ಮಂಗಳೂರು, ಜೂನ್.14: ದ.ಕ. ಜಿಲ್ಲಾದ್ಯಂತ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ಹಲವು ಕಡೆಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗಲು ಸ್ಥಳಾವಕಾಶವಿಲ್ಲದೆ ನೀರು ರಸ್ತೆಯಲ್ಲೇ ಹರಿಯುವ ದೃಶ್ಯಗಳು ಕಂಡುಬರುತ್ತಾ ಇದೆ. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಭಾರೀ ನಿರೀಕ್ಷೆಯ ನಂತರ ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ನಗರದಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿವೆ. ಗೋರಿಗುಡ್ಡ ಬೈಪಾಸ್ ರಸ್ತೆ ಬದಿಯ ಮಣ್ಣುಕುಸಿತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಪಂಪ್‌ವೆಲ್‌ನಿಂದ ಉಳ್ಳಾಲ ಕಡೆಗೆ ತೆರಳುವುವ ಗೋರಿಗುಡ್ಡ ಬೈಪಾಸ್ ರಸ್ತೆಯ ಇಕ್ಕೆಲಗಳ ತಗ್ಗು ಪ್ರದೇಶ ಜಲಾವೃತಗೊಂಡಿದ್ದು, ಹತ್ತಿರದ ಪ್ಲಾಟ್ ಗಳ ಪಾರ್ಕಿಂಗ್ ಗಳಲ್ಲಿ ನೀರು ತುಂಬಿದೆ.
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕಳೆದ ಒಂಬತ್ತು ವರ್ಷಗಳಿಂದ ಇನ್ನೂ ಮುಂದುವರಿದಿರುವಂತೆಯೇ, ಮಳೆಗಾಲದಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದ ಸಂದರ್ಭ ಇಲ್ಲಿನ ತಗ್ಗು ಪ್ರದೇಶ ಜಲಾವೃತಗೊಳ್ಳುತ್ತವೆ.
ಈ ಬಾರಿ ಇದೀಗ ಗೋರಿಗುಡ್ಡ ಬಳಿಯಿಂದ ಪಂಪ್‌ವೆಲ್‌ಗೆ ಹಾಗೂ ಪಂಪ್‌ವೆಲ್‌ನಿಂದ ಗೋರಿಗುಡ್ಡವರೆಗೆ ಇಕ್ಕೆಲಗಳಲ್ಲಿ ಬೈಪಾಸ್ ರಸ್ತೆಗಳನ್ನು ಮಾಡಲಾಗಿದೆ. ಈ ಸರ್ವಿಸ್ ರಸ್ತೆಗಳಲ್ಲಿ ಸದ್ಯ ವಾಹನಗಳ ದಟ್ಟನೆಯಿಂದ ಸದಾ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಈ ನಡುವೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೈಪಾಸ್ ರಸ್ತೆಯ ಮಣ್ಣು ಕುಸಿದು ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಗಿದೆ. ಮಾತ್ರವಲ್ಲದೆ ಸಮೀಪದ ಫ್ಲಾಟ್‌ಗಳಲ್ಲಿ ನೀರು ತುಂಬಿ ಸ್ಥಳೀಯರು ಆತಂಕ ಪಡುವಂತಾಗಿದೆ.