ಆರೋಗ್ಯ

ಲಕ್ವ(ಪಾರ್ಶ್ವವಾಯು) ತಗಲುವ ಸಾಮಾನ್ಯ ಲಕ್ಷಣಗಳು.

Pinterest LinkedIn Tumblr

 

stroke_solution_1

ಮೆದುಳಿಗೆ ಸಂಬಂಧಿಸಿದ ಕಾಯಿಲೆಯೇ ಪಾರ್ಶ್ವವಾಯು ಅಥವಾ ಲಕ್ವ ಎನ್ನುತ್ತಾರೆ. ಮೆದುಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದರೆ ಅಥವಾ ಸ್ಥಗಿತಗೊಂಡರೆ ಪಾರ್ಶ್ವವಾಯು ಬರುತ್ತದೆ. ರೋಗವನ್ನು ಸರಿಯಾಗಿ ಗುರುತಿಸಿ ಆದಷ್ಟು ಬೇಗ ಚಿಕಿತ್ಸೆ ಪಡೆದರೆ ಅಂಗಗಳ ನ್ಯೂನತೆಯ ಪ್ರಮಾಣ ಕಡಿಮೆ ಮಾಡಬಹುದು. ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳೆಂದರೆ, ಆಘಾತಗೊಂಡ ಮೆದುಳಿನ ಭಾಗವು ದೇಹದ ಯಾವ ಅಂಗವನ್ನು ನಿಯಂತ್ರಿಸುತ್ತದೋ ಆ ಅಂಗ ಬಲಹೀನತೆಗೆ ತುತ್ತಾಗುತ್ತದೆ.

ಪಾರ್ಶ್ವವಾಯುವಿನ ಸಾಮಾನ್ಯ ಪ್ರಕಾರಗಳು:
1. ಇಸ್ಕೀಮಿಕ್ ಪ್ರಕಾರದ ಪಾರ್ಶ್ವವಾಯುವಿನಲ್ಲಿ ಮೆದುಳಿನ ರಕ್ತನಾಳಗಳಲ್ಲಿ ತ್ರೋಂಬೋಸಿಸ್ (ರಕ್ತ ಹೆಪ್ಪುಗಟ್ಟುವಿಕೆ) ಅಥವಾ ಎಂಬೋಲಿಸಮ್ (ಗಾಳಿಯ ಗುಳ್ಳೆಗಳು) ಉಂಟಾಗಿ ಜೀವಕೋಶಗಳಿಗೆ 3 ನಿಮಿಷಕ್ಕೂ ಅಧಿಕ ಸಮಯದವರೆಗೆ ರಕ್ತ ಹಾಗೂ ಜೀವಸತ್ವಗಳ ಕೊರತೆಯಿಂದ ಅಮ್ಲಜನಕದ ಪೂರೈಕೆ ನಿಂತುಹೋಗಿ ಆ ಭಾಗದ ನರತಂತುಗಳು ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಇನ್ನು ಹೆಮೋರೇಜಿಕ್ ಪ್ರಕಾರದ ಪಾರ್ಶ್ವವಾಯುವಿನಲ್ಲಿ ಮೆದುಳಿಗೆ ಆಘಾತವಾದಾಗ ಅಥವಾ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿ ಸುತ್ತಮುತ್ತಲ ಜೀವಕೋಶಗಳಿಗೆ ಹಾನಿಯುಂಟಾಗುತ್ತದೆ.

2. ಅಧಿಕ ರಕ್ತದೊತ್ತಡದಿಂದ ಬಳಲುವವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಲೆಕ್ಯುನರ್ ಪ್ರಕಾರದ ಪಾರ್ಶ್ವವಾಯುವು ಚಿರಕಾಲೀನ ಅಧಿಕ ರಕ್ತದೊತ್ತಡ-ಮಧುಮೇಹ ಪೀಡಿತ ರೋಗಿಗಳಲ್ಲಿ ರಕ್ತನಾಳಗಳು ಸಂಕುಚಿತಗೊಂಡು ಫೈಬ್ರೋಸಿಸ್ ಉಂಟಾಗಿರುತ್ತದೆ. ಕಾರಣ ತ್ರೋಬೋಸಿಸ್ ಉಂಟಾಗುವ ಅಥವಾ ರಕ್ತನಾಳ ಒಡೆದು ರಕ್ತಸ್ರಾವವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಪಾರ್ಶ್ವವಾಯುವಿನ ಲಕ್ಷಣಗಳು:
ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳೆಂದರೆ, ಆಘಾತಗೊಂಡ ಮೆದುಳಿನ ಭಾಗವು ದೇಹದ ಯಾವ ಅಂಗವನ್ನು ನಿಯಂತ್ರಿಸುತ್ತದೋ ಆ ಅಂಗ ಬಲಹೀನತೆಗೆ ತುತ್ತಾಗುತ್ತದೆ. ಉದಾ: ಮೆದುಳಿನ ಎಡಭಾಗ ಆಘಾತಕ್ಕೀಡಾದರೆ ದೇಹದ ಬಲಭಾಗ ಆಘಾತಕ್ಕೀಡಾಗುತ್ತದೆ. ನೇರವಾಗಿ ನಿಲ್ಲಲ್ಲು, ಕೂರಲು, ನಡೆಯಲು ಅಶಕ್ತರಾಗುವುದು, ತಲೆನೋವು, ತಳಮಳ, ಎಚ್ಚರ ತಪ್ಪುವುದು, ಅಸ್ಪಷ್ಟಮಾತು, ಮಲ-ಮೂತ್ರಗಳು ಅರಿವಿಲ್ಲದಂತೆ ವಿಸರ್ಜನೆಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ಮೆದುಳಿನ ಯಾವ ಭಾಗದಲ್ಲಿ ರಕ್ತನಾಳದಲ್ಲಿ ದುಷ್ಪರಿಣಾಮ ಉಂಟಾಗಿದೆ? ಅದರ ತೀವ್ರತೆಗಳನ್ನಾಧರಿಸಿ ಆಯುರ್ವೇದದಲ್ಲಿ ಪಾರ್ಶ್ವವಾಯುವಿನಲ್ಲಿ ವಿವಿಧ ಬಗೆಗಳನ್ನು ವಿವರಿಸಿದ್ದಾರೆ. ಕೇವಲ ಒಂದು ಅಂಗ (ಒಂದು ಕೈ ಅಥವಾ ಒಂದು ಕಾಲು) ಒಳಗೊಂಡರೆ ಏಕಾಂಗವಾತ. ಎಡ ಅಥವಾ ಬಲ ಭಾಗದ ಕೈ-ಕಾಲು ಒಳಗೊಂಡಿದ್ದರೆ ಅರ್ಧಾಂಗವಾತ. ಕೇವಲ ಎರಡೂ ಕಾಲುಗಳು ಒಳಗೊಂಡಿದ್ದರೆ ಅಧರಾಂಗವಾತ. ಎಲ್ಲ ಅಂಗಗಳನ್ನೂ ಒಳಗೊಂಡಿದ್ದರೆ ಸರ್ವಾಂಗವಾತ ಎಂದು ಕರೆಯುವರು.

ಇನ್ನು ಕೆಲವೊಮ್ಮೆ ಮುಖದ ಒಂದು ಪಾರ್ಶ್ವದಲ್ಲಿ ಜಡತೆ, ನೋವು, ಅಸ್ಪಷ್ಟ ಮಾತು, ತುಟಿಗಳು ಒಂದೆಡೆ ಎಳೆಯುವುದು, ಲಾಲಾಸ್ರಾವ ಸುರಿಯುವುದು ಕಂಡುಬಂದರೆ ಅದನ್ನು ಅರ್ದಿತ (ಬೆಲ್ಸ್ ಪಾಲ್ಸಿ) ಎಂದು ಕರೆಯುವರು. ಆಯುರ್ವೇದದಲ್ಲಿ ವರ್ಣಿತ ಪಕ್ಷಾಘಾತವೇ ಈ ಪಾರ್ಶ್ವವಾಯು. ಪಕ್ಷ ಅಂದರೆ ಅರ್ಧಭಾಗ ಘಾತ ಎಂದರೆ ಸ್ವಾಧೀನ ಕಳೆದುಕೊಳ್ಳುವುದು. ಅಂದರೆ ಶರೀರದ ಅರ್ಧಭಾಗ ರೋಗಿಯ ಸ್ವಾಧೀನ ಕಳೆದುಕೊಳ್ಳುವುದು ಎಂದರ್ಥ. ಈ ಪಕ್ಷಾಘಾತವನ್ನು ವಾತವಾಧಿಗಳಲ್ಲಿ ವರ್ಣಿಸಲಾಗಿದೆ.

ಪಾರ್ಶ್ವವಾಯು ಅಥವಾ ಲಕ್ವ ಎಂದಾಗ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಕೇರಳದ ಪ್ರಸಿದ್ಧ ಆಯುರ್ವೇದೀಯ ಪಂಚಕರ್ಮ ಚಿಕಿತ್ಸೆ ನಿಜ! ಹಿಂದೆಲ್ಲ ಒಮ್ಮೆ ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ ಗುಣಮುಖವಾಗುವುದು ಅಪರೂಪ ಎಂದೇ ತಿಳಿಯಲಾಗಿತ್ತು. ಆದರೆ ಸದ್ಯ ಪರಿಸ್ಥಿತಿ ಬದಲಾಗಿದೆ ನಾನಾ ರೀತಿಯ ಚಿಕಿತ್ಸಾ ವಿಧಾನಗಳು ಇದಕ್ಕೆ ಲಭ್ಯವಾಗಿವೆ. ಆದರೆ ಪಾರ್ಶ್ವವಾಯುವಿನ ಕಾರಣಗಳು, ಪ್ರಕಾರ, ತೀವ್ರತೆಯನ್ನು ಪರೀಕ್ಷೆಗಳಿಂದ ಅರಿತು ರೋಗವನ್ನು ಸರಿಯಾಗಿ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ನೀಡಬೇಕು.

ಪಾರ್ಶ್ವವಾಯುವಿನಲ್ಲಿ ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ನಿಜ. ಆದರೆ ತುರ್ತು ಸ್ಥಿತಿಯಲ್ಲಿ ತ್ರೋಬೋಸಿಸ್ ನಿವಾರಣೆ, ಹೆಮೋರೇಜಿಕ್ ಲಕ್ವದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಆಧುನಿಕ ಔಷಧಿ ಬಳಕೆ, ರಕ್ತಸಂಚಾರವನ್ನು ತಡೆಹಿಡಿದಿರುವ ವಸ್ತು (ಹೆಮಟೋಮ)ವನ್ನು ಶಸ್ತ್ರಚಿಕಿತ್ಸೆಯ ಮೂಲಕ ತಗೆದು ರೋಗಿಗೆ ಗ್ಲೂಕೋಸ್ ಹಾಗೂ ಇನ್ನಿತರ ಪೋಷಕ ಸತ್ವಗಳನ್ನು ಒದಗಿಸಲು ಆಧುನಿಕ ಚಿಕಿತ್ಸಾ ವಿಧಾನಗಳನ್ನು ಬಳಸಿ ರೋಗದ ತೀವ್ರತೆ ಶಾಂತವಾದ ಬಳಿಕ ಮಾಂಸ ಪೇಶಿಗಳಲ್ಲಾದ ಜಡತೆ, ಕಾಠಿಣ್ಯತೆ, ಹಾಗೂ ಸ್ನಾಯುಗಳಲ್ಲಿನ ಸಂಕೋಚ ಕಡಿಮೆ ಮಾಡಲು ಆಯುರ್ವೇದದಲ್ಲಿ ವರ್ಣಿತ ವಿವಿಧ ಔಷಧೀಯ ತೈಲಗಳಿಂದ ಅಭ್ಯಂಜನ (ಮಸಾಜ್ ಮಾಡುವುದು) ಸ್ವೇದನ (ಬಾಷ್ಪಕೊಡುವುದು), ವಮನ- ಔಷಧಿ ದ್ರವ್ಯವನ್ನು ಮುಖಮಾರ್ಗದಿಂದ ಸೇವಿಸಿ ಕಫ ದೋಷವನ್ನು (ವಾಂತಿ ಮಾಡಿಸುವುದು) ಹೊರಹಾಕುವುದು, ವಿರೇಚನ ಔಷಧಿ ದ್ರವ್ಯನೀಡಿ ಪಿತ್ತ ದೋಷವನ್ನು (ಭೇದಿ ಮಾಡಿಸುವುದು) ಹೊರಹಾಕುವುದು, ಬಸ್ತಿ-ಗುದ ಮಾರ್ಗದಿಂದ ಔಷಧಿಗಳನ್ನು ಪ್ರಯೋಗಿಸಿ ವಾತ ದೋಷವನ್ನು (ಎನಿಮಾ) ಹೊರಹಾಕುವುದು, ನಸ್ಯ-ಮೂಗಿನಿಂದ ಔಷಧಿ ಪ್ರಯೋಗಿಸಿ (ನೆಸಲ್) ಶಿರೋ ಭಾಗದ ಕಫ ದೋಷವನ್ನು ಹೊರಹಾಕುವುದು, ಹಾಗೂ ರಕ್ತಮೋಕ್ಷಣ- ಶರೀರದಿಂದ ದೂಷಿತ ರಕ್ತನಿರ್ಹರಣ ಮಾಡುವುದು (ಬ್ಲಡ್ ಲೆಟಿಂಗ್) ಮುಂತಾದ ಪಂಚಕರ್ಮಗಳನ್ನು ದೋಷಾನುಸಾರ ಅಳವಡಿಸಲಾಗುವುದು. ಇನ್ನು ಅರ್ದಿತ (ಬೆಲ್ಸ್ ಪಾಲ್ಸಿ) ಯಲ್ಲಿ ಮುಖದ ಮಾಂಸಪೇಶಿಗಳಿಗೆ ಬಲ ನೀಡಲು ಕವಲ-ಗಂಡೂಷ (ಆಯಿಲ್ ಪುಲ್ಲಿಂಗ್), ನೇತ್ರ ತರ್ಪಣ (ಔಷಧಿಸಿದ್ಧ ಘೃತ-ತೈಲಗಳನ್ನು ಕಣ್ಣಿನ ಮೇಲೆ ನಿರ್ದಿಷ್ಟ ಸಮಯದ ವರೆಗೆ ನಿಲ್ಲಿಸುವುದು), ಉಪನಾಹ (ಔಷಧಿಗಳ ಲೇಪನ) ಹಾಕುವುದರಿಂದ ಚಿಕಿತ್ಸೆ ನೀಡಬಹುದು.

ಇದಲ್ಲದೇ ಫಿಸಿಯೋಥೆರಪಿಯಿಂದ ಕ್ರಿಯಾಹೀನವಾಗಿರುವ ಭಾಗದಲ್ಲಿ ಬಲವನ್ನು ತುಂಬುವ ಸಿ.ಐ.ಎಂ.ಟಿ (constraint induced movement therapy for stroke) ಚಿಕಿತ್ಸೆ ಕೂಡ ಲಾಭದಾಯಕ. ಅಂದರೆ ಪೀಡಿತನ ಆರೋಗ್ಯವಂತ ಅಂಗಗಳನ್ನು ಕೆಲ ಸಮಯದ ವರೆಗೆ ನಿರ್ಭಂಧಿಸಿ ನ್ಯೂನತೆಯುಳ್ಳ ಅಂಗಗಳನ್ನು ನಿರಂತರ ಪುನಶ್ಚೇತನ ಚಿಕಿತ್ಸೆಗೆ ಒಳಪಡಿಸುವುದು. ಹೀಗೆ ಮಾಡುವುದರಿಂದ ಕೆಲವೇ ವಾರಗಳಲ್ಲಿ ನ್ಯೂನ ಅಂಗಗಳು ಮತ್ತೆ ಚಲನಾ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಆದ್ದರಿಂದ ಪಾರ್ಶ್ವವಾಯುವಿನಲ್ಲಿ ಕಾರಣ, ತೀವ್ರತೆ, ಅವಸ್ಥೆಗನುಗುಣವಾಗಿ ಆಯಾ ಪದ್ಧತಿಯ ಆಧುನಿಕ, ಆಯುರ್ವೇದ, ಫಿಸಿಯೋಥೆರಪಿ ಎನ್ನದೇ ಯಾವುದರಿಂದ ರೋಗಿಗೆ ಆ ಪರಿಸ್ಥಿತಿಯಲ್ಲಿ ಹೆಚ್ಚು ಲಾಭವಾಗುತ್ತದೆಂದು ತಿಳಿದು ಚಿಕಿತ್ಸೆ ಕೊಡಿಸಬೇಕು.

ಇಲ್ಲಿ ರೋಗಿಯ ಆರೋಗ್ಯ ಮುಖ್ಯವೇ ಹೊರತು ಚಿಕಿತ್ಸಾ ಪದ್ಧತಿಗಳಲ್ಲ. ಈ ರೀತಿ ರೋಗಿಯ ನರತಂತು, ಸ್ನಾಯು, ಮಾಂಸಪೇಶಿಗಳಲ್ಲಿ ಆಗುವ ನಿರಂತರ ಬದಲಾವಣೆ ಪ್ರಕ್ರಿಯೆಯಿಂದ ರೋಗಿಯ ನ್ಯೂನ ಅಂಗಗಳು ಮತ್ತೆ ಚೇತರಿಸಿಕೊಂಡು ಚಲನೆಯನ್ನು ಕಂಡುಕೊಳ್ಳುತ್ತವೆ. ಇದರಿಂದ ಪಾರ್ಶ್ವವಾಯು ಪೀಡಿತರ ಅಂಗವೈಕಲ್ಯವನ್ನು ಸಂಪೂರ್ಣವಾಗಿ ಸರಿಪಡಿಸಲಾಗದಿದ್ದರೂ ರೋಗಿ ತನ್ನ ದೈನಂದಿನ ಕೆಲಸಗಳಿಗೆ ಯಾರ ಮೇಲೂ ಹೊರೆಯಾಗದಂತೆ ಜೀವನ ಸಾಗಿಸಬಹುದು.

Comments are closed.