ಕುಂದಾಪುರ: ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 21ದಿನಗಳಿಂದ ಪೆಟ್ರೋಲ್ ಬಂಕ್ ಸೀಲ್ಡೌನ್ ಮಾಡಿದ್ದು ಕ್ವಾರೆಂಟೈನ್ ಅವಧಿಯ 28 ದಿನಗಳಾದ ಹಿನ್ನೆಲೆ ಪೆಟ್ರೋಲ್ ಬಂಕ್ ಸೀಲ್ಡೌನ್ ತೆರವುಗೊಳಿಸಲಾಗಿದ್ದು ಸೋಮವಾರದಿಂದ ಪೆಟ್ರೋಲ್ ಬಂಕ್ ಗ್ರಾಹಕರ ಸೇವೆಗೆ ಸಿದ್ದಗೊಂಡಿದೆ.

ಅಂದು ನಡೆದಿದ್ದು….
ಎಪ್ರಿಲ್ 21 ರಂದು ಲಾರಿಯು ತೆಕ್ಕಟ್ಟೆ ಪೆಟ್ರೋಲ್ ಬಂಕ್ಗೆ ಬಂದಿದ್ದು ಅಂದು ರಾತ್ರಿ ಸೋಂಕಿತ ವ್ಯಕ್ತಿ ಅಲ್ಲಿಯೇ ತಂಗಿದ್ದು ಊಟ ಮಾಡಿದ್ದಲ್ಲದೇ ಶೌಚಾಲಯ ಉಪಯೋಗಿಸಿದ್ದ. ಮಂಡ್ಯಕ್ಕೆ ತೆರಳಿದ ಬಳಿಕ ಆತ ಕೊರೋನಾ ಸೋಂಕಿತ ಎನ್ನುವುದು ತಿಳಿದಿದ್ದು ಆತನ ಟ್ರಾವೆಲ್ ಹಿಸ್ಟರಿಯಲ್ಲಿ ಪ್ರಯಾಣದ ವಿವರಗಳು ಲಭಿಸಿತ್ತು. ಆದ್ದರಿಂದ ಎ.27ರಂದು ಸಂಬಂದಪಟ್ಟ ಪೆಟ್ರೋಲ್ ಬಂಕ್ ಸೀಲ್ಡೌನ್ ಮಾಡಿದ್ದಲ್ಲದೇ ಮಾಲಕ ಹಾಗೂ ಸಿಬ್ಬಂದಿ ಸಹಿತ 12 ಮಂದಿಯನ್ನು 14 ದಿನ ಹಾಸ್ಪಿಟಲ್ ಕ್ವಾರೆಂಟೈನ್ ಮಾಡಲಾಗಿತ್ತು. ಬಳಿಕ ಅವರು 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ಕೂಡ ಮುಗಿಸಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಸಾಸ್ತಾನ ಟೋಲ್ ಸಿಬ್ಬಂದಿಗಳ ಕೋವಿಡ್ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿದೆ.

ಮುಂಜಾಗ್ರತೆಯೊಂದಿಗೆ ಕಾರ್ಯಾರಂಭ….
ಸೋಮವಾರದಿಂದ ಪೆಟ್ರೋಲ್ ಬಂಕ್ ಕಾರ್ಯಚರಿಸುತ್ತಿದ್ದು ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಹಾಗೂ ಮಾಸ್ಕ್ ಉಪಯೋಗಿಸಲಾಗುತ್ತಿದೆ. ಪೆಟ್ರೋಲ್ ಬಂಕ್ ಗೆಬರುವ ಗ್ರಾಹಕರಿಗೂ ಮಾಸ್ಕ್ ಇಲ್ಲದಿದ್ದರೆ ಮಾಸ್ಕ್ ನೀಡಲಾಗುತ್ತಿದೆ. ಸೋಮವಾರದಂದು ತೆಕ್ಕಟ್ಟೆ ವ್ಯಾಪ್ತಿಯ ಐವರು ಆಶಾಕಾರ್ಯಕರ್ತೆಯರಿಗೆ ತೆಕ್ಕಟ್ಟೆ ಶಿವಪ್ರಸಾದ್ ಪೆಟ್ರೋಲ್ ಬಂಕ್ ಮಾಲಿಕರಾದ ಗುರುಪ್ರಸಾದ್ ಹತ್ವಾರ್ ಹಾಗೂ ರೋಹಿಣಿ ಹತ್ವಾರ್ ದಂಪತಿಗಳು ದಿನಸಿ ಕಿಟ್ ವಿತರಿಸಿ ಕೊರೋನಾ ವಾರಿಯರ್ಸ್ ಸೇವೆಯನ್ನು ಸ್ಮರಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.