಿವ್ ವರದಿ ಬರುತ್ತಿದೆ. ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಬೇಕೆಂಬ ನಿಟ್ಟಿನಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಯಾರಿಗೆ ಕೊರೋನಾ ಲಕ್ಷಣಗಳಿಲ್ಲದೇ ಪಾಸಿಟಿವ್ ವರದಿ ಬರುತ್ತದೋ ಐಸಿಯು ಹಾಗೂ ಆಕ್ಸಿಜನ್ ಮತ್ತು ವೆಂಟಿಲೇಟರ್ ಬೇಡವೋ ಅಂತವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕುಂದಾಪುರ ಎಸಿ ಕೆ. ರಾಜು ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ ನೇತೃತ್ವದಲ್ಲಿ ಕುಂದಾಪುರದಲ್ಲಿ 120 ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಕಾರ್ಕಳದಲ್ಲೂ ನೂರು ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಸಿದ್ದಪಡಿಸಲಾಗಿದೆ. ಒಂದೊಮ್ಮೆ ಸೋಂಕಿತರಿಗೆ ಚಿಕಿತ್ಸೆ ಸಂದರ್ಭ ಆಕ್ಸಿಜನ್, ವೆಂಟಿಲೇಟರ್ ಮೊದಲಾದವುಗಳ ಅಗತ್ಯ ಬಿದ್ದರೇ ಉಡುಪಿಯ ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈಗಾಗಲೇ ಐ.ಎಂ.ಎ. ಜೊತೆಗೂ ಮಾತನಾಡಿದ್ದು ಅಗತ್ಯ ಬಿದ್ದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಸಹಕಾರವನ್ನು ಪಡೆಯಲಾಗುತ್ತದೆ. ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಈಗಾಗಲೇ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ‌ಅವರ ನೇತೃತ್ವದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ. ಸಂಪೂರ್ಣ ಆಸ್ಪತ್ರೆಗೆ ಅಗತ್ಯ ಸೌಕರ್ಯ ಒದಗಿಸಿದ್ದು ಸ್ಯಾನಿಟೈಸ್ ಕೂಡ ಮಾಡಲಾಗಿದೆ ಎಂದು ಡಿಸಿ ಹೇಳಿದರು.

ಕೊರೋನಾ ವಾರಿಯರ್ಸ್ ಜೊತೆ ನಾವಿದ್ದೇವೆ: ಡಿಸಿ
ಕುಂದಾಪುರ ಕೋವಿಡ್ ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭ ಡಿಸಿ ಅವರು ಕೊರೋನಾ ವಾರಿಯರ್ಸ್ ಅವರನ್ನು ಹೊಗಳಿದ್ದು ಅವರ ಕಾರ್ಯಕ್ಕೆ ಕೈ ಜೋಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮೊಂದಿಗೆ ಅವರು ಕೆಲಸ ಮಾಡುತ್ತಿದ್ದು ಅವರ ಜೊತೆ ಸದಾ ನಾವಿದ್ದೇವೆ ಎಂದು ಡಿಸಿ ಇದೇ ಸಂದರ್ಭ ಭರವಸೆ ನೀಡಿದ್ದಾರೆ. ಅಲ್ಲದೇ ಆ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿದ ಡಿಸಿ ‘ಕೋವಿಡ್ ವಾರಿಯರ್ ಜೊತೆ ಒಂದು ಫೋಟೋ ನಿಜಕ್ಕೂ ಸಹ ಅವರೊಂದಿಗೆ ಫೋಟೋ ಒಂದು ಅದ್ಭುತ ಕ್ಷಣ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಭರವಸೆ ನೀಡಿದ ಕ್ಷಣ’ ಎಂದು ಬರೆದುಕೊಂಡಿದ್ದಾರೆ.

ಕುಂದಾಪುರ ಆಸ್ಪತ್ರೆ ಭೇಟಿ ಸಂದರ್ಭ ಕುಂದಾಪುರ ಎಸಿ ಕೆ. ರಾಜು, ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ಆಸ್ಪತ್ರೆಯ ಸಿಬ್ಬಂದಿಗಳು, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.