ಆರೋಗ್ಯ

ಸಕ್ಕರೆಯ ಬದಲು ಈ ನೈಸರ್ಗಿಕ ಸಿಹಿಯನ್ನ ಬಳಸಿ ಆರೋಗ್ಯವನ್ನ ಉತ್ತಮವಾಗಿಸಿ…

Pinterest LinkedIn Tumblr

ಆರೋಗ್ಯವೇ ಸಂಪತ್ತು. ಉತ್ತಮ ಆರೊಗ್ಯವೇ ನಮ್ಮ ಅತ್ಯಮೂಲ್ಯ ಆಸ್ತಿ. ಆದರೆ ಇಂದಿನ ಅವಸರದ ಯುಗದಲ್ಲಿ ನಾವು ಫಾಸ್ಟ್ ಫುಡ್, ಸಂಸ್ಕರಿತ ಆಹಾರ ಇತ್ಯಾದಿಗಳಿಗೆ ಮೊರೆ ಹೋಗುವುದೇ ಹೆಚ್ಚು ಮತ್ತು ನಮ್ಮ ಧಾವಂತದಲ್ಲಿ ಪ್ಯಾಕ್ ಮಾಡಲಾದ ದಿಢೀರ್ ಆಹಾರಗಳ ಸೇವನೆಯಿಂದ ಉಂಟಾಗಬಹುದಾದ ಹಾನಿಯನ್ನು ಪೂರ್ಣವಾಗಿ ಕಡೆಗಣಿಸುತ್ತಿದ್ದೇವೆ. ಅಧಿಕ ಪ್ರಮಾಣದ ಸಕ್ಕರೆ,ಸಂರಕ್ಷಕಗಳು ಮತ್ತು ಇತರ ಅನಾರೋಗ್ಯಕಾರಿ ಅಂಶಗಳಿಂದ ಕೂಡಿರುವ ಇಂತಹ ಆಹಾರಗಳು ಆರೋಗ್ಯಕ್ಕೆ ಬೆದರಿಕೆ ಎಂದೇ ಹೇಳಬಹುದು. ಇಂತಹ ಆಹಾರಗಳ ಆಕರ್ಷಣೆಯ ಸುಳಿಯಲ್ಲಿ ಸಿಲುಕುವ ಮೊದಲೇ ಅವು ನಿಮ್ಮ ಶರೀರದಲ್ಲಿ ಉಂಟು ಮಾಡುವ ರೋಗಗಳ ಬಗ್ಗೆ ನಿಮಗೆ ನೆನಪಿರಲಿ.

ಇತರ ಯಾವುದೇ ವಸ್ತುವಿಗಿಂತ ಮೊದಲು ನೀವು ಗಮನ ಕೊಡಬೇಕಾದ್ದು ಸಕ್ಕರೆಯ ಬಗ್ಗೆ. ಸಕ್ಕರೆ ನಮ್ಮ ಆಹಾರದಲ್ಲಿರಲೇ ಬೇಕು,ಆದರೆ ದಿನವೂ ಅತಿಯಾಗಿ ಸೇವಿಸುತ್ತಿದ್ದರೆ ನಮ್ಮ ಆರೋಗ್ಯಕ್ಕೆ ಅದರಷ್ಟು ಅಪಾಯಕಾರಿಯಾದುದು ಇನ್ನೊಂದಿಲ್ಲ. ಹಾಗಾದರೆ ನಮ್ಮ ಆಹಾರದಿಂದ ಸಿಹಿಯನ್ನು ವರ್ಜಿಸಬೇಕೇ? ಇಲ್ಲ,ಆದರೆ ಅದಕ್ಕೆ ಪರ್ಯಾಯವನ್ನು ಬಳಸಬಹುದು. ಹೌದು,ನೀವು ಸರಿಯಾಗಿಯೇ ಓದಿದ್ದೀರಿ. ಸಕ್ಕರೆಗೆ ಪರಿಪೂರ್ಣ ಪರ್ಯಾಯವಿದೆ. ಖರ್ಜೂರ ಸಕ್ಕರೆ, ತೆಂಗಿನ ಸಕ್ಕರೆ, ಸ್ಟೀವಿಯಾ, ಬೆಲ್ಲ ಇತ್ಯಾದಿಗಳು ಸಕ್ಕರೆಯ ಬದಲಾಗಿ ಬಳಸಬಹುದಾದ ನೈಸರ್ಗಿಕ ಸಿಹಿಗಳಾಗಿವೆ. ನಿಮ್ಮ ಆಹಾರದಲ್ಲಿ ಸಿಹಿಯನ್ನು ಸೇರಿಸಿಕೊಳ್ಳಲು ಉತ್ತಮ ವಿಧಾನವೆಂದರೆ ಸಕ್ಕರೆಯ ಬದಲು ಖರ್ಜೂರವನ್ನು ಬಳಸುವುದು. ಖರ್ಜೂರವು ನೈಸರ್ಗಿಕ ಫ್ರುಕ್ಟೋಸ್‌ನ ಸಮೃದ್ಧ ಮೂಲವಾಗಿದೆ. ನಿಸರ್ಗದತ್ತ ಹಣ್ಣುಗಳಲ್ಲಿರುವ ಫ್ರುಕ್ಟೋಸ್ ಯಾವುದೇ ರೀತಿಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ಇಲ್ಲಿವೆ ಖರ್ಜೂರದ ಅದ್ಭುತ ಆರೋಗ್ಯ ಲಾಭಗಳ ಕುರಿತು ಮಾಹಿತಿ…..

ಗ್ರಹಣ ಶಕ್ತಿಯನ್ನು ಉತ್ತಮಗೊಳಿಸುತ್ತದೆ
ಖರ್ಜೂರವು ಮಿದುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮಿದುಳಿನ ಕೋಶಗಳಿಗೆ ಅಕಾಲಿಕ ಹಾನಿಯನ್ನು ತಡೆಗಟ್ಟುತ್ತದೆ. ನೀವು ಸಕ್ಕರೆಯ ಬದಲಾಗಿ ಖರ್ಜೂರವನ್ನು ಬಳಸಲು ಆರಂಭಿಸಿದ ಮೇಲೆ ಉತ್ತಮ ಗ್ರಹಣ ಶಕ್ತಿ,ಚುರುಕಾದ ನೆನಪು,ಕಡಿಮೆ ದಣಿವು,ಕ್ರಿಯಾಶೀಲ ಮನಸ್ಸು ಮತ್ತು ಇತರ ಹಲವಾರು ಲಾಭಗಳು ನಿಮ್ಮ ಅನುಭವಕ್ಕೆ ಬರಬಹುದು.

ಜೀರ್ಣಶಕ್ತಿಯಲ್ಲಿ ಸುಧಾರಣೆ
ಖರ್ಜೂರದ ಸಕ್ಕರೆಯು ನಿಮ್ಮ ಹೊಟ್ಟೆಗೂ ಒಳ್ಳೆಯದು ಗೊತ್ತೇ? ಅದು ಸಮೃದ್ಧ ಪ್ರಮಾಣದಲ್ಲಿ ನಾರನ್ನು ಒಳಗೊಂಡಿರುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತಮಗೊಳಿಸುವ ಮೂಲಕ ಜಠರವನ್ನು ಆರೋಗ್ಯಯುತವಾಗಿರಿಸುತ್ತದೆ ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ. ನಮ್ಮ ಹೊಟ್ಟೆಯ ಭಾಗವು ಆರೋಗ್ಯಯುತವಾಗಿದ್ದರೆ ನಮ್ಮ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆಯಾದಂತೆಯೇ.

ರೋಗಗಳ ವಿರುದ್ಧ ಹೋರಾಡುತ್ತದೆ
ಖರ್ಜೂರವು ಸಮೃದ್ಧ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ನಮ್ಮ ಶರೀರದ ಕೋಶಗಳ ಪಾಲಿಗೆ ಮಹತ್ವದ್ದಾಗಿರುವ ಉತ್ಕರ್ಷಣ ನಿರೋಧಕಗಳು ಅವು ಫ್ರೀ ರ್ಯಾಡಿಕಲ್‌ಗಳಿಂದ ಹಾನಿಗೀಡಾಗುವುದನ್ನು ತಡೆಯುತ್ತವೆ. ಫ್ಲಾವನಾಯ್ಡ್ ಗಳು,ಕ್ಯಾರೊಟಿನಾಯ್ಡ್ ಗಳು ಮತ್ತು ಫಿನಾಲಿಕ್ ಆಯಸಿಡ್ ಇವು ಖರ್ಜೂರದಲ್ಲಿರುವ ಮೂರು ಮುಖ್ಯ ಉತ್ಕರ್ಷಣ ನಿರೋಧಕಗಳಾಗಿವೆ. ಈ ಎಲ್ಲ ಉತ್ಕರ್ಷಣ ನಿರೋಧಕಗಳು ದೀರ್ಘಕಾಲಿಕ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ನಮ್ಮ ಶರೀರವನ್ನು ಆರೋಗ್ಯಯುತ ಮತ್ತು ಕ್ರಿಯಾಶೀಲವನ್ನಾಗಿರಿಸುತ್ತವೆ. ಅಲ್ಲದೆ ಉತ್ಕರ್ಷಣ ನಿರೋಧಕವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ ಮತ್ತು ಮೊದಲಿಗಿಂತ ಹೆಚ್ಚಿನ ತಾರುಣ್ಯವನ್ನುಂಟು ಮಾಡುತ್ತದೆ.

ರಕ್ತದಲ್ಲಿಯ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸುತ್ತದೆ
ಖರ್ಜೂರವು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಣ ದಲ್ಲಿರಿಸಲು ನೆರವಾಗುತ್ತದೆ. ಹೀಗಾಗಿ ಮಧುಮೇಹಿಗಳು ತಾವು ಸಿಹಿಯನ್ನು ಸೇವಿಸುವುಂತಿಲ್ಲ ಎಂದು ನಿರಾಶರಾ ಗಬೇಕಿಲ್ಲ,ಹಾಯಾಗಿ ಖರ್ಜೂರವನ್ನು ಸೇವಿಸಬಹುದು ಮತ್ತು ಮೊದಲಿಗಿಂತ ಹೆಚ್ಚು ಉಲ್ಲಸಿತರಾಗಿರಬಹುದು.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಖರ್ಜೂರವು ವಿವಿಧ ವಿಟಾಮಿನ್‌ಗಳು ಹಾಗೂ ಕ್ಯಾಲ್ಸಿಯಂ,ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಮ್‌ನಂತಹ ಖನಿಜಗಳನ್ನು ಒಳಗೊಂಡಿದ್ದು,ಇವು ನಮ್ಮ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಖರ್ಜೂರ ಸೇವನೆಯಿಂದ ಅಸ್ಥಿರಂಧ್ರತೆ ಉಂಟಾಗುವುದನ್ನು ತಡೆಯಬಹುದು.

ಹೀಗಾಗಿ ಮುಂದಿನ ಸಲ ಸಿಹಿಖಾದ್ಯ ತಯಾರಿಕೆಯಲ್ಲಿ ಸಕ್ಕರೆಯ ಬದಲು ಖರ್ಜೂರ ಬಳಕೆಯಾಗುವಂತೆ ನೋಡಿಕೊಳ್ಳಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕ ಸಿಹಿಯನ್ನು ಸವಿಯಿರಿ.

Comments are closed.