ಆರೋಗ್ಯ

ವ್ಯಕ್ತಿ ಏಕಾಏಕಿಯಾಗಿ ಬೆವರತೊಡಗಿದರೆ ಅದು ಯಾವುದರ ಎಚ್ಚರಿಕೆಯ ಗಂಟೆ

Pinterest LinkedIn Tumblr

ಕೆಲವೊಮ್ಮೆ ಹೃದಯಾಘಾತಗಳು ದಿಢೀರನೆ ಮತ್ತು ತೀವ್ರವಾಗಿ ಸಂಭವಿಸುತ್ತವೆಯಾದರೂ ಹೆಚ್ಚಿನ ಹೃದಯಾಘಾತಗಳು ಲಘುವಾದ ನೋವು ಮತ್ತು ಅಸ್ವಸ್ಥತೆಯೊಂದಿಗೆ ನಿಧಾನವಾಗಿ ಶುರುವಿಟ್ಟುಕೊಳ್ಳುತ್ತವೆ. ಆದರೆ ನೂತನ ಅಧ್ಯಯನವೊಂದರಂತೆ ಜೀವಕ್ಕೇ ಅಪಾಯವನ್ನುಂಟು ಮಾಡುವ ಈ ಪಿಡುಗನ್ನು ಈ ಅಚ್ಚರಿಯ ಲಕ್ಷಣದ ಮೂಲಕ ಮೊದಲೇ ಪತ್ತೆ ಹಚ್ಚಬಹುದಾಗಿದೆ.

ಅತಿಯಾಗಿ ಬೆವರುವಿಕೆಯು, ವಿಶೇಷವಾಗಿ ರೋಗಿಯು ಸೂಕ್ತ ವ್ಯಾಯಾಮಗಳನ್ನು ಮಾಡುತ್ತಿಲ್ಲವಾದರೆ ಮತ್ತು ಕ್ರಿಯಾಶೀಲನಾಗಿಲ್ಲದಿದ್ದರೆ ಹೃದಯಾಘಾತದ ಮುನ್ಸೂಚನೆ ಯಾಗಿರಬಹುದು ಎಂದು ಎಕ್ಸ್ಪ್ರೆಸ್.ಕೋ.ಯುಕೆ ಅಧ್ಯಯನ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಹೃದಯವು ದುರ್ಬಲಗೊಂಡಾಗ ರಕ್ತವನ್ನು ಪಂಪ್ ಮಾಡುವುದು ತುಂಬ ಕಠಿಣವಾಗುತ್ತದೆ ಮತ್ತು ಇದೇ ಕಾರಣದಿಂದ ವಿವಿಧ ಭಾಗಗಳಿಗೆ ರಕ್ತವನ್ನು ಪೂರೈಸಲು ಶರೀರವು ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. ಈ ಒತ್ತಡದ ಬಳಿಕ ತನ್ನನ್ನು ತಂಪುಗೊಳಿಸಿ ಕೊಳ್ಳಲು ಶರೀರವು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆವರಬಹುದು.

ಎದೆನೋವು, ಭುಜ ಮತ್ತು ತೋಳುಗಳಲ್ಲಿ ನೋವು, ಕುತ್ತಿಗೆ ಮತ್ತು ದವಡೆಗಳಲ್ಲಿ ಅಸ್ವಸ್ಥತೆ ಹೃದಯಾಘಾತದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. ಆದರೆ ವ್ಯಕ್ತಿ ಏಕಾಏಕಿಯಾಗಿ ಬೆವರತೊಡಗಿದರೆ ಅದು ಎಚ್ಚರಿಕೆಯ ಗಂಟೆಯಾಗಿರುತ್ತದೆ. ಅಂತಹವರು ತಮಗೆ ಫ್ಲೂ ಕಾಡಿದೆ ಎಂದು ಭಾವಿಸಬಾರದು. ತಮಗೆ ಜ್ವರವಿಲ್ಲದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾರೆ ಅಧ್ಯಯನ ತಂಡದ ಸದಸ್ಯೆ ಇಲಿನಾಸ್ ವಿವಿಯ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ನಲ್ಲಿ ಪ್ರಾಜೆಕ್ಟ ಕೋ-ಆರ್ಡಿನೇಟರ್ ಆಗಿರುವ ಡಾ.ಕ್ಯಾಥರೀನ್ ರ್ಯಾನ್. ರಾತ್ರಿ ವೇಳೆ ಮೈ ಬೆವರುವುದು ಸಹ ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಅದರೆ ಅದು ಋತುಸ್ರಾವದ ಪರಿಣಾಮವಾಗಿದೆ ಎಂದು ಕೆಲವು ಮಹಿಳೆಯರು ತಪ್ಪಾಗಿ ಗ್ರಹಿಸಬಹುದು.

ರೋಗಿಯು ಎದ್ದಾಗ ಬೆಡ್ಶೀಟ್ ಬೆವರಿನಿಂದ ನೆಂದು ತೊಪ್ಪೆಯಾಗಿದ್ದರೆ ಅಥವಾ ಬೆವರುವಿಕೆಯಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿರದಿದ್ದರೆ ಅಂಥವರು ಖಂಡಿತವಾಗಿಯೂ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ಹೃದಯಕ್ಕೆ ರಕ್ತಪೂರೈಕೆಯಲ್ಲಿ ಏಕಾಏಕಿ ತಡೆಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಇದರಿಂದಾಗಿ ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ.

ಧೂಮ್ರಪಾನಿಗಳು, ಮಧುಮೇಹಿಗಳು, ಅಧಿಕ ರಕ್ತದೊತ್ತಡ ಹೊಂದಿದವರು ಮತ್ತು ಬೊಜ್ಜುದೇಹಿಗಳು ಹೃದಯಾಘಾತದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ನಿಯಮಿತ ವ್ಯಾಯಾಮ ಮತ್ತು ಸರಿಯಾದ ದೇಹತೂಕವನ್ನು ಕಾಯ್ದುಕೊಳ್ಳುವದು ಮಾರಣಾಂತಿಕ ಹೃದಯಾಘಾತದ ಅಪಾಯಗಳನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.

Comments are closed.