ರಾಷ್ಟ್ರೀಯ

ಕೋವಿಡ್-19 ಸೋಂಕನ್ನು ತಡೆಗಟ್ಟುವ ಸಂಬಂಧ ವಿವಿಧ ಪಕ್ಷಗಳ ನಾಯಕರೊಂದಿಗೆ ಸಂಸತ್ತಿನಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ:ಕೋವಿಡ್-19 ಸೋಂಕನ್ನು ತಡೆಗಟ್ಟುವ ಸಂಬಂಧ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿವಿಧ ಪಕ್ಷಗಳ ನಾಯಕರೊಂದಿಗೆ ಸಂಸತ್ತಿನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟಾಗಿ ಐವರು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್, ನ್ಯಾಷನಲಿಸ್ಟ್ ಪಾರ್ಟಿಯ ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಹೊಸ 773 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಕಳೆದ 24 ಗಂಟೆಗಳಲ್ಲಿ 10 ಸಾವು ಸಂಭವಿಸಿದೆ. ಇದುವರೆಗೆ 149 ಮಂದಿ ಮೃತಪಟ್ಟಿದ್ದು 5 ಸಾವಿರದ 194 ಮಂದಿಗೆ ಸೋಂಕು ತಗುಲಿದೆ. ವಿವಿಧ ರಾಜ್ಯ ಸರ್ಕಾರಗಳ ಸಲಹೆಯಂತೆ ಏಪ್ರಿಲ್ 14ರ ನಂತರವೂ ಕೇಂದ್ರ ಸರ್ಕಾರ ಭಾರತ ಲಾಕ್ ಡೌನ್ ನ್ನು ಮುಂದುವರಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಕಳೆದ ಮಾರ್ಚ್ 25ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಾದ ನಂತರ ಸದನ ಸದಸ್ಯರೊಂದಿಗೆ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಕಳೆದ ವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು.

ಕೇವಲ ರಾಜಕೀಯ ಮುಖಂಡರು ಮಾತ್ರವಲ್ಲದೆ ಲಾಕ್ ಡೌನ್ ಮತ್ತು ಕೊರೋನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸುವ ಕುರಿತು ಮೋದಿ ಸಮಾಜದ ವಿವಿಧ ವರ್ಗಗಳ ಗಣ್ಯರು, ವೈದ್ಯರು, ಪತ್ರಕರ್ತರು, ಭಾರತೀಯ ರಾಯಭಾರಿಗಳು ಮೊದಲಾದವರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಎಂ ಕೆ ಸ್ಟಾಲಿನ್, ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡ, ಡಾ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಅವರೊಂದಿಗೆ ಸಹ ಚರ್ಚೆ ನಡೆಸಿದ್ದರು.

Comments are closed.