ಕರಾವಳಿ

ಹೈಕಾಡಿಯಲ್ಲಿ ಪುನುಗು ಬೆಕ್ಕು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ

Pinterest LinkedIn Tumblr
ಉಡುಪಿ: ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಪುತ್ತೂರು (ದ.ಕ.) ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪುನುಗು ಬೆಕ್ಕು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಈ ಘಟನೆ ನಡೆದಿದೆ.
ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ (22), ಹಾಗೂ ಬಿದ್ಕಲಕಟ್ಟೆ ನಿವಾಸಿ ಶರತ್ (23) ಬಂಧಿತ ಆರೋಪಿಗಳಾಗಿದ್ದು ಇವರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪುತ್ತೂರಿನ ಪೊಲೀಸ್ ಅರಣ್ಯ ಸಂಚಾರಿ ದಳದ (ಡಬ್ಲ್ಯೂ.ಎಲ್.ಪಿ) ಪೊಲೀಸ್ ಉಪನಿರೀಕ್ಷಕ ಜಯ ಕೆ. ಅವರು ಕಚೇರಿಯಲಿದ್ದ ವೇಳೆ ಜೀವಂತ ಪುನುಗು ಬೆಕ್ಕಣ್ಣು ಮಾರಾಟದ ಸಲುವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನ ಬಂದಿದ್ದು ಅದರಂತೆಯೇ ಸಿಬ್ಬಂದಿಗಳ ಜೊತೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಉದಯ್, ರಾಮಕೃಷ್ಣ ಮೊದಲಾದವರು ಇದ್ದರು. ಈ ಪ್ರಕರಣವು ವನ್ಯ ಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ಮುಂದಿನ ತನಿಖೆ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
(ವರದಿ- ಯೋಗೀಶ್ ಕುಂಭಾಸಿ)

Comments are closed.