ಆರೋಗ್ಯ

ಉಡುಪಿಗೆ ‘ಮಹಾ’ ಕೊರೋನಾಘಾತ: ಒಂದೇ ದಿನ 27 ಮಂದಿಗೆ ಕೊರೋನಾ ಪಾಸಿಟಿವ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಗೆ ಗುರುವಾರ ಕೊರೋನಾ ಬಿಗ್ ಶಾಕ್ ನೀಡಿದೆ. ಒಂದೇ ದಿನ 27 ಕೊರೋನಾ ಸೋಂಕು ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದಿಂದ ಬಂದ 23 ಮಂದಿ, ತೆಲಂಗಾಣದಿಂದ ಬಂದ ಮೂವರು ಹಾಗೂ ಕೇರಳದಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ಬಂದ ಒಬ್ಬರಲ್ಲಿ‌ ಸೋಂಕು ದೃಢಪಟ್ಟಿದೆ.

6 ಮಂದಿ ಗಂಡಸರು, 5 ಮಂದಿ ಹೆಂಗಸರು ಹಾಗೂ 16 ಮಕ್ಕಳಿಗೆ ಕೊರೋನಾ‌ ಪಾಸಿಟಿವ್ ಇದೆ.

ಉಡುಪಿಗೆ ‘ಮಹಾ’ ಕಂಟಕ…!
ಕೇವಲ ಮೂರು ಕೊರೋನಾ ಪ್ರಕರಣ ದಾಖಲುಗೊಂಡು ಅವರೆಲ್ಲಾ ಗುಣಮುಖರಾಗಿ ಮನೆಗೆ ತೆರಳುವ ಮೂಲಕ ಯಾವುದೇ ಸಕ್ರೀಯ ಪ್ರಕರಣಗಳೂ ಇಲ್ಲದೆ ಉಡುಪಿ ಜಿಲ್ಲೆ ಗ್ರೀನ್ ಝೋನ್ ಆಗಿತ್ತು. ಯಾವಾಗ ಮಹಾರಾಷ್ಟ್ರದಿಂದ  ಜಿಲ್ಲೆಯ ಜನರನ್ನು ಸೇವಾ ಸಿಂಧು ಆ್ಯಪ್ ಮೂಲಕ ಕರೆಸಿಕೊಳ್ಳಲಾಯಿತೋ ಅಲ್ಲಿಂದ ಉಡುಪಿಗೆ ಕೊರೋನಾ ಕಂಟಕ ಆರಂಭಗೊಂಡಿದೆ. ಮುಂಬೈ ಮೊದಲಾದ ಕಡೆಗಳಿಂದ ಬಂದು ಸರಕಾರಿ ಕ್ವಾರೆಂಟೈನ್,  ಹೊಟೇಲ್ ಕ್ವಾರೆಂಟೈನ್ ಆಗಿರುವ ಕೆಲವು ಮಂದಿಗೆ ಕೊರೋನಾ ಪಾಸಿಟಿವ್ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟರದಿಂದ ಬಂದು ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ವರದಿಯಲ್ಲಿ ತಿಳಿದುಬಂದಿದ್ದು ಬುಧವಾರದ ವರದಿಯಲ್ಲಿ ಮೃತ ವ್ಯಕ್ತಿಯ ಪತ್ನಿ ಹಾಗೂ 15 ವರ್ಷದ ಮಗನಿಗೂ ಕೊರೋನಾ ಸೋಂಕಿರುವುದು ದೃಢವಾಗಿತ್ತು.

ಬುಧವಾರ ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 21 ಕೊರೋನಾ ಪ್ರಕರಣಗಳು ದಾಖಲಾಗಿತ್ತು. ಈ ಪೈಕಿ 17 ಸಕ್ರೀಯ ಪ್ರಕರಣಗಳಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದ. ಮೂವರು ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.