ಆರೋಗ್ಯ

ಗರ್ಭಾವಸ್ಥೆಯಲ್ಲಿ ಮಹಿಳೆಯರು ವಿಮಾನಯಾನ ಮಾಡುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

Pinterest LinkedIn Tumblr

ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆ ಗರ್ಭೀಣಿ ಆಗಿದ್ದರೂ ಪ್ರಯಾಣಿಸಬೇಕಾದ ಅನಿರ್ವಾಯತೆ ಎದುರಿಸಬೇಕಾಗಿದೆ. ಉದ್ಯೋಗದಲ್ಲಿರುವವರಿಗಂತೂ ಇದು ಮಾಮೂಲಿ. ಬಸ್‍, ಆಟೋ, ಕಾರು ಮುಂತಾದವುಗಳಲ್ಲಿ ಪ್ರಯಾಣಿಸುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಎಲ್ಲರಿಗೂ ಗೊತ್ತು. ಚಾಲಕನಿಗೆ ಮುನ್ಸೂಚನೆ ಕೊಟ್ಟರೆ ಮುಗೀತು. ಆದರೆ ವಿಮಾನಯಾನ ಮಾಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಹುತೇಕ ಮಂದಿಗೆ ತಿಳಿದಿಲ್ಲ. ಹಾಗಾದರೆ ವಿಮಾನಯಾನ ಮಾಡುವ ಗರ್ಭಿಣಿಯರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಏನು ಎಂಬ ಉಪಯುಕ್ತ ಸಲಹೆ ಇಲ್ಲಿದೆ.

ಗರ್ಭಾವಸ್ಥೆಯ ಸಮಯದಲ್ಲಿ ಆರೋಗ್ಯವಾಗಿದ್ದು ಯಾವುದೇ ತೊಂದರೆಗಳಿಲ್ಲದಿದ್ದರೆ ನಿಮ್ಮ ಎರಡನೇ ತ್ರೈಮಾಸಿಕ ಸಮಯವು ವಿಮಾನಯಾನ ಮಾಡಲು ಸೂಕ್ತ. ಈ ಸಮಯದಲ್ಲಿ ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿರುವ ಬೆಳಗಿನ ಸಮಸ್ಯೆಗಳಾದ ವಾಕರಿಕೆ, ವಾಂತಿ ಬಹುತೇಕ ಕಡಿಮೆಯಾಗಿರುತ್ತದೆ, ಆರೋಗ್ಯದ ಮಟ್ಟವು ಉತ್ತಮ ವಾಗಿದ್ದು, ಹೆರಿಗೆ ನೋವು ಬರುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಉತ್ತಮ ಗುಣಮಟ್ಟದ ಕಮರ್ಷಿಯಲ್ ವಿಮಾನಗಳು ಸುರಕ್ಷಿತವಾಗಿದ್ದು, ಸಣ್ಣ, ವಾಯು ಒತ್ತಡ ಕಡಿಮೆ ಇರುವ ವಿಮಾನಗಳು ಗರ್ಭಿಣಿಯರಿಗೆ ಯಾವುದೇ ಹಂತದಲ್ಲೂ ಅಷ್ಟು ಸೂಕ್ತವಲ್ಲ. ಯಾಕೆಂದರೆ ಇಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ವಿಮಾನಯಾನ ಸಂಸ್ಥೆಗಳು ಕೂಡ ಗರ್ಭಿಣಿ ಮಹಿಳೆಯರ ಪ್ರಯಾಣಕ್ಕೆ ಕೆಲವು ನಿಬಂಧನೆಗಳನ್ನು ಹೇರಿರುತ್ತವೆ. ಇವುಗಳಲ್ಲಿ ಹೆಚ್ಚಿನವು ಗರ್ಭಿಣಿಯರಿಗೆ 9 ತಿಂಗಳು ತುಂಬಿದ ನಂತರ 4 ಗಂಟೆಗಳಿಗಿಂತ ಹೆಚ್ಚಿನ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ. 36 ವಾರಗಳು ತುಂಬಿದ ಮೇಲಂತೂ 4 ಗಂಟೆಗಳಿಗಿಂತ ಕಡಿಮೆ ಪ್ರಯಾಣಕ್ಕೂ ಕೆಲವೊಂದು ಬಾರಿ ಅನುಮತಿ ಇರುವುದಿಲ್ಲ. ಕೆಲವೊಮ್ಮೆ 7 ತಿಂಗಳು ತುಂಬಿದ ನಂತರ ನೀವು ಪ್ರಯಾಣಿಸುವುದಾದರೆ ವೈದ್ಯರ ಅನುಮತಿ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳ ಅವಶ್ಯಕತೆಗಳು ಮತ್ತು ನಿಬಂಧನೆಗಳು ಕಾಲಕಾಲಕ್ಕೆ ಬದಲಾಗಬಹುದು, ಆದ್ದರಿಂದ ಪ್ರಯಾಣಕ್ಕೂ ಮೊದಲು ಅಥವಾ ಟಿಕೆಟ್ ಖರೀದಿಸುವ ಮುನ್ನ ಕರೆ ಮಾಡಿ ಗರ್ಭಿಣಿಯ ಪ್ರಯಾಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ.

ಸಾಗರೋತ್ತರ ಅಥವಾ ವಿದೇಶ ಪ್ರಯಾಣ ಮಾಡುವಾಗ ನಿಮ್ಮ ಪ್ರಯಾಣ ವಿಮೆಯನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಿ. ಯಾಕೆಂದರೆ ಕೆಲವು ಸಂಸ್ಥೆಗಳು ಗರ್ಭಾವಸ್ಥೆಯ ಒಂದು ಹಂತದವರೆಗೆ ಅಂದರೆ 6 ತಿಂಗಳವರೆಗೆ ಮಾತ್ರ ವಿಮೆ ಒದಗಿಸಿರುತ್ತವೆ, ಇನ್ನೂ ಕೆಲವು ವಿಮಾ ಕಂಪನಿಗಳು ಯಾವುದೇ ಸಾಗರೋತ್ತರ ವಿಮೆಯನ್ನು ಒದಗಿಸದಿರುವ ಸಾಧ್ಯತೆಗಳಿವೆ.

ಕೊನೆಯದಾಗಿ, ಆದರೆ ಮುಖ್ಯವಾಗಿ ವಿಮಾನ ಪ್ರಯಾಣ ಮಾಡುವ ಮುಂಚೆ ಗರ್ಭಾವಸ್ಥೆಯ ಯಾವುದೇ ಹಂತವಾದರೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಏನಾದರು ಸಂಭಾವ್ಯ ಅಪಾಯ ಅಥವಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಪಡೆದುಕೊಳ್ಳಿ.

ಗರ್ಭಿಣಿಯರಿಗಾಗಿಯೇ ಸಿದ್ಧಪಡಿಸಿರುವ ಆರಾಮದಾಯಕ ಉಡುಪುಗಳು ಪ್ರಯಾಣಕ್ಕೆ ಸೂಕ್ತವಾಗಿದ್ದು ಮಗುವಿನ ಚಲನವಲನಕ್ಕೆ ಅನುಕೂಲಕರವಾಗಿರುತ್ತದೆ. ಆದರೆ ನೆನಪಿರಲಿ, ಸೀಟ್ ಬೆಲ್ಟ್ ಕಟ್ಟುವಾಗ ಅದು ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ , ಸೊಂಟದ ಸುತ್ತವಿರಲಿ. ಇದರಿಂದಾಗಿ ಮಗುವಿನ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಬಹುದು.

ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಕಾಲಿನ ನರಗಳು ಮತ್ತು ಸಂಧಿಗಳು ಮೊದಲೇ ದುರ್ಬಲವಾಗಿದ್ದು, ಫ್ಲೈಟ್ ಕ್ಯಾಬಿನ್ನನ ಗಾಳಿಯ ಒತ್ತಡದಿಂದ ಮತ್ತಷ್ಟು ಸುಸ್ತಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವ (in-flight vein thrombosis) ಅಪಾಯ ಇರುವುದರಿಂದ ವಿಮಾನಯಾನಕ್ಕೆ ಸೂಕ್ತವಾದ ಕಾಲುಚೀಲ ಮತ್ತು ಶೂಸ್ ಗಳನ್ನು ಧರಿಸುವುದು ಉತ್ತಮ. ನೀವು ನಿಯಮಿತವಾಗಿ ಕಾಲುಗಳನ್ನು ಉದ್ದಕ್ಕೆ ಚಾಚುತ್ತ, ಕುಳಿತಲ್ಲೇ ಹಗುರವಾಗಿ ವ್ಯಾಯಾಮ ಮಾಡುತ್ತಾ, ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.

ಗರ್ಭಿಣಿಯರು ಆಗಾಗ ಶೌಚಾಲಯಕ್ಕೆ ಹೋಗುವುದು ಸಹಜ. ಹಾಗಾಗಿ ಆದಷ್ಟು ಕಾರಿಡಾರ್ ಸೀಟ್ ( aisle seat) ಬುಕ್‌ ಮಾಡಿಕೊಳ್ಳಿ.

ಪ್ರತ್ಯೇಕ ಅಥವಾ ಕಾಲು ಚಾಚಲು ಆಗುವಷ್ಟು ಜಾಗ ಇರುವ ಸೀಟ್ ಗೆ ಮನವಿ ಮಾಡಿಕೊಳ್ಳಬಹುದು. ಇನ್ನೂ ಉತ್ತಮ, ಸ್ವಲ್ಪ ಜಾಸ್ತಿ ಹಣ ಕೊಟ್ಟು ಪ್ರಿಮಿಯರ್ ಎಕಾನಮಿ (Premier Economy) ಅಥವಾ ಬ್ಯುಸಿನೆಸ್ ಕ್ಲಾಸ್ (Business Class) ಸೀಟ್ ಖರೀದಿಸುವುದು.

Comments are closed.