ಮೊನೊನ್ಯೂಕ್ಲಿಯೊಸಿಸ್ ಸೋಂಕನ್ನು “ಚುಂಬನ ರೋಗ” ಅಥವಾ ಮುತ್ತು ನೀಡುವುದರಿಂದ ಬರುವ ರೋಗ ಎಂದು ಸಹ ಕರೆಯುತ್ತಾರೆ. ಈ ರೋಗವು ಮುಖ್ಯವಾಗಿ ಜೊಲ್ಲು ಅಥವಾ ಲಾಲಾರಸದಿಂದ ಹರಡುತ್ತದೆ. ಇದು ಸಾಮಾನ್ಯವಾಗಿ ಯುವ ಜನರಲ್ಲಿ ಮತ್ತು ಹದಿಹರೆಯದವರಲ್ಲಿ ಕಂಡು ಬರುತ್ತದೆಯಾದರೂ, ಎಲ್ಲಾ ವಯೋಮಾನದವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದನ್ನು ಮೊನೊ, ಮೊನೊನ್ಯೂಕ್ಲಿಯೊಸಿಸ್ ಮತ್ತು ಗ್ಲಾಂಡುಲರ್ ಜ್ವರವೆಂದು ಸಹ ಕರೆಯುತ್ತಾರೆ.
ಕಾರಣಗಳು:
ಮೊನೊನ್ಯೂಕ್ಲಿಯೊಸಿಸ್ ಸೋಂಕಿಗೆ ಇತರೆ ವೈರಸ್‌ಗಳು ಸಹ ಕಾರಣವಾಗುತ್ತವೆಯಾದರೂ, ಮುಖ್ಯವಾಗಿ ಇದಕ್ಕೆ ಕಾರಣವಾಗುವುದು ಎಪ್‌ಸ್ಟೇನ್-ಬಾರ್ರ್ ವೈರಸ್(EBV). ಈ ವೈರಸ್ ಸಾಮಾನ್ಯವಾಗಿ ನಮ್ಮ ದೇಹದ ದ್ರವಗಳ ಮೂಲಕ ಪಸರಿಸುತ್ತದೆ. ಮುಖ್ಯವಾಗಿ ಇದು ಲಾಲಾರಸದಿಂದ ಪಸರಿಸುತ್ತದೆ. ಇದೇ ಅಲ್ಲದೆ ವೀರ್ಯ, ರಕ್ತ ಮತ್ತು ಅಂಗಕಸಿಗಳ ಮೂಲಕ ಸಹ ಈ ವೈರಸ್ ಇತರರಿಗೆ ವರ್ಗಾವಣೆಯಾಗುತ್ತದೆ.
ಅಪಾಯಕಾರಿ ಗುಂಪುಗಳು:
ಮೊನೊನ್ಯೂಕ್ಲಿಯೊಸಿಸ್ ಸೋಂಕು ತಗುಲುವ ಅಪಾಯವಿರುವ ವ್ಯಕ್ತಿಗಳು ಯಾರೆಂದರೆ:
* 15-30 ವರ್ಷ ವಯಸ್ಸಿನ ಒಳಗಿನ ಜನರು
* ಆಸ್ಪತ್ರೆ ಸಿಬ್ಬಂದಿ
* ಶುಶ್ರೂಷಕರು
* ತಮಗೆ ಇರುವ ರೋಗ ನಿರೋಧಕ ಶಕ್ತಿಯ ಕೊರತೆಗಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು
* ರೋಗ ಲಕ್ಷಣಗಳು
* ಮೊನೊನ್ಯೂಕ್ಲಿಯೊಸಿಸ್ ಸೋಂಕಿನ ರೋಗ ಲಕ್ಷಣಗಳು ಸೋಂಕು ತಗುಲಿದ 4-6 ವಾರಗಳ ನಂತರ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಈ ರೋಗ ಲಕ್ಷಣಗಳು ಸಾಮಾನ್ಯವಾಗಿ ನಿಧಾನವಾಗಿ ಉಲ್ಬಣವಾಗುತ್ತವೆಯಾದ್ದರಿಂದ, ಎಲ್ಲಾ ಸಮಯದಲ್ಲಿ ಇದು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಇದರ ರೋಗ ಲಕ್ಷಣಗಳು ಇಂತಿವೆ:
* ಆಯಾಸ
* ಜ್ವರ
* ಗಂಟಲು ಕೆರೆತ
* ತಲೆನೋವು
* ಮೈಕೈ ನೋವು
* ಊದಿಕೊಂಡ ದುಗ್ಧರಸ ಗ್ರಂಥಿಗಳು
* ಕೆಲವೊಮ್ಮೆ ಗುಲ್ಮ (ಸ್ಪ್ಲೀನ್) ಮತ್ತು ಕರುಳು ಊದಿಕೊಳ್ಳಬಹುದು. ತುಂಬಾ ಅಪರೂಪವಾಗಿ ಈ ರೋಗಲಕ್ಷಣಗಳು ಗುಣವಾಗಲು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.
* ರೋಗ ನಿಶ್ಚಯ
* ರೋಗ ಲಕ್ಷಣಗಳ ಆಧಾರದ ಮೇಲೆ ನಿಮ್ಮ ವೈದ್ಯರು ಮೊನೊನ್ಯೂಕ್ಲಿಯೊಸಿಸ್ ಸೋಂಕನ್ನು ಪತ್ತೆ ಹಚ್ಚಬಹುದು. ನಿಮ್ಮ ವೈದ್ಯರು ಊದಿಕೊಂಡ ದುಗ್ಧರಸ ಗ್ರಂಥಿಗಳನ್ನು, ಗುಲ್ಮ ಅಥವಾ ಕರುಳನ್ನು ಗುರುತಿಸಬಹುದು ಇಲ್ಲವೇ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸಲು ಸೂಚಿಸಬಹುದು:
ಎಪ್‌ಸ್ಟೇನ್-ಬಾರ್ ವೈರಸ್ ಆಂಟಿಬಾಡಿಸ್ ಪರೀಕ್ಷೆ: ನಿಮ್ಮ ರಕ್ತದಲ್ಲಿ EBV ಗೆ ಸಂಬಂಧಿಸಿದ ಆಂಟಿಬಾಡಿಗಳು ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಲಾಗುತ್ತದೆ.
ಸಂಪೂರ್ಣ ರಕ್ತ ಕಣಗಳ ಪರೀಕ್ಷೆ (ಕಂಪ್ಲೀಟ್ ಬ್ಲಡ್ ಕೌಂಟ್-ಸಿಬಿಸಿ): ಬಿಳಿಯ ರಕ್ತ ಕಣಗಳ ಸಂಖ್ಯೆಯಲ್ಲಿ ಏನಾದರೂ ಏರು-ಪೇರು ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.
* ಚಿಕಿತ್ಸೆ:
ಮೊನೊನ್ಯೂಕ್ಲಿಯೊಸಿಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಈ ಸೋಂಕು ಸ್ವಭಾವತಃ ಅಂಟುರೋಗವಾಗಿರುತ್ತದೆ (ವೈರಲ್). ಇದನ್ನು ಗುಣಪಡಿಸಲು ಆಂಟಿಬಯೋಟಿಕ್‌ಗಳನ್ನು ನೀಡಲಾಗುವುದಿಲ್ಲ. ಮುಖ್ಯವಾಗಿ ಅಮೊಕ್ಸಿಲ್ಲಿನ್ ಮತ್ತು ಪೆನ್ಸಿಲಿನ್‌ನ ಉತ್ಪನ್ನಗಳನ್ನು ಇದಕ್ಕೆ ನೀಡಲಾಗುವುದಿಲ್ಲ. ಏಕೆಂದರೆ ಇವುಗಳನ್ನು ನೀಡಿದರೆ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಚೆನ್ನಾಗಿ ನೀರು ಮತ್ತು ದ್ರವಾಹಾರವನ್ನು ಸೇವಿಸುವ ಮೂಲಕ ಹಾಗು ಚೆನ್ನಾಗಿ ವಿಶ್ರಾಂತಿಯನ್ನು ಪಡೆಯುವ ಮೂಲಕ ರೋಗ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು.ನಿಮ್ಮ ವೈದ್ಯರು ದ್ವಿತೀಯ ಸೋಂಕು ಮತ್ತು ನೋವಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಔಷಧಿಗಳನ್ನು ನೀಡಬಹುದು.
ನಿಯಂತ್ರಣೋಪಾಯಗಳು:
ಮೊನೊನ್ಯೂಕ್ಲಿಯೊಸಿಸ್ ಸೋಂಕು ನಿಯಂತ್ರಿಸಲು ಯಾವುದೇ ಲಸಿಕೆಗಳನ್ನು ನೀಡಲಾಗುವುದಿಲ್ಲ. ಈ ಸೋಂಕಿನಿಂದ ರಕ್ಷಣೆ ಪಡೆಯಲು ಚುಂಬಿಸುವುದು, ಆಹಾರ, ಪಾನೀಯ ಅಥವಾ ಇತರೆ ವೈಯಕ್ತಿಕ ವಸ್ತುಗಳನ್ನು ಮೊನೊನ್ಯೂಕ್ಲಿಯೊಸಿಸ್ ಸೋಂಕು ಇರುವವರ ಜೊತೆಗೆ ಹಂಚಿಕೊಳ್ಳದೆ ಇರುವುದೇ ನಿಯಂತ್ರಣೋಪಾಯಗಳಾಗಿರುತ್ತವೆ.
*ತೊಡಕುಗಳು:ಇದರ ತೊಡಕುಗಳು ಇಂತಿವೆ:
ಸ್ಪ್ಲೀನ್ ಊದಿಕೊಳ್ಳುತ್ತದೆ
ಲಿವರ್‌ನಲ್ಲಿ ಸಮಸ್ಯೆ ಕಂಡು ಬರುತ್ತದೆ -ಹೆಪಟೈಟಿಸ್ ಅಥವಾ ಕಾಮಾಲೆ ಕಾಣಿಸಿಕೊಳ್ಳುತ್ತದೆ
ಅಪರೂಪವಾಗಿ ಅನಿಮಿಯಾ, ಮೆನಿಂಜೈಟಿಸ್ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
*ಮುಂದಿನ ಹಂತಗಳು:
ನಿಮ್ಮ ವೈದ್ಯರು ತಿಳಿಸುವವರೆಗೆ ಆಟವಾಡಲು ಹೋಗಬೇಡಿ. ಸ್ಪ್ಲೀನ್ ತಾತ್ಕಾಲಿಕವಾಗಿ ಊದಿಕೊಂಡಿರಬಹುದು ಮತ್ತು ಈ ಸಮಯದಲ್ಲಿ ಸ್ಪ್ಲೀನ್ ಸುಲಭವಾಗಿ ಒಡೆದು ಹೋಗಬಹುದು ಮತ್ತು ದೇಹದ ಒಳಗೆ ರಕ್ತಸ್ರಾವಕ್ಕೆ ಕಾರಣವಾಗಬಹುದು ಹಾಗು ಹೊಟ್ಟೆ ನೋವು ಮತ್ತು ಜ್ವರ ಕಾಣಿಸಿಕೊಳ್ಳಬಹುದು.
* ಅಪಾಯಕಾರಿ ಸೂಚನೆಗಳು:
ಕೆಳ ಹೊಟ್ಟೆಯ ಎಡಭಾಗದಲ್ಲಿ ಇದ್ದಕ್ಕಿದ್ದಂತೆ ನಿಮಗೆ ತೀವ್ರ ನೋವು ಕಾಣಿಸಿಕೊಂಡಲ್ಲಿ, ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ಸ್ಪ್ಲೀನ್ ಒಡೆದು ಹೋಗಿ ಕಾಣಿಸಿಕೊಳ್ಳಬಹುದು. ಇದಕ್ಕೆ ಶೀಘ್ರವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುತ್ತದೆ.