ಕರಾವಳಿ

ಅಡಿಕೆಯಲ್ಲಿ ಸಿಂಗಾರ ಒಣಗುವ ರೋಗ ಮತ್ತು ಕಾಯಿ ಉದುರುವಿಕೆಯನ್ನು ನಿಯಂತ್ರಿಸುವುದು ಹೇಗೆ?

Pinterest LinkedIn Tumblr

ಉಡುಪಿ (ವಿಶೇಷ ವರದಿ): ಅಡಿಕೆಯಲ್ಲಿ ಸಣ್ಣ ಕಾಯಿಗಳು ಉದುರುವುದು ಸಾಮಾನ್ಯವಾಗಿ ಕಾಣುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ.

1) ಸರಿಯಾದ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀರನ್ನು ಒದಗಿಸುವುದು
ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ, 15ರಿಂದ 20 ಲೀಟರ್ ನೀರನ್ನು ಹನಿ ನೀರಾವರಿ ಮುಖಾಂತರ ನೀಡಬೇಕಾಗುತ್ತದೆ. ಬುಡದಲ್ಲಿ ತೇವಾಂಶ ಕಡಿಮೆಯಾದಾಗ ಹರಳುಗಳು ಉದುರುವುದು ಸಾಮಾನ್ಯ
2) ಸಮಗ್ರ ಪೋಷಕಾಂಶ ಮತ್ತು ಹುಳಿ ಮಣ್ಣು ನಿರ್ವಹಣೆ
ಮಣ್ಣಿನ ಪರೀಕ್ಷೆಯ ಅನುಗುಣವಾಗಿ ಶಿಫಾರಸ್ಸು ಮಾಡುವ ಸಾರಜನಕ, ರಂಜಕ ಹಾಗೂ ಪೋಟ್ಯಾಷ್ ನೀಡಬೇಕಾಗುತ್ತದೆ. ಕರಾವಳಿ ಭಾಗದಲ್ಲಿ ಮಣ್ಣು ಆಮ್ಲೀಯ ಆಗಿರುವುದರಿಂದ ಪ್ರತೀ ಮರಕ್ಕೆ ಅರ್ಧ ಕೆ.ಜಿ ಸುಣ್ಣ, ಮೇ ತಿಂಗಳ ಕೊನೆಯ ವಾರದಲ್ಲಿ ಒದಗಿಸಬೇಕು. ಸುಣ್ಣ ಒದಗಿಸಿದ 15 ದಿವಸದ ನಂತರ ಪ್ರತಿ ಅಡಿಕೆ ಮರಕ್ಕೆ ಶಿಫಾರಸ್ಸು ಮಾಡಿರುವ 150:60:210 (ಸುಧಾರಿತ ತಳಿಗಳಿಗೆ) ಸಾರಜನಕ, ರಂಜಕ ಹಾಗೂ ಪೋಟ್ಯಾಷ್ ಪೋಷಕಾಂಶದ ಅರ್ಧದಷ್ಟು ಭಾಗವನ್ನು ನೇರ ಗೊಬ್ಬರದ ರೂಪದಲ್ಲಿ 160ಗ್ರಾಂ ಯೂರಿಯಾ, 170 ಗ್ರಾಂ ಶಿಲಾರಂಜಕ ಹಾಗೂ 175 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಷ್ ನೀಡಬೇಕು. ಇನ್ನುಳಿದ ಅರ್ಧ ಭಾಗದ ಶಿಫಾರಸ್ಸು ಮಾಡಿರುವ ರಸಗೊಬ್ಬರಗಳನ್ನು, ಅಕ್ಟೋಬರ್ ತಿಂಗಳಲ್ಲಿ ನೀಡಬೇಕು. ಪೋಟ್ಯಾಷ್ ಅಂಶ ಕರಾವಳಿ ಮಣ್ಣಿನಲ್ಲಿ ಕಡಿಮೆ ಇರುವುದರಿಂದ ಅಡಿಕೆ ಸಣ್ಣ ಕಾಯಿಗಳು ಉದುರುವುದಕ್ಕೆ ಮೂಲ ಕಾರಣವಾಗುತ್ತದೆ.
3) ಪೆಂಟಾಟೋಮಿಡ್ ತಿಗಣೆ
ಸಾಮಾನ್ಯವಾಗಿ ಎಪ್ರಿಲ್ ನಿಂದ ಜುಲೈ ತಿಂಗಳುಗಳಲ್ಲಿ ಈ ಕೀಟಗಳು ಕಂಡುಬರುತ್ತವೆ. ಎಳೆಯ ಹಸಿರು ಕಾಯಿಗಳಿಂದ ರಸವನ್ನು ಹೀರುತ್ತವೆ. ಇದರಿಂದಾಗಿ ಎಳೆಯ ಕಾಯಿಗಳು ಉದುರಲಾರಂಭಿಸುತ್ತವೆ. ಉದುರಿದ ಕಾಯಿಗಳನ್ನು ಸೂಕ್ಷö್ಮವಾಗಿ ಗಮನಿಸಿದಾಗ, ಸೂಜಿಗಾತ್ರದ ಕಪ್ಪು ರಂಧ್ರದ ಕಲೆಗಳು ಕಾಣಿಸುತ್ತದೆ. ಇವುಗಳ ಹತೋಟಿಗಾಗಿ, ಡೈಮಿಥೋಯೇಟ್ 1.75 ಮಿ.ಲೀ. ಕೀಟನಾಶಕವನ್ನು ಎಳೆಯ ಗೊನೆಗಳಿಗೆ ಸಿಂಪರಣೆ ಮಾಡಬೇಕು ಹಾಗೂ ಹಾನಿಯ ಪ್ರಮಾಣ ಅಧಿಕವಿದ್ದಲ್ಲಿ 45 ದಿನಗಳ ನಂತರ ಸಿಂಪರಣೆಯನ್ನು ಪುನಾರಾವರ್ತಿಸಬೇಕು.
4) ಸಿಂಗಾರ ಒಣಗುವ ರೋಗ:
ಫೆಬ್ರವರಿ ತಿಂಗಳಿನಲ್ಲಿ ಸಿಂಗಾರ ಹೊರಡುವ ಸಮಯದಲ್ಲಿ ಡೈಥೇನ್-z-78 2gm ಶಿಲೀಂದ್ರ ನಾಶಕದ ಜೊತೆಗೆ ಸಿಂಗಾರ ತಿನ್ನುವ ಕಂಬಳಿ ಹುಳದ ನಿಯಂತ್ರಣಕ್ಕೆ ಡೈಮಿಥೋಯೇಟ್ 1.75 mಟ/ಐ ನೀರಿಗೆ ಬೆರೆಸಿ 15 ರಿಂದ 21 ದಿನಗಳ ಅಂತರದಲ್ಲಿ ಎರಡು ಸಿಂಪರಣೆ ಮಾಡುವುದರಿಂದ ಸಿಂಗಾರ ಒಣಗುವುದನ್ನು ನಿಯಂತ್ರಿಸಬಹುದು. ಒಣಗಿರುವ ಸಿಂಗಾರವನ್ನು ಮರದಿಂದ ಕೂಡಲೆ ತೆಗೆಯುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Comments are closed.