ಆರೋಗ್ಯ

ಹೈಪರ್ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ನಿವಾರಕ ಶುಂಠಿ ಜ್ಯೂಸ್

Pinterest LinkedIn Tumblr

ಇವತ್ತು ಶೇ. 30ರಿಂದ 40 ಜನರಲ್ಲಿ ಹೈಪರ್ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಕಂಡುಬರುತ್ತಿದೆ. ಯಾರನ್ನೇ ಕೇಳಿದರೂ ‘ಹೊಟ್ಟೆಯಲ್ಲಿ ಉರಿ ಆದಂತಾಗುತ್ತದೆ, ಎದೆ ಉರಿ ಆದಂತಾಗುತ್ತದೆ, ಹುಳಿತೇಗು ಬರುತ್ತೆ, ತಲೆನೋವು ಬರುತ್ತೆ, ಅರ್ಧತಲೆನೋವು ಬರುತ್ತೆ’ – ಎಂದೆಲ್ಲ ಹೇಳುತ್ತಾರೆ. ಹೊಟ್ಟೆಯಲ್ಲಿ ಹೆಚ್ಚಾದ ಅಸಿಡಿಟಿಯೇ ತಲೆನೋವಿಗೂ ಕಾರಣವಾಗಬಹುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಅಸಿಡಿಟಿಗೆ ಕಾರಣ ಎಚ್ ಫೈಲೋರಿ ಎಂಬ ಕೆಟ್ಟ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾವನ್ನು ಪೂರ್ತಿಯಾಗಿ ನಿರ್ನಾಮ ಮಾಡಲು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಶುಂಠಿಯು ಎಚ್ ಫೈಲೊರಿಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಹಸಿಶುಂಠಿಯಲ್ಲಿ ಒಂದು ವಿಶೇಷ ಅಂಶವಿದೆ. ಅದು ಎಚ್ ಫೈಲೊರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆದು ಹೈಪರ್ ಅಸಿಡಿಟಿಯ ಮೂಲಕಾರಣಕ್ಕೆ ಚಿಕಿತ್ಸೆ ಕೊಡುತ್ತದೆ. ಹಾಗೆಯೇ ಬೂದುಗುಂಬಳಕಾಯಿಯು ಕ್ಷಾರೀಯ (ಅಲ್ಕಲೈನ್) ಪದಾರ್ಥವಾಗಿದ್ದು, ಇದರ ಜ್ಯೂಸ್ ಹೊಟ್ಟೆಯಲ್ಲಿರುವಂತಹ ಹೆಚ್ಚಾದ ಆಮ್ಲೀಯತೆಯನ್ನು ಕ್ಷಾರೀಯವಾಗಿ ಮಾರ್ಪಡಿಸುವ ಶಕ್ತಿಯನ್ನು ಹೊಂದಿದೆ. ಯಾರಿಗೆ ಅಸಿಡಿಟಿ, ಗ್ಯಾಸ್ಟ್ರಿಕ್, ಹುಳಿತೇಗು, ಹೊಟ್ಟೆಯುಬ್ಬರ, ತಲೆನೋವು, ಅರ್ಧ ತಲೆನೋವು ಇದೆಯೋ ಅವರೆಲ್ಲ ಆಹಾರಸೇವನೆಗಿಂತ 10-15 ನಿಮಿಷ ಮುಂಚೆ ಒಂದು ತುಂಡು ಬೂದುಗುಂಬಳಕಾಯಿ, ಎರಡು ಇಂಚಿನಷ್ಟು ಹಸಿ ಶುಂಠಿ ಹಾಗೂ ನೀರು ಸೇರಿಸಿ 250 ಮಿಲಿ ಜ್ಯೂಸ್ ಮಾಡಿಕೊಂಡು ಪ್ರತಿನಿತ್ಯ ಎರಡು ಬಾರಿ ಕುಡಿಯಬೇಕು. ಇದರಿಂದ ಮೂರು ತಿಂಗಳಲ್ಲಿ ಅಸಿಡಿಟಿ ಸಂಪೂರ್ಣ ಕಡಿಮೆಯಾಗಲು ಸಾಧ್ಯ.

ರಾತ್ರಿ ಸ್ವಲ್ಪ ಅನ್ನವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ನೀರು ಹಾಗೂ ಅನ್ನವನ್ನು ಮಜ್ಜಿಗೆ ಅಥವಾ ಮೊಸರಿನೊಡನೆ ಸೇವಿಸುವುದರಿಂದ ಎಚ್ ಫೈಲೊರಿ ಕಡಿಮೆಯಾಗಲು ಸಹಾಯಕಾರಿ. ಮೈಗ್ರೇನ್ ಇರುವವರು ದಿನ ಬಿಟ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ಸೇರಿಸಿದ 7-8 ಗ್ಲಾಸ್ ಉಗುರುಬೆಚ್ಚಗಿನ ನೀರನ್ನು ಕುಡಿದು ವಾಂತಿ ಮಾಡುವುದರಿಂದ ಅಸಿಡಿಟಿ, ಮೈಗ್ರೇನ್ ತಲೆನೋವು ಕಡಿಮೆಯಾಗುತ್ತದೆ. ಆಹಾರದಲ್ಲಿ ಶುಂಠಿಯನ್ನು ಹೆಚ್ಚು ಬಳಸುವುದರಿಂದ ಎಚ್ ಫೈಲೋರಿ ಬ್ಯಾಕ್ಟೀರಿಯಾ ನಾಶ ಸಾಧ್ಯ. ಇದು ತೂಕ ಕಡಿಮೆ ಮಾಡಿಕೊಳ್ಳಲು ಅನುಕೂಲಕಾರಿ. ಜೊತೆಗೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಸರಿಯಾಗಿ ಹಸಿವೆ, ಜೀರ್ಣಕ್ರಿಯೆ ಆಗುತ್ತದೆ. ಬೂದುಗುಂಬಳಕಾಯಿ ಹಾಗೂ ಹಸಿ ಶುಂಠಿ ಜ್ಯೂಸ್ ಸೇವಿಸಿ ನೂರಾರು ಜನ ಅಸಿಡಿಟಿ, ಗ್ಯಾಸ್ಟ್ರಿಕ್ ನಿವಾರಿಸಿಕೊಂಡಿದ್ದಾರೆ.

Comments are closed.