ಆರೋಗ್ಯ

ಮನೆಗೇ ಬಂತು ಹಲ್ಲು ಚಿಕಿತ್ಸೆ

Pinterest LinkedIn Tumblr

psmec31Nightiangle_0

-ಶಶಿಕಾಂತ ಎಸ್. ಶೆಂಬೆಳ್ಳಿ
ದೈನಂದಿನ ಕಾರ್ಯಗಳ ಒತ್ತಡದಿಂದಾಗಿ ಜನಸಾಮಾನ್ಯರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಕಡಿಮೆಯಾಗುತ್ತಿದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳು ನಮಗೇ ಅರಿವಿಲ್ಲದಂತೆ ದೊಡ್ಡದಾಗಿ ಬೆಳೆದು ಅನೇಕ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲೆಂದೇ ನೈಟಿಂಗೆಲ್‌ ಹೋಂ ಹೆಲ್ತ್‌ಕೇರ್‌ ಹೊಸ ದಾರಿಯೊಂದನ್ನು ಕಂಡುಕೊಂಡಿದೆ.

ನೇರವಾಗಿ ರೋಗಿಗೆ ಮನೆಯಲ್ಲೇ  ಚಿಕಿತ್ಸೆ ಒದಗಿಸಲು ಮುಂದಾಗಿದೆ. ಆದರೆ, ಸದ್ಯ ಈ ಸೌಲಭ್ಯ ದಂತ ಸಮಸ್ಯೆಯಿಂದ ಬಳಲುತ್ತಿರುವವರಿಗಷ್ಟೇ ಸೀಮಿತವಾಗಿದೆ.  ‘ಹಲ್ಲು ರೋಗದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಿ, ತಾವು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಬೇಕು. ಆ ಸಮಸ್ಯೆಯನ್ನು ಆಧರಿಸಿ ಅವರಿಗೆ ಸಲಹೆಗಳನ್ನು ನೀಡಲಾಗುತ್ತದೆ. ವೈದ್ಯರು ಸೂಚಿಸುವ ಉಪಾಯಗಳನ್ನು ಅವರು  ಮನೆಯಲ್ಲಿದ್ದುಕೊಂಡೇ ಪಾಲಿಸಿದರಾಯಿತು’ ಎಂದು ಸಂಸ್ಥೆಯ ಸಿಇಒ ಲಲಿತ್‌ ಪೈ ತಿಳಿಸಿದರು.

‘ಕೇವಲ ಗಂಭೀರ ಸ್ವರೂಪದ ಪ್ರಕರಣಗಳಿದ್ದರೆ ಆಸ್ಪತ್ರೆಗೆ ಕರೆಸಿಕೊಳ್ಳಲಾಗುತ್ತದೆ. ಉದಾಹರಣೆಗೆ ಶಸ್ತ್ರಚಿಕಿತ್ಸೆ, ಲೇಸರ್‌ ಚಿಕಿತ್ಸೆ ಮಾಡಬೇಕಾದ ಅಗತ್ಯವಿದ್ದರೆ ಹೆಚ್ಚಿನ ಸುರಕ್ಷೆ, ಶುಚಿತ್ವ ಹಾಗೂ ಇತರ ಕಾರಣಗಳಿಗಾಗಿ ಆಸ್ಪತ್ರೆಯನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಸಣ್ಣಪುಟ್ಟ ಸಮಸ್ಯೆ ಇರುವವರಿಗೆ ನುರಿತ ವೈದ್ಯರು ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ. ರೂಟ್‌ ಕೆನಾಲ್‌, ಫಿಲ್ಲಿಂಗ್‌, ಅಸ್ಥೆಟಿಕ್‌ ಫಿಲ್ಲಿಂಗ್‌ ಸೇರಿದಂತೆ ಇತರ ಅಗತ್ಯ ಸಂದರ್ಭಗಳಲ್ಲಿ ಸಾಧನಗಳೊಂದಿಗೆ ರೋಗಿ ಇರುವ ಸ್ಥಳಕ್ಕೆ ಖುದ್ದಾಗಿ ಹೋಗಿ ಚಿಕಿತ್ಸೆ ನೀಡುತ್ತಾರೆ’ ಎಂದರು.

‘ಹಲವು ಕಾರಣಗಳಿಂದಾಗಿ ಜನರಿಗೆ ಇಂದು ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಇದನ್ನು ಮನಗಂಡು ಈ ಸೇವೆ ಆರಂಭಿಸಲಾಗಿದೆ. ರೋಗಿ ಇರುವ ಮನೆಗೆ ಕಂಪ್ರೆಸರ್‌, ಪೋರ್ಟೆಬಲ್‌ ಚೇರ್‌, ಎಕ್ಸ್‌ರೇ, ಮೆಡಿಕಲ್‌ ಕಿಟ್‌ ಹಾಗೂ ಇತರ ಸಾಧನಗಳನ್ನು ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಖಂಡಿತವಾಗಿಯೂ ನಾಗರಿಕರಿಗೆ ಇದು ಉಪಯುಕ್ತವಾಗಲಿದೆ ಎಂಬ ನಂಬಿಕೆ ಇದೆ’ ಎಂದರು ಪೈ.

ಹಲ್ಲುಗಳು ದೇಹದ ಅತಿ ಸೂಕ್ಷ್ಮ ಭಾಗಗಳು. ಅವುಗಳಿಂದ ಇತರ ಅವಯವಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಹೃದಯ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಕರೆಸಿಕೊಂಡು ಸಂಪೂರ್ಣವಾಗಿ ಪರಿಶೀಲಿಸಿದ ನಂತರವಷ್ಟೇ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರಿಸಿದರು. ಇತ್ತೀಚೆಗೆ ಇಂದಿರಾನಗರದಲ್ಲಿ ನೈಟಿಂಗೆಲ್‌ ಹೋಂ ಹೆಲ್ತ್‌ ಕೇರ್‌ನ ಇನ್ನೊಂದು ಕೇಂದ್ರ ಆರಂಭವಾಗಿದ್ದು, ಕೇಂದ್ರಗಳ ಸಂಖ್ಯೆ ಮೂರಕ್ಕೆ ಏರಿದೆ. ಈಗಾಗಲೇ ಆರ್‌.ಟಿ. ನಗರ ಮತ್ತು ಕಸ್ತೂರಿ ನಗರದಲ್ಲಿ ಕೇಂದ್ರಗಳು ನಡೆಯುತ್ತಿವೆ.

ಬರುವ ದಿನಗಳಲ್ಲಿ ವೈಟ್‌ಫೀಲ್ಡ್‌ ಮತ್ತು ಬೆಳ್ಳಂದೂರಿನಲ್ಲಿ ಹೊಸ ಕೇಂದ್ರಗಳನ್ನು ಆರಂಭಿಸಲು  ಸಂಸ್ಥೆ ಉದ್ದೇಶಿಸಿದೆ. ಈ ಸೇವೆ ಆರಂಭಿಸುವುದಕ್ಕೂ ಮುನ್ನ ಸಂಸ್ಥೆಯು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿದೆ. ರೋಗಿಯ ಮನೆಯಲ್ಲಿ ಅವರ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದೂ ಸೇರಿದಂತೆ ಇತರ ಅಂಶಗಳ ಬಗ್ಗೆ ತಿಳಿಹೇಳಿದೆ. ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಇತರ ದಂತ ಕ್ಲಿನಿಕ್‌ಗಳಲ್ಲಿ ತಪಾಸಣೆಗಾಗಿ ತೆಗೆದುಕೊಳ್ಳುವಷ್ಟೇ ದರ ನಿಗದಿ ಮಾಡಲಾಗಿದೆ. ಒಂದು ವೇಳೆ ರೋಗಿಯ ಮನೆಗೆ ಹೋಗಿ ಚಿಕಿತ್ಸೆ ನೀಡಬೇಕಾದ ಸಂದರ್ಭ ಬಂದರೆ, ಸಾರಿಗೆ ಸೇರಿದಂತೆ ಇತರ ರೀತಿಯ ಖರ್ಚನ್ನು ಅವರಿಂದಲೇ ಭರಿಸಿಕೊಳ್ಳಲಾಗುತ್ತದೆ.
***
ಮಾಹಿತಿಗೆ
ನೈಟಿಂಗೆಲ್‌ ಹೋಂ ಹೆಲ್ತ್‌ ಸರ್ವಿಸೆಸ್‌
ಟೋಲ್‌ ಫ್ರಿ ಸಂಖ್ಯೆ: 1800–103–4530
ದೂರವಾಣಿ ಸಂಖ್ಯೆ: 080–4530 0300
ವೆಬ್‌ಸೈಟ್‌ : www.nightingales.inn

Write A Comment