ಆರೋಗ್ಯ

ಜೋಳದಷ್ಟೇ ಹೇರಳವಾದ ಪ್ರೋಟೀನ್‌, ಕಾರ್ಬೋಹೈಡ್ರೇಟ್ಸ್‌, ಖನಿಜಾಂಶಗಳ ಜೋಳದ ನಾರಿನಲ್ಲಿದೆ.

Pinterest LinkedIn Tumblr

ದೇಹದ ಅನಗತ್ಯ ಕೊಬ್ಬನ್ನು ನಿವಾರಿಸುವ ಜೋಳ ಸುಲಭವಾದ ಜೀರ್ಣಕ್ರಿಯೆಗೂ ಅತ್ಯುತ್ತಮ ಆಹಾರ ಎಂದರೆ ತಪ್ಪಾಗಲಾರದು. ಆದ್ದರಿಂದಲೇ ಡಯಟ್‌ ಪ್ರಿಯರ ನೆಚ್ಚಿನ ಆಹಾರಗಳ ಪಟ್ಟಿಯಲ್ಲಿ ಜೋಳಕ್ಕೆ ಮೊದಲ ಆದ್ಯತೆ. ಆದರೆ ನಿಮಗೆ ಗೊತ್ತೆ ಜೋಳದಷ್ಟೇ ಖನಿಜಾಂಶಗಳನ್ನು ಜೋಳದ ನಾರು ಹೊಂದಿದೆ.

ಸಾಮಾನ್ಯವಾಗಿ ನಾವು ಒಟ್ಟು ಜೋಳ ಖರೀದಿಸಿದಾಗ ಜೋಳ ಹೊರತೆಗೆದು ಅದರ ತುದಿಯಲ್ಲಿ ಇರುವ ರೇಷ್ಮೆಯಂಥ ನಾರನ್ನು ಎಸೆಯುತ್ತೇವೆ? ಆದರೆ ಈ ಲೇಖನವನ್ನು ಓದಿದ ನಂತರ ಇನ್ನು ಮುಂದೆ ನೀವು ಎಂದೂ ಈ ತಪ್ಪನ್ನು ಮಾಡುವುದಿಲ್ಲ. ಕಾರಣ, ಜೋಳದ ಜುಟ್ಟಿನಲ್ಲಿ ಹೇರಳವಾದ ಪ್ರೋಟೀನ್‌ ಗಳು, ಕಾರ್ಬೋಹೈಡ್ರೇಟ್ಸ್‌ ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಶಿಯಂ, ಸೋಡಿಯಂ, ಲವಣಗಳು, ಬಾಷ್ಪಶೀಲ ತೈಲಗಳು, ಆಲ್ಕಲಾಯ್ಡಗಳು, ಸಪೋನಿನ್‌, ಫ್ಲೇವನಾಯ್ಡ್‌, ಸ್ಟಿಗ್ಮಾಸ್ಟರಾಲ್ ಮತ್ತು ಸಿಟೊಸ್ಟೆರಾಲ್ ಅಂಶಗಳು ಇರುತ್ತವೆ.

ಜೋಳದ ರೇಷ್ಮೆ ಸೇವನೆಯಿಂದ ಆಗಬಹುದಾದ ಆರೋಗ್ಯ ಪ್ರಯೋಜನಗಳು

ಉರಿಯೂತವನ್ನು ಕಡಿಮೆ ಮಾಡುತ್ತದೆ ಉರಿಯೂತ ದಿಂದಾಗಿ ಹೃದ್ರೋಗ ಸಮಸ್ಯೆ ಮತ್ತು ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳು ಉಲ್ಭಣಿಸಬಹುದು. ಆದರೆ ಜೋಳದ ಜುಟ್ಟಿನ ಸಾರವು ಉರಿಯೂತದ ಸಂಯುಕ್ತಗಳ ಚಟುವಟಿಕೆಯನ್ನು ನಿಲ್ಲಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದರಲ್ಲಿ ದೇಹದ ಉರಿಯೂತದ ಪ್ರತಿಕ್ರಿಯೆಯನ್ನು ನಿಯಂತ್ರಿಸುವಂಥ ಖನಿಜವಾದ ಮೆಗ್ನೀಶಿಯಂ ಅನ್ನು ಸಹ ಒಳಗೊಂಡಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಜೋಳದ ಜುಟ್ಟಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಬರದಂತೆ ತಡೆಯಲು ಇದು ಸಹಾಯ ಮಾಡುತ್ತದೆ. ಸಂಶೋಧನೆ ಸಲುವಾಗಿ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಜೋಳದ ಜುಟ್ಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿರುವುದು ಕಂಡುಬಂದಿದೆ. ಈ ಮೂಲಕ ಜೋಳದ ರೇಷ್ಮೆ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ.

ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ ಜೋಳದ ಜುಟ್ಟು ಉತ್ಕರ್ಷಣ ನಿರೋಧಕ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ಸೇರಿದಂತೆ ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಆಕ್ಸಿಡೇಟಿವ್ ಒತ್ತಡ ಕಾರಣವಾಗಿದೆ ಇದನ್ನು ಜೋಳದ ರೇಷ್ಮೆಯಂಥ ಜುಟ್ಟು ನಿಗ್ರಹಿಸುವ ಶಕ್ತಿಯನ್ನು ಹೊಂದಿದೆ.

ಹೃದಯದ ಆರೋಗ್ಯ ಸುಧಾರಣೆ ಫ್ಲೇವನಾಯ್ಡ್‌ ಗಳು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ (ಎಲ್ಡಿಎಲ್-ಸಿ), ಟ್ರೈಗ್ಲಿಸರೈಡ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಜೋಳದ ಜುಟ್ಟು ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

ಖಿನ್ನತೆ ನಿವಾರಣೆ ಜೋಳದ ಜುಟ್ಟಿನಲ್ಲಿರುವ ಖಿನ್ನತೆ-ವಿರೋಧಿ ಗುಣಗಳು ಇದೆ ಎಂದು ಅಧ್ಯಯನ ಹೇಳುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನದ ವರದಿಯೂ ಸಕಾರಾತ್ಮಕ ಫಲಿತಾಂಶ ನೀಡಿದೆ.

ಆಯಾಸ ಕಡಿಮೆ ಮಾಡುತ್ತದೆ ಆಯಾಸವು ನಿಮ್ಮಲ್ಲಿ ನಿರುತ್ಸಾಹ ಉಂಟು ಮಾಡುತ್ತದೆ ಅಥವಾ ನಿತ್ರಾಣ, ಸುಸ್ತಾದಂಥ ಅನುಭವ ನೀಡುತ್ತದೆ. ಈ ವೇಳೆ ನೀವು ಕೆಲಸದಲ್ಲಿ ಪ್ರೇರಣೆ ಮತ್ತು ಶಕ್ತಿಯನ್ನೇ ಕಳೆದುಕೊಳ್ಳಬಹುದು. ಆದರೆ ಜೋಳದ ಜುಟ್ಟಿನಲ್ಲಿರುವ ಫ್ಲೇವನಾಯ್ಡ್‌ಗಳು ಆಯಾಸ-ವಿರೋಧಿ ಗುಣವನ್ನು ಹೊಂದಿದೆ. ಇದರ ಸೇವನೆಯು ಆಯಾಸದಿಂದ ನಿಮ್ಮನ್ನು ದೂರ ಮಾಡಿ ದಣಿವು ಉಂಟಾಗದಂತೆ ಮಾಡುತ್ತದೆ

ಅಧಿಕ ರಕ್ತದೊತ್ತಡ ನಿಯಂತ್ರಣ ದೇಹದಲ್ಲಿರುವ ಅನಗತ್ಯ ನೀರನ್ನು ದೇಹದ ಹೊರಹಾಕುವ ಮೂಲಕ ಜೋಳದ ರೇಷ್ಮೆ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ತೂಕ ನಷ್ಟ ಜೋಳದ ಜುಟ್ಟು ದೇಹದ ಕ್ಯಾಲೊರಿ ಕಡಿಮೆ ಮಾಡುವ ಮೂಲಕ ತೂಕವನ್ನು ಇಳಿಸುತ್ತದೆ. ಜೋಳದ ಜುಟ್ಟಿನ ರಸದ ಟೀ ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ ಮತ್ತು ಇದು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ, ಜತೆಗೆ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕಲು ಸಹ ಅನುಕೂಲವಾಗುತ್ತದೆ.

ಆಲ್‌ಜೈಮರ್ ವಯೋಸಹಜವಾಗಿ ಜ್ಞಾಪಕಶಕ್ತಿ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾದಾಗ ಬರುವ ಕಾಯಿಲೆ ಆಲ್‌ಜೈಮರ್. ಆದರೆ ಜೋಳದ ಜುಟ್ಟಿನ ಸೇವನೆಯು ಈ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಜೋಳದ ಜುಟ್ಟಿನಲ್ಲಿ ನ್ಯೂರೋಪ್ರೊಟೆಕ್ಟಿವ್ ಅಂಶಗಳು ಇದೆ, ಇದು ಆಲ್‌ಜೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂತ್ರದ ಸೋಂಕುಗಳಿಗೆ ಚಿಕಿತ್ಸಕ ಮೂತ್ರಕ್ಕ ಸಂಬಂಧಿಸಿದ ಯಾವುದೇ ಸೋಂಕು, ಉದಾಹರಣೆಗೆ ಮೂತ್ರದ ವ್ಯವಸ್ಥೆಯ ಯಾವುದೇ ಭಾಗ, ಮೂತ್ರಪಿಂಡ, ಗಾಳಿಗುಳ್ಳೆಯ ಅಥವಾ ಮೂತ್ರನಾಳದಲ್ಲಿ ಸಂಭವಿಸಬಹುದು. ಇದಕ್ಕೆ ಪರಿಣಾಮಕಾರಿ ಮನೆಮದ್ದು ಜೋಳದ ಜುಟ್ಟು. ಹೌದು, ಜೋಳದ ಜುಟ್ಟಿನ ಚಹಾ ಮೂತ್ರದ ಸೋಂಕುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಜೋಳದ ಜುಟ್ಟಿನ ಚಹಾ ಮಾಡುವುದು ಹೇಗೆ ಸಾಮಾನ್ಯ ಜೋಳಕ್ಕಿಂತ ಸಿಹಿ ಜೋಳದ ಜುಟ್ಟು ಹೆಚ್ಚು ಪ್ರಯೋಜನಕಾರಿ. ಸಾಮಾನ್ಯ ಜೋಳವಾದರೆ ಎಳೆಯ ಜೋಳ ಬಳಸಿದರೆ ಒಳ್ಳೆಯದು. ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ ಒಂದು ಹಿಡಿ ತಾಜಾ ಜೋಳದ ಜುಟ್ಟನ್ನು ಸೇರಿಸಿ. ಇದನ್ನು ಕೆಲವು ನಿಮಿಷಗಳ ಕಾಲ ಕುದಿಸಿ. ನೀರು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ರುಚಿ ಮತ್ತು ಪರಿಮಳ ಹೆಚ್ಚಿಸಲು ನಿಂಬೆ ರಸ ಸೇರಿಸಿ.

ಜೋಳದ ಜುಟ್ಟಿನ ಅಡ್ಡಪರಿಣಾಮಗಳು

ಜೋಳದ ಜುಟ್ಟು ಸಾಮಾನ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಗೆ ಕಾರಣವಾಗುವುದಿಲ್ಲ, ಆದರೂ ಜೋಳದಿಂದ ನಿಮ್ಮ ದೇಹಕ್ಕೆ ಅಲರ್ಜಿ ಆಗಬಹುದಾದರೆ ಮತ್ತು ಮೂತ್ರವರ್ಧಕಗಳು, ಮಧುಮೇಹ ಔಷಧಿ, ರಕ್ತದೊತ್ತಡ ಮಾತ್ರೆಗಳು, ಉರಿಯೂತದ ಮಾತ್ರೆಗಳು ಮತ್ತು ರಕ್ತ ತೆಳುವಾಗಿಸುವಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಜೋಳದ ಜುಟ್ಟನ್ನು ಸೇವಿಸಬೇಡಿ.

Comments are closed.