ಆರೋಗ್ಯ

ಕಟ್ಟುಕಟ್ಟಳೆಗಳ ಸುರಿಮಳೆಯಾದ ಹೆಣ್ಣಿನ ಮುಟ್ಟು. ನಿಜನೋ… ಸುಳ್ಳೋ….!

Pinterest LinkedIn Tumblr

period_pain_day

ಮಂಗಳೂರು: ಮುಟ್ಟು ಹೆಣ್ಣಿನ ಪಾಲಿಗೆ ವೈರುದ್ಧ್ಯಗಳ ಗಂಟು. ಆಕೆಗೆ ಮುಟ್ಟು, ಆದರೆ ಮುಟ್ಟಬಾರದು. ಮುಟ್ಟು ಬೇಕು, ಆಕೆ ಬೇಡ. ಸ್ತ್ರೀಸಹಜವಾದ ಸರಳ ಜೈವಿಕ ಪ್ರಕ್ರಿಯೆಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ನೈತಿಕ ಪ್ರತಿಬಂಧಗಳು. ಅವುಗಳಿಂದಾಗಿ ಮುಟ್ಟನ್ನು ಗುಟ್ಟಾಗಿಟ್ಟು ನಾಚಿಕೆ, ಭಯ, ಆತಂಕಗಳನ್ನು ಅನುಭವಿಸಬೇಕಾದ ಸಂದಿಗ್ಧತೆ ಒಂದೆಡೆ; ಕುಟುಂಬದಲ್ಲಿ, ಶಾಲೆ-ಕಾಲೇಜುಗಳಲ್ಲಿ, ಸಂಬಂಧಿಕರಲ್ಲಿ, ಅಥವಾ ಎಲ್ಲರೆದುರಲ್ಲಿ ಪಿಸುಮಾತಲ್ಲಿ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಈ ತೊಳಲಾಟದಲ್ಲಿ ಬೇಕಾದದ್ದು ಬೇಡವೆನಿಸುವಷ್ಟು ನೋವು; ಆರೋಗ್ಯದ ಲಕ್ಷಣವೇ ಆನಾರೋಗ್ಯಕ್ಕೂ, ಮಾನಸಿಕ ಆತಂಕಗಳಿಗೂ ಕಾರಣವಾಗಿ ಸಂಭ್ರಮವೇ ಬಂಧನವಾಗುವ ದುರವಸ್ಥೆ. ಹೆಣ್ಣಿನ ಶಕ್ತಿಯೇ ಅವಳ ದೌರ್ಬಲ್ಯವಾಗಿರುವ ವಿಪರ್ಯಾಸವಿದು; ಭಯಗೊಂಡ ಗಂಡಿನ ದೌರ್ಜನ್ಯಕ್ಕೂ, ಅದಕ್ಕೆ ತಗ್ಗಿ,ಒಗ್ಗಿಕೊಂಡಿರುವ ಹೆಣ್ಣಿನ ಸೌಜನ್ಯಕ್ಕೂ ಪುರಾವೆಯಿದು.

ಮುಟ್ಟಾದ ಹೆಣ್ಣನ್ನು ಮೂಲೆಗಟ್ಟುವ ಪದ್ಧತಿಯು ಮೂರ್ನಾಲ್ಕು ಸಾವಿರ ವರ್ಷಗಳಿಂದ ವಿಶ್ವವ್ಯಾಪಿಯಾಗಿದೆ. ನಮ್ಮ ದೇಶದಲ್ಲಿ ಪ್ರಚಲಿತವಿರುವ ಎಲ್ಲಾ ಮತಗಳು ಮುಟ್ಟಾದ ಹೆಣ್ಣನ್ನು ಅಪವಿತ್ರಳೆಂದು ದೂರವಿಟ್ಟಿವೆ.ಹಿಂದಿನಕಾಲದಲ್ಲಿ ಹಾಗೂ ಇನ್ನೂ ಹಲವು ಕಡೇ ಈ ಪದ್ದತಿಗಳು ಇನ್ನೂ ಜೀವಂತವಾಗಿವೆ . ಅವುಗಳೆಂದರೆ ದೇವರ ಬಳಿ ಸುಳಿಯಬಾರದು, ಪವಿತ್ರ ಗ್ರಂಥಗಳನ್ನು ಮುಟ್ಟಬಾರದು,ಪ್ರಾರ್ಥಿಸಬಾರದು, ಸ್ನಾನ-ಮೈಶುದ್ಧಿ ಮಾಡಿಕೊಳ್ಳಬಾರದು, ತಿಂದುಳಿದ ಆಹಾರವನ್ನು ನಾಯಿಗೂ ಎಸೆಯಬಾರದು, ಗಂಡಸರನ್ನು ನೋಡಬಾರದು, ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು, ಅಲಂಕರಿಸಿಕೊಳ್ಳಬಾರದು, ಹೂಗಳನ್ನು ಮುಟ್ಟಬಾರದು, ಉಪ್ಪಿನಕಾಯಿ ಮುಟ್ಟಬಾರದು,ಅಡುಗೆ ಮಾಡಬಾರದು, ಮಾಂಸದೂಟ ಮಾಡಬಾರದು, ಪ್ರತ್ಯೇಕ ಕೋಣೆಯಲ್ಲಿ ಅಥವಾ ಹಟ್ಟಿಯಲ್ಲಿ ಹುಲ್ಲಿನಲ್ಲಿ ಮಲಗಬೇಕು, ಕೊಟ್ಟದ್ದನ್ನು ತಿನ್ನಬೇಕು, ತನ್ನ ಬಟ್ಟೆಗಳನ್ನೂ, ತಟ್ಟೆಗಳನ್ನೂ ಪ್ರತ್ಯೇಕವಾಗಿ ತೊಳೆಯಬೇಕು ಇತ್ಯಾದಿಗಳು.

ಮುಟ್ಟಿನ ನಿರ್ಬಂಧಗಳಿಂದ ಪ್ರತೀ ತಿಂಗಳು ಆಕೆಯನ್ನು ಬಿಗಿಯಲಾಗುತ್ತಿದೆ. ಇವೆಲ್ಲವನ್ನೂ ಹೆಣ್ಣಿನ ಹಿತದೃಷ್ಟಿಯಿಂದಲೇ ವಿಧಿಸಲಾಗಿದೆ ಎನ್ನುವ ಸಮಜಾಯಿಷಿಯನ್ನೂ ನೀಡಲಾಗುತ್ತಿದೆ. ವಿದ್ಯಾವಂತರಾದ,ವೃತ್ತಿನಿರತರಾದ ಹೆಣ್ಮಕ್ಕಳಿಗೆ ಹೊರಗುಳಿಯುವಿಕೆಯಿಂದ ವಿನಾಯಿತಿಯನ್ನು ನೀಡಲಾಗಿದ್ದರೂ, ದೈವಿಕ-ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದಕ್ಕೆ ಈಗಲೂ ಅನುಮತಿಯಿಲ್ಲ. ಆಕೆ ತರುವ ಸಂಬಳ ಬೇಕು, ಆದರೆ ಪೂಜೆಯ ಹಕ್ಕಿಲ್ಲ, ಕುಟುಂಬದ ಅಧಿಕಾರದಲ್ಲಿ ಪಾಲಿಲ್ಲ!

ಮುಟ್ಟಾದಾಗ ಹೊರಗಟ್ಟುವುದರ ಮೂಲೋದ್ದೇಶವೂ ಅದುವೇ: ಹೆಣ್ಣನ್ನು ಕೌಟುಂಬಿಕ, ಆರ್ಥಿಕ, ಸಾಮಾಜಿಕ ಅಧಿಕಾರದಿಂದ ದೂರವಿಡುವುದು. ಋಗ್ವೇದ, ತೈತ್ತಿರೀಯ ಸಂಹಿತೆ, ಮಾರ್ಕಂಡೇಯ ಪುರಾಣ, ವಸಿಷ್ಠ ಧರ್ಮಶಾಸ್ತ್ರ, ಮಹಾಭಾರತ ಇತ್ಯಾದಿಗಳಲ್ಲೆಲ್ಲ ಪ್ರಮುಖವಾಗಿ ಕಾಣಸಿಗುವ ಇಂದ್ರನು ವೃತ್ರನನ್ನು ಕೊಂದ ಐತಿಹ್ಯವು ಇದನ್ನು ಸ್ಪಷ್ಟಪಡಿಸುತ್ತದೆ (ಅಂತಹದೇ ಐತಿಹ್ಯಗಳನ್ನು ಇತರ ದೇಶ-ಮತಗಳಲ್ಲೂ ಕಾಣಬಹುದು). ನಮ್ಮ ಮೂಲ ಸಮುದಾಯಗಳು ಮಾತೃಪ್ರಧಾನವಾಗಿದ್ದವು. ಎಲ್ಲರೂ ಒಟ್ಟಿಗೇ ದುಡಿದು, ಒಟ್ಟಿಗೇ ಅನುಭೋಗಿಸುವ ಕೂಡು ಒಡೆತನ ಅಲ್ಲಿತ್ತು. ವೃತ್ರನಂತಹವರು ಆ ನೆಲ-ಜಲಗಳನ್ನೆಲ್ಲ ಕಾಯುವವರಾಗಿದ್ದರು. ವೈದಿಕ ವ್ಯವಸ್ಥೆಯ ನಾಯಕನಾಗಿದ್ದ ಇಂದ್ರನು ಸೋಮರಸಭರಿತನಾಗಿ,ಕುಟಿಲೋಪಾಯದಿಂದ ವೃತ್ರನನ್ನು ಕೊಲ್ಲುವುದರೊಂದಿಗೆ ಫಲವತ್ತಾಗಿದ್ದ ನೆಲ, ಮರಗಳು ಹಾಗೂ ಹೆಣ್ಮಕ್ಕಳು ಇಂದ್ರನಿಗೆ ಅಧೀನರಾದರು. ಈ ಹೆಣ್ಮಕ್ಕಳು ಮುಟ್ಟಿಲ್ಲದಾಗ ಭೋಗಿಸಲ್ಪಟ್ಟು, ಮುಟ್ಟಾದಾಗ ಅಸ್ಪೃಶ್ಯರಾದರು. ಮಾತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಮಕ್ಕಳ ಮುಟ್ಟಿನ ರಕ್ತವು ಪವಿತ್ರವೆಂದೆನಿಸಿದ್ದರೆ, ಇಂದ್ರನ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅದು ಮೈಲಿಗೆಯಾಯಿತು. ನಿತ್ಯವೂ ಹೊಸ ಬೆಳಕನ್ನು ತರುತ್ತಿದ್ದ ಉಷೆಯನ್ನು ಇಂದ್ರನು ಚಚ್ಚಿದ ವೃತ್ತಾಂತವೂ ಋಗ್ವೇದದಲ್ಲಿದ್ದು, ಅದು ಸ್ತ್ರೀ ದೌರ್ಜನ್ಯದ ಇನ್ನೊಂದು ದೃಷ್ಟಾಂತವೆಂದು ಹೇಳಲಾಗುತ್ತದೆ.ಭಾವನಾತ್ಮಕ ಒತ್ತಡಗಳಿಗೆ ಮಣಿಯುವ ಹೆಣ್ಮಕ್ಕಳು ಇಂದ್ರನ ಕಟ್ಟಳೆಗಳ ಮೈಲಿಗೆಯನ್ನು ಇಂದಿಗೂ ಅನುಭವಿಸುತ್ತಲೇ ಇದ್ದಾರೆ, ಅವನ ಅನುಯಾಯಿಗಳ ದೌರ್ಜನ್ಯಕ್ಕೆ ಸಿಕ್ಕಿ ತೊಳಲಾಡುತ್ತಿದ್ದಾರೆ.

ವೇದೋತ್ತರ ಕಾಲದಲ್ಲಿ ಹೆಣ್ಣಿನ ಸಾಮರ್ಥ್ಯದ ಬಗ್ಗೆ ಗಂಡಿನ ಭಯ ಹೆಚ್ಚಿದಂತೆ ದೌರ್ಜನ್ಯವೂ ಹೆಚ್ಚಿತು. ಬಲಶಾಲಿಯೆನಿಸಿದ್ದ ಗಂಡು ರಕ್ತಸ್ರಾವವಾದಾಗ ಸಾಯುತ್ತಿದ್ದರೆ, ಹೆಣ್ಣಾದವಳು ಪ್ರತೀ ತಿಂಗಳು ರಕ್ತವನ್ನು ಚೆಲ್ಲಿದರೂ ಸಾಯದೇ ಉಳಿದು, ಸಂತಾನವನ್ನೂ ಪಡೆಯುತ್ತಿದ್ದುದರಿಂದ ಆಕೆಯನ್ನು ಅಪಾಯಕಾರಿಯೆಂದೂ, ಮಾಯೆಯೆಂದೂ ಬಗೆದು, ಮುಟ್ಟಾದಾಗಲೆಲ್ಲ ಹೆದರಿ ಹೊರದಬ್ಬುವುದು ವಾಡಿಕೆಯಾಯಿತು. ಇಂತಹ ಭಯ ಮಿಶ್ರಿತ ಕಲ್ಪನೆಗಳು ವೈದ್ಯರನ್ನೂ, ಜ್ಞಾನಿಗಳೆನಿಸಿಕೊಂಡವರನ್ನೂ ಬಿಟ್ಟಿರಲಿಲ್ಲ.

ಸುಮಾರು 2400 ವರ್ಷಗಳ ಹಿಂದೆ ಗ್ರೀಸಿನಲ್ಲಿ ವೈದ್ಯವಿಜ್ಞಾನದ ಪಿತಾಮಹನೆನಿಸಿಕೊಂಡಿದ್ದ ಹಿಪಾಕ್ರಟಿಸ್, ಹೆಂಗಸರು ಗಂಡಸರಂತೆ ಬೆವರು ಸುರಿಸದಿರುವುದರಿಂದ ಮುಟ್ಟಿನ ಮೂಲಕ ತಮ್ಮ ದೇಹವನ್ನು ಶುದ್ಧೀಕರಿಸಿಕೊಳ್ಳುತ್ತಾರೆಂದು ಭಾವಿಸಿದ್ದ. ಅದೇ ದೇಶ-ಕಾಲದವನಾಗಿದ್ದ ತತ್ವಜ್ಞಾನಿ ಅರಿಸ್ಟಾಟಲ್,ಸಂತಾನೋತ್ಪತ್ತಿಯಲ್ಲಿ ಹೆಣ್ಣಿನ ಪಾತ್ರವು ಜಡವಾದುದೆಂದು ಬಗೆದು ಮುಟ್ಟಾಗುವಿಕೆಯು ಆಕೆಯ ಕೀಳುತನದ ಲಕ್ಷಣವೆಂದು ವಿಶ್ಲೇಷಿಸಿದ್ದ. ಆ ಕಾಲದ ಆಯುರ್ವೇದ ಗ್ರಂಥಗಳಲ್ಲೂ ಮುಟ್ಟಾದ ಹೆಣ್ಣು ಅಶುದ್ಧಳೆಂದೂ, ಎಲ್ಲದರಿಂದ ದೂರವಿರಬೇಕೆಂದೂ ವಿಧಿಸಲಾಗಿತ್ತು. ರೋಮನ್ ಸಾಮ್ರಾಜ್ಯದಲ್ಲಿ ನಿಸರ್ಗತಜ್ಞನೆನಿಸಿದ್ದ ಪ್ಲೀನಿ (ಕ್ರಿ.ಶ.77) ಮುಟ್ಟಾದ ಮಹಿಳೆಯರ ಸ್ಪರ್ಶದಿಂದ ಮದ್ಯವು ಹುಳಿಯಾಗುತ್ತದೆ, ಬೀಜಗಳು ಜೊಳ್ಳಾಗುತ್ತವೆ, ಹಣ್ಣಿನ ಮರಗಳು ಒಣಗುತ್ತವೆ, ಕನ್ನಡಿ ಮಂಕಾಗುತ್ತದೆ, ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ ಎಂದೆಲ್ಲ ಎಚ್ಚರಿಸಿದ್ದ. ಮುಟ್ಟಾದ ಮಹಿಳೆಯರು ಸೋಂಕಿದರೆ ಉಪ್ಪಿನಕಾಯಿಯಿಂದ ಹಿಡಿದು ಮಾಂಸದವರೆಗೆ ಹಲಬಗೆಯ ತಿನಿಸುಗಳು ಕೆಟ್ಟು ಹೋಗುತ್ತವೆಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ 1878ರಲ್ಲಿ ಹಲವು ವಾರಗಳ ಚರ್ಚೆಯೇ ನಡೆದಿತ್ತು! ಹೀಗೆ ಸಹಸ್ರಾರು ವರ್ಷಗಳಿಂದ ಗಂಡಸರ ಭಯದ ಉರುಳು ಹೆಂಗಸರ ಸ್ವಾತಂತ್ರ್ಯವನ್ನು ಬಿಗಿದು, ಪ್ರತಿ ತಿಂಗಳೂ ಅವರನ್ನು ಹೊರಗಿಟ್ಟದ್ದಲ್ಲದೆ, ಶಿಕ್ಷಣದಿಂದಲೂ, ಮೇಲ್ಸ್ತರದ ವೃತ್ತಿಗಳಿಂದಲೂ, ಅಧಿಕಾರದಿಂದಲೂ ದೂರವಿಟ್ಟಿತು.

ಈಗ ಮುಟ್ಟಿನ ಹಿಂದಿರುವ ಜೈವಿಕ ಕ್ರಿಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದರೂ ಅದರ ಬಗೆಗಿನ ಕೀಳರಿಮೆಗಳೂ, ಹೆದರಿಕೆಗಳೂ ಹಾಗೆಯೇ ಉಳಿದುಕೊಂಡಿವೆ. ನಮ್ಮಲ್ಲಿ ಬಹುತೇಕ ಹೆಣ್ಮಕ್ಕಳಿಗೆ ಮುಟ್ಟಿನ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟವಾದ ಅರಿವಿಲ್ಲದೆ, ಸುರಕ್ಷತಾ ಕ್ರಮಗಳ ಬಗೆಗಿನ ಮಾಹಿತಿಯೂ, ಅಗತ್ಯ ಸೌಲಭ್ಯಗಳೂ ದೊರೆಯುವುದಕ್ಕೆ ಅಡ್ಡಿಯಾಗುತ್ತಿವೆ. ಮುಟ್ಟಾದ ಹೆಣ್ಮಕ್ಕಳು ರಕ್ಷಣೆಗಾಗಿ ಹಳೆ ಬಟ್ಟೆಯ ತುಂಡುಗಳನ್ನು ಗುಟ್ಟಿನಲ್ಲಿ ಬಳಸುವಂತಾಗಿ, ಗಂಭೀರವಾದ ಸಮಸ್ಯೆಗಳಿಗೂ ಕಾರಣವಾಗುತ್ತಿವೆ. ನಮ್ಮ ಹೆಣ್ಮಕ್ಕಳನ್ನು ಅಶುದ್ಧರೆಂದು ದೂರ ಮಾಡಿದ್ದಲ್ಲದೆ, ಶುಚಿಗೊಳಿಸುವ ಸೌಲಭ್ಯಗಳಿಂದಲೂ ವಂಚಿಸಿ ನರಕಯಾತನೆ ನೀಡಲಾಗುತ್ತಿದೆ.

ನಮ್ಮ ಹೆಣ್ಮಕ್ಕಳಿಗೆ ಮುಟ್ಟಿನ ಬಗ್ಗೆ ವೈಜ್ಞಾನಿಕವಾದ ವಿವರಣೆಗಳನ್ನಿತ್ತು, ಅದರ ವಿಶೇಷತೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುವುದರ ಜೊತೆಗೆ,ಅದನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಅವರನ್ನು ಸಿದ್ಧಪಡಿಸಬೇಕಾದದ್ದು ಈಗಿನ ತುರ್ತು ಅಗತ್ಯವಾಗಿದೆ. ಮಕ್ಕಳು ಮುಟ್ಟಾಗುವ ಮೊದಲೇ ತಾಯಂದಿರಿಂದ ಈ ಕೆಲಸವಾದರೆ ಒಳ್ಳೆಯದು. ಇಂದು 8-10 ವರ್ಷ ವಯಸ್ಸಿಗೇ ಹೆಣ್ಮಕ್ಕಳು ಮುಟ್ಟಾಗತೊಡಗುವುದರಿಂದ 3-4 ನೇ ತರಗತಿಗಳಲ್ಲಿದ್ದಾಗಲೇ ಅವರನ್ನು ಸನ್ನದ್ಧರಾಗಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಮೊದಲ ಬಾರಿಗೆ ಮುಟ್ಟಾಗುವ ಅನುಭವವು ಭಯಕ್ಕೂ,ಗೊಂದಲಗಳಿಗೂ ಕಾರಣವಾಗಬಹುದು ಹಾಗೂ ಸಹಪಾಠಿಗಳಿಂದ ಅಥವಾ ಶಿಕ್ಷಕಿಯರಿಂದ ಇವನ್ನೆಲ್ಲ ತಿಳಿಯಬೇಕಾದ ಮುಜುಗರಕ್ಕೆ ಆಸ್ಪದವಾಗಬಹುದು.

ಋತುಸ್ರಾವವನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಶುದ್ಧವಾದ ಹೊಸ ಬಟ್ಟೆಯನ್ನೋ, ಅಥವಾ ಸಾನಿಟರಿ ನಾಪ್ಕಿನ್ ಗಳನ್ನೋ ಬಳಸಬೇಕು. ಇಂತಹಾ ಬಟ್ಟೆಗಳನ್ನು ಬದಲಿಸುವುದಕ್ಕೂ, ಸೂಕ್ತವಾಗಿ ವಿಸರ್ಜಿಸುವುದಕ್ಕೂ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸುರಕ್ಷಿತ ಸೌಲಭ್ಯಗಳನ್ನು ಕಲ್ಪಿಸಬೇಕು. ನಿಸರ್ಗದತ್ತವಾದ ಮುಟ್ಟು ಹೆಣ್ಮಕ್ಕಳ ಸ್ವಾತಂತ್ರ್ಯಕ್ಕೂ, ಕಲಿಕೆಗೂ, ಮನೋದೈಹಿಕ ಸಾಮರ್ಥ್ಯಗಳಿಗೂ ಅಡಚಣೆಯಾಗದಂತೆ ನೋಡಿಕೊಳ್ಳುವುದು ಸ್ವಸ್ಥ ಸಮಾಜದ ಆದ್ಯ ಕರ್ತವ್ಯವಾಗಿದೆ.

ಇಂದ್ರ ಮತ್ತವನ ಪುರೋಹಿತರ ಆಡಳಿತವು ಯಾವತ್ತೋ ಕೊನೆಗೊಂಡು, ಸಂವಿಧಾನಬದ್ಧ ಪ್ರಜಾಪ್ರಭುತ್ವವು ಸ್ಥಾಪನೆಯಾಗಿರುವಾಗ ನಮ್ಮ ಹೆಣ್ಮಕ್ಕಳು ಇಂದ್ರನ ಶಾಪದ ಕಟ್ಟಳೆಗಳನ್ನು ಮೀರುವ ಛಾತಿಯನ್ನು ತೋರಬೇಕು, ಗಂಡಸರೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು. ಮುಟ್ಟಾದ ದಿನಗಳಲ್ಲಿ ತಮಗೆ ಶಕ್ಯವಿರುವ ಎಲ್ಲವನ್ನೂ ಮಾಡುವುದರ ಜೊತೆಗೆ ಹೊರಗಿಡುವ ಎಲ್ಲ ವ್ಯವಸ್ಥೆಗಳನ್ನೂ ಧಿಕ್ಕರಿಸಿ ಒಳನಡೆಯಬೇಕು. ಮಾತ್ರೆಗಳಿಂದ ಮುಟ್ಟನ್ನು ಮುಂದೂಡುವುದನ್ನು ನಿರಾಕರಿಸಬೇಕು. ಸ್ಖಲನವಾದ ಗಂಡು ಪೂಜೆ ಮಾಡಬಹುದಾದರೆ ಮುಟ್ಟಾದ ಹೆಣ್ಣಿಗೇಕೆ ಅಡ್ಡಿಯೆಂದು ಪ್ರಶ್ನಿಸಲೇಬೇಕು. ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಸಬಲೀಕರಣ ಹಾಗೂ ವಿಮೋಚನೆಯ ಹಾದಿಯು ಮುಟ್ಟಿನ ಕಟ್ಟಳೆಗಳ ಮುರಿಯುವಿಕೆಯಿಂದಲೇ ತೊಡಗಬೇಕು.

Comments are closed.