ಯೋಗದಿಂದ ಆಗುವ ಆರೋಗ್ಯ ಲಾಭವನ್ನು ವಿಶ್ವವೇ ಗುರುತಿಸಿದೆ. ಉಸಿರಾಟ ನಿಯಂತ್ರಣದ ಈ ತಂತ್ರವು ಆರೋಗ್ಯದಲ್ಲಿ ಪ್ರಧಾನ ಪಾತ್ರ ವಹಿಸುವುದರಲ್ಲಿ ಸಂದೇಹವಿಲ್ಲ. ಇಂತಹ ಒಂದು ಯೋಗ ಪ್ರಕಾರವೆಂದರೆ ಪ್ರಾಣಾಯಾಮ.
ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತದ ಪರಿಚಲನೆ ಹೆಚ್ಚುತ್ತದೆ ಹಾಗೂ ಚಯಾಪಚಯ ಕ್ರಿಯೆ ಸುಧಾರಿಸುವಂತೆ ಮಾಡುತ್ತದೆ. ಇದರಿಂದ ಆರೋಗ್ಯ ಇನ್ನಷ್ಟು ಸುಧಾರಿಸುವುದಲ್ಲದೆ ವಯಸ್ಸಾಗುವಿಕೆ ಲಕ್ಷಣಗಳು ಅದರಲ್ಲೂ ಮುಖದಲ್ಲಿ ನೆರಿಗೆ ಮೊದಲಾದ ಸಮಸ್ಯೆಗಳಿಂದ ದೂರ ಇರುವಂತೆ ಮಾಡುತ್ತದೆ.
ಪ್ರಾಣಾಯಾಮವು ದೇಹದ ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಪರಿಚಲನೆ ವ್ಯವಸ್ಥೆಯನ್ನೂ ಸುಧಾರಿಸಿ ದೇಹದಿಂದ ವಿಷಕಾರಕ ಅಂಶಗಳು ಹೊರಗೆ ಹೋಗುವಂತೆ ಮಾಡುತ್ತದೆ. ಸೈನಸ್, ಅಸ್ತಮಾ, ಬೊಜ್ಜು, ಖಿನ್ನತೆ, ಮೈಗ್ರೇನ್ ಮೊದಲಾದ ಸಮಸ್ಯೆಗಳಿದ್ದರೆ ದಿನ ನಿತ್ಯ ಪ್ರಾಣಾಯಾಮ ಮಾಡಿ.
ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯ ತುಂಬುವುದರ ಜೊತೆಗೆ ದಿನ ನಿತ್ಯದ ಕೆಲಸದಿಂದ ಎದುರಾಗುವ ಒತ್ತಡವನ್ನು ನಿವಾರಿಸುತ್ತದೆ. ಇದು ದೇಹದ ಚೈತನ್ಯ ತ್ವರಿತ ಗತಿಯಲ್ಲಿ ಹೆಚ್ಚಿಸಲು ನೆರವಾಗುತ್ತದೆ. ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸುತ್ತದೆ.
ಇದರಿಂದಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ಭಾವನಾತ್ಮಕ ಒತ್ತಡಗಳಿಂದಲೂ ದೂರವಿರುವಂತೆ ಮಾಡಿ, ನೆಮ್ಮದಿಯ ಮನಸ್ಥಿತಿಗೆ ಕಾರಣವಾಗುತ್ತದೆ.
ಆಳವಾಗಿ ಉಸಿರಾಡುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುವಂತೆ ಮಾಡುತ್ತದೆ. ಈ ಮೂಲಕ ಏಕಾಗ್ರತೆ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರವಣ ಶಕ್ತಿ ಮತ್ತು ದೃಷ್ಟಿ ಇನ್ನಷ್ಟು ಚೆನ್ನಾಗಲು ಕೂಡ ಇದು ನೆರವಾಗುತ್ತದೆ.
ಮಾಡುವ ವಿಧಾನ
ಕಾಲುಗಳನ್ನು ಮಡಚಿ ಕುಳಿತುಕೊಳ್ಳಬೇಕು. ಬಲ ಹೆಬ್ಬೆರೆಳಿನಿಂದ ಮೂಗಿನ ಬಲ ಭಾಗದ ಹೊಳ್ಳೆಯನ್ನು ಮುಚ್ಚಿಕೊಳ್ಳಬೇಕು. ಈಗ ಎಡ ಹೊಳ್ಳೆಯಿಂದ ಆಳವಾಗಿ ಉಸಿರು ಎಳೆದುಕೊಂಡು ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ ಬಲ ಹೊಳ್ಳೆಯಿಂದ ಉಸಿರು ಹೊರಗೆ ಬಿಡಬೇಕು. ಅದೇ ರೀತಿ ಬಳಿಕ ಬಲ ಹೊಳ್ಳೆಯಿಂದ ಉಸಿರು ಎಳೆದುಕೊಂಡು ಎಡ ಹೊಳ್ಳೆಯಿಂದ ಹೊರಗೆ ಬಿಡಬೇಕು.