ಆರೋಗ್ಯ

ಅನಿಮಿಯಾ ಅಥವಾ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸಲು ಈ ಕಾಯಿ ಸಹಕಾರಿ

Pinterest LinkedIn Tumblr

ವಿಟಾಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಆಗರವಾಗಿರುವ ನೆಲ್ಲಿಕಾಯಿ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು,ನಿಮ್ಮ ಆಹಾರದ ಭಾಗವಾಗಿರಲು ಅತ್ಯಂತ ಸೂಕ್ತವಾಗಿದೆ. ಚಿಕಿತ್ಸಕ ಮತ್ತು ವೈದ್ಯಕೀಯ ಕಾರಣಗಳಿಂದಾಗಿ ವಿಶೇಷವಾಗಿ ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆ ನಮ್ಮನ್ನು ಸದೃಢರನ್ನಾಗಿ ಮತ್ತು ಆರೋಗ್ಯಯುತರನ್ನಾಗಿ ಇರಿಸುತ್ತದೆ. ದಿನಕ್ಕೊಂದು ನೆಲ್ಲಿಕಾಯಿ ತಿಂದರೆ ಶೀತ,ಕೆಮ್ಮು ಮತ್ತು ಫ್ಲೂ ಅನ್ನು ಮಾರು ದೂರವಿಡಬಹುದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ನೆಲ್ಲಿಕಾಯಿ ಸೇವನೆಯ ಇತರ ಆರೋಗ್ಯಲಾಭಗಳಿಲ್ಲಿವೆ….

ನೀವು ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ಕೊಬ್ಬನ್ನು ಕರಗಿಸಲು ಮತ್ತು ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿ ಕೊಳ್ಳಲು ನೆಲ್ಲಿಕಾಯಿ ನೆರವಾಗುತ್ತದೆ. ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ತಪ್ಪಿಸಿಕೊಳ್ಳಲು ಕಾರಣವಾಗುವ ಜಡತೆ ಯನ್ನೂ ನೆಲ್ಲಿಕಾಯಿ ಸೇವನೆಯು ನಿವಾರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ನೆಲ್ಲಿಕಾಯಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಅದು ಇನ್ಸುಲಿನ್ ಸಂವೇದನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚಿನ ವಿಟಾಮಿನ್ ಸಿ ಅನ್ನು ನೆಲ್ಲಿಕಾಯಿ ನಮ್ಮ ಶರೀರಕ್ಕೆ ಒದಗಿಸುತ್ತದೆ. ದಣಿವು,ಜಡತೆ ಮತ್ತು ಕೆರಳುವಿಕೆಯನ್ನು ನಿವಾರಿಸುವ ಮೂಲಕ ಶರೀರಕ್ಕೆ ಚೇತರಿಕೆಯನ್ನು ನೀಡುತ್ತದೆ.

ತನ್ನಲ್ಲಿರುವ ಸಮೃದ್ಧ ಸಿ ವಿಟಾಮಿನ್‌ನಿಂದಾಗಿ ನೆಲ್ಲಿಕಾಯಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗಾಯಗಳು ಬೇಗನೆ ಗುಣವಾಗಲು ನೆರವಾಗುತ್ತದೆ.

ನೆಲ್ಲಿಕಾಯಿ ಅನಿಮಿಯಾ ಅಥವಾ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅದು ಶರೀರದಲ್ಲಿ ಕಬ್ಬಿಣಾಂಶದ ಸಂಯೋಜನೆಗೆ ನೆರವಾಗುತ್ತದೆ ಮತ್ತು ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

*ಶರೀರದಲ್ಲಿ ಕಬ್ಬಿಣಾಂಶದ ಸಂಯೋಜನೆಗೆ ನೆರವಾಗುವ ನೆಲ್ಲಿಕಾಯಿಯ ಗುಣವು ಮುಟ್ಟಿನ ದಿನಗಳಲ್ಲಿ ತೊಂದರೆಯನ್ನು ಅನುಭವಿಸುವ ಮಹಿಳೆಯರಿಗೆ ಲಾಭದಾಯಕವಾಗಿದೆ. ನಿಯಮಿತವಾಗಿ,ನಿರ್ದಿಷ್ಟವಾಗಿ ಬೆಳಗಿನ ಸಮಯದಲ್ಲಿ ನೆಲ್ಲಿಕಾಯಿ ಸೇವನೆಯು ಮಹಿಳೆಯರಲ್ಲಿ ಮುಟ್ಟಿನ ದಿನಗಳ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ರಜಸ್ವಲೆಯಾದ ಎರಡನೇ ದಿನ ವಿಪರೀತ ರಕ್ತಸ್ರಾವವಾಗುತ್ತಿದ್ದರೆ ನೆಲ್ಲಿಕಾಯಿಯಲ್ಲಿರುವ ಬಿ1 ಮತ್ತು ಬಿ2 ವಿಟಾಮಿನ್‌ಗಳು ಅದನ್ನು ತಡೆಯಲು ನೆರವಾಗುತ್ತವೆ.

ನಿಮ್ಮ ಚರ್ಮದ ತಾರುಣ್ಯವನ್ನು ಕಾಪಾಡಿಕೊಳ್ಳಲು ಬಯಸಿದ್ದರೆ ಮತ್ತು ತಲೆಯಲ್ಲಿ ಬೆಳ್ಳಿಗೂದಲು ಕಾಣಿಸಿಕೊಳ್ಳಬಾರದು ಎಂದಿದ್ದರೆ ನೆಲ್ಲಿಕಾಯಿ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.

ಕಣ್ಣಿನ ಆರೋಗ್ಯವನ್ನು ಹೆಚಿಸುವ ನೆಲ್ಲಿಕಾಯಿ ಬಾಯಿಯ ಆರೋಗ್ಯವನ್ನೂ ಕಾಯ್ದುಕೊಳ್ಳುತ್ತದೆ.

ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನಬಹುದು,ಬೇಕಿದ್ದರೆ ಕೊಂಚ ಉಪ್ಪನ್ನು ಸೇರಿಸಿಕೊಳ್ಳಬಹುದು. ಅದರ ಶರಬತ್ ಮಾಡಿ ಕುಡಿಯಬಹುದು. ನೆಲ್ಲಿಕಾಯಿಯ ಮುರಬ್ಬಾ ಮತ್ತು ಜಾಮ್ ಮಾಡಿಟ್ಟುಕೊಂಡರೆ ತುಂಬ ದಿನಗಳವರೆಗೆ ಸೇವಿಸಬಹುದಾಗಿದೆ. ಉಪ್ಪಿನಕಾಯಿ ರೂಪದಲ್ಲಿ ಸೇವಿಸಲೂ ನೆಲ್ಲಿಕಾಯಿ ಸೂಕ್ತವಾಗಿದೆ. ನಿಮ್ಮ ಆಹಾರಕ್ರಮದಲ್ಲಿ ಚ್ಯವನಪ್ರಾಶ ಅನ್ನು ಸೇರಿಸಿಕೊಳ್ಳಬಹುದು. ಸಮೃದ್ಧ ನೆಲ್ಲಿಕಾಯಿ ಅಂಶವನ್ನು ಹೊಂದಿರುವ ಅದನ್ನು ಹಾಲು ಅಥವಾ ನೀರಿನೊಂದಿಗೆ ಬೆರೆಸಿಕೊಂಡು ಇಲ್ಲವೇ ಹಾಗೆಯೇ ಸೇವಿಸಬಹುದು. ನೆಲ್ಲಿಕಾಯಿ ಸುಪಾರಿ ಮತ್ತು ಉಪ್ಪು ಬೆರೆಸಿದ ಒಣಗಿಸಿದ ನೆಲ್ಲಿಕಾಯಿ ಅತ್ಯುತ್ತಮ ಮೌತ್ ಫ್ರೆಶ್ನರ್ ಆಗಿದೆ,ಜೊತೆಗೆ ಆಯಸಿಡಿಟಿಯನ್ನು ತಡೆಯುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

Comments are closed.