ಆರೋಗ್ಯ

ಕೆಲವು ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದುಗಳು

Pinterest LinkedIn Tumblr

ಶೀತ, ನೆಗಡಿಯಾಗುವುದು ಸರ್ವೇ ಸಾಮಾನ್ಯ. ಆದರೆ ಅದು ಗುಣವಾದ‌ ಮೇಲೂ ನಮ್ಮ‌ ಗಂಟಲಿನಲ್ಲಿ ಕಫ ಉಳಿದುಕೊಂಡಿರುತ್ತದೆ. ಇದು‌ ನಮಗೆ ಕೆಮ್ಮು ತರಬಹುದು ಅಥವಾ ರಾತ್ರಿ ಮಲಗುವಾಗ ಉಸಿರುಗಟ್ಟಿದಂತೆ ಆಗಬಹುದು. ಇದರಿಂದ ಜೀವಕ್ಕೆ ಅಂತಹ ದೊಡ್ಡ ಹಾನಿಯೇನೂ ಆಗುವುದಿಲ್ಲ. ಆದರೆ ಇದು ದೀರ್ಘಕಾಲ ಗಂಟಲಿನಲ್ಲಿ ಉಳಿದುಕೊಂಡರೆ ನಮ್ಮ ಶ್ವಾಸಕೋಶದ ನಳಿಕೆಗಳಿಗೆ ತಡೆಯೊಡ್ಡಿ ಉಸಿರಾಟ ನಾಳದ ಮೇಲ್ಬಾಗದಲ್ಲಿ ಸೋಂಕುಟಾಗಲು ಕಾರಣವಾಗಬಹುದು. ಹಾಗಾದರೆ ಇದನ್ನು ಹೊರಹಾಕುವುದು ಹೇಗೆ? ನಿಮ್ಮ ಮನೆಯಲ್ಲೇ ನೀವು ಮಾಡಬಹುದಾದ ಕೆಲವು ಮನೆಮದ್ದುಗಳನ್ನು ತಿಳಿದುಕೊಳ್ಳೋಣ ಬನ್ನಿ.

*ನಿಂಬೆಹಣ್ಣು*
ನಿಂಬೆ ಹಣ್ಣಿನಲ್ಲಿರುವ‌ ವಿಟಮಿನ್‌ ಸಿ ಸೋಂಕುಗಳ‌‌ ವಿರುದ್ಧ ಹೋರಾಡುತ್ತದೆ ಅಷ್ಟೇ ಅಲ್ಲ ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.

2 ಚಮಚ ನಿಂಬೆರಸ ಮತ್ತು 1 ಚಮಚ ಜೇನು ತುಪ್ಪವನ್ನು ಒಂದು ಲೋಟ ಕುದಿಸಿದ ನೀರಿಗೆ ಬೆರೆಸಿ ಈ‌ ಮಿಶ್ರಣವನ್ನು ದಿನಕ್ಕೆ ಮೂರು ಭಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲಿನ ಕಫ ಹೊರಗೆ ಬರುತ್ತದೆ.

*ಉಪ್ಪು ನೀರು*
ಈ‌ ವಿಧಾನ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹದು. ಒಂದು‌ ಲೋಟ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ದಿನದಲ್ಲಿ 5-6 ಸಲ ಬಾಯಿ ಮುಕ್ಕಳಿಸಬೇಕು.‌ಇದು ಕಫ ಹೆಚ್ಚಾಗುವುದನ್ನು‌ ತಡೆಯುತ್ತದೆ.

*ಕಾಳು ಮೆಣಸಿನ ಪುಡಿ*
ಕಾಳು ಮೆಣಸಿನ ಪುಡಿ ಶೀತ, ನೆಗಡಿಗೆ ಹೇಳಿ ಮಾಡಿಸಿದ ಮನೆ ಔಷಧಿ.‌ಇದು ಗಂಟಲಿನಲ್ಲಿರುವ ಕಫವನ್ನು ಕಡಿಮೆ ಮಾಡಿ ಉಸಿರಾಟವನ್ನು ಸುಗಮಗೊಳಿಸುತ್ತದೆ ಮತ್ತು ಗಂಟಲು ಕೆರೆತ ಕಡಿಮೆ ಮಾಡಿ ಕೆಮ್ಮನ್ನು ಹೋಗಲಾಡಿಸುತ್ತದೆ.

1ಚಮಚ ಕಾಳುಮೆಣಸಿನ ಪುಡಿ, ಅಷ್ಟೇ ಪ್ರಮಾಣದ ತುರಿತ ಶುಂಠಿ ಮತ್ತು ಜೇನುತುಪ್ಪಕ್ಕೆ‌ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ 2-3 ಸಲ ಸೇವಿಸಬೇಕು.‌ಇದರಿಂದ ಕಫ ನೀರಾಗಿ ಕರಗಿಹೋಗುತ್ತದೆ.

*ಬೆಳ್ಳುಳ್ಳಿ*
ಬೆಳ್ಳುಳ್ಳಿಯಲ್ಲಿ ಕಫ ಕಡಿಮೆ ಮಾಡುವ ಗುಣಗಳಿದ್ದು, ಇದು ಕಫಕ್ಕೆ ರಾಮಬಾಣವಿದ್ದಂತೆ. ಬಳಿಗ್ಗೆ ಎದ್ದ ಕೂಡಲೆ ಮತ್ತು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಸ್ವಲ್ಪ‌ ನೀರಿನೊಂದಿಗೆ ಸೇವಿಸಬೇಕು.

ಇನ್ನು ಶೀತ ಆಗಿ‌ ಮೂಗಿನಲ್ಲಿ ಲೋಳೆ ಕಟ್ಟಿಕೊಂಡಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ, ಹಿಂಡಿ ಅದರ ರಸ ತೆಗೆದು ನೀರಿನೊಂದಿಗೆ ಬೆರೆಸಿ ಈ‌ ಮಿಶ್ರಣದ ಕೆಲವು ಹನಿಗಳನ್ನು ಮೂಗಿನೊಳಗೆ ಬಿಟ್ಟುಕೊಳ್ಳಬೇಕು. ಇದು ಕಟ್ಟಿಕೊಂಡಿರುವ ಲೋಳೆಯನ್ನು‌ ನಿವಾರಿಸುತ್ತದೆ.

ಶುಂಠಿ ಕೂಡ ಶೀತ, ನೆಗಡಿಗೆ ಹೇಳಿ ಮಾಡಿದ ಮನೆಮದ್ದು. ಇದು ಶೀತವನ್ನು ನಿವಾರಿಸಿ ಉಸಿರಾಟವನ್ನು ಸುಗಮಗೊಳಿಸುತ್ತದೆ. ಶುಂಠಿಯನ್ನು ನೇರವಾಗಿ ಅಗಿಯುವುದರಿಂದ ಕಫ ಕರಗುತ್ತದೆ. ಅಥವಾ ಶುಂಠಿಯನ್ನು‌ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ‌ ಬೆರೆಯಲು ಬಿಡಬೇಕು.‌ನಂತರ ಅದಕ್ಕೆ‌ ಜೇನುತುಪ್ಪ ಸೇರಿಸಿ ದಿನಕ್ಕೆ3-4 ಬಾರಿ ಸೇವಿಸಬೇಕು.‌ ಇದರಿಂದ ಗಂಟಲಿನ ಕಫ ನಿವಾರಣೆಯಾಗುತ್ತದೆ.

ಇದು ಈಗ ವಿಶ್ವಾದ್ಯಂತ ಹರಡಿರುವ ಕೊರೋನಾಕ್ಕೆ ಮದ್ದಲ್ಲ. ನೀವು ವಾಸಮಾಡುವ‌ ಜಾಗದಲ್ಲಿ‌ ಕೆಲವೊಂದು ಔಷಧಾಲಗಳು ಕಾರಣಾಂತರದಿಂದ‌ ಮುಚ್ಚಿರಬಹುದು. ಈ‌‌ ಪರಿಸ್ಥಿತಿಯಲ್ಲಿ ಇಂತಹ ಮನೆಮದ್ದುಗಳು ಸಹಕಾರಿಯಾಗಬಹುದು.

Comments are closed.