ಕರ್ನಾಟಕ

ಸುಸ್ಥಿರ ಅಭಿವೃದ್ಧಿ ಹೇಗೆ?: ಪ್ರಗತಿ ಎಂಬ ಮಾಯಾಮೃಗ…

Pinterest LinkedIn Tumblr

pvec21march15suresh-2

-ಸುರೇಶ್ ಹೆಬ್ಳಿಕರ್

ಪ್ರಸ್ತುತ ಹೆಚ್ಚು ಪ್ರಚಾರದಲ್ಲಿರುವ ಮತ್ತು ಹೆಚ್ಚು ಬಳಕೆಯಲ್ಲಿರುವ ಪದ ‘ಅಭಿವೃದ್ಧಿ’. ಪಂಚಾಯಿತಿ ಅಧ್ಯಕ್ಷರಿಂದ ಹಿಡಿದು ಪ್ರಧಾನಿವರೆಗೆ ‘ಅಭಿವೃದ್ಧಿ’ ಎನ್ನುವ ಪದವನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ವೇದಿಕೆಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಆರ್ಥಿಕ ತಜ್ಞರು ಹಾಗೂ ಅಧಿಕಾರಶಾಹಿಯು ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವಂತೆ ತೋರುತ್ತದೆ.

ಕಳೆದ ಎರಡು ದಶಕಗಳಲ್ಲಿ, ಅದರಲ್ಲೂ ಹೆಚ್ಚಾಗಿ ಆರ್ಥಿಕ ವಲಯದಲ್ಲಿ, ಅಭಿವೃದ್ಧಿ ಯೋಜನೆಗಳು ಮತ್ತು ಸಂಬಂಧಪಟ್ಟ ಕಾರ್ಯಕ್ರಮಗಳ ಬಗ್ಗೆ ಅಧಿಕ ಒಲವು, ಉತ್ಸುಕತೆ ವ್ಯಕ್ತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ತಾಂತ್ರಿಕ ಬೆಳವಣಿಗೆಗಳು ಮತ್ತು ಜಾಗತೀಕರಣದ ಪ್ರಭಾವ.

18ನೇ  ಶತಮಾನದಲ್ಲಿ ಶುರುವಾದ ಔದ್ಯಮಿಕ ಕ್ರಾಂತಿ ಪಾಶ್ಚಿಮಾತ್ಯ ಜಗತ್ತನ್ನು ಒಂದು ಬಗೆಯ ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ದರೆ, 20ನೇ ಶತಮಾನದ ಕೊನೆಯ ದಶಕಗಳು ಮತ್ತು 21ನೇ ಶತಮಾನದ ಪ್ರಾರಂಭಿಕ ದಶಕ ಇಡೀ ಜಗತ್ತನ್ನೇ ನೂರಾರು ವಿಧದ ಅಭಿವೃದ್ಧಿ ಮಾರ್ಗಗಳಲ್ಲಿ ಎಳೆದುಕೊಂಡು ಹೋಗುತ್ತಿದೆ.

ಔದ್ಯಮಿಕ ಕ್ರಾಂತಿಯಲ್ಲಿ ಹುಟ್ಟಿಕೊಂಡ ತಾಂತ್ರಿಕ ಬೆಳವಣಿಗೆ ಕೆಲವು ಪ್ರಮುಖ ಉದ್ಯಮಗಳನ್ನು ಸ್ಥಾಪಿಸಲು ನೆರವಾಯಿತು. ಈ ಉದ್ಯಮಗಳು ಜನರ ಮೂಲಭೂತ ಅವಶ್ಯಕತೆಗಳನ್ನು ಮತ್ತು ಇತರ ಬೇಡಿಕೆಗಳನ್ನು ಪೂರೈಸುವ ಕಾರ್ಯದಲ್ಲಿ ಹೆಚ್ಚು ನಿರತವಾಗಿದ್ದವು. ಜನರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಮಾಡಬೇಕೆಂದರೆ ಉದ್ಯಮಗಳ ನಿರ್ಮಾಣ ಅವಶ್ಯ. ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಕೂಡ ಅಷ್ಟೇ ಅವಶ್ಯ. ಊಟ, ವಸತಿ, ನೀರು, ಶಿಕ್ಷಣ, ಆರೋಗ್ಯ, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ಪೂರೈಸುವ ಔದ್ಯಮಿಕ, ತಾಂತ್ರಿಕ ಮತ್ತು ಆರ್ಥಿಕ ಚಟುವಟಿಕೆಗಳು ನಿರ್ದಿಷ್ಟ ಯೋಜನೆಗಳ ಮೂಲಕವೇ ಸಾಧ್ಯವಾಗುತ್ತವೆ. ಇಂತಹ ವ್ಯವಸ್ಥೆಯನ್ನೇ ಅಭಿವೃದ್ಧಿ ಯೋಜನೆಗಳೆಂದು ಕರೆಯಲಾಗುತ್ತದೆ.

ಇಲ್ಲಿ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಬಹಳಷ್ಟು ವೈವಿಧ್ಯಮಯ. ವಿವಿಧ ರೀತಿಯ ಭೌಗೋಳಿಕ, ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಅಂಶಗಳಿಂದ ಕೂಡಿದ ಜಗತ್ತು ನಮ್ಮದು. ಇದೇ ಕಾರಣದಿಂದ ಪ್ರತಿ ಭೌಗೋಳಿಕ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಕೂಡ ಭಿನ್ನವಾಗಿದೆ. ಹಾಗಿದ್ದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಅಥವಾ ದೇಶಗಳಿಗೆ ಅದರದೇ ಆದ ಅಭಿವೃದ್ಧಿ ಮಾದರಿಗಳು ಕೂಡ ಅವಶ್ಯ. ಆದರೆ ಪರಿಸ್ಥಿತಿ ಹಾಗಿಲ್ಲ.

ನಮ್ಮ ಭೂಮಿಯ ಮೇಲಿನ ಕೆಲವು ಪ್ರದೇಶಗಳು ಬರೀ ಹಿಮದಿಂದ ಆವೃತವಾಗಿವೆ. ಕೆಲವು ಬರೀ ಮಳೆಯಿಂದ ತೊಯ್ದ ಪ್ರದೇಶಗಳಾಗಿವೆ. ಕೆಲವು ಕೇವಲ ಮರಳುಗಾಡು. ಇನ್ನು ಕೆಲವು, ಉದಾಹರಣೆಗೆ ನಮ್ಮ ಭಾರತ, ಹಿಮ, ಮಳೆ, ಮರಳುಗಾಡು, ಕಾಡು, ಬಯಲುಸೀಮೆಯಂಥ ಎಲ್ಲ ರೀತಿಯ ವಾತಾವರಣದಿಂದ ಕೂಡಿದೆ. ಈ ವೈವಿಧ್ಯ ತುಂಬ ಆಕರ್ಷಕ ಅಂಶ. ಅಷ್ಟೇ ಅಲ್ಲ ಅದು ಸಾಂಸ್ಕೃತಿಕ ಮತ್ತು ಆರೋಗ್ಯಕರ ಬದುಕಿಗೂ ಅವಶ್ಯ. ಈ ರೀತಿಯ ವಿಭಿನ್ನ ಅಂಶಗಳಿಂದ ಕೂಡಿದ ಪ್ರದೇಶಗಳಲ್ಲಿ ವಿಭಿನ್ನ ರೀತಿಯ ಅಭಿವೃದ್ಧಿ ಮಾದರಿಗಳನ್ನು ಬಳಸಬೇಕಾದ ಅವಶ್ಯಕತೆ ಇರುತ್ತದೆ. ಮುಖ್ಯವಾಗಿ ಈ ಅಭಿವೃದ್ಧಿ ಮಾದರಿಗಳು ಸುಸ್ಥಿರವಾಗಿರುವುದು ಅನಿವಾರ್ಯ.

ಸುಸ್ಥಿರ ಅಭಿವೃದ್ಧಿಯ ಅನಿವಾರ್ಯ: 1970– 80ರ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಕೆಲವು ಕ್ರಾಂತಿಕಾರಕ ಯೋಚನೆಗಳನ್ನು ಹರಿಬಿಡಲಾಯಿತು. ನಮ್ಮ ಅಭಿವೃದ್ಧಿ  ಮಾದರಿಗಳು, ಆರ್ಥಿಕ ಧ್ಯೇಯಗಳು, ನಿಲುವುಗಳು, ಸಾಮಾಜಿಕ ಹೊಣೆಗಾರಿಕೆ, ದೀರ್ಘವಾಗಿ ಬೆಳೆಯುತ್ತಿರುವ ಜನಸಂಖ್ಯಾ ಸಮಸ್ಯೆಗಳು, ಶ್ರೀಮಂತಿಕೆ ಜತೆ ಜತೆಗೆ ಬಡತನವೂ ಹೆಚ್ಚುತ್ತಿರುವ ಅಸಮಾನತೆಯ ವಾತಾವರಣ, ಅದರಿಂದ ಉಂಟಾಗುತ್ತಿರುವ ಸಾಮಾಜಿಕ ಅಭದ್ರತೆ ಮತ್ತು ಅಶಾಂತಿ, ಇವೆಲ್ಲವೂ ಒಟ್ಟಾಗಿ ಜಾಗತಿಕ ಪರಿಸರ ವ್ಯವಸ್ಥೆಯ ಮೇಲೆ ಹೇರುತ್ತಿರುವ ಒತ್ತಡ… ಹೀಗೆ ಈ ಎಲ್ಲ ಸಮಸ್ಯೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರಂಭವಾದ ಸಂವಾದ, ಚರ್ಚೆ ಮತ್ತು ಸಂಕಿರಣಗಳು  ಇಂದಿನವರೆಗೂ ಎಡೆಬಿಡದೆ ಸಾಗಿವೆ. 1992ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಜಾಗತಿಕ  ಸಮಾವೇಶದ ಮುಖ್ಯ ಉದ್ದೇಶವೇ ಸುಸ್ಥಿರ ಅಭಿವೃದ್ಧಿ ಆಗಿತ್ತು. ಪರಿಸರವನ್ನು ನಾಶಗೊಳಿಸುವ ಆರ್ಥಿಕ ವ್ಯವಸ್ಥೆಗೆ ಕಡಿವಾಣ ಹಾಕಿ, ಹೊಸ ಮಾದರಿಯ ಸುಸ್ಥಿರ ಅಭಿವೃದ್ಧಿ ಮಾರ್ಗಗಳನ್ನು ಶೋಧಿಸುವುದು ಈ ಶೃಂಗಸಭೆಯ ಗುರಿಯೂ ಆಗಿತ್ತು.

ಪರಿಸರದ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಎಲ್ಲ ವಿವಾದ, ಸಂವಾದ ಮತ್ತು ಚರ್ಚೆ ಒಂದು ವಿಷಯದ ಬಗ್ಗೆ ಖಚಿತವಾದ ಅಭಿಪ್ರಾಯ ತಾಳಲು ಸಾಧ್ಯವಾಯಿತು. ಅದೇನೆಂದರೆ, ನಾವು 200  ವರ್ಷಗಳಿಂದ ಬಳಸುತ್ತಿರುವ ಅಭಿವೃದ್ಧಿ ಮಾದರಿಗಳು ನಮ್ಮ ನೆಲ, ಜಲ, ವಾಯು, ಸಸ್ಯಸಂಕುಲ ಹಾಗೂ ಜೀವ ಸಂಕುಲ ಕ್ಷೀಣಿಸುವುದಕ್ಕೆ ಮುಖ್ಯ ಕಾರಣಗಳಾಗಿವೆ. ಮಳೆಗಾಲದಲ್ಲಿ ಚಳಿ, ಚಳಿಗಾಲದಲ್ಲಿ ಬಿಸಿಲು ಮತ್ತು ಧಗೆ ಹಾಗೂ ಈ ರೀತಿಯ ಹವಾಮಾನ ವೈಪರೀತ್ಯದಿಂದ ನಾಶವಾಗುತ್ತಿರುವ ನಮ್ಮ ಕೃಷಿ, ತೋಟಗಾರಿಕೆ, ಹೈನು ಮುಂತಾದವೆಲ್ಲ ಈ ದುಃಸ್ಥಿತಿಗೆ ಬರಲು ಕಾರಣ ನಾವು ಆಯ್ದುಕೊಂಡ ಅಭಿವೃದ್ಧಿ ಮಾರ್ಗಗಳು ಎನ್ನುವುದು ಸ್ಪಷ್ಟವಾಗಿ ಗೋಚರಿಸಿತು.
ಇಲ್ಲಿಯವರೆಗೆ ನಾವು ಅನುಕರಿಸುತ್ತಿರುವ ಮಾರ್ಗಗಳು ಬರೀ ಆರ್ಥಿಕ ಅಭಿವೃದ್ಧಿಯ ಗುರಿಗಳಾಗಿವೆ. ಆರ್ಥಿಕ ಲಾಭವೇ ಅಭಿವೃದ್ಧಿಯ ಉದ್ದೇಶ ಮತ್ತು ಧ್ಯೇಯವೆಂದು ಅರ್ಥೈಸಲಾಗಿದೆ.

ಅಕ್ಕಿ, ರಾಗಿ, ಜೋಳ, ತರಕಾರಿ ಬೆಳೆಯುವ ಬದಲು ಕಬ್ಬು, ಸೂರ್ಯಕಾಂತಿ, ತಂಬಾಕು ಬೆಳೆಯುವುದು, ಕೆರೆಗಳನ್ನು ಮುಚ್ಚಿ ಈಜುಕೊಳಗಳನ್ನು ನಿರ್ಮಿಸುವುದು, ಗೋಮಾಳಗಳನ್ನು ಪರಿವರ್ತಿಸಿ ರೆಸಾರ್ಟ್‌ಗಳನ್ನು ಸ್ಥಾಪಿಸುವುದು, ತೆಂಗಿನ ತೋಟಗಳನ್ನು ಕತ್ತರಿಸಿ ತಂಪು ಪಾನೀಯ ತಯಾರಕ ಘಟಕಗಳನ್ನು ನಿರ್ಮಿಸುವುದು ನಮ್ಮ ಅಭಿವೃದ್ಧಿಯ ಮಾದರಿಗಳಾದ್ದರಿಂದ ನಾವು ಇಂದು ಪರಿಸರದ ಅನಾಹುತಗಳಾದ ಭೂತಾಪ ಏರಿಕೆ ಮತ್ತು ಹವಾಮಾನದ ಏರುಪೇರುಗಳನ್ನು ಎದುರಿಸಬೇಕಾಗಿದೆ.

ನಮ್ಮ ದೇಶದಲ್ಲಿನ ಆರ್ಥಿಕ ತಜ್ಞರಿಗೆ ಮತ್ತು ಉದ್ಯಮಿಗಳಿಗೆ ಇನ್ನೂ ಈ ಅನಾಹುತಗಳ ಕಾವು ತಟ್ಟಿಲ್ಲ. ಅವರು ಇನ್ನೂ ಹೆಚ್ಚು ಉದ್ಯಮಗಳು ಬೇಕು, ವಿದೇಶಿ ಹೂಡಿಕೆ ಆಗಬೇಕು, ನಗರೀಕರಣ ಭರದಿಂದ ಸಾಗಬೇಕು, ಮಹಾನಗರಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೂಲಸೌಕರ್ಯಗಳಾದ ಚತುಷ್ಪಥ  ಹೆದ್ದಾರಿಗಳು, ವರ್ತುಲ ರಸ್ತೆಗಳು, ಫ್ಲೈಓವರ್‌ಗಳು, ವಿಮಾನ ನಿಲ್ದಾಣಗಳು, ಪಂಚತಾರಾ ಮಾದರಿಯ ಸಮುಚ್ಚಯಗಳು ಅವಶ್ಯ ಎಂದು ಪರಿಗಣಿಸುತ್ತಿದ್ದಾರೆ. ಇದೇ ನಿಜವಾದ ಅಭಿವೃದ್ಧಿ ಮಾರ್ಗವೆಂದು
ನಂಬಿ, ಜನರನ್ನೂ ಆ ನಿಟ್ಟಿನಲ್ಲಿ ಯೋಚಿಸುವಂತೆ ಪ್ರಚೋದಿಸು­ತ್ತಿದ್ದಾರೆ.

ದುರದೃಷ್ಟದ ಸಂಗತಿಯೆಂದರೆ, ಪರಿಸರದ ಅನಾಹುತಗಳ ಬಗ್ಗೆ ಅರಿವಿಲ್ಲದ ಜನರು ಮತ್ತು ಯುವಕರು ಈ ವ್ಯಾಖ್ಯಾನಗಳನ್ನು ನಂಬುತ್ತಿದ್ದಾರೆ. ಜಗತ್ತಿನ ಪ್ರಖ್ಯಾತ ವಿಶ್ವವಿದ್ಯಾಲಯಗಳು, ಸಾಮಾಜಿಕ ಮತ್ತು ಪರಿಸರ ಸಂಸ್ಥೆಗಳು, ಖ್ಯಾತ ತಜ್ಞರು ಹಲವಾರು ಸಮೀಕ್ಷೆಗಳನ್ನು ಕೈಗೊಂಡು, ಅತಿ ತೀವ್ರವಾಗಿ ಮಾರ್ಪಾ­ಟಾ­ಗುತ್ತಿರುವ ಮತ್ತು ನಶಿಸುತ್ತಿರುವ ಜಾಗತಿಕ ಪರಿಸರದ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೆಂದರೆ, ನಮ್ಮ ಭೂಮಿಯನ್ನು ಉಳಿಸಲು ಇರುವ ಒಂದೇ ಮಾರ್ಗವೆಂದರೆ, ಸುಸ್ಥಿರವಾದ ಅಭಿವೃದ್ಧಿ ಮಾದರಿಗಳು ಎಂಬುದು.

ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು  ನೆಮ್ಮದಿಯಿಂದ ಬದುಕಬೇಕೆಂದರೆ, ಜನರ ಅಗತ್ಯಗಳನ್ನು ಪೂರೈಸುವ, ಸ್ವಾವಲಂಬನೆಯನ್ನು ಉತ್ತೇಜಿಸುವ ಮತ್ತು ನಮ್ಮ ಮೂಲಭೂತ ಬೇಡಿಕೆಗಳನ್ನು ನಿರಂತರವಾಗಿ ಪೂರೈಸುವಂತಹ ವ್ಯವಸ್ಥೆ ಕಲ್ಪಿಸುವುದು ಸೂಕ್ತವಾದ ಅಭಿವೃದ್ಧಿಯ  ಮಾದರಿ. ಅದೇ ಸುಸ್ಥಿರ ಅಭಿವೃದ್ಧಿ. ಇಂತಹ ಮಾದರಿ ನಮ್ಮ ಪರಿಸರದ ಅಂಶಗಳನ್ನು ಪರಿಗಣಿಸುವ ಆರ್ಥಿಕ ಅಭಿವೃದ್ಧಿ ಕೂಡ.

ಅಂದರೆ ಪರಿಸರಕ್ಕೆ ಪೂರಕವಾದ ಅಂತಹ ಅಭಿವೃದ್ಧಿ ­ದೀರ್ಘ­­ಕಾಲಿಕವಾಗಿರುತ್ತದೆ ಮತ್ತು ದಕ್ಷವಾಗಿರುತ್ತದೆ. ಇದು ಮಾನವ ಸಮಾಜ ಬದುಕುವ ಸೃಜನಶೀಲ ಮಾರ್ಗ ಕೂಡ. ಇವತ್ತಿನ ತಂತ್ರಜ್ಞಾನವು ಗ್ರಾಹಕ ಸಂಸ್ಕೃತಿ ಮತ್ತು ಕೊಳ್ಳುಬಾಕ ಸಂಸ್ಕೃತಿಯನ್ನು ರೂಪಿಸಿದೆ. ಮಾನವ ನೈಸರ್ಗಿಕ ಸಂಪನ್ಮೂಲಗಳನ್ನು ದೋಚಿ ಸ್ವಂತ ಸಂಪತ್ತನ್ನು ವೃದ್ಧಿಸಲು ತಂತ್ರಜ್ಞಾನವನ್ನು ಬಳಸುತ್ತಿರುವ ಯುಗ ಇದು. ಇಂತಹ ಮನೋಭಾವ ಮನುಷ್ಯನಲ್ಲಿ ಅಹಂಕಾರ, ದೊಡ್ಡಸ್ತಿಕೆ ಮತ್ತು ಹೆಚ್ಚು ಹಣವನ್ನು ಸಂಪಾದಿಸುವ ವ್ಯಾಮೋಹವನ್ನು ಬೆಳೆಸಿದೆ.

ಈ ಬಗೆಯ ಮಾದರಿಗಳಿಂದ ಹೊರತಾಗಿರುವ ಪರ್ಯಾಯ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವುದೇ ಸುಸ್ಥಿರ ಅಭಿವೃದ್ಧಿ. ಇಂಥ ಅಭಿವೃದ್ಧಿ ನಮ್ಮ ಭೂಮಿಯ ಚೈತನ್ಯ ಮತ್ತು ವೈವಿಧ್ಯವನ್ನು ಕಾಪಾಡುವಲ್ಲಿ, ಜೀವಸಂಕುಲವನ್ನು ಗೌರವಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗಳ ಅಗತ್ಯಗಳನ್ನು ಪೂರೈಸುವುದಕ್ಕೆ ಪೂರಕವಾಗಿ ಇಂದಿನ ಸಂಪನ್ಮೂಲಗಳ ಬಳಕೆಯನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಈ ರೀತಿಯ  ಅಭಿವೃದ್ಧಿ ಮಾದರಿಗಳನ್ನು ರೂಪಿಸುವುದು ಸುಲಭವಲ್ಲ. ಆದರೆ ಅದು ಅನಿವಾರ್ಯ. ಸುಸ್ಥಿರ ಅಭಿವೃದ್ಧಿಗೆ ಇನ್ನೊಂದು ಮಗ್ಗುಲು ಸರಳ ಬದುಕು. ಅಂತಹ ಬದುಕು ನಮ್ಮದಾದರೆ ಈ ಭೂಮಿಯ ಸುಂದರ ಪರಿಸರವನ್ನು ಸದಾ ಕಾಲವೂ ಸವಿಯಬಹುದು.

Write A Comment