ಆರೋಗ್ಯ

ಹಿರಿಯರ, ಎಳೆಯರ ಮನಸಿನ  ಏಕಾಗ್ರತೆಯನ್ನು ಹೆಚ್ಚಿಸುವ ಆಸನಗಳು

Pinterest LinkedIn Tumblr

 

ವೃಕ್ಷಾಸನ
ಈ ಆಸನವು ಮರದ ಆಕಾರವನ್ನು ಹೋಲುತ್ತದೆ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಏಕಾಗ್ರತೆಗಾಗಿ ಈ ಆಸನವನ್ನು ಅಭ್ಯಾಸ ಮಾಡುತ್ತಿದ್ದರು.

ವಿಧಾನ: ತಾಡಾಸನದಲ್ಲಿ ನಿಲ್ಲಿ. ಬಲಗಾಲ ಮಂಡಿಯನ್ನು ಬಗ್ಗಿಸಿ ಎಡತೊಡೆಯ ಮೂಲೆಗೆ ಸೇರಿಸಿ. ಅನಂತರ ಉಸಿರನ್ನು ತೆಗೆದುಕೊಳ್ಳುತ್ತ ಎರಡು ಕೈಗಳನ್ನು ನೇರವಾಗಿ ತಲೆ ಮೇಲೆ ಎತ್ತಿ ಹಿಡಿದು ಅಂಗೈಗಳನ್ನು ಜೋಡಿಸಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತ ಸ್ವಲ್ಪ ಹೊತ್ತು ನಿಲ್ಲಿ. ಹಾಗೆಯೇ ಇನ್ನೊಂದು ಬದಿಯಿಂದ ಎಡಗಾಲಿನ ಮಂಡಿ ಬಗ್ಗಿಸಿ ಮೇಲೆ ತಿಳಿಸಿದಂತೆ ಮಾಡಿ. ವಿಶ್ರಮಿಸಿ.

ಪ್ರಯೋಜನ: ನರ ಮತ್ತು ಸ್ನಾಯುಗಳ ಹೊಂದಾಣಿಕೆ, ಸಮತೋಲನ, ಸ್ಥಿತಿಯನ್ನು ದೀರ್ಘಕಾಲ ಸಹಿಸುವಿಕೆ, ಮತ್ತು ಜಾಗೃತಾವಸ್ಥೆ ಇದನ್ನು ಹೆಚ್ಚಿಸುತ್ತದೆ. ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹದ ಅಂಗಾಂಗಳು ಎಳೆತಕ್ಕೆ ಒಳಗಾಗುತ್ತದೆ. ಮನಸ್ಸಿನ ದೃಡತೆ ಹೆಚ್ಚಾಗುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿ, ಒತ್ತಡ ನಿಯಂತ್ರಣ. ಪೃಷ್ಠದ ಭಾಗ ಬಲಿಷ್ಠ. ಮೂಲಾಧಾರ ಚಕ್ರ ಪುನಶ್ಚೇತನ. ಕೀಲುಗಳ ಸಂಧಿವಾತದ ಸಮಸ್ಯೆ ನಿವಾರಣೆಗೆ ಸಹಕಾರಿ. ಬೆನ್ನುಮೂಳೆಯು ಬಲಗೊಳ್ಳುತ್ತವೆ. ಕಾಲಿನ ಮಾಂಸಖಂಡಗಳು ಪಳಗುತ್ತವೆ.

ಸೂಚನೆ: ಹೆಚ್ಚಿನ ರಕ್ತದೊತ್ತಡ, ಮೈಗ್ರೇನ್, ತುಂಬ ಮಂಡಿನೋವು ಇದ್ದವರು ಈ ಆಸನವನ್ನು ಅಭ್ಯಾಸ ಮಾಡುವುದು ಬೇಡ. ಆರಂಭದಲ್ಲಿ ಗೋಡೆಗೆ ಒರಗಿ ಅಭ್ಯಾಸ ಮಾಡಬಹುದು. ಇಲ್ಲಿ ಎರಡೂ ಕೈಗಳನ್ನು ಶಿರಸ್ಸಿನ ಮೇಲೆ ತರುವಾಗ ತೋಳುಗಳು ಕಿವಿಗೆ ಒತ್ತಿರಬೇಕು.

ಬಾಲಾಸನ
ಸೊಂಟನೋವು, ಬೆನ್ನುನೋವಿನಿಂದ ಬಳಲುವವರಿಗೆ ಈ ಬಾಲಾಸನ ಸಹಕಾರಿಯಾಗುತ್ತದೆ. ಚಿಕ್ಕ ಮಗು ಈ ರೀತಿ ಮಲಗು ತ್ತದೆ. ಹಾಗಾಗಿ ಬಾಲಾಸನ ಎಂಬ ಹೆಸರು ಬಂದಿದೆ. ಇದೊಂದು ಸರಳ ಆಸನ. ಭುಜಂಗಾಸನದ ಪೂರ್ವ ಆಸನವಾಗಿದೆ.

ವಿಧಾನ: ಜಮಖಾನ ಹಾಸಿದ ನೆಲದ ಮೇಲೆ ಮಕರಾಸನದಲ್ಲಿ ವಿರಮಿಸಿ. ಅನಂತರ ಕಾಲುಗಳು ಜೋಡಣೆ ಅಂಗೈಗಳನ್ನು ಭುಜದ ಮುಂದೆ ಜಮಖಾನದ ಮೇಲೆ ಇರಿಸಿ. ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತ ಶಿರಸ್ಸನ್ನು ಮೇಲೆ ಮಾಡಿ. (ಎದೆಯು ಮೇಲ್ಭಾಗದಲ್ಲಿ ಇರಲಿ.) ಸ್ವಲ್ಪ ಹೊತ್ತು ಸಮ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ಉಸಿರನ್ನು ಬಿಡುತ್ತ ಮೊದಲಿನ ಸ್ಥಿತಿಗೆ ಬನ್ನಿ. ಈ ರೀತಿ ಎರಡರಿಂದ ನಾಲ್ಕು ಬಾರಿ ಅಭ್ಯಾಸ ಮಾಡಿ. ಕೊನೆಗೆ ತುಸು ಹೊತ್ತು ಮಕರಾಸನದಲ್ಲಿ ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಬೆನ್ನು ಬಿಗಿತವಿರುವವರಿಗೆ ಈ ಆಸನ ಉಪಯುಕ್ತವಾಗಿದೆ. ಬೆನ್ನುನೋವು, ಸೊಂಟನೋವು ಇದ್ದವರು ಅಥವಾ ಅಸ್ಥಿಬಿಲ್ಲೆಯ ಸ್ಥಾನಪಲ್ಲಟವಿರುವವರಿಗೆ ಈ ಆಸನ ಉಪಯುಕ್ತವಾಗಿದೆ. ಬೆನ್ನಿನ ಸ್ನಾಯುಗಳ ದೋಷವು ಪರಿಹಾರವಾಗುತ್ತದೆ. ಥೈರಾಡ್ಡ್ ಗ್ರಂಥಿಗಳ ಆರೋಗ್ಯವರ್ಧನೆಗೂ ಸಹಕಾರಿ. ಅಸ್ತಮಾ ನಿಯಂತ್ರಣ. ಸ್ವಾಧಿಷ್ಠಾನ ಚಕ್ರದ ಸುಸ್ಥಿಗೆ ಈ ಆಸನ ಉಪಕಾರಿ.

ಸೂಚನೆ: ಆಸನಗಳನ್ನು ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ

Comments are closed.