ಆರೋಗ್ಯ

ಪ್ರಧಾನಿ ಮೋದಿ ಬಗ್ಗೆ ಠೀಕಿಸುವವರು ಮೊದಲು ತಬ್ಲಿಕ್ ಬಗ್ಗೆ ಮೊದಲು ಮಾತನಾಡಲಿ: ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರದ ಕಾಗೇರಿಯಲ್ಲಿರುವ ವರದರಾಜ ಎಂ ಶೆಟ್ಟಿ ಸರಕಾರಿ‌ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರಾಶ್ರಿತರಿಗೆ ಕಲ್ಪಿಸಿದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಭಾನುವಾರ ಬೆಳಿಗ್ಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ನಿರಾಶ್ರಿತರ ಕುಶಲೋಪರಿ ವಿಚಾರಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಬಂದ ಕಾರ್ಮಿಕರು ಬೆಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಲುಕಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸಕ್ಕಾಗಿ ಬಂದು ಸಂಕಷ್ಟಕ್ಕೆ ಸಿಲುಕಿದ ಅವರೊಂದಿಗೆ ನಾವಿದ್ದೇವೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಪಡಿತರ ಚೀಟಿ ಇಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಕೊರೋನಾ ಬಂದಿರುವ ಸಂದಿಗ್ಧ ಕಾಲದಲ್ಲಿ ಈ ಶ್ರಮ ಜೀವಿಗಳಿಗೆ ನಾವು ಆಸರೆಯಾಗಬೇಕು. ಕೊರೋನಾ ದೇಶದಿಂದ ಮುಕ್ತವಾಗಲು ಪ್ರಧಾನಿಗಳು, ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಗಳು, ಪೊಲೀಸರು ಅವಿರತ ಶ್ರಮ ವಹಿಸಿದ್ದಾರೆ ಎಂದರು.

ಉಡುಪಿಯಲ್ಲಿ ಕೊರೋನಾ ನಾಲ್ಕು ಪಾಸಿಟಿವ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದೇಶದಿಂದ ಬಂದ ಕೆಲವರಿಂದ ಇನ್ನೊಬ್ಬರಿಗೆ ಕೊರೋನಾ ಸೋಂಕು ಬಂದಿದೆ. ಅದು ಬೇರೆಯವರಿಗೆ ಹರಡದಂತೆ ಮುಂಜಾಗರುಕ ಕ್ರಮವಾಗಿ ಕೊರೆಂಟೈನ್ ವ್ಯವಸ್ಥೆ ಮಾಡಲಾಗಿದೆ‌. ಸೋಂಕಿತರು ವೈದ್ಯರ ನಿಗಾದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದರು.

ಕೊರೋನಾ ಹಿಮ್ಮೆಟ್ಟಿಸಲು ದೇಶದ ಪ್ರಧಾನ ಮಂತ್ರಿಗಳು ಬೇರೆ ಯಾವ ದೇಶದವರೂ ಮಾಡದಂತೆ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ಜನರ ಮಾನಸಿಕ ಸ್ಥಿತಿ ಗಟ್ಟಿಗೊಳಿಸಲು ವಿದ್ಯುತ್ ದೀಪ ಆರಿಸಿ 9 ನಿಮಿಷ ಮಾಮೂಲಿ ದೀಪ ಹಚ್ಚುವ ಬಗ್ಗೆ ಕರೆ ಕೊಟ್ಟಿದ್ದು ಇದನ್ನು ಠೀಕಿಸುವ ಕೆಲವರು ತಬ್ಲಿಕ್ ಹೋದವರ ಬಗ್ಗೆ ಯಾಕೆ ಠೀಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ ಸಂಸದೆ ಶೋಭಾ ನಿಜಾಮುದ್ದೀನ್ ತಬ್ಲಿಕ್ ಸಂಸ್ಥೆಯಿಂದ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾ ಹಬ್ಬಿದ ಬಗ್ಗೆ ವರದಿಯಾಗಿದ್ದು ಅದರ ಬಗ್ಗೆ ಠೀಕಿಸಬೇಕು ಹೊರತು ರಾತ್ರಿ ಹಗಲು ದುಡಿಯುವ ನಮ್ಮ ಪ್ರಧಾನಿ ಬಗ್ಗೆ ಮಾತನಾಡುವುದು ಸರಿಯಲ್ಲ, ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಅಂಗಡಿಗಳಲ್ಲಿ ನಿತ್ಯ ಬಳಕೆ ವಸ್ತುಗಳ ಪೂರೈಕೆ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ವಿಶೇಷ ಕಾಳಜಿ ವಹಿಸಿದ್ದು ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಂಡಿದ್ದಾರೆ. ದೂರದೂರಿನಿಂದ ಬಂದು ರೇಷನ್ ಪಡೆಯಲಾಗದ ಅಶಕ್ತರಿಗೆ ಸರಕಾರವೇ ಪಡಿತರ ಪೂರೈಕೆ ಮಾಡಲಿದೆ ಎಂದರು.

ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಸಂಧ್ಯಾ ರಮೇಶ್, ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಶಾಂತಾ ಗೋಪಾಲಕೃಷ್ಣ, ಉಪಾಧ್ಯಕ್ಷ ಉದಯ ನಾಯಕ್ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.