ಆರೋಗ್ಯ

ಗರ್ಭಿಣಿ ಮತ್ತು ಸ್ತ್ರೀರೋಗಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಅಲ್ಟ್ರಾಸೌಂಡ್‌ನ‌ ಪಾತ್ರ

Pinterest LinkedIn Tumblr

ultr_sound_baby

 ಅಯಾನ್‌ ಡೊನಾಲ್ಡ್‌ ಅವರನ್ನು ನಾವು ಅಲ್ಟ್ರಾಸೌಂಡ್‌ನ‌ ಪಿತಾಮಹ ಎಂದು ಕರೆಯುತ್ತೇವೆ. ಭವಿಷ್ಯದಲ್ಲಿ ಅಲ್ಟ್ರಾಸೌಂಡ್‌ ಉಪಯೋಗ ಎಷ್ಟು ವ್ಯಾಪಕಗೊಳ್ಳಲಿದೆ ಎಂಬ ಕಲ್ಪನೆಯನ್ನು ಬಹುಶಃ ಈ ಸಲಕರಣೆಯನ್ನು ಸಂಶೋಧಿಸಿದಾಗ ಅವರು ಮಾಡಿರಲಿಕ್ಕಿಲ್ಲ… ಇತ್ತೀಚೆಗೆ ಅಲ್ಟ್ರಾಸೌಂಡ್‌ ತಪಾಸಣಾ ವಿಧಾನವು ರೋಗಪತ್ತೆಯಲ್ಲಿ ಒಂದು ಮಹತ್ವದ ಸಲಕರಣೆಯಾಗಿ ರೂಪುಗೊಂಡಿದೆ.

ಗರ್ಭಿಣಿ ಸ್ತ್ರೀಯರ ಆರೈಕೆಯಿಂದ ಆರಂಭಿಸಿ, ಅವರಿಗಿರಬಹುದಾದ ತೊಂದರೆಗಳು, ಗರ್ಭಸ್ಥ ಶಿಶುವಿನ ಬೆಳವಣಿಗೆ, ಹೀಗೆ ಹತ್ತು ಹಲವು ತೊಂದರೆಗಳ ಪತ್ತೆ ಮತ್ತು ಅರಿವುಗಳಲ್ಲಿ ಅಲ್ಟ್ರಾ ಸೌಂಡ್‌ ಪಾತ್ರ ಮಹತ್ವದ್ದು. ಹಾಗೆಯೇ, ಬಂಜೆತನ, ಮುಟ್ಟಿನ ತೊಂದರೆಗಳು, ಗರ್ಭಕೋಶದ ಗಡ್ಡೆಗಳು – ಇವುಗಳ ಪತ್ತೆಯಲ್ಲೂ ಅಲ್ಟ್ರಾಸೌಂಡ್‌ ಮುಖ್ಯವಾದ ರೋಗಪತ್ತೆ ವಿಧಾನ. ಗರ್ಭಿಣಿ ಮತ್ತು ಇತರ ಸ್ತ್ರೀರೋಗಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ವೈದ್ಯರಿಗೆ ಅಲ್ಟ್ರಾಸೌಂಡ್‌ “”ಮೂರನೆಯ ಕಣ್ಣಿನಂತೆ’ ಕೆಲಸ ಮಾಡುತ್ತದೆ ಎಂದರೆ ಅದು ಉತ್ಪೆಕ್ಷೆಯಾಗದು.

ಈ ಲೇಖನದಲ್ಲಿ ನಾವು ಕೆಲವು ವಿಷಯಗಳಲ್ಲಿ ಅಲ್ಟ್ರಾಸೌಂಡ್‌ನ‌ ಪಾತ್ರವೇನು ಎಂಬುದರ ಬಗ್ಗೆ ಚರ್ಚಿಸೋಣ. ಅವುಗಳೆಂದರೆ
೧.ಗರ್ಭಾವಸ್ಥೆ,,೨.ಬಂಜೆತನ

ಸ್ತ್ರೀರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.
ಗರ್ಭಧಾರಣೆಯಲ್ಲಿ ಅಲ್ಟ್ರಾಸೌಂಡ್‌ನ‌ ಪಾತ್ರ ಆರೋಗ್ಯವಂತ ಮಗುವನ್ನು ಮತ್ತು ಆರೋಗ್ಯವಂತ ತಾಯಿಯನ್ನು ಪಡೆಯುವ ಕಟ್ಟಕಡೆಯ ಗುರಿಯನ್ನು ಹೊಂದಿರುವ ಪ್ರಜನನ ಪ್ರಕ್ರಿಯೆಯಲ್ಲಿ ಪ್ರಸವಪೂರ್ವ ಕಾಳಜಿಯು ಅತಿ ಮುಖ್ಯವಾಗಿರುತ್ತದೆ. ಪ್ರಸವ ಪೂರ್ವ ಪರೀಕ್ಷೆ ಭೇಟಿಗಳಿಗೆ ಬರುವ ಗರ್ಭಿಣಿ ಮಹಿಳೆಯರಿಗೆ ವೈದ್ಯರು, ಕೂಲಂಕಷವಾದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಾರೆ.

ವೈದ್ಯರು ಕೆಲವೊಂದು ರೀತಿಯ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಿಸಿ ಕೊಳ್ಳಲು ಕೇಳಿಕೊಳ್ಳುತ್ತಾರೆ. ಕೆಲವೊಮ್ಮೆ ಅಲ್ಟ್ರಾಸೌಂಡ್‌ ಮೌಲ್ಯಮಾಪನವನ್ನು ತೆಗೆದು ಕೊಳ್ಳಲು ಕೂಡಾ ಸಲಹೆಯನ್ನು ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಎಕ್ಸ್‌ರೇ ತೆಗೆಯುವುದು ಭ್ರೂಣಕ್ಕೆ ಹಾನಿಕಾರಕ ಎಂಬುದು ಜನರು ಸಾಮಾನ್ಯವಾಗಿ ತಿಳಿದಿರುವ ವಿಚಾರ. ಅದೇ ತರಹದ ಭಯವನ್ನು ಜನರು ಅಲ್ಟ್ರಾಸೌಂಡ್‌ ಪರೀಕ್ಷೆಯ ಬಗೆಗೂ ಹೊಂದಿರುವುದು ತುಂಬ ವಿಷಾದದ‌ ಸಂಗತಿ. ಅಲ್ಟ್ರಾಸೌಂಡ್‌ ಪರೀಕ್ಷೆಯಲ್ಲಿ ಯಾವುದೇ ತರಹದ ವಿಕಿರಣಗಳನ್ನು ಬಳಸಲಾಗುವುದಿಲ್ಲ.

ಈ ಪರೀಕ್ಷೆಯಲ್ಲಿ ಶಬ್ದದ ಅಲೆಗಳು ವಿವಿಧ ಅಂಗಾಂಶಗಳ ಮೇಲೆ ಹಾದು ಹೋಗುತ್ತವೆ. ಗರ್ಭಿಣಿ ಮಹಿಳೆಯರು ಎಷ್ಟೇ ಬಾರಿ ಈ ಪರೀಕ್ಷೆಗೆ ಒಳಗಾದರೂ, ಶಬ್ದದ ಅಲೆಗಳು ಅಷ್ಟೊಂದು ಅಪಾಯಕಾರಿಯಲ್ಲ ಎಂದು ಸಂಶೋಧನೆಗಳಿಂದ ರುಜುವಾತಾಗಿದೆ. ಗರ್ಭಿಣಿ ಮಹಿಳೆಯರಲ್ಲಿ 2 ತರಹದವರಿರುತ್ತಾರೆ. ಅವರಲ್ಲಿ ಮೊದಲಿನ ಗುಂಪಿನ ಮಹಿಳೆಯರು ಕಡಿಮೆ ಅಪಾಯ ಪ್ರಮಾಣವನ್ನು ಹೊಂದಿರುತ್ತಾರೆ.

ಅಥವಾ ಯಾವುದೇ ಅಪಾಯಕರ ಅಂಶಗಳನ್ನು ಅಥವಾ ಯಾವುದೇ ಸಂಕೀರ್ಣತೆಗಳನ್ನು ಹೊಂದಿರುವುದಿಲ್ಲ. ಇವರು ಸಾಮಾನ್ಯವಾದ, ಆರೋಗ್ಯಕರ ವಾಗಿ ಬೆಳೆಯುತ್ತಿರುವ ಬಸಿರನ್ನು ಹೊಂದಿರುತ್ತಾರೆ. ಇವರಿಗೆ ತದ್ವಿರುದ್ಧವಾಗಿ ಇನ್ನೊಂದು ಗುಂಪಿನ ಗರ್ಭಿಣಿ ಮಹಿಳೆಯರು ಅಪಾಯಕಾರಿ ಅಂಶಗಳನ್ನು ಹೊಂದಿರುತ್ತಾರೆ; ಇಲ್ಲವೇ ಸಂಕೀರ್ಣತೆಗಳನ್ನು ಹೊಂದಿರುತ್ತಾರೆ. ಇವರ ಗರ್ಭದಲ್ಲಿ ಬೆಳೆಯುತ್ತಿರುವ ಮಗುವು ನಿರೀಕ್ಷಿಸಿದಷ್ಟು ಆರೋಗ್ಯಕರವಾಗಿರುವುದಿಲ್ಲ. ಈ ಗುಂಪಿನ ಮಹಿಳೆಯರಿಗೆ ಪ್ರಸವಪೂರ್ವ ತಪಾಸಣೆಯ ವೇಳೆ ತೀವ್ರ ಶುಶ್ರೂಷೆಯ ಕಾಳಜಿ ಅಗತ್ಯವಿರುತ್ತದೆ. ಕಡಿಮೆ ಅಪಾಯ ಪೂರಕ ಅಂಶಗಳಿರುವ ಗರ್ಭಿಣಿ ಮಹಿಳೆಯರಿಗೆ, ಅಂದರೆ ಯಾವುದೇ ಅಪಾಯ ಅಥವಾ ಸಂಕೀರ್ಣತೆಯ ಅಂಶಗಳನ್ನು ಹೊಂದದೇ ಇರುವ ಮಹಿಳೆಯರಿಗೆ ಕನಿಷ್ಠ ಪಕ್ಷ 3 ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳ ಅಗತ್ಯವಿರುತ್ತದೆ.

ಮೊದಲ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗನ್ನು ಮಹಿಳೆಯು, ಎರಡು ಅಥವಾ ಮೂರು ವಾರಗಳ ವರೆಗೆ ತನ್ನ ಋತುಚಕ್ರವನ್ನು ತಪ್ಪಿಸಿಕೊಂಡ ಬಳಿಕ (ಮುಟ್ಟಾಗದೆ ಇದ್ದಾಗ), ಗರ್ಭಧಾರಣೆಯನ್ನು ಖಚಿತ ಪಡಿಸಿಕೊಳ್ಳಲು ಬಂದಾಗ, ಮಾಡಲಾಗುವುದು. ಇದು ಹೆಚ್ಚಾಗಿ ಮಾಹಿತಿಯನ್ನು ತಿಳಿಸುವ ಸ್ಕ್ಯಾನಿಂಗ್‌ ಆಗಿರುತ್ತದೆ. ಯಾವ ಸ್ಥಳದಲ್ಲಿ ಗರ್ಭ ನಿಂತಿದೆ ಎಂಬುದನ್ನು ಈ ಸ್ಕ್ಯಾನಿಂಗ್‌ ತಿಳಿಸುತ್ತದೆ. (ಒಂದು ವೇಳೆ ಗರ್ಭವು ಅಂಡನಾಳದಲ್ಲಿ ನಿಂತಿದೆ ಎಂಬುದು ಈ ಸ್ಕ್ಯಾನಿಂಗ್‌ನಿಂದ ತಿಳಿದರೆ, ನಾಳೀಯ ಗರ್ಭವನ್ನು ತೆಗೆದು ಹಾಕಬಹುದು). ಈ ಸ್ಕ್ಯಾನಿಂಗ್‌ ಭ್ರೂಣಗಳ ಸಂಖ್ಯೆಯನ್ನೂ ತಿಳಿಸುತ್ತದೆ. (ಅಂದರೆ ಅವಳಿಗಳು ಅಥವಾ ತ್ರಿವಳಿಗಳ ಸಂಭಾವ್ಯತೆ), ಅಲ್ಲದೆ ಈ ಸ್ಕ್ಯಾನಿಂಗ್‌ ಗರ್ಭದ ಸ್ಥಿತಿಯನ್ನು ಅಂದರೆ ಭ್ರೂಣದ ಹೃದಯ ಬಡಿತ ಸಹಜವಾಗಿದೆಯೇ ಎಂದು ಮತ್ತು ಹೆರಿಗೆಯ ನಿರೀಕ್ಷಿತ ದಿನಾಂಕವನ್ನು ಕೂಡ ತಿಳಿಸುತ್ತದೆ.

ಅಷ್ಟೇ ಅಲ್ಲದೆ, ಈ ಸ್ಕ್ಯಾನಿಂಗ್‌ ಗರ್ಭಕೋಶ ದಲ್ಲಿ ಫೈಬ್ರಾಯ್ಡಗಳು (ಗರ್ಭಕೋಶದಲ್ಲಿ ಬೆಳೆಯುವ ನಾರಿನಂತಹ ಗಡ್ಡೆಗಳು) ಮತ್ತು ಅಂಡಾಶಯದ ಆಸುಪಾಸಿನಲ್ಲಿ ಸಿಸ್ಟ್‌ನಂತಹ (ದ್ರವತುಂಬಿದ ಚೀಲಗಳು)ತೊಂದರೆಗಳು ಏನಾದರೂ ಇವೆಯೇ ಎಂಬುದನ್ನು ಕೂಡ ತಿಳಿಸುತ್ತದೆ. ಎರಡನೆಯ ಮತ್ತು ಅತಿ ಮುಖ್ಯವಾದ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನ್ನು ಭ್ರೂಣದ ರಚನೆಯಲ್ಲಿ ಏನಾದರೂ ವೈಕಲ್ಯತೆಗಳು ಇವೆಯೇ ಎಂಬುದನ್ನು ತಿಳಿಯಲು ಮಾಡು ತ್ತಾರೆ. ಈ ಸ್ಕ್ಯಾನಿಂಗ್‌ನ್ನು ಗರ್ಭಧಾರಣೆಯಾದ ನಾಲ್ಕು ಅಥವಾ ನಾಲ್ಕುವರೆ ತಿಂಗಳಿನಲ್ಲಿ, ಅಂದರೆ ಸುಮಾರು 18-20 ವಾರಗಳಲ್ಲಿ ಮಾಡುತ್ತಾರೆ.

ಈ ಹಂತದಲ್ಲಿ ಪ್ರಮುಖವಾದ ಸಂರಚನಾ ವೈಕಲ್ಯತೆಗಳನ್ನು ಪತ್ತೆ ಮಾಡಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ವೈದ್ಯರು ಮಾಡುತ್ತಾರೆ. ಅದಾಗ್ಯೂ, ಕೆಲವೊಂದು ಸಣ್ಣ ಪ್ರಮಾಣದ ವೈಪರೀತ್ಯಗಳು ಸ್ಕ್ಯಾನಿಂಗ್‌ ಮುಖಾಂತರ ಪತ್ತೆಯಾಗುವುದಿಲ್ಲ ಮತ್ತು ಕೆಲವೊಂದು ಅಸಹಜತೆಗಳು ತಡವಾಗಿ ಬೆಳಕಿಗೆ ಬರಬಹುದು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಉದಾಹರಣೆಗೆ: 20 ವಾರಗಳಿಗೆ ಮಾಡುವ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳಲ್ಲಿ ಭ್ರೂಣದ ವಪೆಯಲ್ಲಿ ನ್ಯೂನತೆ ಕಾಣದೇ ಇರಬಹುದು. ಆದರೆ ಗರ್ಭಾವಸ್ಥೆಯ ನಂತರದ ಸಮಯದಲ್ಲಿ ಆ ನ್ಯೂನತೆಯಿಂದಾಗಿ ಕರುಳು ಮತ್ತು ಕಿಬ್ಬೊಟ್ಟೆಯ ಘಟಕಗಳು ಎದೆಯೊಳಗೆ ಸೇರಿ ಹೋಗಿರುವುದನ್ನು ಕಾಣಬಹುದು. ಅದೇ ರೀತಿ, ಡಿಯೋಡಿನಲ್‌ ಆಟ್ರಿಸಿಯಾ, ಜೆಜುನಲ್‌ ಆಟ್ರಿಸಿಯಾದಂತಹ ಕರುಳಿನಲ್ಲಿ ಅಡ್ಡಿ-ತಡೆಗಳು ಉಂಟಾಗಿರುವ ಸ್ಥಿತಿಗಳು ಗರ್ಭಾವಸ್ಥೆಯ ಅನಂತರದ ಸಮಯದಲ್ಲಿ ಸ್ಕ್ಯಾನಿಂಗ್‌ ಮೂಲಕ ಸ್ಪಷ್ಟವಾಗಿ ತೋರುತ್ತವೆ. ಮೂತ್ರ ಜನಕಾಂಗದಲ್ಲಿ ಅಡ್ಡಿ-ತಡೆಯ ಸಮಸ್ಯೆಗಳು ಸಹ ಮೂರನೇ ತ್ತೈಮಾಸಿಕದಲ್ಲಿ ಸ್ಪಷ್ಟವಾಗಿ ಕಾಣಸಿಗಬಹುದು ಮತ್ತು ಅದಕ್ಕಿಂತ ಮುಂಚೆ ಕಾಣಸಿಗದಿರಬಹುದು.

ಈ ಪೂರ್ವನಿರ್ಧರಿತ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳು ಕೇವಲ ರಚನಾತ್ಮಕ ವೈಪರೀತ್ಯ ಗಳನ್ನು ಮಾತ್ರ ಪತ್ತೆ ಹಚ್ಚುತ್ತವೆ. ಈ ಸ್ಕ್ಯಾನಿಂಗ್‌ ಗಳು, ಕುಂಠಿತಗೊಂಡ ಮಾನಸಿಕ ಬೆಳವಣಿಗೆ ಗಳು, ಚಯಾಪಚಯ ಕ್ರಿಯೆಯ ಜನ್ಮದತ್ತ ದೋಷಗಳು, ರಚನಾತ್ಮಕ ಅಸಹಜತೆಗಳಿಲ್ಲದ ವಂಶಪಾರಂಪರಿಕ ತೊಂದರೆಗಳನ್ನು ಸ್ಕ್ಯಾನಿಂಗ್‌ ವೇಳೆ ಪತ್ತೆ ಮಾಡುವುದಿಲ್ಲ. ಉದಾಹರಣೆಗೆ, ಸೀಳಂಗುಳು ಅಸಹಜತೆಗಳು ಸ್ಕ್ಯಾನಿಂಗ್‌ ಸಮಯದಲ್ಲಿ ಪತ್ತೆಯಾಗದೇ ಇರಬಹುದು.
ಯಾಕೆಂದರೆ, ಈ ಅಸಹಜತೆಯನ್ನು ಪತ್ತೆ ಮಾಡಲು, ಸ್ಕ್ಯಾನಿಂಗ್‌ ಸಮಯದಲ್ಲಿ ಭ್ರೂಣವು ಬಾಯಿಯನ್ನು ತೆರೆದಿರಬೇಕಾಗು ತ್ತದೆ. ಗರ್ಭಿಣಿಯಾಗಿರುವಾಗ ಸ್ಥೂಲಕಾಯ ಇದ್ದಲ್ಲಿ, ಭ್ರೂಣದ ಸುತ್ತ ನೀರಿನಂಶ ಕಡಿಮೆ ಇದ್ದಲ್ಲಿ, ಭ್ರೂಣದ ಅನುಕೂಲಕರವಲ್ಲದ ಸ್ಥಿತಿ ಮತ್ತು ಕೆಲವೊಂದು ಸೂಕ್ಷ್ಮ ಸ್ವರೂಪದ ಅಸಹಜತೆಗಳು ಇದ್ದಲ್ಲಿ ಸ್ಕ್ಯಾನಿಂಗ್‌ ಮಾಡಿದರೂ ಕೂಡ ಕೆಲವೊಮ್ಮೆ ಅಸಹಜತೆಗಳು ಪತ್ತೆಯಾಗದೇ ಇರಬಹುದು.
ಗರ್ಭಧಾರಣೆಯಾದ 20 ವಾರಗಳ ಅನಂತರ ಯಾವುದೇ ರೀತಿಯ ಮಾರಕ ವೈಪರೀತ್ಯಗಳು ಪತ್ತೆಯಾದರೆ, ಆ ಸಮಯದಲ್ಲಿ ಕೆಲವೊಂದು ಮಿತಿಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳು ವುದು ಅತಿ ಮುಖ್ಯವಾಗುತ್ತದೆ. ಯಾಕೆಂದರೆ MTP Act 1972 ರ (Medical Termination of Pregnancy Act) ಪ್ರಕಾರ 20 ವಾರಗಳ ಅನಂತರ ಗರ್ಭವನ್ನು ತೆಗೆಯು ವಂತಿಲ್ಲ… ಅದು ಮಾರಕ ವೈಪರೀತ್ಯದ ಅಸಹಜತೆ ಎಂದು ಪತ್ತೆಯಾದರೂ ಕೂಡ, ಕಾನೂನಿನ ಪ್ರಕಾರ ಆ ಸಮಯದಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ. ಮೂರನೆಯ ಹಂತದ ಸ್ಕ್ಯಾನಿಂಗ್‌ನ್ನು ಭ್ರೂಣವು ಸೂಕ್ತವಾಗಿ ಬೆಳೆಯುತ್ತಿದೆಯೇ ಮತ್ತು ಭ್ರೂಣದ ಸುತ್ತ ಎಷ್ಟು ಪ್ರಮಾಣದಲ್ಲಿ ನೀರಿನಂಶ ಇದೆ ಎಂಬುದನ್ನು ಖಚಿತವಾಗಿ ತಿಳಿಯಲು ಮಾಡುತ್ತಾರೆ.

ಭ್ರೂಣವು ತುಂಬ ದೊಡ್ಡದಿದ್ದಾಗ, ಲೆಕ್ಕ ಹಾಕಿದ ತೂಕವು ಕೆಲವೊಮ್ಮೆ 300-500 ಗ್ರಾಂಗಳವರೆಗೆ ತಪ್ಪಾಗಬಹುದು. ಕಡಿಮೆ ತೂಕದ ಮಗುವಿನ ವಿಷಯದಲ್ಲಿ ಲೆಕ್ಕ ಹಾಕಿದ ತೂಕವು ಹೆಚ್ಚು ಕಡಿಮೆ ನಿಖರವಾಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪ್ಲಾಸೆಂಟಾದ ಸ್ಥಾನವನ್ನು ತಿಳಿಯಲು ಸ್ಕ್ಯಾನಿಂಗ್‌ ಮಾಡ ಬೇಕಾದ ಅಗತ್ಯವಿರುತ್ತದೆ ಮತ್ತು ಅದನ್ನು ಕೆಲವೊಂದು ಸಂದರ್ಭಗಳಲ್ಲಿ ಸಿಸೇರಿಯನ್‌ ಹೆರಿಗೆ ಯನ್ನು ಸೂಚಿಸಬಹುದಾದಂತಹ ಭ್ರೂಣದ ಸ್ಥಿತಿಯನ್ನು ಅಂದರೆ ಪೃಷ್ಠಾಭಿಮುಖ ಪ್ರಸವ ಅಥವಾ ಭ್ರೂಣ ಅಡ್ಡಡ್ಡವಾಗಿರುವ ಸ್ಥಿತಿಯನ್ನು ತಿಳಿಯಲು ಸ್ಕ್ಯಾನಿಂಗ್‌ ನಡೆಸುತ್ತಾರೆ.

ತೀರಾ ಇತ್ತೀಚೆಗೆ 3 ತಿಂಗಳ ಸಮಯದಲ್ಲಿ ಗೋಚರವಾಗಬಹುದಾದಂತಹ ಯಾವುದೇ ವೈಕಲ್ಯತೆಗಳನ್ನು ಗುರುತಿಸಲು ಮತ್ತು ನ್ಯೂಕಲ್‌ ಯನ್ನು (ಭ್ರೂಣದ ಕುತ್ತಿಗೆಯ ಹಿಂಭಾಗದ ಚರ್ಮದ ಪದರ) ಅಳೆಯಲು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನ್ನು ಶಿಫಾರಸು ಮಾಡಲಾಗಿದೆ. ನ್ಯೂಕಲ್‌ ಟ್ರಾನ್ಸುಸೆನ್ಸಿಯು ದಪ್ಪವಾಗಿರುವುದು ಸಾಮಾನ್ಯವಾಗಿ, ಡೌನ್ಸ್‌ ಸಿಂಡ್ರೋಮ್‌ನ ಲಕ್ಷಣವಾಗಿರುತ್ತದೆ. ಈ ಹಂತದಲ್ಲಿ ಗರ್ಭಕೋಶದ ಕತ್ತಿನ ಉದ್ದವನ್ನು ಅಳೆಯುವುದು ಅವಧಿಗೆ ಮುಂಚಿತವಾಗಿ ಹೆರಿಗೆಯಾಗುವ ಸಾಧ್ಯತೆಗಳನ್ನು ಮುಂಚಿತ ವಾಗಿ ತಿಳಿಸಬಹುದು. ಒಂದು ವೇಳೆ ಸ್ಕ್ಯಾನಿಂಗ್‌ನಲ್ಲಿ ಗರ್ಭಕೋಶದ ಕತ್ತು ಚಿಕ್ಕದಾಗಿ ಕಂಡರೆ, ಮಹಿಳೆಗೆ ಸರ್‌ಕ್ಲೇಜ್‌ ಶಸ್ತ್ರಚಿಕಿತ್ಸೆಯ ಅಗತ್ಯ ಕೂಡ ಬೀಳಬಹುದು.

ಸರ್‌ಕ್ಲೇಜ್‌ ಶಸ್ತ್ರಚಿಕಿತ್ಸೆ ಎಂದರೆ,ಗರ್ಭಕೋಶದ ಕತ್ತಿನ ಸುತ್ತ ಹೊಲಿಗೆಯನ್ನು ಹಾಕುವುದು. ಅನಂತರ ಮಹಿಳೆಗೆ ವಿಶ್ರಾಂತಿ ಪಡೆಯಲು ಸಲಹೆ ನೀಡ ಬಹುದು. ಪ್ರಸೂತಿ ತಜ್ಞರು ಯಾವುದೇ ರೀತಿಯ ಯೋನಿ ನಾಳದ ಸೋಂಕಿನ ಪ್ರಸ್ತುತಿ ಇದೆಯೇ ಎಂದು ಪರೀಕ್ಷಿಸುವರು. ಒಂದು ವೇಳೆ ಅದರ ಉಪಸ್ಥಿತಿ ಇದ್ದರೆ, ಅದಕ್ಕೆ ಚಿಕಿತ್ಸೆ ನೀಡುವರು ಮತ್ತು 7ನೆಯ ತಿಂಗಳ ಅವಧಿಯಲ್ಲಿ ಸ್ಟೀರಾಯ್ಡ ಔಷಧಿಯೊಂದನ್ನು ಪ್ರಸವ ಪೂರ್ವದಲ್ಲಿ ಭ್ರೂಣದ ಶ್ವಾಸಕೋಶಗಳ ಬೆಳವಣಿಗೆಗಾಗಿ ತೆಗೆದುಕೊಳ್ಳಲು ಸಲಹೆ ಮಾಡಬಹುದು.

ಹೆಚ್ಚು ಅಪಾಯವಿರುವ ಗರ್ಭಧಾರಣೆ ಗಳಲ್ಲಿ ಸೋನೊಲಾಜಿಕಲ್‌ ಮೌಲ್ಯಮಾಪನವು ಅತಿ ಮುಖ್ಯವಾಗಿ ಅಗತ್ಯವಾಗಿರುತ್ತದೆ. ಈ ರೀತಿಯ ಅಪಾಯಕರ ಗರ್ಭಧಾರಣೆಯು, ವಯಸ್ಸಾದ ಮಹಿಳೆಯರಲ್ಲಿ, ಸ್ಥೂಲಕಾಯದ ಮಹಿಳೆಯರಲ್ಲಿ, ಮಧುಮೇಹಿಗಳಲ್ಲಿ, ಹೈಪರ್‌ ಟೆನ್ಶನ್‌ (ತೀವ್ರ ರಕ್ತದೊತ್ತಡದ‌ ಸ್ಥಿತಿ) ಇರುವವರಲ್ಲಿ, ರಕ್ತಹೀನತೆ ಇರುವವರಲ್ಲಿ, ಮೊದಲನೆಯ ಗರ್ಭಧಾರಣೆಯಲ್ಲಿ ಗರ್ಭಪಾತವಾಗಿ ಭ್ರೂಣವನ್ನು ಕಳೆದುಕೊಂಡ ವರಲ್ಲಿ ಮತ್ತು ಭ್ರೂಣ ಬೆಳೆಯುವ ಸಾಮರ್ಥ್ಯ ನಿರ್ಬಂಧವಾಗಿರುವ ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ.

ಇಂತಹ ಸ್ಥಿತಿಯಲ್ಲಿ ವೈದ್ಯರು, ಭ್ರೂಣದ ಬೆಳವಣಿಗೆಯನ್ನು ತಿಳಿಯಲು ಕಾಲಕಾಲಕ್ಕೆ ಗರ್ಭದ ಸುರಕ್ಷಾ ಕವಚದ ನೀರಿನಂಶವನ್ನು ಅಳೆಯಲು (ಯಾಕೆಂದರೆ ಗರ್ಭದ ಒಳಗವಚದ ನೀರಿನಂಶ ಕಡಿಮೆ ಯಾಗುವುದು ಶಿಶುವಿನ ಪರಿಸ್ಥಿತಿ ಹದಗೆಟ್ಟಿರು ವುದನ್ನು ಸೂಚಿಸುತ್ತದೆ) ಮತ್ತು ಭ್ರೂಣವು ಗರ್ಭಕೋಶದಲ್ಲಿ ಸರಿಯಾಗಿ ಇದೆಯೇ ಅಥವಾ ಇಲ್ಲವೇ (ಶಿಶುವಿನ ಜೀವ ಭೌತ ವಿಜ್ಞಾನದ ಮಾಹಿತಿ) ಎಂಬುದನ್ನು ತಿಳಿಯಲು ಪುನರಾವರ್ತನೆಯಸ್ಕ್ಯಾನಿಂಗ್‌ನ್ನು ಸೂಚಿಸಬಹುದು. ವಿಶೇಷವಾದ ಡಾಪ್ಲರ್‌ ಅಧ್ಯಯನಗಳು ಈ ಮಹಿಳೆಯರಿಗೆ ಹೆಚ್ಚು ಅಗತ್ಯ ಬೀಳಬಹುದು.

ಯಾಕೆಂದರೆ, ಇವುಗಳನ್ನು ಬಳಸಿ ಗರ್ಭಕೋಶ ದಲ್ಲಿ ರಕ್ತದ ಪ್ರವಾಹವನ್ನು ಮತ್ತು/ ಅಥವಾ ಭ್ರೂಣದ ರಕ್ತನಾಳಗಳಲ್ಲಿ ರಕ್ತ ಪ್ರವಾಹವನ್ನು ಅಧ್ಯಯನ ಮಾಡಬಹುದು. ರಕ್ತ ಪ್ರವಾಹದಲ್ಲಿ ನಿರ್ಬಂಧದ ಅನುಪಸ್ಥಿತಿಯು, ಗರ್ಭಧಾರಣೆಯಲ್ಲಿ ಹೈಪರ್‌ ಟೆನ್ಷನ್‌ ಮತ್ತು ಭ್ರೂಣ ಬೆಳವಣಿಗೆಯಲ್ಲಿ ನಿರ್ಬಂಧದ ಮುನ್ಸೂಚನೆ ಆಗಿರಬಹುದು. ಶಿಶುವಿನ ಬೆಳವಣಿಗೆಯು ಕಡಿಮೆ ಇದ್ದಾಗ, ಹೊಕ್ಕಳಿನ ರಕ್ತನಾಳಗಳ ಮೂಲಕ ರಕ್ತ ಸರಬರಾಜು ಆಗುವುದರಲ್ಲಿ ಅಡ್ಡಿಅಗಲಿದ್ದರೆ, ಅದು ತೊಂದರೆಯ ತೀವ್ರತೆ ಯನ್ನು ಸೂಚಿಸುತ್ತದೆ ಮತ್ತು ಶಿಶುವಿನ ಸಂಭಾವ್ಯ ಸಾವನ್ನು ತಡೆಯುವುದಕ್ಕಾಗಿ ಪ್ರಸವವನ್ನು ಯಾವಾಗ ಮಾಡಿಸುವುದು ಎಂಬುದನ್ನು ನಿರ್ಧರಿಸಲು ಮಾರ್ಗದರ್ಶಿಯಾಗಬಹುದು. ಭ್ರೂಣದ ಮೆದುಳಿನ ರಕ್ತನಾಳಗಳ ಮೂಲಕ ರಕ್ತ ಸರಬರಾಜಾಗುವುದನ್ನು ಅಧ್ಯಯನ ಮಾಡುವ ಡಾಪ್ಲರ್‌ ಅಧ್ಯಯನವು, ಭ್ರೂಣವು ಐಸೋಇಮ್ಯುನೈಸೇಶನ್‌ಗೆ ಒಳಗಾಗಿ ಗಂಭೀರ ಸ್ವರೂಪದ ರಕ್ತಹೀನತೆಯಿಂದ ನರಳುತ್ತಿದೆ ಎಂಬುದನ್ನು ತೋರಿಸುತ್ತದೆ.

ಅವಳಿ ಭ್ರೂಣಗಳ ಪ್ರಕರಣಗಳಲ್ಲಿ, ಒಂದು ಭ್ರೂಣದ ಬೆಳವಣಿಗೆಯನ್ನು ನಿಖರವಾಗಿ ನಿರ್ಣಯಿಸುವುದು ಸಾಮಾನ್ಯ ಪರೀಕ್ಷೆಗಳಿಂದ ಸಾಧ್ಯವಾಗು ವುದಿಲ್ಲ. ಅವಳಿ ಗರ್ಭಧಾರಣೆಯನ್ನು ಹೊಂದಿರುವ ಮಹಿಳೆಯರಿಗೆ,
ಪ್ರತಿ 3-4 ವಾರಗಳಿಗೊಮ್ಮೆ ಅಲ್ಟ್ರಾಸೌಂಡ್‌ ಮೌಲ್ಯಮಾಪನ ಮಾಡುವುದು ಅಗತ್ಯವಾಗಿರುತ್ತದೆ. ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಕ್ರೋಮೊಸೋಮ್‌ ಅಸಹಜತೆಗಳಾದ ಡೌನ್ಸ್‌ ಸಿಂಡ್ರೋಮ್‌ ಬಗೆಗಿನ ಸ್ಕ್ಯಾನಿಂಗ್‌ನ ಆಯ್ಕೆಯನ್ನು ಆರಿಸಬಹುದು.

ಕೆಲವೊಂದು ಸ್ಕ್ಯಾನಿಂಗ್‌ ಪರೀಕ್ಷೆಗಳು ರಕ್ತದಲ್ಲಿನ ನಿರ್ದಿಷ್ಟವಾದ ಹಾರ್ಮೋನು ಮಟ್ಟವನ್ನು ಪರೀಕ್ಷಿಸುತ್ತವೆ. ಈ ಪರೀಕ್ಷೆ ಗಳನ್ನು ಟ್ರಿಪಲ್‌/ಕ್ವಾಡ್ರಪಲ್‌ ಪರೀಕ್ಷೆ ಗಳು ಎಂದು ಕರೆಯುತ್ತಾರೆ ಮತ್ತು ಇವುಗಳನ್ನು ಸುಮಾರು 16ನೆಯ ವಾರದಲ್ಲಿ, ಅಂದರೆ ಗರ್ಭಧಾರಣೆಯ ಮೂರು ಅಥವಾ ಮೂರುವರೆ ತಿಂಗಳಲ್ಲಿ ಮಾಡುತ್ತಾರೆ. ಸ್ಕ್ಯಾನಿಂಗ್‌ ಪರೀಕ್ಷೆಯಲ್ಲಿ ಕ್ರೋಮೋಸೋಮ್‌ ಅಸಹಜತೆಗಳಿವೆ ಎಂಬ ವರದಿಗಳು ಬಂದರೆ, ಮಹಿಳೆಗೆ ಹೆಚ್ಚುವರಿಯಾಗಿ ಆಮ್ನಿಯೊ ಸೆಂಟಸಿಸ್‌ ತಪಾಸಣೆಯ (ಭ್ರೂಣದ ಒಳಪೊರೆಯಲ್ಲಿರುವ ದ್ರವವನ್ನು ಪರೀಕ್ಷಿಸಲು ಕೊಳವೆ ಯಂತಿರುವ ಸೂಜಿಯನ್ನು ಚುಚ್ಚಿ, ದ್ರವದ ಸ್ವಲ್ಪ ಭಾಗವನ್ನು ತೆಗೆದು ಕೊಂಡು ಪರೀಕ್ಷೆಗಳಿಗೆ ಒಳಪಡಿಸುವುದು) ಅಗತ್ಯ ಬೀಳಬಹುದು.

ವಂಶಪಾರಂಪರ್ಯದಿಂದ ಬರುವ ತೊಂದರೆಗಳನ್ನು ಪತ್ತೆ ಮಾಡಲು, ಅಲ್ಟ್ರಾಸೌಂಡ್‌ ನಿರ್ದೇಶಿತ ಕಾರ್ಯ ವಿಧಾನಗಳಾದ ಆಮ್ನಿಯೊಸೆಂಟಸಿಸ್‌, ಕೊರಿಯಾನ್‌ ವಿಲ್ಲಸ್‌ ಸ್ಯಾಂಪಲಿಂಗ್‌, ಕೊರ್ಡೊಸೆಂಟಸಿಸ್‌ಗಳು ಮುಖ್ಯವಾಗಿ ತುಂಬ ಸಹಕಾರಿಯಾಗುತ್ತವೆ. ಅಲ್ಟ್ರಾಸೌಂಡ್‌ನಿಂದ ನಿರ್ದೇಶಿಸಲ್ಪಟ್ಟ ಕೋರಿಯಾನಿಕ್‌ ಅಂಗಾಂಶಗಳನ್ನು ಗರ್ಭಧಾರಣೆಯಾದ ಸುಮಾರು 9-11ವಾರಗಳ ಅವಧಿಯಲ್ಲಿ ಕೊರಿಯಾನ್‌ ವಿಲ್ಲಸ್‌ ಸ್ಯಾಂಪಲಿಂಗ್‌ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ಇವುಗಳನ್ನು ಆನುವಂಶಿಕ ಮತ್ತು ಕ್ರೋಮೊಸೋಮ್‌ ಮೌಲ್ಯಮಾಪನ ಕ್ಕಾಗಿ ಕಳುಹಿಸಲಾಗುತ್ತದೆ.

ಆಮ್ನಿಯೊ ಸೆಂಟಸಿಸ್‌ ಕಾರ್ಯವಿಧಾನವನ್ನು ಗರ್ಭಧಾರಣೆಯಾದ ಸುಮಾರು 18-20 ವಾರಗಳ ಅವಧಿಯಲ್ಲಿ ಮಾಡಲಾಗುತ್ತದೆ ಮತ್ತು ಈ ವಿಧಾನದಲ್ಲಿ ಆಮ್ನಿಯಾಟಿಕ್‌ ದ್ರವವನ್ನು ಕ್ರೋಮೊಸೋಮ್‌ಗಳ ಬಗ್ಗೆ ಅಧ್ಯಯನ ಮಾಡಲು ಬಳಸಲಾಗುತ್ತದೆ. ಇಂಟ್ರಾಯುಟರೈನ್‌ ಟ್ರಾನ್ಸ್‌ ಫ್ಯೂಷನ್‌ ನಂತಹ ಇಂಟ್ರಾಯುಟರೈನ್‌ ಫೀಟಲ್‌ ಥೆರಪಿ ಕಾರ್ಯವಿಧಾನಗಳು ಕೂಡ ಅಲ್ಟ್ರಾಸೌಂಡ್‌ನಿಂದ ನಿರ್ದೇಶಿತವಾಗುವ ಕಾರ್ಯವಿಧಾನಗಳಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ಈ ಎಲ್ಲಾ ಕಾರ್ಯವಿಧಾನಗಳ ಅನಂತರ ಗರ್ಭಪಾತವಾಗುವ ಸಂಭವಗಳು ಕೂಡ ಅಲ್ಪಮಟ್ಟಿಗೆ ಇರುತ್ತವೆ.

ಮಹಿಳೆಯರಿಗೆ ಈ ಎಲ್ಲ ಕಾರ್ಯವಿಧಾನಗಳ ಬಗ್ಗೆ ಕೌನ್ಸೆಲಿಂಗ್‌ ನಡೆಸಿ, ಅವುಗಳ ಗುಣಾತ್ಮಕ ಮತ್ತು ಋಣಾತ್ಮಕ ಫ‌ಲಿತಾಂಶಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗುವುದು ಮತ್ತು ಅವರಿಂದ ಒಪ್ಪಿಗೆ ಪಡೆದ ನಂತರವೇ ಈ ಎಲ್ಲಾ ಕಾರ್ಯವಿಧಾನಗಳನ್ನು ನಡೆಸಲಾಗುವುದು. ಪ್ರಸವಪೂರ್ವ ಪರೀಕ್ಷೆಯ ಸಂದರ್ಭಗಳಲ್ಲಿ ಲಿಂಗ ನಿರ್ಧಾರಣೆಗಾಗಿ ಸ್ಕ್ಯಾನಿಂಗ್‌ ಮಾಡಲು ವೈದ್ಯರಲ್ಲಿ ಮನವಿ ಮಾಡುವುದನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

Comments are closed.