ಆರೋಗ್ಯ

ಈ ಎರಡು ಮೊಟ್ಟೆಯಲ್ಲಿ ಯಾವುದು ಹೆಚ್ಚು ಆರೋಗ್ಯಕರ?

Pinterest LinkedIn Tumblr

ಕಂದು ಮೊಟ್ಟೆ ಅಥವಾ ಊರುಕೋಳಿಗಳು ನೀಡುವ ಮೊಟ್ಟೆ ಮತ್ತು ಪೌಲ್ಟ್ರಿಯಲ್ಲಿ ಸಿಗುವ ಬಿಳಿಯ ಮೊಟ್ಟೆಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ? ಈ ಪ್ರಶ್ನೆಗೆ,ಊರುಕೋಳಿಗಳ ಮೊಟ್ಟೆಯೇ ಹೆಚ್ಚು ಆರೋಗ್ಯಕರ ಎನ್ನ್ನುವುದು ಸಾಮಾನ್ಯವಾಗಿ ಹೆಚ್ಚಿನವರು ನೀಡುವ ಉತ್ತರ. ಆದರೆ ಇದು ನಿಜವೇ? ನಿಜವಾಗಿದ್ದರೆ ಕಂದು ಮೊಟ್ಟೆಗಳು ಬಿಳಿಯ ಮೊಟ್ಟೆಗಳಿಗೆ ಹೋಲಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರಲು ಕಾರಣವೇನು? ನಿಜವಲ್ಲದಿದ್ದರೆ ಬಿಳಿಯ ಮೊಟ್ಟೆಗಳ ಬದಲು ಕಂದು ಮೊಟ್ಟೆಗಳನ್ನೇ ಸೇವಿಸಬೇಕೇ? ಮೊಟ್ಟೆಗಳ ಹೊರಗಿನ ಬಣ್ಣದ ವಿಷಯ ಬಿಡಿ,ಯಾವುದು ಹೆಚ್ಚು ಆರೋಗ್ಯಕರ ಎನ್ನುವುದನ್ನು ನಿರ್ಧರಿಸಲು ಇತರ ಮಾನದಂಡಗಳಿವೆ. ಅವುಗಳ ಕುರಿತು ತಿಳಿದುಕೊಳ್ಳೋಣ ಬನ್ನಿ…..

ಮೊಟ್ಟೆಗಳ ಬಣ್ಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದು ವಂಶವಾಹಿಯಿಂದ ನಿರ್ಧರಿಸಲ್ಪಡುತ್ತದೆ. ಆದರೆ ಹೇಂಟೆಗಳು ವಾಸವಿರುವ ಪರಿಸರ,ಸೇವಿಸುವ ಆಹಾರ ಮತ್ತು ಅವುಗಳಲ್ಲಿಯ ಒತ್ತಡದ ಮಟ್ಟದಂತಹ ಇತರ ಅಂಶಗಳೂ ಇವೆ. ಇವು ಮೊಟ್ಟೆಯ ಕವಚದ ಬಣ್ಣವನ್ನು ವಸ್ತುಶಃ ಬದಲಿಸುವುದಿಲ್ಲ,ಆದರೆ ಬಣ್ಣಕ್ಕೆ ಲಘು ಅಥವಾ ಗಾಢ ಛಾಯೆಯನ್ನು ನೀಡಬಲ್ಲವು. ಮೊಟ್ಟೆಯ ಬಣ್ಣವು ಯಾವುದೇ ರೀತಿಯಲ್ಲಿಯೂ ಮೊಟ್ಟೆಯು ಎಷ್ಟು ಆರೋಗ್ಯಕರವಾಗಿದೆ ಅಥವಾ ಎಷ್ಟು ರುಚಿಕರವಾಗಿದೆ ಎನ್ನುವುದನ್ನು ಸೂಚಿಸುವುದಿಲ್ಲ..

ಬಿಳಿಯ ಮೊಟ್ಟೆಗಳಿಗೆ ಹೋಲಿಸಿದರೆ ಕಂದು ಮೊಟ್ಟೆಗಳು ಅಥವಾ ಊರುಮೊಟ್ಟೆಗಳು ಹೆಚ್ಚು ನೈಸರ್ಗಿಕವಾಗಿವೆ ಎಂಬ ನಂಬಿಕೆಯಿಂದಾಗಿ ಹೆಚ್ಚಿನ ಜನರು ಬಿಳಿಯ ಮೊಟ್ಟೆಗಿಂತ ಕಂದು ಮೊಟ್ಟೆಗೇ ಮೊದಲ ಆದ್ಯತೆ ನೀಡುತ್ತಾರೆ. ಊರುಮೊಟ್ಟೆಗಳು ಹಳ್ಳಿಗಳಲ್ಲಿ ಮಾತ್ರ ದೊರೆಯುತ್ತವೆ ಎಂದೇನಿಲ್ಲ. ಅವು ನಗರಗಳಲ್ಲಿಯೂ ದೊರೆಯುತ್ತವೆ,ಬೆಲೆ ಮಾತ್ರ ದುಬಾರಿಯಾಗಿರುತ್ತದೆ. ಬಿಳಿಯ ಮೊಟ್ಟೆಗಳಿಗೆ ಹೋಲಿಸಿದರೆ ಕಂದು ಮೊಟ್ಟೆಗಳು ಹೆಚ್ಚು ಆರೋಗ್ಯಕರ ಮತ್ತು ಸಮೃದ್ಧ ಪೋಷಕಾಂಶಗಳನ್ನು ಹೊಂದಿವೆ ಎಂಬ ನಂಬಿಕೆ ಇದೆ,ಆದರೆ ಇದು ನಿಜವಲ್ಲ.

ಗಾತ್ರ ಮತ್ತು ಬಣ್ಣ ಏನೇ ಆಗಿದ್ದರೂ ಎಲ್ಲ ಮೊಟ್ಟೆಗಳು ಸಮಾನ ಪೌಷ್ಟಿಕವಾಗಿವೆ ಎಂದು ಜರ್ನಲ್ ಪೌಲ್ಟ್ರಿ ಸೈನ್ಸ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ಹೇಳಿದೆ. ಎಲ್ಲ ಕೋಳಿಗಳ ಮೊಟ್ಟೆಗಳು ವಿಟಾಮಿನ್‌ಗಳು, ಖನಿಜಗಳು ಮತ್ತು ಪ್ರೋಟಿನ್‌ಗಳನ್ನು ಸಮಾನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ ಹಾಗೂ ಒಂದೇ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಒದಗಿಸುತ್ತವೆ.

ಹಲವಾರು ಅಧ್ಯಯನಗಳಂತೆ ಪರಿಸರ ಮತ್ತು ಕೋಳಿಗಳು ಸೇವಿಸುವ ಆಹಾರ ಮೊಟ್ಟೆಗಳ ಪೌಷ್ಟಿಕತೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಸಾಂಪ್ರದಾಯಿಕವಾಗಿ ಬೆಳೆಸಲಾದ ಮತ್ತು ಆರೋಗ್ಯಕರ ಆಹಾರದಿಂದ ವಂಚಿತ ಕೋಳಿಗಳಿಗೆ ಹೋಲಿಸಿದರೆ ಸೂರ್ಯನ ಬಿಸಿಲಿಗೆ ಒಡ್ಡಿಕೊಂಡಿರುವ ಮತ್ತು ಒಮೆಗಾ-3 ಫ್ಯಾಟಿ ಆಯಸಿಡ್‌ಗಳನ್ನು ಆಹಾರವಾಗಿ ನೀಡಲಾಗಿರುವ ಕೋಳಿಗಳ ಮೊಟ್ಟೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಡಿ ಮತ್ತು ಒಮೆಗಾ-3 ಫ್ಯಾಟಿ ಆಯಸಿಡ್‌ಗಳನ್ನು ಹೊಂದಿರುತ್ತವೆ.

ಪೌಷ್ಟಿಕತೆಯಂತೆ ಕಂದು ಮತ್ತು ಬಿಳಿಯ ಮೊಟ್ಟೆಗಳ ರುಚಿಗಳ ನಡುವೆಯೂ ಗಣನೀಯ ವ್ಯತ್ಯಾಸವಿಲ್ಲ. ಆದರೆ ಕೋಳಿಗಳು ಸೇವಿಸಿರುವ ಆಹಾರ ಮತ್ತು ಮೊಟ್ಟೆಗಳ ತಾಜಾತನ ಅವುಗಳ ರುಚಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಮೊಟ್ಟೆಗಳ ರುಚಿ ಮತ್ತು ಅವುಗಳಲ್ಲಿಯ ಪೌಷ್ಟಿಕಾಂಶಗಳನ್ನು ಕಾಯ್ದುಕೊಳ್ಳಲು ಅವುಗಳನ್ನು ಕಡಿಮೆ ಉಷ್ಣತೆಯಲ್ಲಿ ಅಥವಾ ಫ್ರಿಝ್‌ನಲ್ಲಿರಿಸುವುದು ಒಳ್ಳೆಯದು.

Comments are closed.