ಆರೋಗ್ಯ

ವಾಸ್ತವದಲ್ಲಿ ಎನರ್ಜಿ ಡ್ರಿಂಕ್ ನಮ್ಮ ಆರೋಗ್ಯಕ್ಕೆ ಹಾನಿಕಾರಕವೇಕೆ?

Pinterest LinkedIn Tumblr

ನಿತ್ಯದ ಜಾಗಿಂಗ್ ಅಥವಾ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸದ ಬಳಿಕ ಒಂದು ಕ್ಯಾನ್ ಎನರ್ಜಿ ಡ್ರಿಂಕ್ ಅಥವಾ ಶಕ್ತಿ ಪೇಯದ ಸೇವನೆ ತಕ್ಷಣದ ಶಕ್ತಿಯನ್ನು ನಿಮಗೆ ನೀಡಬಹುದು. ಆದರೆ ಅದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಗೂ ಕಾರಣವಾಗ ಬಲ್ಲುದು ಎನ್ನುವುದು ಗೊತ್ತೇ?

ಎನರ್ಜಿ ಡ್ರಿಂಕ್ ಸೇವಿಸುವವರಲ್ಲಿ, ವಿಶೇಷವಾಗಿ ಈಗಾಗಲೇ ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವರಲ್ಲಿ ಅದು ಜೀವಕ್ಕೇ ಅಪಾಯವನ್ನು ತರಬಲ್ಲುದು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆ(ಎನ್‌ಎಚ್‌ಐ)ಯು ಹೇಳುವಂತೆ ಎನರ್ಜಿ ಡ್ರಿಂಕ್ ಮಿದುಳಿನ ರಕ್ತಸ್ರಾವದಿಂದ ಹಿಡಿದು ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳವರೆಗೆ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡಬಹುದು.

ಎನ್‌ಎಚ್‌ಐನ ಸಮೀಕ್ಷೆಗೊಳಗಾದವರ ಪೈಕಿ ಓರ್ವ ವ್ಯಕ್ತಿಯ ತಲೆಬುರುಡೆಯಲ್ಲಿ ರಂಧ್ರವುಂಟಾಗಿದ್ದು, ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದ. ವೈದ್ಯರ ಪ್ರಕಾರ ಅತಿಯಾದ ಎನರ್ಜಿ ಡ್ರಿಂಕ್ ಸೇವನೆ ಇದಕ್ಕೆ ಕಾರಣವಾಗಿತ್ತು.

2007-2011ರ ಅವಧಿಯಲ್ಲಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ವರದಿ ಯಾಗಿದ್ದ ಎನರ್ಜಿ ಡ್ರಿಂಕ್ ಸಂಬಂಧಿತ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿತ್ತು ಮತ್ತು ಈ ಪೈಕಿ 40 ವರ್ಷ ವಯೋಮಾನಕ್ಕಿಂತ ಮೇಲಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಎನ್‌ಎಚ್‌ಐ ಹೇಳಿದೆ.

ವಾಸ್ತವದಲ್ಲಿ ಎನರ್ಜಿ ಡ್ರಿಂಕ್ ನಮ್ಮ ಶರೀರಕ್ಕೆ ಹಾನಿಕಾರಕವೇಕೆ? ಈ ಡ್ರಿಂಕ್ಗಳು ಅಧಿಕ ಪ್ರಮಾಣದಲ್ಲಿ ಕೆಫೀನ್ ಅನ್ನು ಒಳಗೊಂಡಿರುತ್ತವೆ ಮತ್ತು ಈ ಕೆಫೀನ್ ಗಂಭೀರ ಹೃದಯ ಸಮಸ್ಯೆ, ರಕ್ತ ಸಂಚಾರ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಗಳಿಗೆ ಕಾರಣ ವಾಗುತ್ತದೆ.

ಇದರ ಜೊತೆಗೆ ಎನರ್ಜಿ ಡ್ರಿಂಕ್ಗಳು ನಮ್ಮ ನಿದ್ರೆಗೆ ವ್ಯತ್ಯಯವನ್ನುಂಟು ಮಾಡುತ್ತವೆ ಮತ್ತು ನಮ್ಮಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತವೆ. ಜೀರ್ಣ ಸಮಸ್ಯೆಗಳು ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಜೊತೆಗೆ ನಿರ್ಜಲೀಕರಣಕ್ಕೂ ಕಾರಣವಾಗುತ್ತವೆ ಎಂದು ಎಎಚ್‌ಐ ವರದಿಯು ಹೇಳಿದೆ.

ಎನರ್ಜಿ ಡ್ರಿಂಕ್ಗಳ ಬದಲು ನಮ್ಮ ಶರೀರಕ್ಕೆ ನಿಜಕ್ಕೂ ಆರೋಗ್ಯಕರವಾದ ನೈಸರ್ಗಿಕ ಪಾನೀಯಗಳಾದ ಸೀಯಾಳದ ನೀರು, ಮಜ್ಜಿಗೆ, ಕಿತ್ತಳೆ ರಸ ಮತ್ತು ಗ್ರೀನ್ ಟೀ ಅನ್ನು ಸೇವಿಸಬಹುದಾಗಿದೆ ಎಂದು ಅದು ಶಿಫಾರಸು ಮಾಡಿದೆ.

Comments are closed.