ಮಂಗಳೂರು, ಏಪ್ರಿಲ್ 18: ಎರಡೂ ಕೈಗಳಿಲ್ಲದ ವಿಕಲಚೇತನ ಮಹಿಳೆಯೊಬ್ಬರು ಕಾಲಿನಿಂದ ಮತದಾನ ಮಾಡುವ ಮೂಲಕ ಹಕ್ಕು ಚಲಾವಣೆಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.
ಎರಡು ಕೈಗಳಿಲ್ಲದ ಸಬಿತಾ ಮೋನಿಸ್ ಅವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಸಮೀಪದ ಗರ್ಡಾಡಿ ಮತಗಟ್ಟೆಯಲ್ಲಿ ಕಾಲಿನಲ್ಲೇ ಮತ ಚಲಾಯಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಕುಂಟು ನೆಪ ಹೇಳಿ ಮತದಾನದಿಂದ ತಪ್ಪಿಸಿಕೊಳ್ಳುವ ಅದೇಷ್ಟೋ ಮಂದಿಗೆ ಕಾಲಿನಿಂದಲೇ ಉತ್ತರ ನೀಡಿದ್ದಾರೆ.
ಮೂಲತಃ ಬೆಳ್ತಂಗಡಿಯವರಾದ ಸಬಿತಾ ಮೋನಿಶ್ ಅವರಿಗೆ ಎರಡು ಕೈಗಳಿಲ್ಲ. ತಮಗೆ ಕೈಗಳೇ ಇಲ್ಲದಿದ್ದರೂ ಕೂಡ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಬೆಳ್ತಂಗಡಿಯ ಗರ್ಡಾಡಿಯ ಮತಗಟ್ಟೆಗೆ ಆಗಮಿಸಿದ ಸಬಿತಾ ಅವರು ಉತ್ಸಾಹದಿಂದಲೇ ಬೂತ್ ನಲ್ಲಿ ಮತ ಚಲಾಯಿಸಿದ್ದು, ಚುನಾವಣಾ ಸಿಬ್ಬಂದಿ ಅವರ ಕಾಲಿನ ಬೆರಳಿಗೆ ಶಾಯಿ ಗುರುತು ಹಾಕಿದರು. ಬಳಿಕ ಮತಗಟ್ಟೆಯ ಹೊರಗೆ ಆಗಮಿಸಿದ ಸಬಿತಾ ಅವರು ಶಾಯಿ ಗುರುತನ್ನು ತೋರಿಸಿ ಹಕ್ಕು ಚಲಾವಣೆಯ ಖುಷಿಯನ್ನು ಹಂಚಿಕೊಂಡರು.
ಸಬಿತಾ ಮೋನಿಶ್ ವಿಶೇಷ ಚೇತನರಾಗಿದ್ದರೂ ಕಾಲಿನಿಂದಲೇ ಪರೀಕ್ಷೆ ಬರೆದು ಈಗಾಗಲೇ ಎರಡು ಉನ್ನತ ಪದವಿ ಪಡೆದಿದ್ದಾರೆ.
Comments are closed.