ಬೆಂಗಳೂರು: ರಾಮಚಂದ್ರಪುರ ಮಠ ರಾಘವೇಶ್ವರ ಭಾರತೀ ಶ್ರೀಗಳು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿ ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಇಂದು ಗಿರಿನಗರದ ಮಠದ ಶಾಖೆಯಲ್ಲಿ ಭಕ್ತರು ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ನಮಗೆ ಏನು ಆಗಿಲ್ಲ. ನಿನ್ನೆ ಚೆನ್ನಾಗಿಯೇ ಇದ್ದೆ. ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ನೋಡಿದೆ. ಆತ್ಮಹತ್ಯೆ ಮಹಾ ಪಾಪ ಅಂತ ಮಠ ನಂಬಿದೆ. ಆತ್ಮಹತ್ಯೆ ಮಾಡಿಕೊಳ್ಳುವರಿಗೆ ಮಠ ಧೈರ್ಯ ತುಂಬಿದೆ ಎಂದು ಹೇಳಿದರು.
ನಮಗೆ ತುಂಬಾ ಭಕ್ತರು ಹಾಗೂ ಹಲವರು ಕರೆ ಮಾಡುತ್ತಿದ್ದಾರೆ. ಆ ರೀತಿ ಏನೂ ಆಗಿಲ್ಲ ಎಂದು ಹೇಳುತ್ತಿದ್ದೇನೆ. ಹುಚ್ಚಾಟಕ್ಕೆ ಒಂದು ಮಿತಿ ಇರಬೇಕು. ಇದು ನಗೆ ಪಾಟಲಿನ ಸುದ್ದಿ. ನನ್ನ ವಿರುದ್ಧ ಯಾರು ಪಿತೂರಿ ನಡೆಸಿದ್ದಾರೋ ಅವರೇ ಇದನ್ನು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಠ ಈ ಹಿಂದೆ ಹಲವು ಕಠಿಣ ಸಂದರ್ಭಗಳನ್ನು ಎದುರಿಸಿದೆ. ಹಲವರು ನಾವು ಎದುರಿಸಿರುವ ಘಟನೆ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ನಿನ್ನೆ ಪೊಲೀಸರು ಬಂದಿದ್ರು ಅಂತ ಹೇಳಿದರು. ಅದು ಎಲ್ಲ ಸುಳ್ಳು. ಮಠ ಇದರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೆ. ಯಾರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ಧಾರೆ ಅದು ಗೊತ್ತು. ಯಾರು ಈ ಹಿಂದೆ ಕೇಸ್ಗಳನ್ನು ಹಾಕಿದ್ರು ಅವರೆಲ್ಲಾ ಗೊತ್ತು. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ತಿವಿ. ಪದೇ ಪದೇ ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ. ಮಿಥ್ಯ ಹತ್ಯೆಗೆ ಸಮಾನ. ಇದೊಂದು ಕೊಲೆಗೆ ಸಮ ಎಂದರು.
ನನ್ನ ಶರೀರವೂ ಸ್ವಸ್ಥ, ಮನಸ್ಸು ಸ್ವಸ್ಥ. ನನಗೆ ಯಾವುದೇ ರೋಗವೂ ಇಲ್ಲ. ನಾನು ರಾತ್ರಿ ಪೂಜೆ ಮುಗಿಸಿ ಮಲಗಿದ್ದೇನೆ. ಬೆಳಿಗ್ಗೆ ಎದ್ದ ನಂತರ ಗೊತ್ತಾಗಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿರುವುದು. ನಮ್ಮ ಮಠದಲ್ಲಿ ಆತ್ಮಹತ್ಯೆಗೆ ಯತ್ನಿಸುವವರ ಮನ ಪರಿವರ್ತನೆ ಮಾಡಲಾಗುತ್ತೆ. ಆದ್ರೆ ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.