ಕರಾವಳಿ

ವಿವಿಧ ಬೇಡಿಕೆಗಳಿಗೆ ಆಗ್ರಹ : ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ 2,000ಕ್ಕೂ ಅಧಿಕ ಶಿಕ್ಷಕರು

Pinterest LinkedIn Tumblr

ಮಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶಿಕ್ಷಕರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ  ಕೇಂದ್ರ ಮೈದಾನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ದ.ಕ. ಜಿಲ್ಲೆಯ ಸುಮಾರು 2,000ಕ್ಕೂ ಅಧಿಕ ಪ್ರಾಥಮಿಕ ಶಿಕ್ಷಕರು ಸಾಮೂಹಿಕ ಸಾಂದರ್ಭಿಕ ರಜೆ ಮಾಡಿ ಪಾಲ್ಗೊಂಡರು.

ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ನೆಹರೂ ಮೈದಾನದಲ್ಲಿ ಶಿಕ್ಷಕರು ಸಮಾವೇಶಗೊಳ್ಳುವ ಸಂದರ್ಭ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಶಿಕ್ಷಕರು ಕೊಡೆಯೊಂದಿಗೆ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಅವರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭಡ್ತಿ, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದು, ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿದರು. ಶಿಕ್ಷಕರು ತಮ್ಮ ಬೇಡಿಕೆಗಾಗಿ ತಡವಾಗಿ ಬೀದಿಗಿಳಿದಿದ್ದಾರೆ. ಸರಕಾರ ಬೇಡಿಕೆಯನ್ನು ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡದಿದ್ದರೆ, ಶಿಕ್ಷಕರ ದಿನಾಚರಣೆಯನ್ನ ಬಹಿಷ್ಕರಿಸಿ, ವಿಧಾನ ಸೌಧ ಚಲೋ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಶಿಕ್ಷಕರನ್ನು ರಸ್ತೆಗಿಳಿಸುವ ಮೂಲಕ ಸರಕಾರ ಹಾಗೂ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಸೆಪ್ಟಂಬರ್ 5ರಂದು ಶಿಕ್ಷಕರ ದಿನವನ್ನು ಬಹಿಷ್ಕರಿಸಿ ವಿಧಾನಸೌಧ ಚಲೋವನ್ನು ನಡೆಸಲಾಗುವುದು ಎಂದು ಹೈಸ್ಕೂಲ್ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟಾನಿ ತಾವ್ರೊ ಎಚ್ಚರಿಕೆ ನೀಡಿದರು.

ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ಮಂಜನಾಡಿ ಮಾತನಾಡಿ, ಬೇಡಿಕೆ ಈಡೇರದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಶಕ್ತಿ ಶಿಕ್ಷಕರಿಗಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ನಿವೃತ್ತ ಶಿಕ್ಷಕ ರಮೇಶ್ ನಾಯಕ್ ರಾಯ್, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ವಿವಿಧ ತಾಲೂಕು ವಿಭಾಗಗಳ ನಾಯಕರಾದ ಜಗದೀಶ್ ಶೆಟ್ಟಿ, ಚಂಚಲಾಕ್ಷಿ, ನಾಗೇಶ್, ಪ್ರಭಾಕರ, ಶ್ರೀಧರ ಗೌಡ, ಸುರೇಶ್, ಮಾವಚ್ಚನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Comments are closed.