ಆರೋಗ್ಯ

ಈ ಐದು ಪ್ರೋಟೀನ್‌ಯುಕ್ತ ಉಪಾಹಾರಗಳಿಂದ ದೇಹ ತೂಕ ಇಳಿಸಿ

Pinterest LinkedIn Tumblr


ದೇಹವು ಆರೋಗ್ಯವಾಗಿದ್ದು, ಫಿಟ್ ಆಗಿರಬೇಕೆಂಬ ಬಯಕೆ ಪ್ರತಿಯೊಬ್ಬರಿಗೂ ಇರುವುದು. ಎಲ್ಲರಿಗೂ ದೇಹದ ತೂಕದ ಸಮತೋಲನ ಕಾಪಾಡಿಕೊಂಡು ಫಿಟ್ ಆಗಿರಲು ಸಾಧ್ಯವಿಲ್ಲ. ಕೆಲವರು ತುಂಬಾ ಶ್ರಮ ವಹಿಸಿ ತಮ್ಮ ದೇಹವನ್ನು ಎಲ್ಲಾ ರೀತಿಯಿಂದ ನಿರೋಗಿಯಾಗಿ ಇರುವಂತೆ ನೋಡಿಕೊಳ್ಳುವರು. ಇನ್ನು ದೇಹದಲ್ಲಿ ಬೊಜ್ಜು ಬೆಳೆಸಿಕೊಂಡವರ ಕಥೆಯೇ ಬೇರೆ. ಯಾಕೆಂದರೆ ಇವರು ದಿನಕ್ಕೊಂದು ಕಡೆ ತೂಕ ಇಳಿಸಿಕೊಳ್ಳಬೇಕು ಎಂದು ಓಡುತ್ತಲಿರುವರು.

ಆದರೆ ಅದು ಅವರಿಂದ ಸಾಧ್ಯವಾಗಲ್ಲ. ತೂಕ ಇಳಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಅವರಿಗೆ ಖಂಡಿತವಾಗಿಯೂ ಅರ್ಥವಾಗಿರುವುದು. ಇನ್ನು ಕೆಲವರು ಉಪವಾಸ ಮಾಡಿ ತೂಕ ಇಳಿಸಲು ಪ್ರಯತ್ನ ಮಾಡುವರು. ಇದು ತುಂಬಾ ಅಪಾಯಕಾರಿ ವಿಧಾನ. ಯಾಕೆಂದರೆ ನಮ್ಮ ದೇಹಕ್ಕೆ ಪ್ರತಿದಿನಕ್ಕೆ ಬೇಕಾಗುವಂತಹ ಪೋಷಕಾಂಶಗಳು ಬೇಕೇ ಬೇಕು.

ಇಲ್ಲವಾದಲ್ಲಿ ದೇಹದಲ್ಲಿ ನಿಶ್ಯಕ್ತಿ ಕಾಡಬಹುದು ಮತ್ತು ಅನಾರೋಗ್ಯ ಬಾಧಿಸಬಹುದು. ತೂಕ ಇಳಿಸಿಕೊಂಡು ದೇಹವನ್ನು ಕಟ್ಟುಮಸ್ತಾಗಿ ಇಡಬೇಕು ಎಂದು ಬಯಸುವವರು ಮೊದಲು ಉಪಾಹಾರದ ಬಗ್ಗೆ ಗಮನಹರಿಸಬೇಕು. ಆರೋಗ್ಯಕರ ಉಪಾಹಾರವು ದೇಹಕ್ಕೆ ಒಳ್ಳೆಯ ಪೋಷಣೆ ನೀಡುವುದು. ಇದು ದಿನವಿಡಿ ದೇಹವನ್ನು ಶಕ್ತಿಯುತವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಅತಿಯಾಗಿ ತಿನ್ನುವುದರಿಂದ ತಡೆಯುವುದು. ದೇಹದ ತೂಕ ಇಳಿಸಿಕೊಂಡು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಬಯಸುವವರು ಪ್ರೋಟೀನ್ ಇರುವ ಉಪಾಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು.

ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಆಹಾರಕ್ರಮ ಹೀಗಿರಲಿ

ಯಾಕೆಂದರೆ ಪ್ರೋಟೀನ್ ದೇಹದ ಚಯಾಪಚಯ ವೃದ್ಧಿಸುವುದು. ಅಧಿಕ ಪ್ರೋಟೀನ್ ಇರುವ ಉಪಾಹಾರವು ಬಯಕೆ ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಬೆಳಗ್ಗೆ ಸಮತೋಲಿತ ಉಪಾಹಾರ ಸೇವನೆ ಮಾಡುವುದು ಅತೀ ಅವಶ್ಯಕ. ಕೇವಲ 20 ನಿಮಿಷಗಳಲ್ಲಿ ತಯಾರಿಸಿಕೊಂಡು ತಿನ್ನಬಹುದಾದ ಐದು ಬಗೆಯ ಪ್ರೋಟೀನ್ ಉಪಾಹಾರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಹೆಸರುಬೇಳೆ ದೋಸೆ
ಇದು ತುಂಬಾ ರುಚಿಕರ ಮತ್ತು ಬೇಗ ತಯಾರಿಸಿಕೊಳ್ಳಬಹುದಾದ ಉಪಾಹಾರ. ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ, ಸಸ್ಯಜನ್ಯ ಪ್ರೋಟೀನ್ ಇದೆ. ಹೆಸರುಬೇಳೆ ದೋಸೆ ಮಾಡಿಕೊಂಡು ತಿಂದರೆ ಅದರಿಂದ ದೀರ್ಘಕಾಲ ತನಕ ಹೊಟ್ಟೆಯು ತುಂಬಿದಂತೆ ಇರುವುದು. ಚೀಸ್ ಅಥವಾ ತರಕಾರಿಯನ್ನು ಇದಕ್ಕೆ ಸೇರಿಸಿಕೊಳ್ಳಬಹುದು.

ಮೊಸರು ಮತ್ತು ಬೆರ್ರಿಗಳು
ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಮೊಸರು ಮತ್ತು ಬೆರ್ರಿಗಳನ್ನು ಸೇರಿಸಿಕೊಳ್ಳಬಹುದು. ಯಥೇಚ್ಛ ಪ್ರೋಟೀನ್ ಹಾಗೂ ಕಡಿಮೆ ಕ್ಯಾಲರಿ ಹೊಂದಿರುವ ಮೊಸರು ಅದ್ಭುತ ಉಪಾಹಾರ ಆಗಿರುವುದು. 100 ಗ್ರಾಂ ಮೊಸರಿನಲ್ಲಿ 10 ಗ್ರಾಂ ಪ್ರೋಟೀನ್ ಇರುವುದು. ಮೊಸರನ್ನು ಹಾಗೆ ಬೀಜಗಳು ಮತ್ತು ಬೆರ್ರಿಗಳ ಜತೆಗೆ ಸೇರಿಸಿಕೊಂಡು ಸೇವಿಸಬಹುದು. ಇದರಿಂದ ದಿನವಿಡಿ ನೀವು ಶಕ್ತಿಯುತವಾಗಿ ಇರಬಹುದು ಮತ್ತು ಇದರಿಂದ ತೂಕ ಇಳಿಸಲು ಸಹಕಾರಿ.

ಅಧಿಕ ಪ್ರೋಟೀನ್‌ನ ಮೊಟ್ಟೆ
ನಮ್ಮ ದೇಹಕ್ಕೆ ಮೊಟ್ಟೆಯಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಇವೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಮೊಟ್ಟೆಯಲ್ಲಿ ಕಡಿಮೆ ಕ್ಯಾಲರಿ ಮತ್ತು ಅಧಿಕ ಪ್ರೋಟೀನ್(ಇದು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗಿದೆ) ಇದ್ದು, ತೂಕ ಇಳಿಸಲು ಸಹಕಾರಿ. ಮೊಟ್ಟೆಯ ಇನ್ನೊಂದು ಲಾಭವೆಂದರೆ ಇದನ್ನು ಹಲವಾರು ವಿಧದಿಂದ ತಯಾರಿಸಿಕೊಳ್ಳಬಹುದು. ಮೊಟ್ಟೆ ಬೇಯಿಸಿ ಅಥವಾ ಆಮ್ಲೆಟ್ ಮಾಡಿಕೊಂಡು ತಿನ್ನಬಹುದು.
ಸೂಚನೆ: ಬೇಯಿಸಿದ ಮೊಟ್ಟೆಯು ಹೆಚ್ಚು ಆರೋಗ್ಯಕಾರಿ.

ಬೇಯಿಸಿದ ಬೀಜಗಳು
ಹಸಿ ಅಥವಾ ಬೇಯಿಸಿದ ಬೀಜಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ನಾರಿನಾಂಶ ಇದೆ. 100 ಗ್ರಾಂ ಚೀನೀಕಾಯಿ ಬೀಜದಲ್ಲಿ 6 ಗ್ರಾಂ ಪ್ರೋಟೀನ್ ಇದೆ. ಇದರಿಂದ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಇರುವುದು ಮತ್ತು ಅನಾರೋಗ್ಯಕರ ಆಹಾರ ತಿನ್ನದಂತೆ ಇದು ತಡೆಯುವುದು. ಇದರಿಂದ ಸುಲಭವಾಗಿ ತೂಕ ಕಡಿಮೆ ಮಾಡಬಹುದು.

ಬಹುಧಾನ್ಯ ಬ್ರೆಡ್
ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಕ್ರಮದಲ್ಲಿ ಬಹುಧಾನ್ಯ ಬ್ರೆಡ್ ಸೇರಿಸಿಕೊಳ್ಳಿ. ಬಹುಧಾನ್ಯ ಬ್ರೆಡ್ ಸಂಕೀರ್ಣ ಕಾರ್ಬ್ಸ್‌ನ್ನು ಹೊಂದಿದ್ದು, ಇದು ದೇಹದಲ್ಲಿ ಚಯಾಪಚಯ ಸುಧಾರಣೆ ಮಾಡುವುದು ಮತ್ತು ಅನಾರೋಗ್ಯಕರ ಆಹಾರ ತಿನ್ನದಂತೆ ತಡೆಯುವುದು. ಚೀಸ್ ಅಥವಾ ನೆಲಗಡಲೆ ಬೆಣ್ಣೆ ಹಾಕಿಕೊಂಡು ಇದನ್ನು ತಿನ್ನಬಹುದು. ಇದರ ಹೊರತಾಗಿ ಮೊಟ್ಟೆಯ ಸ್ಯಾಂಡ್ ವಿಚ್ ತಯಾರಿಸಿಕೊಂಡು ತಿನ್ನಬಹುದು.

Comments are closed.