ಆರೋಗ್ಯ

ನಲವತ್ತು ವರ್ಷ ಮೇಲ್ಪಟ್ಟ ಪುರುಷ ,ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಾಣುವ ಈ ನೋವಿಗೆ ಗ್ರೀನ್ ಜ್ಯೂಸ್ ಥೆರಪಿ.

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಮಂಡಿನೋವು ಬಹಳ ಸಾಮಾನ್ಯ. ಅದರಲ್ಲಿ ನಲವತ್ತು ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಪರಿಹಾರೋಪಾಯಗಳಲ್ಲಿ ಗ್ರೀನ್ ಜ್ಯೂಸ್ ಥೆರಪಿ ಹೆಚ್ಚು ಪರಿಣಾಮವನ್ನು ಬೀರಬಲ್ಲದು.

ಕಾಡಿನಲ್ಲಿ ವಾಸಿಸುವಂತಹ ಕಾಡೆಮ್ಮೆ ಹಾಗೂ ಕಾಡುಕೋಣಗಳು ಕೇವಲ ಹುಲ್ಲನ್ನು ಸೇವಿಸಿ ವಾಸಿಸುವಂತಹ ಪ್ರಾಣಿಗಳು. ಎಷ್ಟು ಎತ್ತರದಿಂದ ಎಷ್ಟು ದೂರ ಜಿಗಿದರೂ ಅವುಗಳ ಕಾಲುಗಳಿಗೆ ಏನೂ ಹಾನಿಯಾಗುವುದಿಲ್ಲ. ಅವುಗಳ ದೇಹದಾಕೃತಿ ದೊಡ್ಡದಾಗಿರುತ್ತದೆ; ತೂಕವೂ ಹೆಚ್ಚಿರುತ್ತದೆ. ಆದರೂ ಅವುಗಳ ಭಾರವನ್ನು ಹೊತ್ತು ದೂರ ಜಿಗಿಯುವ ಕಾಲುಗಳು ಸಮರ್ಥವಾದವು. ಅವುಗಳಿಗೆ ಇಂಥ ಸಾಮರ್ಥ್ಯ ಕೇವಲ ಆಹಾರದಿಂದಲೇ ಪೂರೈಕೆಯಾಗುತ್ತದೆ.

ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಹಸಿರು ಹುಲ್ಲು ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯ ನಿರ್ವಹಣೆಗೆ ಹೆಚ್ಚು ಅನುಕೂಲಕಾರಿ ಎಂಬುದು ದೃಢವಾಗುತ್ತದೆ. ಈ ತತ್ತ್ವವನ್ನು ಬಳಸಿ ರೂಪಿಸಲಾದ ಚಿಕಿತ್ಸಾಪದ್ಧತಿ ಗ್ರೀನ್ ಜ್ಯೂಸ್ ಥೆರಪಿ. ಸೇವಿಸಲು ಯೋಗ್ಯವಾದ ಯಾವುದೇ ರೀತಿಯ ಒಂದು ಹಿಡಿ ಹಸಿರು ಸೊಪ್ಪನ್ನು (ಕರಿಬೇವು, ನುಗ್ಗೆ, ಕೊತ್ತಂಬರಿ, ಮೆಂತ್ಯ, ಗರಿಕೆ, ಪಾಲಕ್, ಪುದಿನ ಇತ್ಯಾದಿ ಸೊಪ್ಪುಗಳು) ತೆಗೆದುಕೊಂಡು ಅದಕ್ಕೆ ಒಂದು ಚಮಚ ಬೆಲ್ಲ, ಒಂದು ಚಮಚ ತಾಜಾ ಅಗಸೆಬೀಜದ ಪುಡಿ ಹಾಕಿ ನೀರು ಸೇರಿಸಿ ರುಬ್ಬಿ ಜ್ಯೂಸ್ ಮಾಡಬೇಕು.

ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಸೇವಿಸಬೇಕು. ಈ ರೀತಿ ಮಾಡಿದಲ್ಲಿ ಮಂಡಿನೋವು ನಿವಾರಣೆಯಾಗುತ್ತದೆ. (ಅಗಸೆಬೀಜವನ್ನು ತಾಜಾ ಆಗಿ ಪುಡಿ ಮಾಡಿಕೊಳ್ಳಬೇಕು. ಒಂದು ಸಲ ಮಾಡಿದ ಪುಡಿಯನ್ನು ಒಂದು ವಾರಕ್ಕಿಂತ ಹೆಚ್ಚು ಇರಿಸಿಕೊಳ್ಳಬಾರದು. ಒಂದು ವಾರದ ಬಳಿಕ ಅದರಲ್ಲಿನ ಔಷಧೀಯ ಗುಣ ನಷ್ಟವಾಗುತ್ತದೆ.)

ಇದರಲ್ಲಿ ಬಳಸಲಾದ ಬೆಲ್ಲವು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿದೆ. ಜೊತೆಯಲ್ಲಿ ಮೆಗ್ನೇಷಿಯಂ, ಪೊಟ್ಯಾಷಿಯಂ ಹಾಗೂ ಮ್ಯಾಂಗನೀಸ್ ಇದ್ದು ದೇಹಕ್ಕೆ ಬಹಳ ಒಳ್ಳೆಯದು. ಅಲ್ಲದೆ ಅಗಸೆಬೀಜವು ಒಮೆಗಾ-3ಯ ಒಂದು ಅಂಶವನ್ನು ಹೊಂದಿರುತ್ತದೆ. ಇದು ಉರಿಯೂತವನ್ನು (ಇನ್​ಫ್ಲಮೇಶನ್) ಕಡಿಮೆ ಮಾಡಲು ಸಹಕಾರಿ. ಮುಖ್ಯ ಪದಾರ್ಥವಾಗಿ ಹಸಿರು ಸೊಪ್ಪನ್ನು ಉಪಯೋಗಿಸುತ್ತಿದ್ದೇವೆ. ಇದು ಇಡೀ ದಿನ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುವಂತೆ ನೋಡಿಕೊಳ್ಳುತ್ತದೆ. ಶಕ್ತಿಯುತವಾಗಿರುವಂತೆ ಕಾಯ್ದುಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿದೆ.

ಚರ್ಮಕ್ಕೆ ಬೇಗ ವಯಸ್ಸಾಗದಂತೆ ನೋಡಿಕೊಳ್ಳುವುದರ ಜೊತೆ ದೇಹವನ್ನು ಆಂತರಿಕ ಶುದ್ಧವಾಗಿರಿಸಲು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕರುಳಿನ ಆರೋಗ್ಯಕ್ಕೆ ಸಹಕಾರಿ. ಅನೇಕ ಖನಿಜಪದಾರ್ಥಗಳು ಹಾಗೂ ವಿಟಮಿನ್​ಗಳಿಂದ ಕೂಡಿದ ಇದು ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒದಗಿಸಿ ಸಮಸ್ಯೆಯನ್ನು ನಿವಾರಿಸುತ್ತದೆ. ಯಾವುದೇ ಅಂಗಗಳಲ್ಲಿ ನೋವಿದ್ದರೂ ಈ ಚಿಕಿತ್ಸೆ ಮಾಡಬಹುದು. ನೋವುನಿವಾರಕ ಮಾತ್ರೆಗಳು ನೀಡಿದಂತೆ ಒಮ್ಮೆಲೇ ಸಮಸ್ಯೆ ಕಡಿಮೆ ಆಗದಿದ್ದರೂ ಸಮಸ್ಯೆಯನ್ನು ಸಮೂಲವಾಗಿ ನಿವಾರಿಸಬಲ್ಲದು.

Comments are closed.