ಕರ್ನಾಟಕ

ಪತಿಯಿಂದಲೇ ಹತ್ಯೆಗೀಡಾದ ‘ಭಜರಂಗಿ’ ಸಿನಿಮಾ ನಟಿ ವಿದ್ಯಾ

Pinterest LinkedIn Tumblr

ಬೆಂಗಳೂರು: ಶಿವರಾಜ್‌ಕುಮಾರ್ ಅವರ ‘ಭಜರಂಗಿ’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಹಾಗೂ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ನಂದೀಶ್ ಕೊಲೆಯಾಗಿದ್ದಾರೆ. ವಿದ್ಯಾ ಅವರ ಪತಿ ನಂದೀಶ್ ಈ ಕೊಲೆ ಮಾಡಿದ್ದು, ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತುರಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿ ನಂದೀಶ್ ನಾಪತ್ತೆಯಾಗಿದ್ದಾನೆ.

ವಿದ್ಯಾ ಅವರಿಗೆ ನಂದೀಶ್ ಎಂಬಾತನ ಜೊತೆಗೆ 2018ರಲ್ಲಿ ವಿವಾಹವಾಗಿತ್ತು. ವಿದ್ಯಾ ಮತ್ತು ನಂದೀಶ್ ನಡುವೆ ಹಲವು ದಿನಗಳಿಂದ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಮೇ 20ರಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ. ವಿದ್ಯಾ ತನ್ನ ತವರುಮನೆಯಾದ ಶ್ರೀರಾಂಪುರಕ್ಕೆ ಹೋಗಿದ್ದರು. ಮೇ 20ರ ರಾತ್ರಿ ಪತಿಯೊಂದಿಗೆ ಫೋನ್‌ನಲ್ಲಿ ವಿದ್ಯಾ ಮಾತನಾಡುವಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಹಾಗಾಗಿ, ರಾತ್ರಿಯೇ ಮೈಸೂರಿನಿಂದ ಹೊರಟು ಗಂಡನ ಮನೆ ಇರುವ ತುರುಗನೂರಿಗೆ ವಿದ್ಯಾ ತೆರಳಿದ್ದರು.

ತುರುಗನೂರಿಗೆ ಹೋದಮೇಲೆ ವಿದ್ಯಾ ಮತ್ತು ನಂದೀಶ್ ನಡುವೆ ಜಗಳ ಇನ್ನಷ್ಟು ತಾರಕಕ್ಕೇರಿದೆ. ಈ ವೇಳೆ ಗಂಡ- ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪತಿ ನಂದೀಶ್ ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದು, ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವಿದ್ಯಾ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ವಿದ್ಯಾಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ಉಂಟಾಗಿತ್ತು. ಪರಸ್ಪರ ವಿಚ್ಛೇದನಕ್ಕೂ ತೆಗೆದುಕೊಳ್ಳುವುದಕ್ಕೂ ಇಬ್ಬರು ಮುಂದಾಗಿದ್ದರು. ಆದರೆ ಕುಟುಂಬದ ಹಿರಿಯರ ಬುದ್ಧಿವಾದ ಹೇಳಿ, ಇಬ್ಬರನ್ನು ಒಂದಾಗಿಸಿದ್ದರು.

ಈ ಬಗ್ಗೆ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ಹೆಚ್ಚುವರಿ ಎಸ್‌ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರು ಸ್ಥಳಕ್ಕೆ ಆಗಮಿಸಿದ್ದರು.

ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿದ್ಯಾ
ಶಿವರಾಜ್‌ಕುಮಾರ್ ಅವರ ‘ಭಜರಂಗಿ’ ಮತ್ತು ‘ವೇದ’ ಚಿರಂಜೀವಿ ಸರ್ಜಾ ನಟನೆಯ ‘ಅಜಿತ್’, ಶರಣ್ ನಟನೆಯ ‘ಜೈ ಮಾರುತಿ 800’ ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ವಿದ್ಯಾ ಕಾಣಿಸಿಕೊಂಡಿದ್ದಾರೆ.

Comments are closed.