ಮನೋರಂಜನೆ

ಮತದಾನ ಮಾಡದ ನಟಿ ರಾಧಿಕಾ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ನಡೆದಿದೆ. ಭಾರೀ ಜಿದ್ದಾಜಿದ್ದಿ ಮೂಡಿಸಿದ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. ಒಂದೆಡೆ, ಸುಮಲತಾ ಅಂಬರೀಷ್ ಪರವಾಗಿ ಜೋಡೆತ್ತುಗಳಾಗಿ ಯಶ್ ಮತ್ತು ದರ್ಶನ್ ನಿಂತಿದ್ದರು. ಇನ್ನೊಂದೆಡೆ, ನಿಖಿಲ್ ಗೆಲ್ಲಿಸಲು ಸಿಎಂ ಕುಮಾರಸ್ವಾಮಿ, ಡಿಕೆಶಿ ಸೇರಿದಂತೆ ಇಡೀ ಸರಕಾರದ ದೊಡ್ಡದೊಡ್ಡವರೇ ಮಂಡ್ಯದಲ್ಲಿ ಮೇಳೈಸಿದ್ದರು. ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಸವಾಲಾಗಿದೆ ಈ ಮಂಡ್ಯ ಚುನಾವಣೆಯ. ಯಶ್, ದರ್ಶನ್ ಎಂಟ್ರಿಯಿಂದಾಗಿ ಈ ಚುನಾವಣೆಯು ಸೆಲಬ್ರಿಟಿಸ್ ವರ್ಸಸ್ ಪೊಲಿಟಿಶಿಯನ್ಸ್ ಸಮರವಾಗಿ ಮಾರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಪುನೀತ್ ಮತ್ತಿತರ ಕೆಲವರನ್ನು ಹೊರತುಪಡಿಸಿ ಬಹುತೇಕ ಸೆಲಬ್ರಿಟಿಗಳು ಮತ ಚಲಾಯಿಸಿದ್ದಾರೆ. ಮಂಡ್ಯ ಜಿದ್ದಾಜಿದ್ದಿಯ ಮಧ್ಯೆ ಅನೇಕ ಕಣ್ಣು ರಾಧಿಕಾ ಕುಮಾರಸ್ವಾಮಿ ಅವರತ್ತ ಹೊರಳಿದ್ದರೆ ಅಚ್ಚರಿ ಏನಿಲ್ಲ. ಆದರೆ, ಎಡಗೈ ತೋರುಬೆರಳಿಗೆ ಶಾಹಿ ಮೆತ್ತಿಸಿಕೊಂಡಿರುತ್ತಾರೆಂದು ಭಾವಿಸಿದ್ದವರಿಗೆ ರಾಧಿಕಾ ಕುಮಾರಸ್ವಾಮಿ ನಿರಾಸೆ ತಂದಿದ್ದಾರೆ. ರಾಧಿಕಾ ಅವರು ಈ ಬಾರಿ ಮತ ಚಲಾಯಿಸಿಲ್ಲವಂತೆ.

ನಟಿ ರಾಧಿಕಾ ಕುಮಾರಸ್ವಾಮಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಡಾಲರ್ಸ್​ ಕಾಲೋನಿಯ ನಿವಾಸಿ. ಇದೇ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿರುವ ಅವರು ಈ ಬಾರಿ ಮತದಾನ ಮಾಡಿಲ್ಲ. ಆದರೆ, ಅವರ ತಂದೆ-ತಾಯಿ ಡಾಲರ್ಸ್​ ಕಾಲೋನಿಯ ಗೋಪಾಲ್​ ರಾಮ್​ ನಾರಾಯಣ್​ ಸರ್ಕಾರಿ ಪ್ರಥಾಮಿಕ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ. ಆದರೆ, ರಾಧಿಕಾ ಮಾತ್ರ ಈ ಹಕ್ಕಿನಿಂದ ವಂಚಿತರಾಗಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಯಾಕೆ ಮತದಾನ ಮಾಡಿಲ್ಲ ಎಂಬ ಪ್ರಶ್ನೆ ಕೂಡ ಮೂಡಿದೆ. ರಾಧಿಕಾ ಕುಮಾರಸ್ವಾಮಿ ಈಗ ಕೇವಲ ನಟಿ ಮಾತ್ರವಲ್ಲದೇ ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಯ ಹೆಂಡತಿ ಎಂಬುದನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಅವರದೇ ಸರ್ಕಾರ ರಾಜ್ಯದಲ್ಲಿರುವಾಗ ಅವರು ಈ ರೀತಿ ಮತದಾನದಿಂದ ಹಿಂದೆ ಸರಿಯಲು ಕಾರಣ ಏನು ಎಂಬುದು ತಿಳಿದಿಲ್ಲ.

ಈ ಹಿಂದೆ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ ತಮಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ. ತಾವು ಇದರಿಂದ ಸದಾ ಅಂತರ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ಮತದಾನ ಮಾಡುವಷ್ಟು ವಿಮುಖರಾಗುವುದು ಭಾರತೀಯ ಪ್ರಜೆಯಾಗಿ ತಪ್ಪು ನಿರ್ಧಾರ ಎಂಬ ಮಾತು ಕೇಳಿ ಬಂದಿದೆ.

ದೇವೇಗೌಡ ಅವರು ಈ ಹಿಂದೆ ನಿಲ್ಲಬೇಕೆಂದಿದ್ದ ಕ್ಷೇತ್ರದಲ್ಲಿ ರಾಧಿಕಾ ಮತ ಚಲಾಯಿಸದಿರುವುದಕ್ಕೆ ಕಾರಣ ಟ್ರೋಲಿಗರು ಎಂಬ ಮಾತು ಕೂಡ ಕೇಳಿ ಬಂದಿದೆ. ನಿಖಿಲ್​ ವಿಷಯದಲ್ಲಿ ಆದ ಟ್ರೋಲ್​ನಿಂದಾಗಿ ರಾಧಿಕಾ ತಾವು ಮತ ಚಲಾಯಿಸಿದ ಚಿತ್ರ ಮಾಧ್ಯಮಗಳಿಗೆ ದೊರೆತರೆ ಯಾರಿಗೆ ಮತ ಹಾಕಿದರು ಎಂದು ಟ್ರೋಲ್​ ಮಾಡುವ ಭಯದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾತು ಕೇಳಿ ಬಂದಿದೆ.

ಈ ಎಲ್ಲಾ ಅಂತೆ ಕಂತೆಗಳ ನಡುವೆ ಒಬ್ಬ ಪ್ರಜೆಯಾಗಿ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನಟಿ , ಹೆಂಡತಿ ಯಾಗಿರುವುದಕ್ಕಿಂತ ಮುಂಚೆ ಅವರೊಬ್ಬರು ದೇಶದ ಪ್ರಜೆ ಎಂಬುದು ಮರೆಯಬಾರದು.

Comments are closed.