ತಿರುವನಂತಪುರಂ: ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವರ ಜೊತೆ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು. ಇನ್ನೂ ಪೋಷಕರು ಮಕ್ಕಳಿಗೆ ಮನಬಂದಂತೆ ಹೊಡೆಯುವುದು ಕೂಡ ತುಂಬಾ ಅಪಾಯಕಾರಿ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲದೇ ಜೀವವೇ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ, ಕೇರಳದ ತಿರುವನಂತಪುರಂನಲ್ಲಿ ಒಂದು ಘಟನೆ ನಡೆದಿದೆ.
7 ವರ್ಷದ ಬಾಲಕನಿಗೆ ಪೋಷಕರು ಮನಬಂದಂತೆ ಥಳಿಸಿದ್ದಾರೆ. ಈಗ ಆ ಬಾಲಕನಿಗೆ ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ದಂಪತಿಗಳ ಈ ಕೃತ್ಯವನ್ನು ಅಪರಾಧವೆಂದು ಪರಿಗಣಿಸಿ ಐಪಿಸಿ ಸೆಕ್ಷನ್ 307(ಕೊಲೆ ಪ್ರಯತ್ನ) ಮತ್ತು ಸೆಕ್ಷನ್ 75(ಮಗುವಿನ ಮೇಲೆ ಕ್ರೌರ್ಯ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವೈದ್ಯರು ತುರ್ತು ಶಸ್ತ್ರ ಚಿಕಿತ್ಸೆ ಮಾಡಿದರೂ ಸಹ ಮೆದುಳಿನ ರಕ್ತಸ್ರಾವ ನಿಲ್ಲದ ಕಾರಣ, ಬಾಲಕ ಸದ್ಯ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾನೆ.
ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಬಾಲಕ ಹೇಳಿದ ಮಾತು ಕೇಳುತ್ತಿಲ್ಲ, ತುಂಟ ಆಗಿದ್ದ ಎಂದು 3 ವರ್ಷ ಇದ್ದಾಗಿನಿಂದ ಆತನ ತಾಯಿ ಹೊಡೆಯುತ್ತಿದ್ದಾಳೆ ಎಂಬ ನಿಜಾಂಶ ಹೊರಬಿದ್ದಿದೆ. ಇವರು ಜಾರ್ಖಂಡ್ ಮೂಲದವರು ಎನ್ನಲಾಗಿದೆ. ಹುಡುಗನ ತಂದೆ ಪಶ್ಚಿಮ ಬಂಗಾಳದವರಾಗಿದ್ದು, ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದರು. ವರ್ಷದ ಹಿಂದೆ ತಾಯಿ ಮತ್ತು ಮಗ ಆ ವ್ಯಕ್ತಿ ಜೊತೆ ಸೇರಿಕೊಂಡರು ಎನ್ನಲಾಗಿದೆ.