ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಂದು ಮಕ್ಕಳಿಗೆ ಪೋಷಕಾಂಶಗಳ ನೆರವನ್ನು ನೀಡುವ ರಾಷ್ಟ್ರೀಯ ಕಾರ್ಯಕ್ರಮವು, ಅಥವಾ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವು, ಆರಂಭವಾದದ್ದು 1995ರಲ್ಲಿ. ಆದರೂ, 2001ರವರೆಗೆ ಕೆಲವೇ ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು.
ಒಂದೆಡೆ ಉಗ್ರಾಣಗಳಲ್ಲಿ ಧಾನ್ಯಗಳ ಸಂಗ್ರಹವು ಮಿತಿಮೀರಿ ಕೊಳೆಯುತ್ತಿದ್ದರೆ, ಇನ್ನೊಂದೆಡೆ ಶಾಲೆಗೆ ಹೋಗುವ ಮಕ್ಕಳು ನ್ಯೂನ ಪೋಷಣೆಯಿಂದ ನರಳಿ ಸಾಯುತ್ತಿದ್ದುದನ್ನು ಮನಗಂಡು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನವೆಂಬರ್ 28, 2001ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ನಂತರ, ಅಂದರೆ 2002 ರಿಂದೀಚೆಗೆ, ಹೆಚ್ಚಿನ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವು ಅನುಷ್ಠಾನಕ್ಕೆ ಬಂದಿದೆ. ಈ ಕಾರ್ಯಕ್ರಮಕ್ಕೆ ಅಗತ್ಯವಾದ ಧಾನ್ಯಗಳನ್ನು ಕೇಂದ್ರ ಸರಕಾರವೇ ಪೂರೈಸಿದರೆ, ಊಟವನ್ನು ತಯಾರಿಸಲು ತಗಲುವ ವೆಚ್ಚವನ್ನು ರಾಜ್ಯ ಸರಕಾರಗಳು ಭರಿಸುತ್ತವೆ.
ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವು ಅನುಷ್ಠಾನಕ್ಕೆ ಬಂದ ನಂತರ, ಶಾಲೆಗಳಲ್ಲಿ ಮಕ್ಕಳ ಹಾಜರಾತಿಯು ಶೇ.10-12ರಷ್ಟು ಹೆಚ್ಚಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ. ಮಕ್ಕಳ ಪೋಷಣೆಯನ್ನು ಇನ್ನೂ ಉತ್ತಮಪಡಿಸುವ ಸದುದ್ದೇಶದಿಂದ, ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯೊಂದನ್ನು ನೀಡುವ ಕೇಂದ್ರ ಸರಕಾರದ ಪ್ರಸ್ತಾವಕ್ಕೆ ಈಗಾಗಲೇ ಹಲವು ರಾಜ್ಯ ಸರಕಾರಗಳು ಸಮ್ಮತಿಸಿದ್ದು, ತಮಿಳುನಾಡು, ಪಾಂಡಿಚೆರಿ, ಆಂಧ್ರಪ್ರದೇಶ ಇವೇ ಮುಂತಾದ ರಾಜ್ಯಗಳಲ್ಲಿ ಈಗಾಗಲೇ ಇದನ್ನು ಜಾರಿಗೊಳಿಸಲಾಗಿದೆ.
ಆದರೆ ರಾಷ್ಟ್ರದ ‘ಮಾಹಿತಿ ತಂತ್ರಜ್ಞಾನದ ರಾಜಧಾನಿಯಾದ’ ಕರ್ನಾಟಕದಲ್ಲಿ ಮಾತ್ರ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯ ಭಾಗ್ಯವು ಇನ್ನೂ ಬಂದಿಲ್ಲ. ಯಾಕೆಂದರೆ ಮೊಟ್ಟೆಯು ತಾಮಸ ಆಹಾರವಂತೆ, ಅಂದರೆ ರಾಕ್ಷಸರ ಆಹಾರವಂತೆ! ಮೊಟ್ಟೆಯನ್ನೇನಾದರೂ ತಿಂದದ್ದೇ ಆದಲ್ಲಿ ಕರ್ನಾಟಕದ ಮಕ್ಕಳಲ್ಲಿ ರಾಕ್ಷಸೀ ಗುಣಗಳು ಬೆಳೆದು, ಅವರು ಸಮಾಜಘಾತುಕರಾದಾರಂತೆ! ಆದ್ದರಿಂದ ಮುಂದಿನ ವರ್ಷಗಳಲ್ಲಿ ರಾಜ್ಯದ ಪೋಲೀಸರು ನಿರಾಯಾಸವಾಗಿರುವಂತೆ ಮಾಡುವುದಕ್ಕಾಗಿ ಮಕ್ಕಳಿಗೆ ಕೋಳಿಮೊಟ್ಟೆ ನೀಡುವ ಯೋಜನೆಯನ್ನು ಬಿಟ್ಟುಬಿಡಬೇಕಂತೆ. ಮೊಟ್ಟೆಯ ಬದಲಿಗೆ ಸಾತ್ವಿಕ (ಅಂದರೆ ದೇವರ ಮತ್ತು ದೇವಾಂಶ ಸಂಭೂತರಾದವರ ) ಆಹಾರವಾದ ಹಾಲನ್ನೇ ನಮ್ಮ ಮಕ್ಕಳಿಗೆ ನೀಡಬೇಕೆಂದು ಕೆಲವು ಮಠಾಧಿಪತಿಗಳೂ, ಧಾರ್ಮಿಕ ನಾಯಕರುಗಳೂ, ‘ದೇವಸ್ಥಾನಗಳನ್ನು ನಡೆಸುತ್ತಿರುವ’ ಸಂಸ್ಥೆಗಳವರೂ, ಇಂತಹವರ ಫರ್ಮಾನುಗಳನ್ನು ತಮ್ಮ ರಾಜಕೀಯದ ಅಸ್ತ್ರಗಳಾಗಿ ಬಳಸಿ ಅವುಗಳಿಗೆ ಪ್ರಚಾರ ನೀಡುವುದರ ಜೊತೆಗೆ ತಮ್ಮ ಬೇಳೆಯನ್ನೂ ಬೇಯಿಸಿಕೊಳ್ಳುವ ಕೆಲವು ರಾಜಕಾರಣಿಗಳೂ ಫತ್ವಾ ಹೊರಡಿಸಿಬಿಟ್ಟಿದ್ದಾರೆ.
ರಾಜ್ಯ ಸರಕಾರವು 58 ಲಕ್ಷ ಮಕ್ಕಳಲ್ಲಿ ಮಾಡಿದ ಸಮೀಕ್ಷೆಯೊಂದರಲ್ಲಿ, 50ಲಕ್ಷದಷ್ಟು ಮಕ್ಕಳು ತಮಗೆ ಮೊಟ್ಟೆಯೇ ಬೇಕೆಂದೂ, ಉಳಿದ ಮಕ್ಕಳು ತಮಗೆ ಬಾಳೆಹಣ್ಣು ಬೇಕೆಂದೂ ಹೇಳಿರುವುದು ಯಾವ ಪ್ರಯೋಜನಕ್ಕೂ ಬರಲಿಲ್ಲ. ಎಷ್ಟೆಂದರೂ ಮಕ್ಕಳಲ್ಲವೆ, ಅವರ ಮಾತಿಗೇಕೆ ಬೆಲೆ ಕೊಡಬೇಕು? ಅದರಲ್ಲೂ ಬಹುತೇಕ ಮಕ್ಕಳಿಗೆ ತಾಮಸ ಅಹಾರವೇ ಇಷ್ಟವಾಗುವುದೆಂದರೆ?!
ಆದರೆ ಮಕ್ಕಳೇಕೆ ಹೀಗೆ ಮಾಡಿದರು? ಅವರಿಗೆ ಮೊಟ್ಟೆಯೇ ಏಕೆ ಇಷ್ಟವಾಯಿತು, ಅದೇಕೆ ಹಾಲು ಯಾರಿಗೂ ಬೇಡವಾಯಿತು? ಮಕ್ಕಳು ಏನು ತಿನ್ನಬೇಕು, ಏನು ತಿನ್ನಬಾರದೆನ್ನುವುದು ಹಿರಿಯರ ನಿರ್ಧಾರಕ್ಕೆ ಬಿಟ್ಟ ವಿಷಯವಾಗಿರುವುದರಿಂದ ಇಂತಹ ಪ್ರಶ್ನೆಗಳು ನಮ್ಮ ತಲೆಯಲ್ಲಿ ಸುಳಿಯುವುದೇ ಇಲ್ಲವೆನ್ನಿ.
ಹಾಗಾದರೆ ವೈಜ್ಞಾನಿಕ ಸತ್ಯ ಯಾವುದು? ಮೊಟ್ಟೆ ಮತ್ತು ಹಾಲುಗಳ ನಡುವೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು?
ಮೊಟ್ಟೆಗಳು ಮಿಲಿಯಾಂತರ ವರ್ಷಗಳಿಂದ ಹಲವು ಬಗೆಯ ಪ್ರಾಣಿಗಳು, ಪಕ್ಷಿಗಳು ಮತ್ತು ಮನುಷ್ಯನ ನಿಸರ್ಗ ಸಹಜವಾದ ಆಹಾರವಾಗಿವೆ. ಮೊಟ್ಟೆಯು ಪರಿಪೂರ್ಣವಾದ ಆಹಾರವಾಗಿದ್ದು, ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ಪ್ರೋಟೀನನ್ನು ಒದಗಿಸುತ್ತದೆ ಮಾತ್ರವಲ್ಲ, ಉತ್ತಮ ಪೋಷಕಾಂಶಗಳಾದ ಕೋಲಿನ್, ವಿವಿಧ ಖನಿಜಗಳು ಹಾಗೂ ವಿಟಮಿನ್‌ಗಳನ್ನು ಕೂಡಾ ಒದಗಿಸುತ್ತದೆ. ಮೊಟ್ಟೆಯಲ್ಲಿರುವ ಪ್ರೊಟೀನುಗಳು ಮತ್ತಿತರ ಪೋಷಕಾಂಶಗಳು ಸುಲಭವಾಗಿ ಜೀರ್ಣಗೊಂಡು ಹೀರಲ್ಪಡುತ್ತವೆ. ಮೊಟ್ಟೆಯಲ್ಲಿರುವ ಕೊಲೆಸ್ಟರಾಲ್ ಬಗೆಗೆ ಎದ್ದಿದ್ದ ಸಂದೇಹಗಳು ಕೂಡ ಈಗ ಬಹುಪಾಲು ನಿವಾರಣೆಯಾಗಿದ್ದು, ಆರೋಗ್ಯವಂತರು ದಿನಕ್ಕೊಂದು ಮೊಟ್ಟೆಯನ್ನು ಸೇವಿಸಬಹುದೆಂಬ ಸಲಹೆಯು ವ್ಯಾಪಕವಾದ ಮಾನ್ಯತೆಯನ್ನು ಪಡೆದಿದೆ.
ಇಷ್ಟಕ್ಕೂ ಕೊಲೆಸ್ಟರಾಲ್ ಎಂಬ ಗುಮ್ಮನನ್ನು ಬೆಳೆಸಿದ್ದರ ಹಿಂದೆ ದೊಡ್ಡದೊಂದು ಷಡ್ಯಂತ್ರವೇ ಇದೆ, ಆದರಿಲ್ಲಿ ಅದು ಅಪ್ರಸ್ತುತ. ಹೇಗಿದ್ದರೂ, ಕೊಲೆಸ್ಟರಾಲ್ ನಿಂದಲೇ ಹೃದಯಾಘಾತವಾಗುತ್ತದೆಯೆಂದು ಇದುವರೆಗೆ ಯಾವುದೇ ವೈಜ್ಞಾನಿಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿಲ್ಲ; ಹೃದಯಾಘಾತಕ್ಕೊಳಗಾದ ಕೆಲವರ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವು ಹೆಚ್ಚಿದ್ದುದನ್ನು ಕಾಣಲಾಗಿದೆಯಷ್ಟೇ. ನಾವು ತಿನ್ನುವ ಆಹಾರದಲ್ಲಿರುವ ಕೊಲೆಸ್ಟರಾಲ್ ಪ್ರಮಾಣಕ್ಕೂ ರಕ್ತದಲ್ಲಿರುವ ಕೊಲೆಸ್ಟರಾಲ್ ಪ್ರಮಾಣಕ್ಕೂ ನೇರವಾದ ಸಂಬಂಧವಿದೆಯೆಂದೂ ಹೇಳುವುದು ಸರಿಯೆನಿಸದು.
ಮೊಟ್ಟೆಯ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟರಾಲ್ ಹೆಚ್ಚಿ ಹೃದಯಾಘಾತಕ್ಕೆ ಕಾರಣವಾಗಬಹುದೆನ್ನುವುದು ಸತ್ಯಕ್ಕೆ ದೂರವಾದುದಾಗಿದೆ. ಮೊಟ್ಟೆಯ ಸೇವನೆಯ ತುಂಬಾ ಉತ್ತಮವಾಗಿದ್ದು.
ಹಾಲು ಸಸ್ತನಿಗಳು ತಮ್ಮ ಸಂತಾನಗಳಿಗಾಗಿ ಸ್ರವಿಸುವ ವಿಶಿಷ್ಟವಾದ ಆಹಾರವಾಗಿದ್ದು, ಶೈಶವಾವಸ್ಥೆಯಲ್ಲಿ ಮರಿಗಳು/ಮಕ್ಕಳ ದೈಹಿಕ ಬೆಳವಣಿಗೆಗೆ, ಅದರಲ್ಲೂ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನೂ, ರೋಗರಕ್ಷಣೆಗೆ ಅಗತ್ಯವಾದ ಅಂಶಗಳನ್ನೂ ಒದಗಿಸುತ್ತದೆ. ಶೈಶವಾವಸ್ಥೆಯ ಬಳಿಕ ಹಾಲನ್ನು ಜೀರ್ಣಿಸುವ ಶಕ್ತಿಯು ಕುಂದುವುದಷ್ಟೇ ಅಲ್ಲ, ಹಾಲಿನಿಂದ ಬೆಳೆಯುವ ವಯಸ್ಸಿಗೆ ತಕ್ಕುದಾದ ಪೋಷಣೆಯೂ ದೊರೆಯುವುದಿಲ್ಲ.
ಶೈಶವಾವಸ್ಥೆಯ ಬಳಿಕ ಬೇರೊಂದು ಪ್ರಾಣಿಯ ಹಾಲು ನಿಸರ್ಗಸಹಜವಾದ ಆಹಾರವೆನಿಸಿಕೊಳ್ಳದು. ನಿರಂತರವಾದ ಹಾಲಿನ ಸೇವನೆಯಿಂದಾಗಿ ಬೊಜ್ಜು, ಮಧುಮೇಹ, ರಕ್ತನಾಳಗಳ ಕಾಹಿಲೆ, ಪಚನಾಂಗದ ಕಾಹಿಲೆಗಳು, ಮೂಳೆಸವೆತ ಇವೇ ಮುಂತಾದ ತೊಂದರೆಗಳುಂಟಾಗಬಹುದೆಂದು ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿವೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಮೇದಸ್ಸುಗಳ ಪ್ರಮಾಣದಲ್ಲಿ ಹೆಚ್ಚಳ, ಹೃದಯದ ರಕ್ತನಾಳಗಳ ಕಾಹಿಲೆ ಮುಂತಾದುವೆಲ್ಲ ಉಪಾಪಚಯ ಸಂಬಂಧಿ ರೋಗಗಳೆಂದೂ (Metabolic Syndrome), ಈ ಎಲ್ಲ ತೊಂದರೆಗಳ ಹಿಂದೆ ಇನ್ಸುಲಿನ್ ಮತ್ತು ಲೆಪ್ಟಿನ್ ಎಂಬ ಹಾರ್ಮೋನುಗಳ ಪ್ರಮಾಣದಲ್ಲಿ ಏರಿಕೆ ಹಾಗೂ ಅವುಗಳಿಗೆ ದೇಹದ ವಿವಿಧ ಅಂಗಗಳಲ್ಲುಂಟಾಗುವ ಪ್ರತಿರೋಧವೇ (Insulin, Leptin Resistance) ಕಾರಣವೆಂದೂ ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ನಡೆಯುತ್ತಿರುವ ಸಂಶೋಧನೆಗಳು ಸಾಬೀತು ಪಡಿಸಿವೆ
ಇನ್ಸುಲಿನ್ ಮತ್ತು ಲೆಪ್ಟಿನ್ ಹಾರ್ಮೋನುಗಳ ಪ್ರಮಾಣದಲ್ಲಿ ಏರಿಕೆಯಾಗುವುದಕ್ಕೆ ನಾವು ದಿನ ನಿತ್ಯ ಸೇವಿಸುವ ಆಹಾರದಲ್ಲಿರುವ ಸಕ್ಕರೆ ಮತ್ತು ಶರ್ಕರ ಪಿಷ್ಟಗಳು, ಹಾಲು ಮತ್ತದರ ಉತ್ಪನ್ನಗಳು ಮುಖ್ಯ ಕಾರಣಗಳೆಂಬುದೇನೂ ಗುಟ್ಟಾಗಿ ಉಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇವುಗಳಿಂದ ತಯಾರಿಸಲಾದ ಸಂಸ್ಕರಿತ ಆಹಾರಗಳ ಸೇವನೆಯು ಹೆಚ್ಚಿದಂತೆ ಈ ಎಲ್ಲಾ ರೋಗಗಳೂ ವಿಪರೀತವಾಗಿ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕಾರ್ನ್ ಫ್ಲೇಕ್ಸ್, ನೂಡಲ್ ಗಳು, ಪಿಜ್ಜಾಗಳು, ಬ್ರೆಡ್, ಹಾಲು, ಐಸ್ ಕ್ರೀಂ ಮುಂತಾದವುಗಳಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವು ಹೆಚ್ಚುತ್ತದೆಯೇ ಹೊರತು ಮೊಟ್ಟೆಯಂತಹ ಮೇದಸ್ಸಿನ ಆಹಾರಗಳಿಂದಲ್ಲ.
ಕ್ಯಾಲ್ಸಿಯಂನ ಉದಾಹರಣೆಯೊಂದನ್ನೇ ನೋಡೋಣ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಮಕ್ಕಳ ಎಲುಬುಗಳ ಬಲವರ್ಧನೆಗೆ ಅತ್ಯಗತ್ಯ ಎನ್ನಲಾಗುತ್ತಿದೆ. ನಿಜವೆ? ತಾಯಿಯ ಹಾಲು, ಮೇಕೆಯ ಹಾಲು ಮತ್ತು ಆಕಳ ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣವು ಪ್ರತೀ ನೂರು ಮಿ.ಲೀ.ಗೆ ಕ್ರಮವಾಗಿ 100ಮಿ.ಗ್ರಾಂ, 120ಮಿ.ಗ್ರಾಂ ಮತ್ತು 300ಮಿ.ಗ್ರಾಂನಷ್ಟಿರುತ್ತದೆ. ಅಂದರೆ, ಅಮ್ಮಂದಿರ ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರಮಾಣವು ಆಯಾ ಪ್ರಾಣಿಗಳ ಕಂದಮ್ಮಗಳ ಗಾತ್ರಕ್ಕನುಗುಣವಾಗಿಯೇ ಇರುತ್ತದೆ. ಕ್ಯಾಲ್ಸಿಯಂ ಕೇವಲ ನಮ್ಮ ಎಲುಬುಗಳಲ್ಲಿ ಮಾತ್ರವೇ ಇರುವುದಲ್ಲ. ಅದು ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಸರಿಯಾಗಿ ಕೆಲಸ ಮಾಡಲು ಅತ್ಯಗತ್ಯ, ಅದರಲ್ಲೂ, ಸ್ನಾಯುಗಳ, ವಿಶೇಷವಾಗಿ ರಕ್ತನಾಳಗಳು ಮತ್ತು ಹೃದಯದ ಸ್ನಾಯುಗಳ ಕೆಲಸಕ್ಕೆ ಅತ್ಯಗತ್ಯ. ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣದಲ್ಲಿ ವಿಪರೀತವಾದ ಏರಿಳಿತವಾದರೆ ಈ ಎಲ್ಲ ಅಂಗಗಳ ಮೇಲೆ ಗಂಭೀರವಾದ ಪರಿಣಾಮಗಳಾಗಬಹುದು, ಆದ್ದರಿಂದಲೇ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಸೂಕ್ಷ್ಮವಾಗಿ ಕಾಪಾಡುವ ವ್ಯವಸ್ಥೆಯೇ ಇದೆ. ಅಗತ್ಯಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಅನ್ನು ಸೇವಿಸಿದ್ದೇ ಆದರೆ, ಮೂತ್ರಪಿಂಡಗಳ ಮೂಲಕ ಅದು ಹೊರಹಾಕಲ್ಪಡುತ್ತದೆ. ಆಕಳ ಹಾಲನ್ನು ಪದೇ ಪದೇ ಸೇವಿಸಿದಾಗ, ಕ್ಯಾಲ್ಸಿಯಂ ಅನ್ನು ಹೊರಹಾಕುವುದೇ ಮೂತ್ರಪಿಂಡಗಳಿಗೆ ಅಭ್ಯಾಸವಾಗಿ ಬಿಡುತ್ತದೆ, ಮೂಳೆಗಳ ಕ್ಯಾಲ್ಸಿಯಂ ಕೂಡ ಕರಗಲಾರಂಭಿಸುತ್ತದೆ, ಮೂಳೆಸವೆತಕ್ಕೆ ಕಾರಣವಾಗುತ್ತದೆ. ಹೀಗೆ, ಆಕಳ ಹಾಲನ್ನು ಬಹಳ ಕಾಲ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುವ ಬದಲು ಟೊಳ್ಳಾಗುತ್ತವೆ.
ಹಾಲಿನಲ್ಲಿರುವ ಇತರ ಪೋಷಕಾಂಶಗಳೂ ಹಾಗೆಯೇ, ಆಯಾ ಪ್ರಾಣಿಗಳಿಗೆ ಸೂಕ್ತವಾದಂತಿರುತ್ತವೆ. ಆದ್ದರಿಂದ ಆಕಳ ಹಾಲನ್ನು ಮಕ್ಕಳಾಗಲೀ, ದೊಡ್ದವರಾಗಲೀ ಪ್ರತಿನಿತ್ಯವೂ ಸೇವಿಸುತ್ತಿದ್ದರೆ ಅದರಿಂದಾಗಿ ತೊಂದರೆಗಳಾಗುವುದು ಸಹಜವೇ. ಹಾಲಿನಿಂದ ದೇಹದ ಮೇಲಾಗುವ ಪರಿಣಾಮಗಳ ಬಗೆಗೆ ಸಾವಿರಾರು ವೈಜ್ಞಾನಿಕ ಲೇಖನಗಳು ಪ್ರಕಟವಾಗಿವೆ. 2007ರ ಜನವರಿ 9 ರಂದು ಯುರೋಪಿಯನ್ ಹಾರ್ಟ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ, ಚಹಾ ಕುಡಿಯುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ತಡೆಯುವಲ್ಲಿ ಪ್ರಯೋಜನವಾಗುತ್ತದೆಯೆಂದೂ, ಆದರೆ ಚಹಾಕ್ಕೆ ಹಾಲನ್ನು ಬೆರೆಸುವುದರಿಂದ ಚಹಾದ ಸದ್ಗುಣಗಳು ಹೇಗೆ ನಶಿಸುತ್ತವೆ ಎಂದು ಹೇಳಿರುವುದು ತೀರಾ ಇತ್ತೀಚಿನದು
ಆದ್ದರಿಂದಲೇ ನಿಸರ್ಗಸಹಜವಲ್ಲದ, ತಮ್ಮದಲ್ಲದ, ಬೇರೆ ಪ್ರಾಣಿಗಳ ಹಾಲನ್ನು ಕುಡಿಯಲು ಮಕ್ಕಳು ಇಷ್ಟಪಡದಿರುವುದು, ಹೆತ್ತವರು ಒತ್ತಾಯದಿಂದ ಅದನ್ನು ಅವರ ಗಂಟಲೊಳಗೆ ಸುರಿಯುವುದು!
ಈ ಕಾರಣಗಳಿಂದಾಗಿಯೇ, ಹಾಲಿನಿಂದ ದೊರೆಯಬಹುದಾದ ಪೋಷಕಾಂಶಗಳನ್ನು ಹಸಿರು ತರಕಾರಿಗಳು ಹಾಗೂ ಮೀನಿನಂತಹ ಇತರ ಆಹಾರಗಳ ಮೂಲಕ ಪಡೆಯುವುದೇ ಒಳಿತೆನ್ನುವ ಅಭಿಪ್ರಾಯವು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲಿದೆ
ಇನ್ನೊಂದೆಡೆ, ಮೊಟ್ಟೆ ಸೇವಿಸುವವರೆಲ್ಲರೂ ತಾಮಸ ಗುಣವನ್ನು ಹಾಗೂ ಹಾಲು ಸೇವಿಸುವವರೆಲ್ಲರೂ ಸಾತ್ವಿಕ ಗುಣವನ್ನು ಹೊಂದಿರುತ್ತಾರೆನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಾಗಲೀ, ಪುರಾವೆಯಾಗಲೀ ಇಲ್ಲ. ಹಾಗಿದ್ದರೆ, ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಈ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ಪ್ರಚೋದಿಸುತ್ತಿರುವವರಾರೂ ಹಾಲನ್ನು ಕುಡಿಯುತ್ತಿಲ್ಲವೆಂದು ತಿಳಿಯಬಹುದೇ? ಹಾಲಿನ ಸತ್ಪ್ರಯೋಜನಗಳ ಬಗ್ಗೆ ಅದರ ಪರವಾಗಿರುವವರಲ್ಲಿ ಅಷ್ಟೊಂದು ಖಚಿತವಾದ ವಿಶ್ವಾಸವಿರುವುದೇ ಹೌದಾದಲ್ಲಿ, ಅಪರಾಧಿಗಳು, ಸಮಾಜಘಾತುಕರು ಮತ್ತು ಗಲಭೆಕೋರರಿಗೆಲ್ಲಾ ಉಚಿತವಾಗಿ, ಯಥೇಚ್ಛವಾಗಿ ಹಾಲನ್ನು ಪೂರೈಸುವ ಮೂಲಕ ಅವರೆಲ್ಲರಲ್ಲೂ ಸಾತ್ವಿಕ ಗುಣಗಳು ಮೂಡುವಂತೆ ನಮ್ಮ ಘನಸರಕಾರವು ಪ್ರಯತ್ನಿಸಬಾರದೇಕೆ?
ವಸ್ತುಸ್ಥಿತಿಯು ಹೀಗಿರುವಾಗ, ಮೊಟ್ಟೆಗಿಂತ ಹಾಲೇ ಶ್ರೇಷ್ಠವೆಂದು ಅದನ್ನು ಮಕ್ಕಳ ಮೇಲೆ ಹೇರುವುದು ಸಮಂಜಸವೆನಿಸದು. ಯಾರೇ ಮಕ್ಕಳು ಅಥವಾ ಹೆತ್ತವರು ಮೊಟ್ಟೆ ಸೇವನೆಯನ್ನು ವೈಯಕ್ತಿಕ ಕಾರಣಗಳಿಂದಾಗಿ ಬಯಸದಿದ್ದರೆ ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರವಷ್ಟೇ ಅಲ್ಲದೆ, ಮೊಟ್ಟೆಯಲ್ಲಿರುವ ಪೋಷಕಾಂಶಗಳನ್ನು ಪಡೆಯಬಯಸುವವರ ಮೇಲೆ ಅಂತಹ ಅಭಿಪ್ರಾಯಗಳನ್ನು ಹೇರುವುದು ಅಸಮಂಜಸವೂ, ಅನ್ಯಾಯವೂ ಆಗುತ್ತದೆ. ಮೊಟ್ಟೆಯ ವಿರುದ್ಧದ ಈ ಕೂಗು, ನಮ್ಮ ರಾಜ್ಯದ ಮಕ್ಕಳನ್ನು ಉತ್ತಮ ಪೋಷಕಾಂಶಗಳಿಂದ ವಂಚಿಸುವ ಹುನ್ನಾರವೆಂದೇ ತಿಳಿಯಬೇಕಾಗುತ್ತದೆ.
ಇಂದು ಮೊಟ್ಟೆ, ನಾಳೆ ನಾವು ಧರಿಸುವ ಬಟ್ಟೆ, ನಾಡಿದ್ದು ನಾವು ಓದುವ ಪುಸ್ತಕ-ಪತ್ರಿಕೆ, ನೋಡಬಯಸುವ ಸಿನಿಮಾ-ನಾಟಕ ಇತ್ಯಾದಿ. ತಮ್ಮ ವೈಯಕ್ತಿಕ ಇಷ್ಟ-ಅನಿಷ್ಟಗಳನ್ನು, ಬೇಕು-ಬೇಡಗಳನ್ನು ದೇಶದ ಇತರೆಲ್ಲರೂ ಪಾಲಿಸಬೇಕೆಂದು ತಾವು ತಾಕೀತು ಮಾಡಬಹುದೆಂದು ಯಾರಾದರೂ ಭಾವಿಸಿಕೊಳ್ಳಲು ನಾವು ಅವಕಾಶವಿತ್ತರೆ ನಮ್ಮ ಬುಡಕ್ಕೇ ನಾವು ಕೊಡಲಿಯಿಟ್ಟಂತೆ. ನಮ್ಮ ಮತಗಳಿಂದ ಚುನಾಯಿತರಾದ ಬಳಿಕ, ಅಂತಹವರೆದುರು ಶಿರಬಾಗಿಸಿ ನಿಲ್ಲುವ ಮಾನಗೆಟ್ಟ ಜನಪ್ರತಿನಿಧಿಗಳಿಗೂ, ಮಂತ್ರಿ-ಮಾಗಧರಿಗೂ, ನಾವೊಂದು ಪ್ರಜಾಪ್ರಭುತ್ವದಲ್ಲಿದೇವೆ, ಪುರೋಹಿತಶಾಹಿ ವ್ಯವಸ್ಥೆಯಲ್ಲಲ್ಲ ಎನ್ನುವುದನ್ನು ನೆನಪಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಅತಿ ತುರ್ತಾದ ಕರ್ತವ್ಯವಾಗಿದೆ. ಇಲ್ಲದಿದ್ದರೆ ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸದು.
Comments are closed.