ಯೆಮೆನ್, ಏ.5-ಉಗ್ರರ ಪ್ರಬಲ ಕ್ಷಿಪಣಿ ಮತ್ತು ಷೆಲ್ಲಿಂಗ್ ದಾಳಿಯಿಂದಾಗಿ, ಅಪಾಯದಲ್ಲಿರುವ ಭಾರತೀಯರನ್ನು ಕರೆತರಲು ಹೋಗಿರುವ ಭಾರತೀಯ ನೌಕಾಪಡೆಯ ಐಎನ್‌ಎಸ್ ಮುಂಬೈ ಯುದ್ಧನೌಕೆ ಅಡೇನ್ ಬಂದರಿನೊಳಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಬಂದರಿಂದ ಕೆಲವು ಕಿಲೋ ಮೀಟರ್‌ಗಳ ದೂರದಲ್ಲಿ ಲಂಗರು ಹಾಕಿರುವ ಐಎನ್‌ಎಸ್ ಮುಂಬೈ ಹಡಗಿಗೆ ಯೆಮೆನ್‌ನಿಂದ ಪಾರಾದ ಭಾರತೀಯರನ್ನು ಬೋಟ್‌ಗಳ ಮೂಲಕ ಹಡಗಿಗೆ ತಲುಪಿಸಲಾಗುತ್ತಿದೆ. ಪ್ರಸ್ತುತ ಸುಮಾರು 200ಕ್ಕೂ ಹೆಚ್ಚು ಭಾರತೀಯರು ಸದ್ಯ ಅಡೇನ್ ಬಂದರಿನ ಬಳಿ ಕಾಯುತ್ತಿದ್ದಾರೆ
ಎಂದು ಕೇರಳದ ಸಚಿವ ಕೆ.ಸಿ.ಜೋಸೆಫ್ ತಿಳಿಸಿದ್ದಾರೆ. ಐಎನ್‌ಎಸ್ ಮುಂಬೈ ಹಡಗು ಅಡೇನ್ ಬಂದರು ಪ್ರವೇಶಕ್ಕೆ ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ ನೌಕಾಪಡೆ ಅಧಿಕಾರಿಗಳು, ಸಣ್ಣ ಬೋಟ್‌ಗಳಲ್ಲಿ ಇದುವರೆಗೆ ಕೇವಲ 35-40 ಜನರನ್ನು ಮಾತ್ರ ಹಡಗಿನ ಬಳಿಗೆ ಕರೆತರುವುದಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಭಾರತ-ಪಾಕ್ ಸಹಕಾರ: ಯೆಮೆನ್‌ನಲ್ಲಿ ಭಾರತೀಯರು ಮತ್ತು ಪಾಕಿಸ್ಥಾನಿಗಳು ಕಂಪೆನಿ ಗಳಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದು, ಅಲ್ಲಿಂದ ಪಾರಾಗಲು ಪರಸ್ಪರ ಸಹಕಾರ ನೀಡುತ್ತಿದ್ದಾರೆ. ಇದನ್ನು ಸೌತ್ ಏಷ್ಯನ್ ಕೋ-ಆಪರೇಷನ್ ಎಂದು ಕರೆಯಲಾಗುತ್ತಿದೆ.
ಇದೇ ವೇಳೆ ಪಾಕಿಸ್ಥಾನದ ಯುದ್ಧ ವಿಮಾನದಲ್ಲಿ 148 ಮಂದಿ ಪಾಕಿಸ್ಥಾನ ಪ್ರಜೆಗಳ ಜತೆ 11 ಮಂದಿ ಭಾರತೀಯ ಉದ್ಯೋಗಿಗಳನ್ನೂ ಕರೆತಂದಿದ್ದು, ಇವರೆಲ್ಲ ಯೆಮೆನ್‌ನ ಮೊಕಾಲಿಯಾ ನಗರದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊಕಾಲಿಯಾ ನಗರ ಪ್ರಸ್ತುತ ಬಹುತೇಕ ಅಲ್‌ಖೈದಾ ಉಗ್ರರ ಹಿಡಿತದಲ್ಲಿದೆ. ಇವರನ್ನೆಲ್ಲ ಕರೆದು ಕೊಂಡು ಪಿಎನ್‌ಎಸ್ ಅಸ್ಲಾತ್ ಹಡಗು ಇಂದು ಮುಂಜಾನೆ ಅಚ್ಚರಿ ಎಂಬಂತೆ ಆಷ್‌ಪಿಆರ್ ಬಂದರಿನಿಂದ ಹೊರಬಂದಿದ್ದು, ಅದರ ಬೆನ್ನಲ್ಲೇ ಒಂದನ್ನು ಮುಚ್ಚಲಾಗಿದೆ.
148 ಜನ ಪಾಕ್ ಪ್ರಜೆಗಳು, 11 ಜನ ಭಾರತೀಯರು ಹಾಗೂ 24 ಮಂದಿ ವಿದೇಶಿಯರು ಪಿಎನ್‌ಎಸ್ ಅಸ್ಲಾತ್‌ನಲ್ಲಿ ಬಚಾವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.