ಆರೋಗ್ಯ

ಚಳಿಗಾಲದಲ್ಲಿ ಕೂದಲು ಕವಲೊಡೆಯುವುದನ್ನು ತಡೆಯಲು ಈ ರೀತಿ ಮಾಡಿ.

Pinterest LinkedIn Tumblr

ಈಗಾಗಲೇ ಚಳಿಗಾಲ ಶುರುವಾಗಿದೆ. ಬೆಳಗ್ಗೆ ಎದ್ದು ಆಫೀಸಿಗೆ ಹೊರಡಬೇಕೆಂದರೆ ಚಳಿಗೆ ಕೈಕಾಲು ಆಡುವುದೇ ಇಲ್ಲ. ಸಂಜೆಯ ವೇಳೆ ಹೊರಗೆ ಸುತ್ತಾಡುವುದು ನಿಂತು ಎಷ್ಟೋ ದಿನಗಳಾಗಿವೆ. ಈ ಸಮಯದಲ್ಲಿ ನಮ್ಮ ಆರೋಗ್ಯ ಮತ್ತು ಸೌಂದರ್ಯಗಳೆರಡಕ್ಕೂ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಪುರುಷರಿರಲಿ, ಮಹಿಳೆಯರೇ ಇರಲಿ… ಕೂದಲು ಸೊಂಪಾಗಿದ್ದರೆ ಅಂದ ದುಪ್ಪಟ್ಟಾಗುತ್ತದೆ.

ಚಳಿಗಾಲದಲ್ಲಿ ಕೂದಲು ಉದುರುವ ಪ್ರಮಾಣ ಬೇರೆ ಸಮಯಕ್ಕಿಂತ ಹೆಚ್ಚು. ಚಳಿಗಾಲದಲ್ಲಿ ಕೂದಲ ಬುಡ ಸಡಿಲವಾಗುವುದರಿಂದ ಮತ್ತು ಚರ್ಮ ಒಣಗುವುದರಿಂದ ಕೂದಲು ಶುಷ್ಕವಾಗುತ್ತದೆ. ಹೀಗಾಗಿ, ಮನೆಯಲ್ಲೇ ನಾವು ಸ್ವಲ್ಪ ಎಚ್ಚರಿಕೆ ವಹಿಸಿದರೆ ಕೂದಲು ಉದುರುವುದನ್ನು ನಿಯಂತ್ರಿಸಬಹುದು.

ಮನೆಯಲ್ಲಿರುವ ವಸ್ತುಗಳಿಂದಲೇ ತಲೆಕೂದಲು ಉದುರುವುದನ್ನು ತಡೆಗಟ್ಟಲು ಸಾಧ್ಯವಿದೆ. ಮನೆಯಲ್ಲೇ ಬಳಸುವ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಬ್ರಾಹ್ಮಿ, ದಾಸವಾಳ, ಸೀಗೆಕಾಯಿ ಹೀಗೆ ಆಯುರ್ವೇದಿಕ್​ ಅಂಶಗಳಿಂದ ತಲೆಕೂದಲು ಉದುರುವುದನ್ನು ತಡೆಗಟ್ಟಬಹುದು. ಹಾಗಾದರೆ, ಕೂದಲು ಉದುರುವಿಕೆ ತಡೆಗಟ್ಟಲು ಇರುವ ಸುಲಭ ಮಾರ್ಗಗಳಾದರೂ ಯಾವುದು? ಇಲ್ಲಿದೆ ಕೆಲ ಮಾಹಿತಿ…

ದೇಹದಲ್ಲಿ ಪಿತ್ತದ ಅಥವಾ ಉಷ್ಣಾಂಶದ ಪ್ರಮಾಣ ಹೆಚ್ಚಾದರೆ ಕೂದಲು ಉದುರುವಿಕೆ ಹೆಚ್ಚುತ್ತದೆ. ಹೀಗಾಗಿ, ದೇಹವನ್ನು ಎಷ್ಟು ತಂಪಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ಆರೋಗ್ಯವೂ ಸಮಸ್ಥಿತಿಯಲ್ಲಿರುತ್ತದೆ. ನಿಮ್ಮ ಆರೋಗ್ಯ ಹಿಡಿತಕ್ಕೆ ಸಿಕ್ಕರೆ ಕೂದಲು ಉದುರುವಿಕೆ ಪ್ರಮಾಣವೂ ಕಡಿಮೆಯಾಗುತ್ತದೆ.

ಉತ್ತಮ ಗುಣಮಟ್ಟದ ತೆಂಗಿನೆಣ್ಣೆಯ ಜೊತೆಗೆ ಭೃಂಗರಾಜ ಎಣ್ಣೆಯೂ ಕೂದಲಿಗೆ ಅತ್ಯುತ್ತಮ ಆಯ್ಕೆ. ಭೃಂಗರಾಜ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯೂ ಹೆಚ್ಚುತ್ತದೆ.
ಮೊಸರು ತಿಂದರೆ ದಪ್ಪ ಆಗುತ್ತೇವೆ ಎಂದು ಬಹಳಷ್ಟು ಯುವತಿಯರು ಮೊಸರನ್ನು ಬಳಸುವುದೇ ಇಲ್ಲ. ಆದರೆ, ಇದೇ ಮೊಸರನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕಂಡೀಷನರಿಂಗ್​ ರೀತಿ ಕೆಲಸ ಮಾಡುತ್ತದೆ. ಹೊಸ ಕೂದಲು ಬೆಳೆಯಲು, ಕೂದಲಿನ ಬುಡದಲ್ಲಿರುವ ಕೊಳೆಯನ್ನು ಕಿತ್ತೊಗೆದು ಕೂದಲ ಉಸಿರಾಟಕ್ಕೆ ಉತ್ತೇಜನ ನೀಡುತ್ತದೆ.

ತಲೆಸ್ನಾನ ಮಾಡುವ 15 ನಿಮಿಷಕ್ಕೂ ಮುನ್ನ ತಲೆಗೆ ಮೊಸರನ್ನು ಹಚ್ಚಿಡಿ. ಕೈ ಬೆರಳಿಂದ ಮೆಲ್ಲಗೆ ಮಸಾಜ್​ ಮಾಡಿ. ನಂತರ ಹೆಚ್ಚು ಸ್ಟ್ರಾಂಗ್​ ಇಲ್ಲದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಅತಿಯಾದ ಬಿಸಿನೀರು ಬಳಸಬೇಡಿ.

ಮೆಂತೆ ಅತ್ಯಂತ ತಂಪಾದ ಅಂಶವನ್ನು ಹೊಂದಿರುವುದರಿಂದ ಕೂದಲಿಗೆ ಉತ್ತಮ ಕಂಡೀಷನರಿಂಗ್​ ಆಗಬಲ್ಲದು. ಇದರಲ್ಲಿ ಪ್ರೋಟೀನ್​ ಮತ್ತು ನಿಕೋಟಿನ್​ ಅಂಶ ಹೆಚ್ಚಾಗಿರುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಮೆಂತ್ಯೆಯನ್ನು ರುಬ್ಬಿ ಅರ್ಧ ಗಂಟೆ ತಲೆಗೆ ಹಚ್ಚಿಕೊಂಡು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಪುರುಷರ ಕೂದಲಿಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಶಾಂಪೂ, ಕಂಡಿಷನರ್ ರೀತಿಯ ಉತ್ಪನ್ನಗಳು ಲಭ್ಯವಿದೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ಬಳಸುವುದು ನಿಮ್ಮ ಕೂದಲ ಆರೈಕೆಗೆ ಉಪಯುಕ್ತ. ನಿಮ್ಮ ಕೂದಲು ಯಾವ ರೀತಿಯದ್ದು ಎಂಬುದನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಿ.

ಬೆಟ್ಟಗಳಲ್ಲಿ ದೊರೆಯುವ ನೆಲ್ಲಿಕಾಯಿ ಕೂಡ ತಲೆಕೂದಲ ಬೆಳವಣಿಗೆಗೆ ಅತ್ಯಂತ ಸಹಾಯ ಮಾಡಬಲ್ಲದು. ವಿಟಮಿನ್​ ಸಿ ಕೊರತೆಯಿಂದ ಕೂದಲು ಉದುರುತ್ತದೆ. ಆದರೆ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ. ಇದರಿಂದ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ. ನೆಲ್ಲಿಕಾಯಿಯೊಂದಿಗೆ ತೆಂಗಿನೆಣ್ಣೆಯನ್ನು ಮಿಕ್ಸ್​ ಮಾಡಿ ಒಲೆಯ ಮೇಲಿಟ್ಟು ಕುದಿಸಿ. ಈ ಎಣ್ಣೆ ತಲೆಯ ಕೂದಲಿಗೆ ಗಾಢ ಕಪ್ಪು ಬಣ್ಣ ನೀಡುವುದರೊಂದಿಗೆ ಸದೃಢವಾಗಿಯೂ ಬೆಳೆಯುತ್ತದೆ.

ತಲೆಗೆ ಸ್ನಾನ ಮಾಡಿದ ಬಳಿಕ ಕೂದಲನ್ನು ಒಣಗಿಸಲು ಹೆಚ್ಚಾಗಿ ಟವೆಲ್‌ನಿಂದ ಉಜ್ಜಬೇಡಿ, ಇದು ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಬೇಗ ಕೂದಲುದುರುತ್ತದೆ. ಹೀಗಾಗಿ ನಿಮ್ಮ ಕೂದಲನ್ನು ಒಂದು ಮೆತ್ತನೆಯ ಬಟ್ಟೆಯಿಂದ ಮೃದುವಾಗಿ ಮಸಾಜ್ ಮಾಡುವ ರೀತಿಯಲ್ಲಿ ಒಣಗಿಸಿ.

ಕೂದಲು ಕವಲೊಡೆಯುವುದನ್ನು ತಡೆಯಲು ನಿಯಮಿತವಾಗಿ ಟ್ರಿಮಿಂಗ್ ಮಾಡಿಸಿ. ಇಲ್ಲದಿದ್ದರೆ ಕೂದಲು ಆರೋಗ್ಯಯುತವಾಗಿ ಬೆಳೆಯುವುದಿಲ್ಲ.

Comments are closed.