ಕರ್ನಾಟಕ

ಕಲಬುರಗಿಯ 65 ವರ್ಷದ ಸೋಂಕಿತ ವ್ಯಕ್ತಿ ಕೊರೋನಾ ವೈರಸ್ ಗೆ ಬಲಿ; ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆ: ಸೋಂಕು ಪೀಡಿತರ ಸಂಖ್ಯೆ 181ಕ್ಕೆ ಏರಿಕೆ

Pinterest LinkedIn Tumblr

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರ್ನಾಟಕದಲ್ಲಿ ಮತ್ತೊಂದು ಬಲಿಯಾಗಿದ್ದು, ಕಲಬುರಗಿಯ 65 ವರ್ಷದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಇನ್ನು ಕರ್ನಾಟಕದಲ್ಲಿ ಮತ್ತೆ 6 ಹೊಸ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ. ಮೃತ 5ನೇ ವ್ಯಕ್ತಿಯನ್ನು ಹೊರತುಪಡಿಸಿ ಉಳಿದ ಐದ ಹೊಸ ಪ್ರಕರಣಗಳ ವಿವರ ಇಂತಿದೆ.

– ಕಲಬುರಗಿಯಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದ್ದು, 72 ವರ್ಷದ ವೃದ್ಧೆಯಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಇವರು ಪೇಷೆಂಟ್ ನಂಬರ್ 175 ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.

– ಉತ್ತರ ಕನ್ನಡದಲ್ಲಿ 26 ವರ್ಷದ ಮಹಿಳೆಯಲ್ಲೂ ವೈರಸ್ ಇರುವುದು ದೃಢವಾಗಿದ್ದು, ದುಬೈನಿಂದ ಭಾರತಕ್ಕೆ ಆಗಮಿಸಿದ್ದ ಸೋಂಕಿತರನ್ನು ಭೇಟಿಯಾಗಿದ್ದರು.

– ಮಂಡ್ಯದಲ್ಲಿ 35 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದ್ದು, ಪೇಷೆಂಟ್ ನಂಬರ್ 134 ಮತ್ತು 138ರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

– ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದಾಖಲಾಗಿದ್ದು, ದೆಹಲಿಗೆ ತೆರಳಿದ್ದ 23 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

– ಬೆಂಗಳೂರಿನಲ್ಲೂ ಮತ್ತೊಂದು ಸೋಂಕು ಪ್ರಕರಣ ದಾಖಲಾಗಿದ್ದು, ದೆಹಲಿಯಿಂದ ಆಗಮಿಸಿದ್ದ 27 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ.

ಸೋಂಕಿತರೊಂದಿಗೆ ಸಂಪರ್ಕವೇ ಇರಲಿಲ್ಲ
ಇನ್ನು ಇಂದು ಕಲಬುರಗಿಯಲ್ಲಿ ಸಾವನ್ನಪ್ಪಿರುವ ಈ ವೃದ್ಧ ಯಾವುದೇ ಹಂತದಲ್ಲೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಅಲ್ಲದೆ ವೃದ್ಧನಿಗೆ ಯಾವುದೇ ರೀತಿಯ ಟ್ರಾವಲ್ ಹಿಸ್ಟರಿ ಕೂಡ ಇರಲಿಲ್ಲ. ಅಲ್ಲದೆ ದೆಹಲಿಯ ನಿಜಾಮುದ್ದೀನ್ ಮಸೀದಿಗೂ ಹೋಗಿರಲಿಲ್ಲ ಎಂದು ತಿಳಿದುಬಂದಿದೆ. ಹಣ್ಣಿನ ವ್ಯಾಪಾರಿಯಾದ ವೃದ್ಧನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಳಿಕ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡಬಂದ ಹಿನ್ನಲೆಯಲ್ಲಿ ಮಾರ್ಚ್ 6ರಂದು ಕಲಬುರಗಿಯ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೃದ್ಧನ ಗಂಟಲಿನ ಎಂಜಲಿನ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆಯಷ್ಟೇ ಈ ವರದಿ ಬಂದಿದ್ದು, ಕೊರೋನಾ ಸೋಂಕು ದೃಢವಾಗಿತ್ತು. ಇದೀಗ ವೃದ್ಧ ಸಾವನ್ನಪ್ಪಿದ್ದು, ವೃದ್ಧ ತಂಗಿದ್ದ ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೆ ವೃದ್ಧನ ಕುಟುಂಬಸ್ಥರು, ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ವೃದ್ಧನ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಶೋಧ ನಡೆಯುತ್ತಿದ್ದು, ಅವರನ್ನೂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

Comments are closed.