ಆರೋಗ್ಯ

ಮಕ್ಕಳು ಬಾಯಿಯಿಂದ ಉಸಿರಾಡಲು ಕಾರಣಗಳು ಮತ್ತು ಇದರ ಅಡ್ಡ ಪರಿಣಾಮಗಳು

Pinterest LinkedIn Tumblr

ಉಸಿರಾಟ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು,ಅದಿರುವವರೆಗೂ ನಾವು ಬದುಕಿರುತ್ತೇವೆ. ಸಹಜವಾಗಿ ನಾವು ಮೂಗಿನಿಂದ ಉಸಿರಾಡುತ್ತೇವೆ,ಆದರೆ ನಮಗೆ ಗೊತ್ತಿಲ್ಲದೆ ಬಾಯಿಯಿಂದಲೂ ಉಸಿರಾಡುತ್ತಿರುತ್ತೇವೆ. ಹೆಚ್ಚಾಗಿ ಮಕ್ಕಳು,ಜೊತೆಗೆ ವಯಸ್ಕರೂ ಸಹ ಬಾಯಿಯಿಂದ ಉಸಿರಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಬಾಯಿಯಿಂದ ಉಸಿರಾಡುವಾಗ ಅದು ಹಾನಿಕಾರಕ ಎಂದು ನಮಗನ್ನಿಸದಿದ್ದರೂ ನಿಜಕ್ಕೂ ಅದು ಆರೋಗ್ಯಕ್ಕೆ ಹಾನಿಕರಕವಾಗಿದೆ.

ಋತುಮಾನ ಬದಲಾದಾಗ ಯಾರೇ ಆದರೂ ಸಾಮಾನ್ಯ ಶೀತದಿಂದ ಬಳಲುವುದು ಸಾಮಾನ್ಯ. ಮೂಗು ಕಟ್ಟಿಕೊಂಡಿರುವುದರಿಂದ ಬಾಯಿಯಿಂದ ಉಸಿರಾಡುತ್ತಾರೆ. ಇದೇನೂ ಚಿಂತೆಯ ವಿಷಯವಲ್ಲ. ಆದರೆ ಕೆಲವರು ಬಾಯಿಯಿಂದಲೇ ಉಸಿರಾಡುತ್ತಿರುತ್ತಾರೆ ಮತ್ತು ದೀರ್ಘಕಾಲದಿಂದಲೂ ಈ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇದು ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ ಮತ್ತು ತಕ್ಷಣವೇ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ಮೂಗಿನಿಂದ ಉಸಿರಾಡುವ ಬದಲು ಬಾಯಿಯಿಂದ ಉಸಿರಾಡಲು ಕಾರಣಗಳು ಮತ್ತು ಅಡ್ಡ ಪರಿಣಾಮಗಳು

ಅಡೆನಾಯ್ಡ್ ಮತ್ತು ಟಾನ್ಸಿಲ್‌ಗಳ ಹಿಗ್ಗುವಿಕೆ,ನಾಸಿಕ ದ್ವಾರದಲ್ಲಿ ತಡೆ,ಬಾಯಿಯ ಅಂಗಳದಲ್ಲಿ ಸೀಳು ಅಥವಾ ಪಿಯರೆ ರಾಬಿನ್ ಸಿಂಡ್ರೋಮ್‌ನಂತಹ ಜನ್ಮದತ್ತ ದೋಷಗಳು ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಬಾಯಿಯ ಮೂಲಕ ಉಸಿರಾಟಕ್ಕೆ ಮುಖ್ಯ ಕಾರಣಗಳಾಗಿವೆ.

ವಯಸ್ಕರಲ್ಲಿ ಈ ಸಮಸ್ಯೆಗೆ ಕಾರಣಗಳು ಭಿನ್ನವಾಗಿರುತ್ತವೆ. ವಕ್ರಗೊಂಡ ಮೂಗಿನ ಹೊಳ್ಳೆಗಳು,ಸೋಂಕಿನಿಂದ ಮೂಗು ಕಟ್ಟಿರುವುದು,ಅಲರ್ಜಿ ಇತ್ಯಾದಿಗಳು ಈ ಕಾರಣಗಳಲ್ಲಿ ಸೇರಿವೆ. ಬಾಯಿಯಲ್ಲಿ ಉತ್ಪಾದನೆಯಾಗುವ ಲಾಲಾರಸವು ಅದನ್ನು ಕೆಟ್ಟ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಿಸುತ್ತದೆ. ಆದರೆ ನಿರಂತರವಾಗಿ ಬಾಯಿಯಿಂದ ಉಸಿರಾಡುವುದರಿಂದ ಲಾಲಾರಸವು ಒಣಗುತ್ತದೆ. ಇದು ದುರ್ವಾಸನೆ,ದಂತಕುಳಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಬಾಯಿಯಿಂದ ಉಸಿರಾಟ ಸುದೀರ್ಘ ಕಾಲ ಮುಂದುವರಿದರೆ ಅದು ಮುಖ ಮತ್ತು ಹಲ್ಲುಗಳ ಅಸಹಜ ಬೆಳವಣಿಗೆಗೆ ಕಾರಣವಾಗಬಹುದು. ಸಂಕುಚಿತವಾದ ಮತ್ತು ಉದ್ದವಾದ ಮುಖದಂತಹ ವಿರೂಪಗಳು,ವಸಡಿನ ಉರಿಯೂತ,ಹಲ್ಲುಗಳು ಹುಳುಕಾಗುವದು,ವಕ್ರಗೊಳ್ಳುವುದು ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಅಲ್ಲದೆ ಬಾಯಿಯಿಂದ ಉಸಿರಾಟವು ನಿದ್ರೆಯ ಕೊರತೆಯನ್ನುಂಟು ಮಾಡುತ್ತದೆ ಮತ್ತು ಇದು ಬೆಳವಣಿಗೆ ಹಾಗೂ ಶೈಕ್ಷಣಿಕ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿ ಆಮ್ಲಜನಕದ ಕೊರತೆ,ಅಧಿಕ ರಕ್ತದೊತ್ತಡ,ಹೃದಯ ಸಮಸ್ಯೆಗಳು,ಸ್ಲೀಪ್ ಆಪ್ನಿಯಾ ಅಥವಾ ನಿದ್ರೆಯಲ್ಲಿ ಅಲ್ಪಕಾಲ ಉಸಿರು ನಿಲ್ಲುವಿಕೆ ಇತ್ಯಾದಿಗಳೂ ಮಕ್ಕಳು ಬಾಯಿಯಿಂದ ಉಸಿರಾಡಲು ಕಾರಣವಾಗುತ್ತವೆ.

ಕೇವಲ ಬಾಯಿಯಿಂದ ಉಸಿರಾಡುವ ಮಕ್ಕಳಿಗೆ ನಿದ್ರೆಯಲ್ಲಿ ವ್ಯತ್ಯಯಗಳಿಂದಾಗಿ ಹೆಚ್ಚಿನ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಇದು ಅವರ ಕಲಿಯುವಿಕೆಯ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಬಾಯಿಯಿಂದ ಉಸಿರಾಟ ಹಾಗೂ ಅಧಿಕ ರಕ್ತದೊತ್ತಡ,ಹೃದ್ರೋಗ,ಅಸ್ತಮಾ ಇತ್ಯಾದಿಗಳ ನಡುವೆ ಸಂಬಂಧವಿದೆ ಎನ್ನುವುದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ.

ನಾವು ಬಾಯಿಯಿಂದ ಉಸಿರಾಡಿದಾಗ ಏನಾಗುತ್ತದೆ?
ಬಾಯಿಯಿಂದ ಉಸಿರಾಟವು ಕಾರ್ಬನ್ ಡೈಯಾಕ್ಸೈಡ್ ಮಟ್ಟದ ಕುಸಿತ, ಕಡಿಮೆ ರಕ್ತ ಪರಿಚಲನೆ, ಮಿದುಳಿನ ನಿಧಾನವಾದ ಚಲನವಲನ ಮತ್ತು ಪ್ರತಿವರ್ತನಗಳಿಗೆ ಕಾರಣವಾಗುತ್ತದೆ. ಸ್ಥಿತಿ ತೀರ ಹದಗೆಟ್ಟರೆ ಇವೆಲ್ಲವೂ ಸೇರಿಕೊಂಡು ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಗೆ ಕಾರಣವಾಗುತ್ತವೆ. ಬಾಯಿಯಿಂದ ಉಸಿರಾಡುವವರ ಶ್ವಾಸಕೋಶಗಳು ಆಮ್ಲಜನಕದಿಂದ ಅತಿಯಾಗಿ ಪ್ರಚೋದಿತಗೊಂಡಿರುತ್ತವೆ ಮತ್ತು ಶ್ವಾಸನಾಳಗಳು ತೇವಾಂಶವನ್ನು ಕಳೆದುಕೊಂಡಿರುತ್ತವೆ. ಇದರಿಂದಾಗಿ ಶ್ವಾಸಕೋಶಗಳಲ್ಲಿರುವ ಗಾಳಿಯ ಚೀಲಗಳು ಸಾಕಷ್ಟು ಆಮ್ಲಜನಕವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಾಯಿ ಮೂಲಕ ಉಸಿರಾಟದಿಂದ ಮಿದುಳು,ಹೃದಯ ಇತ್ಯಾದಿಗಳು ಸೇರಿದಂತೆ ಶರೀರದ ಎಲ್ಲ ಅಗತ್ಯ ಅಂಗಾಂಗಗಳ ಕಾರ್ಯಕ್ಷಮತೆಯು ಕುಸಿಯುತ್ತದೆ. ಇಂತಹ ಸಂದರ್ಭಗಳಲ್ಲಿ ಹೃದ್ರೋಗಗಳ ಯಾವುದೇ ಲಕ್ಷಣವಿಲ್ಲದವರೂ ಅನಿಯಮಿತ ಹೃದಯ ಬಡಿತ ಮತ್ತು ಇತರ ಹೃದಯ ಸಮಸ್ಯೆಗಳಿಗೆ ಸುಲಭವಾಗಿ ಗುರಿಯಾಗಬಹುದು.

Comments are closed.